Maha Kumbh Mela 2025: ಮಹಾ ಕುಂಭಮೇಳದಲ್ಲಿ ಮತ್ತೊಂದು ದುರಂತ, ಮೈದಾನದಲ್ಲಿ ಬೆಂಕಿ ಅವಗಢ, ಪೆಂಡಾಲ್‌ಗಳು ಭಸ್ಮ
Maha KumbhMela 2025: ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಬೆಂಕಿ ಕಾಣಿಸಿಕೊಂಡು ಭಾರೀ ಅನಾಹುತ ತಪ್ಪಿದೆ. ಕೆಲವು ಟೆಂಟ್‌ಗಳು ಬೆಂಕಿಗೆ ಆಹುತಿಯಾಗಿವೆ.

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ತ್ರಿವೇಣಿ ನದಿ ಸಂಗಮ ನಗರ ಪ್ರಯಾಗ್‌ರಾಜ್‌ನಲ್ಲಿ ಕೋಟ್ಯಂತರ ಭಕ್ತರು ನಿತ್ಯ ಪುಣ್ಯ ಸ್ನಾನ ಮಾಡುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ದುರಂತಗಳು ಮರುಕಳಿಸುತ್ತಲೇ ಇವೆ. ವಾರದ ಹಿಂದೆ ಆಕಸ್ಮಿಕ ಬೆಂಕಿ ಬಿದ್ದು ಟೆಂಟ್‌ಗಳು ಸುಟ್ಟು ಹೋಗಿದ್ದವು. ಕಾಲ್ತುಳಿತದಿಂದ ಮೂವತ್ತು ಮಂದಿ ಮೃತಪಟ್ಟಿದ್ದರು. ಇದರ ನಡುವೆಯೇ ಮತ್ತೊಂದು ಅಗ್ನಿ ದುರಂತ ಗುರುವಾರ ಮಧ್ಯಾಹ್ನ ಮಹಾ ಕುಂಭ ನಡೆಯುತ್ತಿರುವ ಮೈದಾನದಲ್ಲಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ಹಬ್ಬುವುದನ್ನು ತಡೆದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಸುಟ್ಟ ಗಾಯಗಳಾಗಲಿ ಆಗಿಲ್ಲ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಬೆಂಕಿ ಆರಿಸುವ ಕಾರ್ಯಾಚರಣೆ ಮುಂದುವರಿದಿದೆ.
ಗುರುವಾರ ಕೂಡ ಲಕ್ಷಾಂತರ ಭಕ್ತರು ಪುಣ್ಯ ಸ್ನಾನಕ್ಕಾಗಿ ಆಗಮಿಸಿದ್ದಾರೆ. ಭಾರೀ ಜನಜಂಗುಳಿ ಅಲ್ಲಿದೆ. ಈ ವೇಳೆ ಮಹಾಕುಂಭ ಮೇಳ ನಡೆಯುವ ಪ್ರದೇಶದ ಛತ್ನಾಗ್ ಘಾಟ್ ನಾಗೇಶ್ವರ ಘಾಟ್ ಸೆಕ್ಟರ್ 22 ಪ್ರದೇಶದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿ ನಿರ್ಮಿಸಿರುವ ಟೆಂಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ಈ ವೇಳೆ ಅಲ್ಲಿ ಯಾರೂ ಇರಲಿಲ್ಲ. ಬೆಂಕಿ ಅಕ್ಕಪಕ್ಕದ ಟೆಂಟ್‌ಗಳಿಗೂ ಹಬ್ಬಿದೆ. ಸಾಕಷ್ಟು ಟೆಂಟ್‌ಗಳು ಸುಟ್ಟು ಹೋಗಿದ್ದು, ಅದರಲ್ಲಿದ್ದ ವಸ್ತುಗಳು ಸುಟ್ಟಿವೆ.
ಬೆಂಕಿ ಬಿದ್ದು ನಿಧಾನವಾಗಿ ಇತರೆ ಟೆಂಟ್‌ಗಳ ಕಡೆಗೆ ಹಬ್ಬುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಇನ್ನಷ್ಟು ಟೆಂಟ್ ಗಳಿಗೆ ಬೆಂಕಿ ಹಬ್ಬುವುದನ್ನು ತಡೆದರು. ನಂತರ ಬೆಂಕಿ ನಂದಿಸುವ ಕಾರ್ಯ ಮುಂದುವರಿಸಿದರು. ಇತರೆ ರಕ್ಷಣಾ ತಂಡಗಳೂ ಸ್ಥಳದಲ್ಲೇ ಬೀಡು ಬಿಟ್ಟಿದ್ದು ಬೆಂಕಿ ಬಿದ್ದ ಜಾಗದಲ್ಲಿನ ಟೆಂಟ್ ದುರಸ್ಥಿಯಲ್ಲಿ ನಿರತರಾಗಿದ್ದಾರೆ.
ಬುಧವಾರ ಮೌನಿ ಅಮಾವಾಸ್ಯೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರೊಟ್ಟಿಗೆ ಕುಂಭಮೇಳದ ಸ್ಥಳದಲ್ಲಿ ಜನವರಿ 19ರಂದು ಸೆಕ್ಟರ್ 19ರಲ್ಲಿರುವ ಗೀತಾ ಪ್ರೆಸ್‌ನ ಶಿಬಿರದಲ್ಲಿಸಹ ಬೆಂಕಿ ಕಾಣಿಸಿಕೊಂಡು 180 ಪೆಂಡಾಲ್‌ಗಳು ಸುಟ್ಟುಹೋಗಿದ್ದವು. ಈಗ ಮತ್ತೊಮ್ಮೆ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿದೆ.
