ನೂತನ ಪೋಪ್ ಹದಿನಾಲ್ಕನೇ ಲಿಯೋ: ಹೊಸ ಪೋಪ್‌ರ ಹೊಸ ವಿಚಾರಗಳು ವಿಶ್ವದಲ್ಲಿ ಶಾಂತಿ ಸಂಧಾನಕ್ಕೆ ನಾಂದಿ ಹಾಡಲಿ
ಕ್ರೈಸ್ತ ಧರ್ಮದ ಧರ್ಮಗುರು ಪೋಪ್ ಫ್ರಾನ್ಸಿಸ್ ನಿಧನರಾದ ನಂತರ, ಹದಿನಾಲ್ಕನೇ ಲಿಯೋ ಅವರನ್ನು ಹೊಸ ಪೋಪ್ ಆಗಿ ಚುನಾಯಿಸಲಾಗಿದೆ. ಇವರು ಕ್ರೈಸ್ತ ಜಗತ್ತಿಗೆ ನವೀನ ರೀತಿಯ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸ ಕ್ರೈಸ್ತರದ್ದು. ಲಿಯೋ ಅವರ ಜೀವನ, ಪಾಂಡಿತ್ಯ ಹಾಗೂ ಇತರ ವಿಚಾರಗಳ ಕುರಿತಂತೆ, ಡಾ ಬಿ.ಎಸ್.ತಲ್ವಾಡಿ ಅವರ ಬರಹ ಇಲ್ಲಿದೆ.

ಪೋಪ್ ಫ್ರಾನ್ಸಿಸ್ ದಿವಂಗತರಾದ ಮೇಲೆ 133 ಜನ ಕಾರ್ಡಿನಲ್‌ಗಳು ಸಸ್ಟೈನ್ ಚಾಪೆಲ್‌ನಲ್ಲಿ ಒಗ್ಗೂಡಿ ಹೊಸ ಪೋಪ್ ಅನ್ನು ಚುನಾಯಿಸಿದರು (8-5-2025). ಹೊಸ ಪೋಪ್ ಸಂಪ್ರದಾಯದಂತೆ ತಮ್ಮ ಹಳೆಯ ಹೆಸರನ್ನು (ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್) ತ್ಯಜಿಸಿ ನೂನತವಾಗಿ ಹದಿನಾಲ್ಕನೇ ಲಿಯೋ (Leo XIV) ಎಂಬ ಹೆಸರನ್ನು ಪಡೆದರು. ಪೋಪ್ ಹದಿನಾಲ್ಕನೇ ಲಿಯೋ ಅವರು, ಮಹಡಿಯ ಮೇಲೆ ನಿಂತು ವ್ಯಾಟಿಕನ್ ಸಭಾಂಗಣದಲ್ಲಿ ನೆರೆದಿದ್ದ ಸಾವಿರಾರು ಜನಸ್ತೋಮದತ್ತ ಕೈಬೀಸಿ ಆಶೀರ್ವದಿಸಿದರು. ಅದು ಒಂದು ಅತ್ಯದ್ಭುತ ಲೋಕ. ವಿಶ್ವದ ಎಲ್ಲ ದೇಶಗಳಿಂದ ಶ್ರೀಸಾಮಾನ್ಯರು, ಸಿಸ್ಟರ್‌ಗಳು, ಫಾದರ್‌ಗಳು ನೆರೆದಿದ್ದರು. ಆ ಜನಸ್ತೋಮ ಹರ್ಷೋದ್ಗಾರದಿಂದ "ಹಬೆಮಸ್ ಪಾಪಮ್" ಎಂದು ಒಕ್ಕೊರಲಿನಿಂದ ಕೂಗಿ ಕುಣಿದಾಡಿದರು. ನಮಗೆ ಒಬ್ಬರು ಪೋಪ್ ದೊರೆತರು ಎಂಬುದೇ ಇದರ ಅರ್ಥ. ಅನಂತರ ಪೋಪ್ ಸಸ್ಟೈನ್ ಚಾಪೆಲ್‌ನಲ್ಲಿ ಕಾರ್ಡಿನಲ್‌ಗಳ ಜೊತೆ Thanksgiving mass ಅರ್ಪಿಸಿದರು. ಈಗ ವಿಶ್ವದ ಲ್ಯಾಟಿನ್ ಕ್ರೈಸ್ತರಿಗೆ ಹೊಸ ಪೋಪ್ ಪ್ರಾಪ್ತವಾಗಿದ್ದಾರೆ.
