ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಬೆಲೆ ಕುಸಿತವಾದರೂ ಮಾಂಸ ಕೊಳ್ಳಲು ಜನರ ಹಿಂದೇಟು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಬೆಲೆ ಕುಸಿತವಾದರೂ ಮಾಂಸ ಕೊಳ್ಳಲು ಜನರ ಹಿಂದೇಟು

ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಬೆಲೆ ಕುಸಿತವಾದರೂ ಮಾಂಸ ಕೊಳ್ಳಲು ಜನರ ಹಿಂದೇಟು

ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಜನರಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಿದೆ. ಹೀಗಾಗಿ ಕೋಳಿ ಮಾಂಸ ಖರೀದಿಗೆ ಜನರು ಮುಂದಾಗುತ್ತಿಲ್ಲ. ಇದರಿಂದ ಕೋಳಿ ಸಾಕಣೆದಾರರು ಹಾಗೂ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.

ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಮಾಂಸ ಕೊಳ್ಳಲು ಜನರ ಹಿಂದೇಟು (ಸಾಂದರ್ಭಿಕ ಚಿತ್ರ)
ಹಕ್ಕಿ ಜ್ವರ ಭೀತಿ; ತೆಲಂಗಾಣದಲ್ಲಿ ಕೋಳಿ ಮಾರಾಟ ಕುಸಿತ, ಮಾಂಸ ಕೊಳ್ಳಲು ಜನರ ಹಿಂದೇಟು (ಸಾಂದರ್ಭಿಕ ಚಿತ್ರ) (AFP)

ಹೈದರಾಬಾದ್: ನೆರೆಯ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಹಕ್ಕಿ ಜ್ವರದ ಭೀತಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈಗಾಗಲೇ ಹಲವೆಡೆ ಸಾವಿರಾರು ಕೋಳಿಗಳು ಸಾವನ್ನಪ್ಪಿವೆ. ಖಮ್ಮಂ, ಕರೀಂನಗರ, ನಿಜಾಮಾಬಾದ್, ಕಾಮರೆಡ್ಡಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಹಕ್ಕಿ ಜ್ವರದ ಭೀತಿಯಿಂದ ಕೋಳಿ ಮಾರಾಟದ ಮೇಲೆ ತೀವ್ರ ಪರಿಣಾಮ ಬೀರಿದೆ. ಆರೋಗ್ಯದ ಕಾಳಜಿಯಿಂದಾಗಿ ಜನರು ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕಿದ್ದಾರೆ. ಬೇಡಿಕೆ ಕಡಿಮೆಯಾಗುತ್ತಿದ್ದಂತೆಯೇ ಬೆಲೆ ಕೂಡಾ ದಿಡೀರ್‌ ಕುಸಿತವಾಗಿದೆ. ಜನರು ಮೀನು ಸೇರಿದಂತೆ ಇತರ ಬದಲಿ ಮಾಂಸಗಳ ಖರೀಸುತ್ತಿದ್ದು, ಕೋಳಿ ಮಾಂಸ ಮಾರಾಟಗಾರರಿಗೆ ಭಾರಿ ನಷ್ಟ ಉಂಟಾಗಿದೆ.

ಇತ್ತೀಚೆಗೆ, ಖಮ್ಮಂ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕೋಳಿ ಸಾಕಣೆ ಕೇಂದ್ರಗಳಲ್ಲಿ ಸಾವಿರಾರು ಬ್ರಾಯ್ಲರ್ ಕೋಳಿಗಳು ಸಾವನ್ನಪ್ಪಿವೆ. ತೆಲಂಗಾಣದ ಗಡಿಗೆ ಹತ್ತಿರವಿರುವ ಆಂಧ್ರಪ್ರದೇಶದ ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ದೃಢಪಟ್ಟಿದ್ದು, ಅದೇ ವೈರಸ್ ಕೋಳಿ ಸಾವಿಗೆ ಕಾರಣ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.

ಹಕ್ಕಿ ಜ್ವರದಿಂದಾಗಿ ವ್ಯಾಪಾರ ಕುಸಿದಿದೆ. ಭದ್ರಾಚಲಂನ ಕೋಳಿ ಮಾರಾಟಗಾರ ಪಿ ಸುಂದರಂ ಅವರು ಸುದ್ದಿಸಂಸ್ಥೆ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಪ್ರತಿಕ್ರಿಯೆ ನೀಡಿ, ಶಂಕಿತ ವೈರಸ್‌ನಿಂದ ಕೋಳಿ ಸಾವು ವರದಿಯಾದ ನಂತರ ಮಾರಾಟ 40ರಿಂದ 50 ಶೇಕಡದಷ್ಟು ಕುಸಿದಿದೆ ಎಂದಿದ್ದಾರೆ. ಕೊಥಗುಡೆಮ್‌ನ ಮಾರಾಟಗಾರ ಕೆ ವೀರಬಾಬು, ಬೆಲೆಗಳನ್ನು ಕಡಿಮೆ ಮಾಡಿ ಕೆಜಿಗೆ ಅರ್ಧ ಕೆಜಿ ಕೋಳಿಯನ್ನು ಉಚಿತವಾಗಿ ಮಾರಾಟ ಮಾಡಿದರೂ ಖರೀದಿಗೆ ಜನರು ಹಿಂಜರಿಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಬೆಲೆ ಇಳಿಕೆಯಾದರೂ ಬೇಡಿಕೆ ಕಡಿಮೆ

