ಪೋಪ್ ಫ್ರಾನ್ಸಿಸ್ ನಿಧನ; ಮುಂದಿನ ಪೋಪ್ ಯಾರು, ಉತ್ತರಾಧಿಕಾರಿ ರೇಸ್‌ನಲ್ಲಿ ಯಾರಿದ್ದಾರೆ, 5 ಕಾರ್ಡಿನಲ್‌ಗಳ ವಿವರ ಹೀಗಿದೆ
ಪೋಪ್ ಫ್ರಾನ್ಸಿಸ್ ಉತ್ತರಾಧಿಕಾರಿ; ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಫ್ರಾನ್ಸಿಸ್ ಅವರ ನಿಧನಾನಂತರ ಉತ್ತರಾಧಿಕಾರಿ ಆಯ್ಕೆ ವಿಚಾರ ಮುನ್ನೆಲೆಗೆ ಬಂದಿದೆ. ಮುಂದಿನ ಪೋಪ್ ಯಾರು, ಉತ್ತರಾಧಿಕಾರಿ ರೇಸ್‌ನಲ್ಲಿರುವ 5 ಕಾರ್ಡಿನಲ್ಸ್ ಯಾರು ಎಂಬಿತ್ಯಾದಿ ವಿವರ ಇಲ್ಲಿದೆ.

ಪೋಪ್ ಫ್ರಾನ್ಸಿಸ್ ಉತ್ತರಾಧಿಕಾರಿ; ಈಸ್ಟರ್ ಸಂಡೇ ಮಾರನೇ ದಿನವಾದ ಇಂದು (ಏಪ್ರಿಲ್ 21) ಬೆಳಿಗ್ಗೆ ಪೋಪ್ ಫ್ರಾನ್ಸಿಸ್ ನಿಧನರಾದರು. ವ್ಯಾಟಿಕನ್ ಕ್ಯಾಮೆರ್‌ಲೆಂಗೊದ ಕಾರ್ಡಿನಲ್ ಕೆವಿನ್ ಫ್ಯಾರೆಲ್ ಈ ವಿಷಯವನ್ನು ದೃಢೀಕರಿಸಿದ್ದು, ಪೋಪ್ ಫ್ರಾನ್ಸಿಸ್ ಅವರು ನ್ಯುಮೋನಿಯಾದಿಂದ ಎದುರಾದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ನಿಧನದೊಂದಿಗೆ ಅವರ ಉತ್ತರಾಧಿಕಾರಿ ಯಾರು ಎಂಬ ಕುತೂಹಲವೂ ಹೆಚ್ಚಾಗಿದೆ. ಪ್ರೀತಿಯ ಸೋದರ, ಸೋದರಿಯರೇ, ನಮೆಲ್ಲರ ಪ್ರೀತಿಯ ರೋಮ್‌ನ ಬಿಷಪ್ ಹೋಲಿ ಫಾದರ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ 7.35ಕ್ಕೆ ಕ್ರಿಸ್ತನ ಪಾದ ಸೇರಿದರು ಎಂದು ಕಾರ್ಡಿನೆಲ್ ಕೆವಿನ್ ಫ್ಯಾರೆಲ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದರು.
ಮುಂದಿನ ಪೋಪ್ ಯಾರು, ಪೋಪ್ ಫ್ರಾನ್ಸಿಸ್ ಉತ್ತರಾಧಿಕಾರಿ ಆಯ್ಕೆ ಹೇಗೆ
ಪೋಪ್ ಫ್ರಾನ್ಸಿಸ್ ಅವರು ವಿಧಿವಶರಾಗಿದ್ದು, ಅವರ ಅಂತ್ಯ ಸಂಸ್ಕಾರಕ್ಕೆ ವ್ಯಾಟಿಕನ್‌ನಲ್ಲಿ ಸಿದ್ದತೆ ನಡೆದಿದೆ. ಈ ನಡುವೆ, ಮುಂದಿನ ಪೋಪ್ ಯಾರು? ಎಂಬ ಕುತೂಹಲ ಹೆಚ್ಚಾಗಿದೆ. ಪೋಪ್ ಫ್ರಾನ್ಸಿಸ್ ಅವರ ಉತ್ತರಾಧಿಕಾರಿಗಳ ಆಯ್ಕೆ ನಡೆಯುವುದು ಹೇಗೆಂಬ ಪ್ರಶ್ನೆಯೂ ಕಾಡುವುದು ಸಹಜ. ಸಾಮಾನ್ಯವಾಗಿ ಹೊಸ ಪೋಪ್ ಅನ್ನು ಈಗ ಆಯ್ಕೆ ಮಾಡುವ ಕೆಲಸ. ಪೋಪ್ ಮರಣದ ನಂತರ 15 ರಿಂದ 20 ದಿನಗಳ ನಡುವೆ ಕಂಟ್ರೋವ್ ಎಂದು ಹೆಸರಿಸಲಾದ ಆಯ್ಕೆ ಪ್ರಕ್ರಿಯೆಯ ಮೂಲಕ ನಡೆಯುತ್ತದೆ.