ಹದಿನಾಲ್ಕನೇ ಪೋಪ್ ಲಿಯೋ, ಯುನೈಟೆಡ್ ಸ್ಟೇಟ್ಸ್ ದೇಶದ ಚಿಕಾಗೊದಲ್ಲಿ 14-9-1955ರಲ್ಲಿ ಜನಿಸಿದರು. ತಂದೆ ಲೂಯಿಸ್ ಮರಿಯಸ್ ಪ್ರೆವೋಸ್ಟ್ ಮತ್ತು ತಾಯಿ ಮಿಲ್ಡ್ರೆಡ್ ಆಗ್ನೆಸ್. ಇವರು ತಮ್ಮ ಮಗುವಿಗೆ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ಎಂದು ನಾಮಕರಣ ಮಾಡಿದರು. ರಾಬರ್ಟ್‌ಗೆ ಇಬ್ಬರು ಅಣ್ಣಂದಿರು ಇದ್ದರು. ರಾಬರ್ಟ್ ಅವರು ರಿವರ್‌ಡೇಲ್‌ನ ಸಂತ ಅಮಲೋದ್ಭವ ಮೇರಿ ಚರ್ಚ್ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದರು. ಆಗಲೇ ಅವರು ಗಾಯನ ಹಾಗೂ ಪೂಜೆಯಲ್ಲಿ ಭಾಗಿಯಾಗುತ್ತಿದ್ದರು. 1969ರಿಂದ 1973ರವರೆಗೆ ಮಿಚಿಗಸ್‌ನ ಸೈಂಟ್ ಅಗುಸ್ಟೀನ್ ಸೆಮಿನರಿ ಹೈಸ್ಕೂಲ್‌ನಲ್ಲಿ ಓದಿದರು. ಮುಂದೆ ಅವರು ಸೈಂಟ್ ಅಗುಸ್ಟೀನ್ ಸಂಘಕ್ಕೆ ಗುರುವಾಗಿ ಸೇರಿದರು.
ಸೈಂಟ್ ಅಗುಸ್ಟೀನ್ ಸೆಮಿನರಿ ಹೈಸ್ಕೂಲ್‌ನಲ್ಲಿದ್ದಾಗಲೇ ಭಾಷಾ ಪ್ರಭುತ್ವವನ್ನು ಬೆಳೆಸಿಕೊಂಡರು. ಅನೇಕ ಮ್ಯಾಗಜಿನ್‌ಗಳನ್ನು, ವಾರ್ಷಿಕ ಪುಸ್ತಕಗಳನ್ನು ಸಂಪಾದಿಸುವ ಕೆಲಸ ಮಾಡಿದರು. ವಿಲನೋವಾ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಸೈನ್ಸ್ ಡಿಗ್ರಿ ಇನ್ ಮೆಥಮೆಟಿಕ್ಸ್ ಪಡೆದರು. ಅಧ್ಯಯನದ ಸಂದರ್ಭದಲ್ಲಿ ಚಿಕಾಗೋ ಕಾಲೇಜಿನಲ್ಲಿ ಫಿಸಿಕ್ಸ್ ಮತ್ತು ಮ್ಯಾಥ್ಸ್ ಬೋಧಿಸುತ್ತಿದ್ದರು. ರೋಮ್‌ನಿಂದ 1987ರಲ್ಲಿ ಡಾಕ್ಸರ್ ಆಫ್ ಕ್ಯಾನನ್ ಲಾ (Doctor of Canon Law) ಪದವಿ ಪಡೆದರು.
1-9-1977ರಲ್ಲಿ ರಾಬರ್ಟ್ ಅವರು ಸೈಂಟ್ ಅಗುಸ್ಟೀನ್ ಸಭೆಗೆ ನೋವಿಸ್ ಆಗಿ ಸೇರಿದರು. 29-8-1981ರಂದು ಅಂತಿಮ ಸನ್ಯಾಸದೀಕ್ಷೆ ಪಡೆದರು. 19-6-1982ರಲ್ಲಿ ರೋಮ್‌ನ ಸಂತ ಮೋನಿಕಾ ಚರ್ಚ್‌ನ ಗುರುವಾಗಿ ನೇಮಕಗೊಂಡರು. 1985ರಲ್ಲಿ ಪೆರು ದೇಶಕ್ಕೆ ಮಿಶನರಿಯಾಗಿ ಹೋದರು. ಅಲ್ಲಿ ಎರಡು ವರ್ಷ ಚಾನ್ಸೆಲರ್ ಆಗಿದ್ದರು. 1988ರಲ್ಲಿ ಮತ್ತೆ ಪೆರು ದೇಶಕ್ಕೆ ಹೋದರು. ಹತ್ತು ವರ್ಷಗಳ ಕಾಲ ಕ್ಯಾನನ್ ಲಾ ಅನ್ನು ಸೈಂಟ್ ಅಗುಸ್ಟೀನ್ ಸೆಮಿನರಿಯಲ್ಲಿ ಬೋಧಿಸಿದರು. ಇದರ ಜೊತೆಗೆ ಧರ್ಮಕಾರ್ಯದ ಪಾಲನಾಕೇಂದ್ರವನ್ನು ನಿರ್ವಹಿಸುತ್ತಿದ್ದರು.
