Priyanka Gandhi: ಹುತಾತ್ಮನ ಮಗನಿಗೆ 'ಮೀರ್‌ ಜಾಫರ್‌' ಪಟ್ಟ ಕಟ್ಟಿದವರಿಗೆ ಶಿಕ್ಷೆ ಏಕಿಲ್ಲ?: ಮೋದಿ ಟಾರ್ಗೆಟ್‌ ಮಾಡಿದ ಪ್ರಿಯಾಂಕಾ!
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Priyanka Gandhi: ಹುತಾತ್ಮನ ಮಗನಿಗೆ 'ಮೀರ್‌ ಜಾಫರ್‌' ಪಟ್ಟ ಕಟ್ಟಿದವರಿಗೆ ಶಿಕ್ಷೆ ಏಕಿಲ್ಲ?: ಮೋದಿ ಟಾರ್ಗೆಟ್‌ ಮಾಡಿದ ಪ್ರಿಯಾಂಕಾ!

Priyanka Gandhi: ಹುತಾತ್ಮನ ಮಗನಿಗೆ 'ಮೀರ್‌ ಜಾಫರ್‌' ಪಟ್ಟ ಕಟ್ಟಿದವರಿಗೆ ಶಿಕ್ಷೆ ಏಕಿಲ್ಲ?: ಮೋದಿ ಟಾರ್ಗೆಟ್‌ ಮಾಡಿದ ಪ್ರಿಯಾಂಕಾ!

ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವವನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ, ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ (PTI)

ನವದೆಹಲಿ: ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವವನ್ನು ಅನರ್ಹಗೊಳಿಸಿರುವುದನ್ನು ವಿರೋಧಿಸಿ, ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಅಹೋರಾತ್ರಿ ಧರಣಿಗೆ ಕರೆ ಕೊಟ್ಟಿದೆ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ವಿರುದ್ಧ ಮಾಡಿದ ಒಂದು ಆರೋಪಕ್ಕಾಗಿ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವವನ್ನು ಕಿತ್ತುಕೊಂಡವರು, ಹುತಾತ್ಮ(ರಾಜೀವ್‌ ಗಾಂಧಿ)ನ ಮಗ(ರಾಹುಲ್‌ ಗಾಂಧಿ)ನಿಗೆ 'ಮೀರ್‌ ಜಾಫರ್‌' ಎಂದು ಕರೆದೂ ಶಿಕ್ಷೆಗೆ ಗುರಿಯಾಗಿಲ್ಲ ಎಂದು ಪ್ರಿಯಾಂಕಾ ಗಾಂಧಿ ಹರಿಹಾಯ್ದರು.

ಗಾಂಧಿ ಕುಟುಂಬದ ವಿರುದ್ಧ ಬಿಜೆಪಿಯ ಉಗ್ರ ದಾಳಿಗೆ, ಪ್ರಧಾನಿ ಮೋದಿ ಅವರೇ ನೇತೃತ್ವ ವಹಿಸಿದ್ದಾರೆ. ಪ್ರಧಾನಿ ಮೋದಿ ಗಾಂಧಿ ಕುಟುಂಬವನ್ನು ಅವಮಾನಿಸುವ ಮೂಲಕ, ಕಾಶ್ಮೀರಿ ಪಂಡಿತ ವಂಶಾವಳಿಯನ್ನು ಅವಮಾನಿಸಿದ್ದಾರೆ ಎಂದು ಪ್ರಿಯಾಂಕಾ ಗಾಂಧಿ ಹೇಳಿರುವುದು ಗಮನ ಸೆಳೆದಿದೆ.

ರಾಹುಲ್ ಗಾಂಧಿ ಅವರನ್ನು "ಹುತಾತ್ಮನ ಮಗ" ಎಂದು ಕರೆದಿರುವ ಪ್ರಿಯಂಕಾ ಗಾಂಧಿ, ನೆಹರು-ಗಾಂಧಿ ಕುಟುಂಬವನ್ನು ನಿತ್ಯವೂ ಅವಮಾನಿಸುತ್ತಿರುವ ಬಿಜೆಪಿಗೆ ಈ ದೇಶದ ಜನ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗುಡುಗಿದರು. “ನನ್ನ ಸಹೋದರನನ್ನು ದೇಶದ್ರೋಹಿ ಮತ್ತು ಮೀರ್ ಜಾಫರ್ ಎಂದು ಕರೆದವರು, ರಾಹುಲ್ ಗಾಂಧಿಗೆ ಅವರ ತಾಯಿ ಯಾರೆಂದು ಗೊತ್ತಿಲ್ಲ ಎಂದವರು, ಆರಾಮವಾಗಿ ಓಡಾಡಿಕೊಂಡಿದ್ದಾರೆ. ಈ ದೇಶಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕುಟುಂಬವನ್ನು ಅವಮಾನಿಸುವ ಬಿಜೆಪಿ ನಾಯಕರಿಗೆ ಶಿಕ್ಷೆ ಏಕೆ ಆಗುವುದಿಲ್ಲ ಎಂದು ಪ್ರಿಯಾಂಕಾ ಗಾಂಧಿ ಖಾರವಾಗಿ ಪ್ರಶ್ನಿಸಿದರು.

