ಮುತ್ತಜ್ಜ, ಅಜ್ಜಿ, ಅಪ್ಪನ ಹೆಜ್ಜೆ ಅನುಕರಿಸಿದ ಮೊಮ್ಮಗಳು; ತಡವಾಗಿ ರಾಜಕೀಯ ಪ್ರವೇಶಿಸಿ ಸಂಚಲನ ಸೃಷ್ಟಿಸಿದ ಪ್ರಿಯಾಂಕಾ ಗಾಂಧಿ ಜೀವನ ಹೇಗಿದೆ?
Priyanka Gandhi Profile: ಮುತ್ತಜ್ಜ ಜವಾಹರಲಾಲ್ ನೆಹರು, ಅಜ್ಜಿ ಇಂದಿರಾಗಾಂಧಿ, ಅಪ್ಪ ರಾಜೀವ್ ಗಾಂಧಿ ಹೆಜ್ಜೆ ಅನುಕರಿಸಿದ ಮೊಮ್ಮಗಳು ಪ್ರಿಯಾಂಕಾ ಗಾಂಧಿ ಅವರು ವಯನಾಡು ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜಕೀಯಕ್ಕೆ ತಡವಾಗಿ ಪ್ರವೇಶಿಸಿದರೂ ಸಂಚಲನ ಸೃಷ್ಟಿಸಿದ್ದಾರೆ. ಅವರ ಬದುಕಿನ ಹೋರಾಟ ಹೇಗಿದೆ?
ವಯನಾಡು ಲೋಕಸಭಾ ಉಪಚುನಾವಣೆ-2024ರಲ್ಲಿ ಪ್ರಿಯಾಂಕಾ ಗಾಂಧಿ ಅವರು ಸುನಾಮಿ ಸೃಷ್ಟಿಸಿದ್ದಾರೆ. ಹಲವು ವರ್ಷಗಳ ತೆರೆಮರೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಪ್ರಿಯಾಂಕಾ ತಮ್ಮ 52ನೇ ವಯಸ್ಸಿನಲ್ಲಿ ಅದೃಷ್ಟ ಪರೀಕ್ಷೆಗಿಳಿದು ಯಶಸ್ಸು ಕಂಡಿದ್ದಾರೆ. ಅಣ್ಣ ರಾಹುಲ್ ಗಾಂಧಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸ್ಪರ್ಧಿಸಿದ ‘ಕೈ’ ನಾಯಕಿಗೆ ಕೇರಳದ ಮತದಾರ ಪ್ರಭು ಜೈ ಎಂದಿದ್ದಾನೆ. ಚೊಚ್ಚಲ ಚುನಾವಣೆಯಲ್ಲಿ 4 ಲಕ್ಷಕ್ಕೂ ಅತ್ಯಧಿಕ ಮತಗಳೊಂದಿಗೆ ಭರ್ಜರಿ ಗೆಲುವು ಸಾಧಿಸುವ ಮೂಲಕ ಸಂಭ್ರಮಿಸಿದ್ದಾರೆ. ಪ್ರತಿಸ್ಪರ್ಧಿಗಳಾದ ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನೇವಿ ಹರಿದಾಸ್ ವಿರುದ್ಧ ಭಾರೀ ಅಂತರದ ಜಯ ಕಂಡಿದ್ದಾರೆ. ಪ್ರಿಯಾಂಕಾ 6,22,338 ಮತ, ಪಡೆದು ಗೆಲುವು ಸಾಧಿಸಿದ್ದಾರೆ. ಸಿಪಿಐ(ಎಂ) ಅಭ್ಯರ್ಥಿ ಸತ್ಯನ್ ಮೊಕೆರಿ 2,11,407 ಮತಗಳನ್ನು ಪಡೆದರು. ಬಿಜೆಪಿ ಅಭ್ಯರ್ಥಿ ನವ್ಯಾ ಹರಿದಾಸ್ ಮೂರನೇ ಸ್ಥಾನ ಪಡೆದರು. 4.1 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದು ಬೀಗಿದರು. ತಡವಾಗಿ ರಾಜಕೀಯ ಪ್ರವೇಶಿಸಿದರೂ ಸಂಚಲನ ಸೃಷ್ಟಿಸಿರುವ ಪ್ರಿಯಾಂಕಾ ರಾಜಕೀಯ ಜೀವನ ಹೇಗಿದೆ? ಇಲ್ಲಿದೆ ವಿವರ
ಪ್ರಿಯಾಂಕಾ ಗಾಂಧಿ ವಾದ್ರಾ ಆರಂಭಿಕ ಜೀವನ ಮತ್ತು ಶಿಕ್ಷಣ