ಫಾ.ರಾಬರ್ಟ್ ಅವರು ಪೆರು ದೇಶದ ನಾಗರಿಕರಾದರು. ಅದೇ ವರ್ಷ ಅವರನ್ನು ಪೆರುವಿನ ಚಿಕ್ಲಾಯೋದ ಬಿಷಪ್ ಆಗಿ ನೇಮಕ ಮಾಡಲಾಯ್ತು. 2020ರಲ್ಲಿ ಕಲಾವೋನ ಅಪೋಸ್ಟಾಲಿಕ್ ಆಡಳಿತಾಧಿಕಾರಿಯಾಗಿ ನೇಮಕಗೊಂಡರು. 21-11-2020ರಂದು ಬಿಷಪ್ ರಾಬರ್ಟ್, ಬಿಷಪರ ಸಮೂಹಕೂಟಕ್ಕೆ ಸೇರಿದರು.
ದಿ.ಪೋಪ್ ಫ್ರಾನ್ಸಿಸ್ ಇವರನ್ನು ಚಿಕ್ಲಾಯೋದ ಡಿಕಾಸ್ಟರಿ ಫಾರ್ ಬಿಶಪ್ಸ್ (Dicastery for Bishops)ನ ಆಡಳಿತಾಧಿಕಾರಿ ಆಗಿ ನೇಮಿಸಿದರು. 6-2-2025ರಂದು ಪೋಪ್ ಫ್ರಾನ್ಸಿಸ್ ಇವರನ್ನು ಕಾರ್ಡಿನಲ್ ಆಗಿ ನೇಮಿಸಿದರು. ಇದರ ಜೊತೆಗೆ ಅಲ್ಫಾನೋದ ಬಿಷಪ್ ಆಗಿ ಅತ್ಯಲ್ಪ ಕಾಲದಲ್ಲಿ ಆರ್ಚ್‌ಬಿಷಪ್ ರಾಬರ್ಟ್ ಪೋಪ್ ಆಗುವ ಸುಯೋಗ ಬಂದಿತು. ಕೇವಲ ಹದಿನೇಳು ದಿನಗಳ ಕಾಲ ವ್ಯಾಟಿಕನ್ ಆಡಳಿತಾಧಿಕಾರಿಯ ವಶದಲ್ಲಿತ್ತು. ಈಗ 8-5-2025ರಂದು ಕಾರ್ಡಿನಲ್ ರಾಬರ್ಟ್ ಪೋಪ್ ಆಗಿ ಹೊಸ ಹೆಸರನ್ನು ಪಡೆದಿದ್ದಾರೆ. ಕ್ರೈಸ್ತ ಜಗತ್ತಿಗೆ ನವೀನ ರೀತಿಯ ಯೋಜನೆಗಳನ್ನು, ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ಹೊಸ ಪೋಪ್ ಹದಿನಾಲ್ಕನೇ ಲಿಯೋ ಪ್ರಯತ್ನಿಸುತ್ತಾರೆ ಎಂಬ ವಿಶ್ವಾಸ ಕ್ರೈಸ್ತರದ್ದು. ಮುಂದಿನ ದಿನಗಳಲ್ಲಿ ಹೊಸ ಪೋಪರ ಹೊಸ ವಿಚಾರಗಳು ವಿಶ್ವದಲ್ಲಿ ಶಾಂತಿ, ಸಂಧಾನಕ್ಕೆ ನಾಂದಿ ಹಾಡಲಿ.
(ಬರಹ: ಡಾ ಬಿ. ಎಸ್.ತಲ್ವಾಡಿ. ಲೇಖಕರು ಕರ್ನಾಟಕದ ಜಾನಪದ ಮತ್ತು ಕ್ರೈಸ್ತ ಧರ್ಮದ ವಿಚಾರದಲ್ಲಿ ಆಳವಾಗಿ ಅಧ್ಯಯನ ಮಾಡಿರುವ ವಿದ್ವಾಂಸರು. ಜಾನಪದ ರಾಮಾಯಣ, ಕ್ರೈಸ್ತ ಜಾನಪದ ಗೀತೆಗಳು ಸೇರಿದಂತೆ ಹಲವು ಪುಸ್ತಕಗಳು ಪ್ರಕಟವಾಗಿವೆ. ಸಂಪರ್ಕ ಸಂಖ್ಯೆ: 90353 14252)