ಕನ್ನಡ ಸುದ್ದಿ  /  Nation And-world  /  Profile Of Sadanand Vasant Date New Director General National Investigation Agency Vyakti Vyaktitva Column Uks

ಎನ್‌ಐಎ ಸಾರಥ್ಯ ಸದಾನಂದ ವಸಂತ್ ದಾತೆ ಹೆಗಲಿಗೆ; ಮುಂಬಯಿ ದಾಳಿ ಉಗ್ರರಿಗೆ ಪ್ರತಿರೋಧ ತೋರಿದ್ದ ಅಧಿಕಾರಿಯ ಕಿರುಪರಿಚಯ- ವ್ಯಕ್ತಿವ್ಯಕ್ತಿತ್ವ

ಭಾರತದ ಭದ್ರತೆಯ ಮಟ್ಟಿಗೆ ಮಹತ್ವದ ಬೆಳವಣಿಗೆಯೊಂದು ಮಾರ್ಚ್ 31ರಂದು ನಡೆಯಿತು. ಎನ್‌ಐಎ ಸಾರಥ್ಯ ಸದಾನಂದ ವಸಂತ್ ದಾತೆ ಹೆಗಲಿಗೇರಿತು. ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥರಾಗಿದ್ದ ಅವರು ಮುಂಬಯಿ ದಾಳಿ ಉಗ್ರರಿಗೆ ಪ್ರತಿರೋಧ ತೋರಿದ್ದ ಅಧಿಕಾರಿ. ಈ ವ್ಯಕ್ತಿ ವ್ಯಕ್ತಿತ್ವ ಅಂಕಣದಲ್ಲಿ ಅವರ ಕಿರುಪರಿಚಯ.

ಎನ್‌ಐಎ ಸಾರಥ್ಯ ಸದಾನಂದ ವಸಂತ್ ದಾತೆ ಹೆಗಲಿಗೆ; ಮುಂಬಯಿ ದಾಳಿ ಉಗ್ರರಿಗೆ ಪ್ರತಿರೋಧ ತೋರಿದ್ದ ಅಧಿಕಾರಿ
ಎನ್‌ಐಎ ಸಾರಥ್ಯ ಸದಾನಂದ ವಸಂತ್ ದಾತೆ ಹೆಗಲಿಗೆ; ಮುಂಬಯಿ ದಾಳಿ ಉಗ್ರರಿಗೆ ಪ್ರತಿರೋಧ ತೋರಿದ್ದ ಅಧಿಕಾರಿ

ನ್ಯಾಷನಲ್ ಇನ್ವೆಸ್ಟಿಗೇಶನ್ ಏಜೆನ್ಸಿ (ಎನ್‌ಐಎ)ಯ ನೂತನ ಡೈರೆಕ್ಟರ್ ಜನರಲ್‌ ಆಗಿ ಮಹಾರಾಷ್ಟ್ರ ಉಗ್ರ ನಿಗ್ರಹ ದಳ (ಎಟಿಎಸ್‌) ಮುಖ್ಯಸ್ಥ ಸದಾನಂದ ವಸಂತ ದಾತೆ (Sadanand Vasant Date) ಮಾರ್ಚ್ 31ಕ್ಕೆ ಅಧಿಕಾರ ಸ್ವೀಕರಿಸಿದರು. ಎನ್‌ಐಎ ಎಂಬುದು ಭಾರತದ ಭದ್ರತೆಯ ಮೇಲೆ ಪರಿಣಾಮ ಬೀರುವ ಅಪರಾಧಗಳ ತನಿಖೆ ಮತ್ತು ಕಾನೂನು ಕ್ರಮದ ಹೊಣೆಗಾರಿಕೆ ಹೊತ್ತ ದೇಶದ ಪ್ರಧಾನ ಭಯೋತ್ಪಾದನಾ ನಿಗ್ರಹ ಸಂಸ್ಥೆ.