ಮುಂದಿನ ಪೋಪ್ ಯಾರು, ರೇಸ್‌ನಲ್ಲಿರುವ 5 ಕಾರ್ಡಿನಲ್‌ಗಳು ಯಾರು
ಅನೇಕ ಹಿರಿಯ ಕಾರ್ಡಿನಲ್‌ಗಳ ಪೈಕಿ ಯಾರು ಮುಂದಿನ ಪೋಪ್ ಆಗಬಹುದು ಎಂಬ ಊಹಾಪೋಹಗಳು ಹೆಚ್ಚಾಗಿವೆ. ವ್ಯಾಟಿಕನ್ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವವರು ಮತ್ತು ಬುಕ್ಕಿಗಳ ಪ್ರಕಾರ, 5 ಕಾರ್ಡಿನಲ್‌ಗಳು ಮುಂದಿನ ಪೋಪ್‌ನ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ನ್ಯೂಸ್ ವೀಕ್ ವರದಿ ಮಾಡಿದೆ.
1) ಲೂಯಿಸ್ ಆಂಟೊನಿಯೋ ಟೇಗಲ್ (ಫಿಲಿಪೈನ್ಸ್): ಕಾರ್ಡಿನಲ್ ಲೂಯಿಸ್ ಆಂಟೊನಿಯೋ ಟಾಗಲ್ (67) ಪ್ರಸ್ತುತ ಬೆಟ್ಟಿಂಗ್‌ನಲ್ಲಿ 3:1 ರ ಅನುಪಾತದಲ್ಲಿ ಮುಂಚೂಣಿಯಲ್ಲಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಪ್ರಗತಿರ ಕಾರ್ಯಸೂಚಿಯನ್ನು ಮುನ್ನಡೆಸಬಲ್ಲ ಸಮರ್ಥ ಅಭ್ಯರ್ಥಿಯಾಗಿ ಕಾಣಿಸಿಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಬಹುತೇಕರ ವಿಶ್ವಾಸ ಗಳಿಸಿದ್ದಾರೆ.