"ನಿಮ್ಮ ಪ್ರಧಾನಿ ಸಂಸತ್ತಿನಲ್ಲಿ ಈ ಕುಟುಂಬ ನೆಹರೂ ಹೆಸರನ್ನು ಏಕೆ ಬಳಸುವುದಿಲ್ಲ ಎಂದು ಪ್ರಶ್ನಿಸುತ್ತಾರೆ. ಈ ಮೂಲಕ ಅವರು ಇಡೀ ಕಾಶ್ಮೀರಿ ಪಂಡಿತ ಸಮುದಾಯವನ್ನು ಅವಮಾನಿಸುತ್ತಾರೆ. ಆದರೆ ಅವರಿಗೆ ಯಾವ ಶಿಕ್ಷೆಯೂ ಆಗುವುದಿಲ್ಲ. ಅದರೆ ಈ ದೇಶದ ಸಂಪತ್ತನ್ನು ಲೂಟಿ ಮಾಡಿ ಪರಾಡಿಯಾಗಿರುವವರ ಉಪಮಾನ ಉಲ್ಲೇಖಸಿದ ರಾಹುಲ್‌ ಗಾಂಧಿ ಅವರ ಸಂಸತ್‌ ಸದಸ್ಯತ್ವನ್ನು ಕಿತ್ತುಕೊಳ್ಳಲಾಗುತ್ತದೆ.." ಎಂದು ಪ್ರಿಯಾಂಕಾ ಗಾಂಧಿ ತೀವ್ರ ಆಕ್ರೋಶ ಹೊರಹಾಕಿದರು.

ಇನ್ನು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಹಿಂದುಳಿದ ವರ್ಗ(ಒಬಿಸಿ)ಯನ್ನು ಅವಮಾನಿಸಿದ್ದಾರೆ ಎಂಬುದು ಶುದ್ಧ ಸುಳ್ಳು ಎಂದು ಹೇಳಿದರು. ನೀರವ್ ಮೋದಿ ಒಬಿಸಿಯೇ? ಮೆಹುಲ್ ಚೋಕ್ಸಿ ಒಬಿಸಿಯೇ? ಲಲಿತ್ ಮೋದಿ ಒಬಿಸಿಯೇ? ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ತುಂಬ ಖಾರವಾಗಿ ಪ್ರಶ್ನಿಸಿದರು.

ಗೌತಮ್‌ ಅದಾನಿ ಮತ್ತು ಪ್ರಧಾನಿ ಮೋದಿ ನಡುವಿನ ಸ್ನೇಹ ಸಂಬಂಧದ ಕುರಿತು ಪ್ರಶ್ನೆ ಕೇಳಿದ್ದಕ್ಕಾಗಿ ರಾಹುಲ್‌ ಗಾಂಧಿ ಅವರ ಲೋಕಸಭೆ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ. ಆದರೆ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಈ ಕುರಿತು ಪ್ರಶ್ನೆ ಕೇಳುವುದನ್ನು ಮುಂದುವರೆಸುತ್ತದೆ. ದೇಶದಲ್ಲಿ ವಾಕ್‌ ಸ್ವಾತಂತ್ರ್ಯವನ್ನು ಕಾಪಾಡಲು ನಾವು ಹೋರಾಟ ಮಾಡುತ್ತಿದ್ದೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ವೇಳೆ ಸ್ಪಷ್ಟಪಡಿಸಿದರು.

ಪಕ್ಷದ ಉನ್ನತ ನಾಯಕರಾದ ಪಿ ಚಿದಂಬರಂ, ಜೈರಾಮ್ ರಮೇಶ್, ಸಲ್ಮಾನ್ ಖುರ್ಷಿದ್, ಪ್ರಮೋದ್ ತಿವಾರಿ, ಅಜಯ್ ಮಾಕನ್, ಮುಕುಲ್ ವಾಸ್ನಿಕ್ ಮತ್ತು ಅಧೀರ್ ರಂಜನ್ ಚೌಧರಿ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿ ಪೊಲೀಸರು ಈ ಪ್ರದೇಶದಲ್ಲಿ ಬಿಗಿ ಕಟ್ಟೆಚ್ಚರ ವಹಿಸಿದ್ದರು.

ದೆಹಲಿಯ ಮಹಾತ್ಮಾ ಗಾಂಧಿ ಸ್ಮಾರಕದಲ್ಲಿ ಪ್ರತಿಭಟನೆ ನಡೆಸಲು ಪೊಲೀಸರು ಅವಕಾಶ ನೀಡದ ಕಾರಣಕ್ಕೆ, ರಾಜ್‌ಘಾಟ್‌ ಹೊರಗೆ ಕಾಂಗ್ರೆಸ್‌ ನಾಯಕರು ಸತ್ಯಾಗ್ರಹ ನಡೆಸಿದರು.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.