ಸದಾನಂದ ವಸಂತ ದಾತೆ ಅವರು ಮಹಾರಾಷ್ಟ್ರ ಕೇಡರ್‌ನ 1990 ರ ಬ್ಯಾಚ್‌ನ ಐಪಿಎಸ್ ಅಧಿಕಾರಿ. ದಿನಕರ್ ಗುಪ್ತಾ ಅವರ ನಿವೃತ್ತಿಯ ನಂತರ ಎನ್‌ಐಎ ಮುಖ್ಯಸ್ಥರಾಗಿ ಅವರು ಅಧಿಕಾರ ಸ್ವೀಕರಿಸಿದರು. 2026ರ ಡಿಸೆಂಬರ್ 31ರ ತನಕ ಸದಾನಂದ ಅವರು ಈ ಹೊಣೆಗಾರಿಕೆ ನಿಭಾಯಿಸಲಿದ್ದಾರೆ.

ರಾಷ್ಟ್ರೀಯ ತನಿಖಾ ಏಜೆನ್ಸಿ ಬೆಂಗಳೂರಿನಲ್ಲಿ ಕಳೆದ ತಿಂಗಳು (ಮಾರ್ಚ್ 1) ನಡೆದ ರಾಮೇಶ್ವರಂ ಕೆಫೆ ಸ್ಫೋಟದ ತನಿಖೆಯನ್ನೂ ನಡೆಸುತ್ತಿದೆ. ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟ, ಕೊಯಮತ್ತೂರು ಮಾರುತಿ ಕಾರ್‌ ಸ್ಫೋಟ ಸೇರಿ ಹಲವು ಸ್ಫೋಟ ಪ್ರಕರಣಗಳ ತನಿಖೆ ನಡೆಸುತ್ತಿದ್ದು, ಇನ್ನು ಸದಾನಂದ ವಸಂತ ದಾತೇ ಮಾರ್ಗದರ್ಶನದಲ್ಲಿ ಎನ್‌ಐಎ ಕೆಲಸ ಮಾಡಲಿದೆ.

ಕಸಬ್‌, ಇಸ್ಮಾಯಿಲ್ ಜೊತೆ 1 ಗಂಟೆ ಹೋರಾಟ ನಡೆಸಿದ್ದ ಅಧಿಕಾರಿ

ಅಂದು 2008ರ ನವೆಂಬರ್ 26ರ ತಡರಾತ್ರಿ. ಮುಂಬಯಿಯ ಛತ್ರಪತಿ ಶಿವಾಜಿ ಟರ್ಮಿನಸ್‌ (ಸಿಎಸ್‌ಟಿ) ತಲುಪಿದ ಉಗ್ರರು ಮನಸೋ ಇಚ್ಛೆ ಗುಂಡು ಹಾರಿಸುತ್ತಿದ್ದಾರೆ. ಕೆಲ ಹೊತ್ತಿನ ಮೊದಲು 10 ಉಗ್ರರು ಬೋಟ್‌ ಮೂಲಕ ಬಂದು ನಗರದಲ್ಲೆಡೆ ಓಡಿ ಹೋಗಿದ್ದಾರೆ ಎಂದು ಮುಂಬಯಿ ಕೇಂದ್ರ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರಿಗೆ ಫೋನ್‌ ಕರೆ ಬಂತು. ಅದಕ್ಕೆ ಕೂಡಲೇ ಸ್ಪಂದಿಸಿದ ಮಹಾರಾಷ್ಟ್ರ ಎಟಿಎಸ್ ತಂಡ ಉಗ್ರ ನಿಗ್ರಹಕ್ಕೆ ತೆರಳಿತು.