ಸದ್ಯ ಕೋಳಿ ಬೆಲೆಯಲ್ಲಿ ತೀವ್ರ ಕುಸಿವಾಗಿದೆ. ಖಮ್ಮಂನಲ್ಲಿ ಬ್ರಾಯ್ಲರ್ ಕೋಳಿ ಬೆಲೆ ಕೆಜಿಗೆ 270 ರೂ.ಗಳಿಂದ 200 ರೂ.ಗಳಿಗೆ ಇಳಿದಿವೆ. ಆದರೂ ಮಾರಾಟ ಕಡಿಮೆಯಾಗಿದೆ. ಕರೀಂನಗರದಲ್ಲಿ ಬೆಲೆ ಪ್ರತಿ ಕೆಜಿಗೆ 240 ರೂ.ಗಳಿಂದ 140 ರೂ.ಗಳಿಗೆ ಇಳಿದಿವೆ.

ತೆಲಂಗಾಣದ ಕೋಳಿ ಸಾಕಣೆದಾರರು ಈಗಾಗಲೇ ಭಾರಿ ನಷ್ಟದಲ್ಲಿದ್ದು, ತಮ್ಮ ವ್ಯವಹಾರಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ನಿಜಾಮಾಬಾದ್ ಮತ್ತು ಕಾಮರೆಡ್ಡಿ ಜಿಲ್ಲೆಗಳಲ್ಲಿ, ಕೋಳಿ ಸಾವು ಮತ್ತು ಮಾರಾಟ ಕುಸಿತವು ರೈತರಲ್ಲಿ ಭಯವನ್ನು ಉಂಟುಮಾಡಿದೆ. ಹೊಸದಾಗಿ ಸಾಕಣೆ ಮಾಡಲು ಕೂಡಾ ಯೋಚಿಸಬೇಕಾಗಿ ಬಂದಿದೆ.

ನಷ್ಟ ನಷ್ಟ ನಷ್ಟ

ಬೊರ್ಲಾಮ್ ಗ್ರಾಮದ ಕೋಳಿ ಸಾಕಣೆದಾರ ರಾಮಚಂದರ್ ಎಂಬವರ 8,000 ಕೋಳಿಗಳು (ಪ್ರತಿಯೊಂದೂ 2 ಕೆಜಿಗಿಂತ ಹೆಚ್ಚು ತೂಕವಿತ್ತು) ಇದ್ದಕ್ಕಿದ್ದಂತೆ ಸಾವನ್ನಪ್ಪಿವೆ ಎಂದು ವರದಿಯಾಗಿದೆ. ಇದರಿಂದ ಕನಿಷ್ಠ 2.5 ಲಕ್ಷ ರೂ. ನಷ್ಟವಾಗಿದೆಯಂತೆ. “ಕೋಳಿಗಳು ಇನ್ನೂ ಕೆಲವು ದಿನಗಳು ಬದುಕುಳಿದಿದ್ದರೆ, ಅವು ಮಾರಾಟವಾಗುತ್ತಿದ್ದವು. ಈಗ ಕೇವಲ ಮೂರು ದಿನಗಳಲ್ಲಿ ಭಾರಿ ನಷ್ಟವಾಯಿತು” ಎಂದು ಹೇಳಿಕೊಂಡಿದ್ದಾರೆ.

ಜನರಲ್ಲಿ ಭೀತಿ

ಅತ್ತ ಹಕ್ಕಿ ಜ್ವರದ ಭೀತಿಯಿಂದಾಗಿ ಮೇಡಕ್ ಜಿಲ್ಲೆಯ ಚಿಲ್ಲರೆ ಮಾರುಕಟ್ಟೆಯಲ್ಲಿ ಕೋಳಿ ಮಾಂಸದ ಬೆಲೆ ಕುಸಿದಿದೆ. ವಿವಿಧ ಚಿಲ್ಲರೆ ಅಂಗಡಿಗಳಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 20 ರಿಂದ 50 ರೂ.ಗಳಷ್ಟು ಕಡಿಮೆಯಾಗಿದೆ. ಮೇಡಕ್‌ನಲ್ಲಿ ಕೋಳಿಗೆ ಸಂಬಂಧಿಸಿದ ಅಸಹಜ ಸಾವುಗಳು ವರದಿಯಾಗಿಲ್ಲ. ಆದರೂ, ಆಂಧ್ರಪ್ರದೇಶದಲ್ಲಿ ಹಕ್ಕಿ ಜ್ವರ ಹರಡುತ್ತಿರುವ ವದಂತಿಯಿಂದ ಮಾಂಸ ಪ್ರಿಯರು ಕೋಳಿ ಮಾಂಸ ತಿನ್ನುವುದರಿಂದ ದೂರ ಉಳಿದಿದ್ದಾರೆ.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.
Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.