2) ಪೀಟ್ರೋ ಪರೋಲಿನ್ (ಇಟೆಲಿ): ಕಾರ್ಡಿನಲ್ ಪೀಟ್ರೋ ಪರೋಲಿನ್ (7) ವ್ಯಾಟಿಕನ್‌ನಲ್ಲಿ ಅತ್ಯಂತ ಹೆಚ್ಚು ಅನುಭವಿ ಅಧಿಕಾರಿಗಳ ಪೈಕಿ ಒಬ್ಬರು. ಇವರು ಬೆಟ್ಟಿಂಗ್‌ನಲ್ಲಿ 4:1 ಅನುಪಾತದೊಂದಿಗೆ ಮುಂದಿನ ಪೋಪ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. 2013 ರಿಂದ ಇವರು ವ್ಯಾಟಿಕನ್‌ನ ಸೆಕ್ರಟರಿ ಆಫ್ ಸ್ಟೇಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಅನೇಕ ರಾಜತಾಂತ್ರಿಕ ವ್ಯವಹಾರಗಳು, ಚೀನಾ ಮತ್ತು ಮಧ್ಯಪ್ರಾಚ್ಯದ ಜತೆಗಿನ ಒಪ್ಪಂದ ಏರ್ಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
3) ಪೀಟರ್ ಟರ್ಕ್‌ಸನ್ (ಘಾನಾ): ಕಾರ್ಡಿನಲ್ ಪೀಟರ್ ಟರ್ಕ್‌ಸನ್ (76) ಅವರು ಮುಂದಿನ ಪೋಪ್ ಬೆಟ್ಟಿಂಗ್‌ನಲ್ಲಿ 5:1ರ ಅನುಪಾತದೊಂದಿಗೆ ರೇಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚರ್ಚ್‌ನ ಸಾಮಾಜಿಕ ನ್ಯಾಯದ ವಲಯದಲ್ಲಿ ಗುರುತಿಸಿಕೊಂಡಿರುವ ಕಾರ್ಡಿನಲ್ ಪೀಟರ್ ಟರ್ಕ್‌ಸನ್, ಅವಿಭಾಜ್ಯ ಮಾನವ ಅಭಿವೃದ್ಧಿಯನ್ನು ಉತ್ತೇಜಿಸುವ ಡಿಕಾಸ್ಟರ್ಟಿಯ ಮಾಜಿ ಮುಖ್ಯಸ್ಥರಾಗಿದ್ದಾರೆ. ಹವಾಮಾನ ಬದಲಾವಣೆ, ಬಡತನ ಮತ್ತು ಆರ್ಥಿಕ ನ್ಯಾಯದಂತಹ ವಿಷಯಗಳನ್ನು ಪ್ರತಿಪಾದಿಸುವವರು.
4) ಪೀಟರ್ ಎರ್ದೋ (ಹಂಗರಿ): ಕಾರ್ಡಿನಲ್ ಪೀಟರ್ ಎರ್ದೋ (72) ಸಂಪ್ರದಾಯವಾದಿ ಅಭ್ಯರ್ಥಿಯಾಗಿದ್ದು, ಪ್ರಸ್ತುತ 6:1 ರ ಅನುಪಾತದೊಂದಿಗೆ ರೇಸ್‌ನಲ್ಲಿದ್ದಾರೆ. ಯುರೋಪ್ ಬಿಷಪ್ ಕಾನ್ಫರೆನ್ಸಸ್‌ನ ಕೌನ್ಸಿಲ್‌ನ ಅಧ್ಯಕ್ಷರಾಗಿದ್ದ ಪೀಟರ್ ಎರ್ದೋ, ಸಾಂಪ್ರದಾಯಿಕ ಕ್ಯಾಥೋಲಿಕ್ ಧರ್ಮ ಬೋಧನೆಯನ್ನು ಪ್ರತಿಪಾದಿಸುವವರು.
5) ಏಂಜೆಲೋ ಸ್ಕೋಲಾ (ಇಟೆಲಿ): ಕಾರ್ಡಿನಲ್ ಏಂಜೆಲೋ ಸ್ಕೋಲಾ (82) 2013ರ ಕಾನ್‌ಕ್ಲೇವ್‌ನಲ್ಲಿ ಮುಂಚೂಣಿಯಲ್ಲಿದ್ದವರು. ಫ್ರಾನ್ಸಿಸ್ ಅವರಿಗೆ ಪೈಪೋಟಿ ನೀಡಿದ್ದ ಏಂಜೆಲೋ ಸ್ಕೋಲಾ ಅವರು ಮಿಲಾನ್‌ನ ಮಾಜಿ ಆರ್ಚ್‌ಬಿಷಪ್ ಆಗಿದ್ದು 8:1ರ ಅನುಪಾತದೊಂದಿಗೆ ರೇಸ್‌ನಲ್ಲಿದ್ದಾರೆ. ಆಳವಾದ ಥಿಯಾಲಾಜಿಕಲ್ ತಿಳಿವಳಿಕೆಯನ್ನು ಹೊಂದಿರುವ ಅವರು, ಕೇಂದ್ರೀಕೃತ ಹಾಗೂ ಚರ್ಚ್‌ನ ಸ್ತರ ಮಟ್ಟದ ಚೌಕಟ್ಟನ್ನು ಪ್ರತಿಪಾದಿಸುವವರು.