ಸಿಎಸ್‌ಟಿಗೆ ಹೋದದ್ದು ಮುಂಬಯಿ ಕೇಂದ್ರ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದ ತಂಡ. ಈ ತಂಡ ಅಲ್ಲಿಗೆ ತಲುಪುವಷ್ಟರಲ್ಲಿ ಲಷ್ಕರ್ ಏ ತೊಯ್ಬಾ ಸಂಘಟನೆಯ ಉಗ್ರರಾದ ಕಸಬ್ ಮತ್ತು ಇಸ್ಮಾಯಿಲ್‌ ಇಬ್ಬರೂ ಅಲ್ಲಿಂದ ಹೊರಟು ಕಾಮಾ ಆಸ್ಪತ್ರೆ ಸಮೀಪದ ಛಾವಣಿ ಏರಿದ್ದರು. ಈ ತಂಡಕ್ಕೆ ಉಗ್ರರ ಸುಳಿವು ಇಲ್ಲದ ಕಾರಣ ಅಂದಾಜಿನ ಮೇಲೆ ಮುನ್ನಡೆದಿದ್ದರು. ಆಗ ಹೆಚ್ಚುವರಿ ಪೊಲೀಸ್ ಆಯುಕ್ತರಿಗೇ ಒಬ್ಬ ಉಗ್ರ ಎದುರಾಗಿದ್ದ. ಆತನನ್ನು ಎದುರಿಸುವ ಹೊತ್ತಿಗೆ ಅವರು ಉಗ್ರರಿಬ್ಬರೂ ಜೊತೆಯಾಗಿ ಪ್ರತಿದಾಳಿ ನಡೆಸಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಹೋರಾಟದ ಬಳಿಕ ಹೆಚ್ಚುವರಿ ಪೊಲೀಸ್ ಆಯುಕ್ತರ ಹಿಡಿತದಿಂದ ಉಗ್ರ ಪಾರಾದರೆ, ಆಯುಕ್ತರು ಗಂಭೀರ ಗಾಯಗಳೊಂದಿಗೆ ರಕ್ತಸ್ರಾವದೊಂದಿಗೆ ನೆಲಕ್ಕೆ ಕುಸಿದಿದ್ದರು ಎಂಬ ಅಂಶ ಹಳೆಯ ವರದಿಗಳಲ್ಲಿ ದಾಖಲಾಗಿದೆ.

ಈ ಕೆಚ್ಚೆದೆಯ ಸಾಹಸ ತೋರಿದ ಹೆಚ್ಚುವರಿ ಪೊಲೀಸ್ ಆಯುಕ್ತ ಬೇರಾರೂ ಅಲ್ಲ. ಸದಾನಂದ ವಸಂತ ದಾತೆ. ಆ ಹಂತದಲ್ಲಿ ಕೂಡ ಅವರು ಈ ಉಗ್ರರ ಸುಳಿವನ್ನು ತಂಡದ ಇತರರಿಗೆ ನೀಡಿದ್ದು, ಅವರನ್ನು ಸೆರೆಹಿಡಿಯುವಲ್ಲಿ ನೆರವಾಯಿತು. ಎಎಸ್‌ಐ ತುಕಾರಾಮ್‌ ಓಂಬ್ಲೆ ಅವರು ಕಸಬ್‌ನನ್ನು ಜೀವಂತವಾಗಿ ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಾದಾಟದ ನಡುವೆ ಉಗ್ರ ಇಸ್ಮಾಯಿಲ್‌ ಹತನಾಗಿದ್ದು ಕೂಡ ಓಂಬ್ಲೆ ಅವರ ಗುಂಡಿನಿಂದಲೇ. ಈ ಭಯಾನಕ ಕಾರ್ಯಾಚರಣೆಯ ವೇಳೆ ಮುಂಬಯಿಯ ಹಿರಿಯ ಐಪಿಎಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ ಸೇರಿ 18 ಕೆಚ್ಚೆದೆಯ ಪೊಲೀಸರು ಹುತಾತ್ಮರಾದರು. ಕೆಲವು ಉಗ್ರರು ಹತರಾದರು.

