Maharashtra Bus Accident: ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಖಾಸಗಿ ಬಸ್; 13 ಮಂದಿ ದುರ್ಮರಣ, ಹಲವರಿಗೆ ಗಾಯ
ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 13 ಮಂದಿ ಮೃತಪಟ್ಟಿರುವ ಭೀಕರ ದುರಂತ ಮಹಾರಾಷ್ಟ್ರದ ರಾಯಗಢ್ ನಲ್ಲಿ ನಡೆದಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ದುರಂತ ಸಂಭವಿಸಿದೆ. ಚಾಲನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಕಂದಕಕ್ಕೆ ಬಿದ್ದ ಪರಿಣಾಮ 13 ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ರಾಯಗಢದ ಖೋಪೋಲಿ ವ್ಯಾಪ್ತಿಯ ಬೋರ್ಘಾಟ್‌ನಲ್ಲಿ ನಡೆದಿದೆ.
ಘಟನೆಯಲ್ಲಿ 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ಮಾಡಲಾಗಿದೆ. ಪುಣೆಯಿಂದ ಮುಂಬೈ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಲ್ಲಿ ಒಟ್ಟು 41 ಮಂದಿ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ.
ಪುಣೆ-ರಾಯಗಢ ಗಡಿ ಭಾಗದ ಬೋರ್ಘಾಟ್‌ನಲ್ಲಿ ಇಂದು (ಏ.15, ಶನಿವಾರ) ಮುಂಜಾನೆ 4:30ಕ್ಕೆ ಅಪಘಾತ ಸಂಭವಿಸಿದೆ. ರಸ್ತೆಯಿಂದ ಬಿದ್ದ ರಭಸಕ್ಕೆ ಬಸ್ ಸಂಪೂರ್ಣವಾಗಿ ನಜ್ಜು ಗುಜ್ಜು ಆಗಿದೆ. ಪ್ರಯಾಣಿಕರ ಬ್ಯಾಗ್ ಸೇರಿದಂತೆ ಇತರೆ ವಸ್ತುಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿವೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆಗೆ ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ.
ಸಾವಿಗೀಡಾದ ಮ್ಯೂಸಿಕ್ ತಂಡದ ಸದಸ್ಯರು..!
ಮುಂಬೈನ ಜಾರ್ಜ್‌ಗಾಂವ್‌ನಿಂದ 'ಬಾಜಿ ಪ್ರಭು ವಾಡಕ್ ಗ್ರೂಪ್' ಎಂಬ ಸಂಗೀತ ತಂಡವು ಪುಣೆಯ ಪಿಂಪ್ರಿ ಚಿಚ್ವಾಡ್ ಪ್ರದೇಶಕ್ಕೆ ಕಾರ್ಯಕ್ರಮವೊಂದಕ್ಕೆ ತೆರಳಿತ್ತು. ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಖಾಸಗಿ ಬಸ್‌ನಲ್ಲಿ ಎಲ್ಲರೂ ಜಾರ್ಜ್‌ಗಾಂವ್‌ಗೆ ತೆರಳಿದರು. ಇದರಿಂದ ಶನಿವಾರ ಬೆಳಗಿನ ಜಾವ 4:50ಕ್ಕೆ ಬಸ್ ಕಣಿವೆಗೆ ಬಿದ್ದಿದೆ.
ಮೃತ ದೇಹಗಳ ಜೊತೆಗೆ ಗಾಯಾಳುಗಳನ್ನು ಕೋಪಲಿ ಗ್ರಾಮಾಂತರ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಸತ್ತವರಲ್ಲಿ ಹೆಚ್ಚಿನವರು 18-25 ವರ್ಷ ವಯಸ್ಸಿನವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಾಯಗಢ ಸಮೀಪದ ಖಾಸಗಿ ಬಸ್ ಕಣಿವೆಗೆ ಬಿದ್ದು, ಈ ಅಪಘಾತ ಸಂಭವಿಸಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಕೆಲವರು ಗಾಯಗೊಂಡಿದ್ದಾರೆ ಎಂದು ಎಸ್ಪಿ ಸೋಮನಾಥ್ ಗಾರ್ಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಅಂತ ಹೇಳಲಾಗುತ್ತಿದೆ. ಘಟನೆಗೆ ನಿಜವಾದ ಕಾರಣಗಳೇನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. ಅಪಘಾತದ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಭಾಗ