Property Registration Online: ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಹೇಗೆ? ಯಾವ ದಾಖಲೆ ಬೇಕು? ವಹಿಸಬೇಕಾದ ಎಚ್ಚರಿಕೆಗಳೇನು?
Property Registration Online: ಆಸ್ತಿ ಖರೀದಿಸುವುದು ಬಹುತೇಕರ ಕನಸು. ಈಗಿನ ಚಳಿಯ ಸಮಯದಲ್ಲಿ ಬೆಚ್ಚನೆಯ ಸ್ವಂತ ಸೂರು ಬೇಕಿತ್ತು ಎಂದು ಬಹುತೇಕರು ಕನಸು ಕಾಣುತ್ತಿರಬಹುದು. ಹಲವು ವರ್ಷಗಳಿಂದ ಮನೆ ಖರೀದಿಸಲು ಬಯಸುವವರು ಈಗ ಪ್ರಾಪರ್ಟಿ ಖರೀದಿಗೆ ಮುಂದಾಗಿರಬಹುದು.
ಸದ್ಯ ದೇಶದ ರಿಯಲ್ ಎಸ್ಟೇಟ್ ಮಾರುಕಟ್ಟೆ ತುಸು ಚೇತರಿಕೆಯ ಹಾದಿಯಲ್ಲಿದೆ. ಕಳೆದ ಕೊರೊನಾ ಸಮಯದ ಬಳಿಕ ಈಗ ರಿಯಾಲ್ಟಿ ಚೇತರಿಕೆಯ ಹಾದಿಯಲ್ಲಿದೆ. ಈಗ ದೀಪಾವಳಿ ಕಳೆದಿದ್ದು, 2022ರ ಕೊನೆಯ ತಿಂಗಳಿಗೆ ಹತ್ತಿರದಲ್ಲಿದ್ದೇವೆ. ಈ ವರ್ಷ ಅಥವಾ ಮುಂದಿನ ವರ್ಷ ಹೊಸದಾಗಿ ಪ್ರಾಪರ್ಟಿ ಖರೀದಿಸಲು ಬಯಸುವವರು ಆನ್‌ಲೈನ್ ಮೂಲಕ ಪ್ರಾಪರ್ಟಿ ನೋಂದಣಿ ಮಾಡಬಹುದಾಗಿದೆ.
ದೇಶದಲ್ಲಿ ನೂರು ರೂ.ಗಿಂತ ದುಬಾರಿಯಾದ ಆಸ್ತಿ ಖರೀದಿಸಬೇಕಿದ್ದರೆ ಅದನ್ನು ನೋಂದಾಯಿಸುವುದು ಕಡ್ಡಾಯ. ನೋಂದಣಿ ಕಾಯಿದೆ, 1908ರ ಸೆಕ್ಷನ್ 17ರ ಪ್ರಕಾರ ಸ್ಥಿರಾಸ್ತಿಯ ಮಾರಾಟ ಮತ್ತು ಖರೀದಿ ಸಮಯದಲ್ಲಿ ನೋಂದಣಿ ಮಾಡಬೇಕಿರುತ್ತದೆ. ಪ್ರಾಪರ್ಟಿ ಖರೀದಿಯಂತೆ ನೋಂದಣಿಯೂ ಒಂದಿಷ್ಟು ಕ್ಲಿಷ್ಟಕರ ಪ್ರಕ್ರಿಯೆ. ಈಗ ಕರ್ನಾಟಕದ ಕಾವೇರಿ ಆನ್‌ಲೈನ್ ಪೋರ್ಟಲ್ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಆನ್‌ಲೈನ್ ಮೂಲಕ ಪ್ರಾಪರ್ಟಿ ನೋಂದಣಿಗೆ ಅವಕಾಶವಿದೆ.
ಆನ್‌ಲೈನ್ ಆಸ್ತಿ ನೋಂದಣಿಗೆ ದಾಖಲೆಪತ್ರಗಳು
- ಆಸ್ತಿ ಖರೀದಿ ಮತ್ತು ನೋಂದಣಿ ಸಮಯದಲ್ಲಿ ಒಂದು ಮಾಲೀಕರಿಂದ ಇನ್ನೊಂದು ಮಾಲೀಕರಿಗೆ ಯಾವಾಗ ಮತ್ತು ಹೇಗೆ ಆಸ್ತಿ ವರ್ಗಾಯಿಸಬೇಕೆಂದು ಸಂಬಂಧಪಟ್ಟ ಎಲ್ಲಾ ದಾಖಲೆಪತ್ರಗಳನ್ನು ಕ್ರಾಸ್‌ಚೆಕ್ ಮಾಡಿಕೊಳ್ಳಿ.