1972ರ ಜನವರಿ 12ರಂದು ದೆಹಲಿಯಲ್ಲಿ ಜನಿಸಿದ ಪ್ರಿಯಾಂಕಾ ಗಾಂಧಿ ಅವರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಇಬ್ಬರು ಮಕ್ಕಳಲ್ಲಿ ಕಿರಿಯವರು. ಅಣ್ಣ ರಾಹುಲ್ ಗಾಂಧಿ. ಪ್ರಿಯಾಂಕಾ 1984ರವರೆಗೆ ಡೆಹ್ರಾಡೂನ್‌ನ ವೆಲ್‌ಹ್ಯಾಮ್ ಬಾಲಕಿಯರ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದರು. ಇದಾದ ನಂತರ ರಾಹುಲ್ ಮತ್ತು ಪ್ರಿಯಾಂಕಾ ಇಬ್ಬರನ್ನೂ ಭದ್ರತಾ ಕಾರಣಗಳಿಂದ ದೆಹಲಿ ಶಾಲೆಗಳಿಗೆ ಸ್ಥಳಾಂತರ ಮಾಡಲಾಯಿತು. ಅಜ್ಜಿ ಇಂದಿರಾ ಗಾಂಧಿ ಹತ್ಯೆಯ ನಂತರ ನಿರಂತರ ಭಯೋತ್ಪಾದಕ ಬೆದರಿಕೆಗಳಿಂದ ಪ್ರಿಯಾಂಕಾ ಮತ್ತು ರಾಹುಲ್ ಮನೆಯಲ್ಲಿಯೇ ಶಿಕ್ಷಣ ಪಡೆದರು.
ದೆಹಲಿ ವಿಶ್ವವಿದ್ಯಾಲಯದ ಅಲ್ಮಾ ಮೇಟರ್ನಲ್ಲಿ ಬಿಎ, ಎಂಎ ಪದವಿ ಪಡೆದರು. 1997 ರಲ್ಲಿ ಪ್ರಿಯಾಂಕಾ ಅವರು ದೆಹಲಿ ಮೂಲದ ಉದ್ಯಮಿ ರಾಬರ್ಟ್ ವಾದ್ರಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರ ಹೆಸರು ರೈಹಾನ್ ವಾದ್ರಾ, ಮಿಯಾರಾ ವಾದ್ರಾ. ಲೋಧಿ ಎಸ್ಟೇಟ್‌ನಲ್ಲಿರುವ ಸರ್ಕಾರಿ ವಸತಿ ಗೃಹವನ್ನು ಖಾಲಿ ಮಾಡುವಂತೆ ಸೂಚಿಸಿದ ನಂತರ ಪ್ರಿಯಾಂಕಾ ಗಾಂಧಿ ಅವರು ಗುರುಗ್ರಾಮ್‌ಗೆ ಸ್ಥಳಾಂತರಗೊಂಡರು. ರಾಜೀವ್ ಗಾಂಧಿ ಪ್ರತಿಷ್ಠಾನದ ಟ್ರಸ್ಟಿ ಕೂಡ ಆಗಿದ್ದಾರೆ. 2010 ರಲ್ಲಿ ಬೌದ್ಧ ಅಧ್ಯಯನದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸಿದರು.
ಪ್ರಿಯಾಂಕಾ ಗಾಂಧಿ ರಾಜಕೀಯ ಹಾದಿ…
2004ರ ಭಾರತೀಯ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ, ತಮ್ಮ ತಾಯಿಯ ಪ್ರಚಾರ ವ್ಯವಸ್ಥಾಪಕರಾಗಿದ್ದರು. ಅವರ ಸಹೋದರ ರಾಹುಲ್ ಗಾಂಧಿ ಅವರ ಪ್ರಚಾರವನ್ನು ಮೇಲ್ವಿಚಾರಣೆಗೆ ನೆರವಾಗಿದ್ದರು. 2007ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ರಾಹುಲ್ ರಾಜ್ಯಾದ್ಯಂತ ಪ್ರಚಾರ ಕೈಗೊಂಡಿದ್ದರೆ, ಪ್ರಿಯಾಂಕಾ ಅಮೇಠಿ ಮತ್ತು ರಾಯ್ಬರೇಲಿ ಪ್ರದೇಶದ ಹತ್ತು ಸ್ಥಾನಗಳ ಮೇಲೆ ಕೇಂದ್ರೀಕರಿಸಿದ್ದರು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಪಕ್ಷದ ಕಾರ್ಯಕರ್ತರಲ್ಲಿ ಸಾಕಷ್ಟು ಆಂತರಿಕ ಕಲಹ ಶಮನಗೊಳಿಸಲು ಪ್ರಯತ್ನಿಸಿದ್ದರು.
ಹಲವು ವರ್ಷಗಳ ಕಾಲ ಕಾಂಗ್ರೆಸ್ ಅಭಿವೃದ್ಧಿಗೆ ಸತತವಾಗಿ ಶ್ರಮಿಸಿದ್ದ ಅವರು, ಅಧಿಕೃತವಾಗಿ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಅಲ್ಲದೆ, ಕಾಂಗ್ರೆಸ್ನಲ್ಲಿ ಯಾವುದೇ ಜವಾಬ್ದಾರಿ ಪಡೆದಿರಲಿಲ್ಲ. ಆದರೆ, 2019ರಲ್ಲಿ ರಾಜಕೀಯಕ್ಕೆ ಅಧಿಕೃತ ಪ್ರವೇಶ ಪ್ರವೇಶಿಸಿದ ಅವರು, ಹಿಂದಿನ ವರ್ಷಗಳಲ್ಲಿ ರಾಜಕೀಯದಲ್ಲಿ ನೇರವಾಗಿ ತೊಡಗಿಸಿಕೊಳ್ಳುವುದನ್ನು ವಿರೋಧಿಸಿದ್ದರು. ಆದರೆ, ಜನರಲ್ ಮತ್ತು ಅಸೆಂಬ್ಲಿ ಚುನಾವಣೆಗಳಲ್ಲಿ ತಮ್ಮ ತಾಯಿ ಮತ್ತು ಸಹೋದರನ ಚುನಾವಣಾ ಪ್ರಚಾರದಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. ತಮ್ಮ ತಾಯಿಯ ಮತ್ತು ಸಹೋದರರ ಕ್ಷೇತ್ರಗಳಾದ ರಾಯ್ ಬರೇಲಿ ಮತ್ತು ಅಮೇಠಿಗೆ ನಿಯಮಿತವಾಗಿ ಭೇಟಿ ನೀಡುತ್ತಿದ್ದರು.
ತಂದೆ ಕೊಂದವಳನ್ನು ಭೇಟಿಯಾಗಿದ್ದ ಪ್ರಿಯಾಂಕಾ?
ತೆರೆಮರೆಯಲ್ಲಿ ಸಕ್ರಿಯವಾಗಿದ್ದ ಪ್ರಿಯಾಂಕಾ ಬೆಳಕಿಗೆ ಬಂದದ್ದು 2008ರಲ್ಲಿ. ಆದರೆ, 2008ರಲ್ಲಿ ತಮ್ಮ ತಂದೆಯ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಳಿನಿ ಶ್ರೀಹರನ್ ಅವರನ್ನು ಜೈಲಿನಲ್ಲಿ ಭೇಟಿಯಾದ ನಂತರ ಪ್ರಿಯಾಂಕಾ ಹೆಚ್ಚು ಸುದ್ದಿಯಾಗಿದ್ದರು.