ಬಡತನದ ಹಿನ್ನೆಲೆ, ಪತ್ರಿಕೆ ಹಂಚಿ ಶಿಕ್ಷಣ ಪಡೆದಿದ್ದ ಸದಾನಂದ ವಸಂತ ದಾತೆ

ಹಿರಿಯ ಐಪಿಎಸ್ ಅಧಿಕಾರಿ ಸದಾನಂದ ವಸಂತ ದಾತೆ ಅವರು ಕೌಟುಂಬಿಕವಾಗಿ ಬಡತನ ಹಿನ್ನೆಲೆಯಿಂದ ಬಂದವರು. 1966ರ ಡಿಸೆಂಬರ್ 14 ರಂದು ಜನಿಸಿದರು. ಮಹಾರಾಷ್ಟ್ರದ ಪುಣೆಯ ನಿವಾಸಿ. ಬಾಲ್ಯದಲ್ಲಿ ತೀವ್ರ ಬಡತನ ಕಂಡಿದ್ದ ಅವರು ಪುಟ್ಟ ಮನೆಯಲ್ಲಿ ವಾಸವಿದ್ದರು. ದಾತೆ ಎಂಟನೇ ತರಗತಿಯಲ್ಲಿ ಓದುತ್ತಿದ್ದಾಗ ತಂದೆ ತೀರಿಕೊಂಡರು. ನಂತರ ತಾಯಿಯ ಆಸರೆಯಲ್ಲಿ ಬೆಳೆದ ಸದಾನಂದ ದಾತೆ, ಪಾಕೆಟ್ ಮನಿಗಾಗಿ ದಿನ ಪತ್ರಿಕೆ ಹಂಚುವ ಕೆಲಸ ಮಾಡಿದ್ದರು ಎಂಬ ಅಂಶವನ್ನು ಎನ್‌ಪಿಜಿ ನ್ಯೂಸ್ ವೆಬ್‌ತಾಣ ಪ್ರಕಟಿಸಿದೆ.

ಶಾಲಾ ಶಿಕ್ಷಣ, ಕಾಲೇಜು ಶಿಕ್ಷಣ ಪಡೆಯುವಾಗಲೂ ಪತ್ರಿಕೆ ಹಂಚಿದ್ದ ಸದಾನಂದ ವಸಂತ ದಾತೆ, ಪುಣೆಯ ಶಿವಾಜಿನಗರದ ಪೊಲೀಸ್ ಲೈನ್‌ನ ಪೊಲೀಸ್ ಪೇದೆಗಳ ಮನೆಗಳಿಗೂ ಪತ್ರಿಕೆ ಹಂಚಿದ್ದರು. ಹಾಗೆ ಹೋಗುತ್ತಿದ್ದಾಗ ಅವರ ಸಮವಸ್ತ್ರ ಕಂಡು ತಾನೂ ಅದೇ ಕೆಲಸ ಮಾಡಬೇಕೆಂಬ ಕನಸು ಕಂಡರು. ಎಂಕಾಂ ಪದವಿ ಪಡೆದ ಬಳಿಕ ಯುಪಿಎಸ್‌ಸಿ ತಯಾರಿ ಶುರುಮಾಡಿದರು. ಐಪಿಎಸ್‌ ಆಗಿ 1991ರಲ್ಲಿ ಪೊಲೀಸ್ ಇಲಾಖೆಗೆ ಕೆಲಸಕ್ಕೆ ಸೇರಿದರು.

ಈ ನಡುವೆ, ದಾತೆ ಅವರು ಹಂಫ್ರಿ ಫೆಲೋಶಿಪ್ ಕಾರ್ಯಕ್ರಮದ ಭಾಗವಾಗಿ ಮಿನ್ನೇಸೋಟ ವಿಶ್ವವಿದ್ಯಾಲಯ 2005-2006 ರಲ್ಲಿ ವ್ಯಾಸಂಗ ಮಾಡಿದರು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ವೈಟ್ ಕಾಲರ್ ಮತ್ತು ಸಂಘಟಿತ ಮತ್ತು ಆರ್ಥಿಕ ಅಪರಾಧಗಳನ್ನು (ವೈಟ್ ಕಾಲರ್ ಕ್ರಿಮಿನಲ್‌ಗಳು) ನಿಯಂತ್ರಿಸುವ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳನ್ನು ಅಧ್ಯಯನ ಮಾಡಿದರು. ಪುಣೆ ವಿಶ್ವವಿದ್ಯಾಲಯದಿಂದ ಆರ್ಥಿಕ ಅಪರಾಧಗಳ ಕುರಿತು ಪಿಎಚ್‌ಡಿ ಮಾಡಿದರು.

