Narendra Modi: 'ದೇಶಕ್ಕೆ ಸವಾಲು ಎದುರಾದಾಗ ಜನ ಬಿಜೆಪಿ ಮೇಲೆ ನಂಬಿಕೆ ತೋರುತ್ತಾರೆ', ಮತದಾರರಿಗೆ 'ನಮೋ' ಎಂದ ಪ್ರಧಾನಿ
“ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರೀಸಾಮಾನ್ಯನ ಬಯಕೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ಗುಜರಾತ್ ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ. ದೇಶದ ಮುಂದೆ ಸವಾಲು ಎದುರಾದಾಗಲೆಲ್ಲಾ ಜನರು ಬಿಜೆಪಿ ಮೇಲೆ ತಮ್ಮ ನಂಬಿಕೆಯನ್ನು ತೋರಿಸುತ್ತಾರೆ ಎಂಬ ಸಂದೇಶ ಸ್ಪಷ್ಟವಾಗಿದೆ” ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಂದು ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ, ಬೆಜೆಪಿ ನಾಯಕರು ದೆಹಲಿಯ ಕೇಂದ್ರ ಕಚೇರಿಯಲ್ಲಿ ಒಟ್ಟಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಬಿಜೆಪಿ ಬೆಂಬಲಿಗರಿಗೆ ಶುಭಾಶಯ ಕೋರಿದ್ದಾರೆ. ಅಲ್ಲದೆ ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ವೇಳೆ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, “ಶಾಂತಿಯುತವಾಗಿ ಚುನಾವಣೆ ನಡೆಸಿದ್ದಕ್ಕಾಗಿ ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ನನಗೆ ತಿಳಿದಂತೆ ಯಾವುದೇ ಮತಗಟ್ಟೆಯಲ್ಲಿ ಮರು ಮತದಾನದ ಅಗತ್ಯವಿಲ್ಲ. ಹಿಮಾಚಲ ಪ್ರದೇಶದ ಮತದಾರರಿಗೂ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನ ಮತಗಳ ನಡುವಿನ ವ್ಯತ್ಯಾಸವು 1 ಶೇಕಡಕ್ಕಿಂತ ಕಡಿಮೆ” ಎಂದು ಹೇಳಿದರು.
“ಗುಜರಾತ್ ಇತಿಹಾಸದಲ್ಲಿ ಬಿಜೆಪಿಗೆ ಅತಿ ದೊಡ್ಡ ಜನಾದೇಶ ನೀಡುವ ಮೂಲಕ ಗುಜರಾತ್ ಎಲ್ಲಾ ದಾಖಲೆಗಳನ್ನು ಮುರಿದಿದೆ. ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಶ್ರೀಸಾಮಾನ್ಯನ ಬಯಕೆ ಎಷ್ಟು ಪ್ರಬಲವಾಗಿದೆ ಎಂಬುದನ್ನು ಗುಜರಾತ್ ಚುನಾವಣಾ ಫಲಿತಾಂಶ ಸಾಬೀತುಪಡಿಸಿದೆ. ದೇಶದ ಮುಂದೆ ಸವಾಲು ಎದುರಾದಾಗಲೆಲ್ಲಾ ಜನರು ಬಿಜೆಪಿ ಮೇಲೆ ತಮ್ಮ ನಂಬಿಕೆಯನ್ನು ತೋರಿಸುತ್ತಾರೆ ಎಂಬ ಸಂದೇಶ ಸ್ಪಷ್ಟವಾಗಿದೆ” ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಇದೇ ವೇಳೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, “ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಗುಜರಾತ್‌ನಲ್ಲಿ ಇದು ನಮ್ಮ ದಾಖಲೆಯ ಗೆಲುವಾಗಿದೆ. ನಾವು ಒಟ್ಟು 52.5 ಶೇಕಡಾ ಮತಗಳನ್ನು ಪಡೆದಿದ್ದೇವೆ. ಕಾಂಗ್ರೆಸ್‌ನ ಮತದಾನದ ಪ್ರಮಾಣ 27.3ಕ್ಕೆ ಕುಸಿದಿದೆ. ಗುಜರಾತ್ ಅನ್ನು ಅವಮಾನಿಸಲು ಹೊಸ ಪಕ್ಷ ಬಂದಿತ್ತು. ಆ ಪಕ್ಷದ ನಾಯಕರು ಗುಜರಾತ್‌ನಲ್ಲಿ ನಮ್ಮ ಸರ್ಕಾರ ಬರಲಿದೆ ಎಂದು ಹೇಳಿದರು. ಅವರು ಈಗ ಜನರ ಕ್ಷಮೆ ಕೇಳಬೇಕು” ಎಂದು ನಡ್ಡಾ ಹೇಳಿದ್ದಾರೆ.