ಪ್ರಿಯಾಂಕಾ ಗಾಂಧಿ ರಾಜಕೀಯ ಪ್ರವೇಶ, ಎರಡು ಬಾರಿ ಬಂಧನ
ಹಲವು ವರ್ಷಗಳಿಂದ ಎರಡೂ ಕ್ಷೇತ್ರಗಳಲ್ಲಿ ಜನರೊಂದಿಗೆ ನೇರವಾಗಿ ವ್ಯವಹರಿಸಿದ ಕಾರಣ ಜನಪ್ರಿಯ ವ್ಯಕ್ತಿಯಾಗಿ ಬೆಳೆದರು. 23 ಜನವರಿ 2019 ರಂದು ಪ್ರಿಯಾಂಕಾ ಗಾಂಧಿ ಅವರು ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ನಂತರ ಔಪಚಾರಿಕವಾಗಿ ರಾಜಕೀಯವನ್ನು ಪ್ರವೇಶಿಸಿದರು. ನಂತರ 11 ಸೆಪ್ಟೆಂಬರ್ 2020 ರಂದು ಇಡೀ ಉತ್ತರ ಪ್ರದೇಶ ರಾಜ್ಯದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡರು. 2021ರ ಅಕ್ಟೋಬರ್ನಲ್ಲಿ ಯುಪಿ ಪೊಲೀಸರು 2 ಬಾರಿ ಪ್ರಿಯಾಂಕಾರನ್ನು ಬಂಧಿಸಿದ್ದರು.
ಆ ವರ್ಷ ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪಟ್ಟಣದ ಬಳಿ ಪ್ರತಿಭಟನಾ ನಿರತ ರೈತರ ಮೇಲೆ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರಿಗೆ ಸಂಬಂಧಿಸಿದ ಬೆಂಗಾವಲು ವಾಹನ ಹರಿದಿದ್ದ ಕಾರಣ 8 ರೈತ ಪ್ರತಿಭಟನಾಕಾರರು ಸಾವನ್ನಪ್ಪಿದ್ದರು. ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದ ವೇಳೆ ಪ್ರೀಯಾಂಕಾ ಭೇಟಿ ನೀಡಿದ್ದ ಮೊದಲ ಬಾರಿಗೆ ಬಂಧನವಾಗಿದ್ದರು. 50 ಗಂಟೆಗಳ ಸೆರೆವಾಸ ಅನುಭವಿಸಿದ್ದರು. ಪೊಲೀಸ್ ಕಸ್ಟಡಿಯಲ್ಲಿ ಮರಣ ಹೊಂದಿದ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಆಗ್ರಾಕ್ಕೆ ಹೋಗುತ್ತಿದ್ದ ಅವಧಿಯಲ್ಲಿ ಪ್ರಿಯಾಂಕಾ ಎರಡನೇ ಬಾರಿಗೆ ಬಂಧನಕ್ಕೆ ಒಳಗಾದರು.
ಮಹಿಳಾ ಸಬಲೀಕರಣಕ್ಕೆ ಒತ್ತು
ಪ್ರಿಯಾಂಕಾ ಗಾಂಧಿ 2021ರ ಅಕ್ಟೋಬರ್ 23ರಂದು ಬಾರಾಬಂಕಿಯಿಂದ ಉತ್ತರ ಪ್ರದೇಶ ಚುನಾವಣಾ ಪ್ರಚಾರ ಪ್ರಾರಂಭಿಸಿದ್ದರು. 2022ರ ಜನವರಿಯಲ್ಲಿ ಪ್ರಿಯಾಂಕಾ, ರಾಹುಲ್ ಗಾಂಧಿ ಅವರೊಂದಿಗೆ 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದರು. ಪ್ರಣಾಳಿಕೆಯು ಯುವಜನತೆ ಮತ್ತು ಮಹಿಳಾ ಸಬಲೀಕರಣದ ಜೊತೆಗೆ ರಾಜ್ಯದ ಅಭಿವೃದ್ಧಿಯ ಮೇಲೆ ಕೇಂದ್ರೀಕೃತವಾಗಿತ್ತು. ಮಹಿಳೆಯರಿಗೆ 40% ಟಿಕೆಟ್‌ಗಳನ್ನು ಭರವಸೆ ನೀಡಿದ್ದರು.
ಮಹಿಳಾ ಸಬಲೀಕರಣ ಮತ್ತು ರಾಜಕೀಯದಲ್ಲಿ ಭಾಗವಹಿಸುವಿಕೆಯ ಕುರಿತು ರಾಜ್ಯದಲ್ಲಿ "ಲಡ್ಕಿ ಹೂ, ಲಾಡ್ ಸಕ್ತಿ ಹೂ" ಅಭಿಯಾನ ಪ್ರಾರಂಭಿಸಿದರು. ಅಂತರಾಷ್ಟ್ರೀಯ ಮಹಿಳಾ ದಿನದ ದಿನದಂದು ರಾಜ್ಯದ ರಾಜಧಾನಿ ಲಕ್ನೋದಲ್ಲಿ ರ್ಯಾಲಿ ಪ್ರಾರಂಭಿಸಿದ್ದರು. ಉತ್ತರ ಪ್ರದೇಶದಲ್ಲಿ ಪಕ್ಷ ಪುನರುಜ್ಜೀವನಗೊಳಿಸಲು ಮತ್ತು ರಾಜ್ಯದ ರಾಜಕೀಯಕ್ಕೆ ಸುಧಾರಣೆಗಳನ್ನು ತರಲು ಆಕೆ ನಡೆಸಿದ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿತು. 403ರ ವಿಧಾನಸಭಾ ಕ್ಷೇತ್ರಗಳಲ್ಲಿ ಗೆದ್ದಿದ್ದೇ 2ರಲ್ಲಿ.