ಸದಾನಂದ ವಸಂತ ದಾತೆ ಅವರ ವೃತ್ತಿ ಬದುಕು

ಸದಾನಂದ್ ವಸಂತ್ ದಾತೆ ಅವರು ವಸಾಯಿ ವಿರಾರ್ ಪೊಲೀಸ್ ಕಮಿಷನರೇಟ್‌ನ ಮೊದಲ ಪೊಲೀಸ್ ಕಮಿಷನರ್ ಆಗಿದ್ದರು. ಮುಂಬೈ ಪೊಲೀಸ್‌ನ ಅಪರಾಧ ವಿಭಾಗದ ಮುಖ್ಯಸ್ಥ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಜಂಟಿ ಆಯುಕ್ತರಾಗಿ ಕೆಲಸ ಮಾಡಿದರು. ಮುಂಬಯಿ ಎಟಿಎಸ್‌ನ ಮುಖ್ಯಸ್ಥರೂ ಆಗಿದ್ದರು. 2006 ರಿಂದ 2008 ರವರೆಗೆ ಆರ್ಥಿಕ ಅಪರಾಧ ವಿಭಾಗದಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿದ್ದರು. ಸದಾನಂದ ವಸಂತ್ ಅವರು ಕೇಂದ್ರೀಯ ತನಿಖಾ ದಳದಲ್ಲಿ ಡಿಐಜಿ, ಐಜಿ ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನಲ್ಲಿ ಐಜಿ (ಆಪ್ಸ್) ಆಗಿಯೂ ಕೆಲಸ ಮಾಡಿದ್ದಾರೆ.

ದಾತೆ ಅವರಿಗೆ 2009 ರಲ್ಲಿ ಮಹಾತ್ಮ ಗಾಂಧಿ ಶಾಂತಿ ಗೌರವ ಪ್ರಶಸ್ತಿ ಸಿಕ್ಕಿದೆ. 2005 ರಲ್ಲಿ, ಸದಾನಂದ್ ವಸಂತ್ ಮೊದಲ ಬಾರಿಗೆ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನು ಪಡೆದರು. ಎರಡನೇ ಬಾರಿಗೆ, 2008 ರ ಮುಂಬೈ ದಾಳಿಯ ಹೋರಾಟಕ್ಕಾಗಿ 2009 ರಲ್ಲಿ ಶೌರ್ಯ ಪ್ರಶಸ್ತಿ ಸ್ವೀಕರಿಸಿದರು. ಈಗ ಎನ್‌ಐಎಯ ಕೆಲಸ ಕಾರ್ಯಗಳನ್ನು ಮುನ್ನಡೆಸುವ ಹೊಣೆಗಾರಿಕೆ ಇಂತಹ ಪ್ರತಿಭಾನ್ವಿತ ಅಧಿಕಾರಿಯ ಹೆಗಲಿಗೇರಿದೆ.

(ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಗಳಿಗೆ ಸ್ವಾಗತ. ನಿಮ್ಮ ಪ್ರತಿಕ್ರಿಯೆ ನಮ್ಮ ಬರಹಗಳಿಗೆ ಜೀವಾಳ. umesh.s@htdigital.in ಅಥವಾ ht.kannada@htdigital.in ಗೆ ಪ್ರತಿಕ್ರಿಯೆ ಇ-ಮೇಲ್​ ಮಾಡಬಹುದು.)

ಮಾಹಿತಿ ಮೂಲಗಳು

https://www.wionews.com/india-news/who-is-sadanand-vasant-date-new-director-general-of-indias-counter-terrorism-agency-nia-704973

https://www.jansatta.com/national/ips-sadanand-vasant-appointed-new-dg-of-nia-piyush-anand-of-ndrf/3277075/

https://npg.news/bureaucrats/ips-sadanand-vasant-date-biography-in-hindi-ips-sadanand-vasant-date-ka-jivan-parichay-jivaninia-dg-sadanand-vasant-date-kaun-hai-1263230

ಮತ್ತು ಪಿಟಿಐ, ಎಎನ್‌ಐ ಏಜೆನ್ಸಿ ಮಾಹಿತಿ

IPL_Entry_Point