ಅಂತಿಮ ಫಲಿತಾಂಶ ಹೊರಬೀಳುವುದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಮೋದಿ, "ಗುಜರಾತ್ ರಾಜ್ಯದಲ್ಲಿ ಪಕ್ಷದ ಗೆಲುವಿಗೆ ಶ್ರಮವಹಿಸಿದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೆ ನಾನು ಇಷ್ಟು ಹೇಳಲು ಬಯಸುತ್ತೇನೆ. ನೀವು ಪ್ರತಿಯೊಬ್ಬರೂ ಚಾಂಪಿಯನ್! ನಮ್ಮ ಪಕ್ಷದ ನಿಜವಾದ ಶಕ್ತಿಯಾಗಿರುವ ನಮ್ಮ ಕಾರ್ಯಕರ್ತರ ಅಸಾಧಾರಣ ಪರಿಶ್ರಮವಿಲ್ಲದೆ ಈ ಐತಿಹಾಸಿಕ ಗೆಲುವು ಎಂದಿಗೂ ಸಾಧ್ಯವಿಲ್ಲ" ಎಂದು ಟ್ವೀಟ್ ಮಾಡಿದ್ದರು.
ಇದೇ ವೇಳೆ, ಚುನಾವಣೆಯಲ್ಲಿ ಸೋತ ಹಿಮಾಚಲದ ಜನತೆಗೂ ಮೋದಿ ಧನ್ಯವಾದ ಸಲ್ಲಿಸಿದ್ದಾರೆ. "ಬಿಜೆಪಿಯ ಮೇಲಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಹಿಮಾಚಲ ಪ್ರದೇಶದ ಜನರಿಗೆ ಧನ್ಯವಾದ ಹೇಳುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಆಶೋತ್ತರಗಳನ್ನು ಈಡೇರಿಸಲು ಮತ್ತು ಜನರ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಲು ನಾವು ಶ್ರಮಿಸುತ್ತೇವೆ," ಎಂದು ಭರವಸೆ ನೀಡಿದ್ದಾರೆ.
182 ಸದಸ್ಯ ಬಲದ ಗುಜರಾತ್ ವಿಧಾನಸಭೆಯಲ್ಲಿ, ಬಹುಮತಕ್ಕೆ ಬೇಕಾಗಿರುವುದು 92 ಕ್ಷೇತ್ರಗಳಲ್ಲಿ ಗೆಲುವು. ಆದರೆ, ಇಂದು ಮತಎಣಿಕೆ ಆರಂಭವಾದಾಗಿನಿಂದ ಬಿಜೆಯು ಭಾರಿ ಮುನ್ನಡೆ ಕಾಯ್ದುಕೊಂಡು ಬಂದಿದೆ. ಅಂತಿಮವಾಗಿ ಬಹುಮತ ಸಾಬೀತುಪಡಿಸುವುದರೊಂದಿಗೆ ರಾಜ್ಯದಲ್ಲಿ ಗದ್ದುಗೆ ಉಳಿಸಿಕೊಂಡಿದೆ. ಕಳೆದ ಬಾರಿಯ, ಅಂದರೆ 2017ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಬಿಜೆಪಿ ಸಾಧನೆ ಹೆಚ್ಚಿದೆ. ಸತತ ಏಳು ಬಾರಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ದಾಖಲೆ ನಿರ್ಮಿಸಿದೆ.