ಯುಪಿ ಸೋಲಿನ ನಂತರ 2022ರ ಆಗಸ್ಟ್ 24 ರಂದು ಬೆಲೆ ಏರಿಕೆ ಮತ್ತು ಹಣದುಬ್ಬರದ ವಿರುದ್ಧ ಕಾಂಗ್ರೆಸ್ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅವರು ದೆಹಲಿ ಪೋಲೀಸರಿಂದ ಬಂಧಿಸಲ್ಪಟ್ಟರು. 2023ರ ಡಿಸೆಂಬರ್ನಲ್ಲಿ ಉತ್ತರ ಪ್ರದೇಶದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಗಾಂಧಿ ನಿರ್ಗಮಿಸಿದ್ದರು. ಕರ್ನಾಟಕದಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನದಲ್ಲಿ ಪ್ರಿಯಾಂಕಾ ಗಾಂಧಿ ಅವರ ಒತ್ತಾಸೆಯಿತ್ತು. ಮಹಿಳಾ ಕೇಂದ್ರಿತ ರಾಜಕಾರಣದ ಬಗ್ಗೆ ಮಾತನಾಡುವ ಪ್ರಿಯಾಂಕಾ ಲೋಕಸಭೆಯಲ್ಲಿ ಮಹಿಳೆಯರ ವಿಚಾರಗಳ ಬಗ್ಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವ ನಿರೀಕ್ಷೆ ದೇಶದಲ್ಲಿದೆ.
ಮುತ್ತಜ್ಜ, ಅಜ್ಜಿ, ಅಪ್ಪನ ಹೆಜ್ಜೆ ಅನುಕರಿಸಿದ ಮೊಮ್ಮಗಳು
ಪ್ರಿಯಾಂಕಾ ಗಾಂಧಿ ಅವರ ಮುತ್ತಜ್ಜ ಜವಹರಲಾಲ್ ನೆಹರು ದೇಶದ ಮೊದಲ ಪ್ರಧಾನಿಯಾಗಿದ್ದರು. ಅಜ್ಜಿ ಇಂದಿರಾಗಾಂಧಿ ಮತ್ತು ತಂದೆ ರಾಜೀವ್ ಗಾಂಧಿ ಅವರೂ ಪ್ರಧಾನಿಯಾಗಿದ್ದರು. ಇವರೆಲ್ಲರ ಹೆಜ್ಜೆಗಳನ್ನು ಅನುಸರಿಸಿರುವ ಮೊಮ್ಮಗಳು ಪ್ರಿಯಾಂಕಾ ಗಾಂಧಿ ದೇಶದ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಮುತ್ತಜ್ಜ, ಅಜ್ಜಿ, ತಂದೆಯವರಂತೆಯೇ ಎಲ್ಲಿ ಹೇಗೆ ರಾಜಕೀಯ ದಾಳ ಉರುಳಿಸಬೇಕು ಎನ್ನುವ ಪಟ್ಟುಗಳನ್ನು ಅದ್ಭುತವಾಗಿ ಕಲಿತಿದ್ದಾರೆ. ಅವರು ತಮ್ಮ ಅಜ್ಜಿಯಂತೆಯೇ ಕಾಣುತ್ತಾರೆ. ಚಿಕ್ಕ ವಯಸ್ಸಿನಿಂದಲೂ ಜನರು ತಮ್ಮ ಅಜ್ಜಿ ಇಂದಿರಾ ಅವರಂತೆಯೇ ಇದ್ದೀರಿ ಎಂದು ಹೋಲಿಕೆ ಮಾಡಿದ್ದರು.