- ಆಸ್ತಿ ಖರೀದಿಗೆ ಮೊದಲು ವಿದ್ಯುತ್ ಬಿಲ್, ನೀರಿನ ಬಿಲ್, ತೆರಿಗೆಗಳು ಇತ್ಯಾದಿ ಹಳೆಯ ಬಾಕಿಗಳನ್ನು ಕ್ಲಿಯರ್ ಮಾಡಲಾಗಿದೆಯೇ ಎಂದು ಪರಿಶೀಲಿಸಿ.
- ಮುದ್ರಾಂಕ ಶುಲ್ಕದ ಲೆಕ್ಕಾಚಾರ ಮಾಡಿ. ಆಸ್ತಿಯ ಮಾರುಕಟ್ಟೆ ಮೌಲ್ಯಕ್ಕೆ ತಕ್ಕಂತೆ ನಿಯಮಗಳು, ಖರೀದಿದಾರರು ಮತ್ತು ಮಾರಾಟಗಾರರ ವಿವರ ಇತ್ಯಾದಿಗಳನ್ನು ಒಳಗೊಂಡ ಡೀಡ್ ಸಿದ್ಧಪಡಿಸಬೇಕು. ಮಾರಾಟ ಪತ್ರ, ಉಡುಗೊರೆ ಪತ್ರ, ಭೋಗ್ಯ ಪತ್ರ ಇತ್ಯಾದಿ.
- ಯಾವುದೇ ಸಾಲಗಳಿಂದ, ಕಾನೂನು ತೊಡಕುಗಳಿಂದ ಆಸ್ತಿಯು ಮುಕ್ತವಾಗಿದೆ ಎನ್ನುವುದನ್ನು ಋಣಭಾರ (ಎನ್‌ಕ್ಯುಂಬ್ರೆನ್ಸ್) ಪ್ರಮಾಣ ಪತ್ರ ಖಚಿತಪಡಿಸುತ್ತದೆ. ಆಸ್ತಿ ಖರೀದಿಸುವ ಮೊದಲು ಖರೀದಿದಾರರು ಇದನ್ನು ಗಮನಿಸಬೇಕು.
ಯಾವ ದಾಖಲೆ ಪತ್ರಗಳು ಬೇಕು?
ಆಸ್ತಿ ನೋಂದಣಿಗೆ ಸಾಮಾನ್ಯವಾಗಿ ಈ ಮುಂದಿನ ದಾಖಲೆಗಳ ಅಗತ್ಯವಿರುತ್ತದೆ.
- ಖರೀದಿದಾರರ ಮತ್ತು ಮಾರಾಟಗಾರರ ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ
- ಎರಡೂ ಕಡೆಯವರ ಗುರುತಿನ ಪ್ರಮಾಣ ಪತ್ರ- ಆಧಾರ್, ಪ್ಯಾನ್
- ಪ್ರಾಪರ್ಟಿ ನೋಂದಣಿ ಪ್ರತಿ
- ಪವರ್ ಆಫ್ ಅನಾರ್ನಿ
- ಮುನ್ಸಿಪಾಲ್ ತೆರಿಗೆ ಪಾವತಿಸಿರುವ ಬಿಲ್
- ಎನ್‌ಒಸಿ
- ದೃಢೀಕರಿಸಿದ ಸೇಲ್ ಡೀಡ್ ಪ್ರತಿ
- ನಿರ್ಮಾಣ ಪೂರ್ಣಗೊಂಡಿರುವ ಪ್ರಮಾಣ ಪತ್ರ
- ಮುದ್ರಾಂಕ ಮತ್ತು ನೋಂದಣಿ ಶುಲ್ಕ ಪಾವತಿಸಿರುವ ರಸೀದಿ
ಆನ್‌ಲೈನ್‌ನಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹೇಗೆ?
- ನಿಮ್ಮ ಪ್ರದೇಶದ ಸರ್ಕಲ್ ರೇಟ್‌ಗೆ ತಕ್ಕಂತೆ, ಪ್ರಾಪರ್ಟಿ ಮೌಲ್ಯ ಲೆಕ್ಕ ಹಾಕಲಾಗುತ್ತದೆ.
- ಆಸ್ತಿ ಮೌಲ್ಯ ಲೆಕ್ಕ ಹಾಕಿದ ಬಳಿಕ ನೀವು ನಾನ್ ಜುಡಿಷಿಯಲ್ ಸ್ಟ್ಯಾಂಪ್ ಪೇಪರ್ ಖರೀದಿಸಬೇಕು. ಇದನ್ನು ಆನ್‌ಲೈನ್ ಮೂಲಕ ಅಥವಾ ಅಧಿಕೃತ ಮುದ್ರಾಂಕ ಪತ್ರ ಮಾರಾಟಗಾರರಿಂದ ಪಡೆಯಬಹುದು.
- ಆಸ್ತಿಯ ವ್ಯವಹಾರಕ್ಕೆ (ಮಾರಾಟ/ಉಡುಗೊರೆ ಇತ್ಯಾದಿ) ತಕ್ಕಂತೆ ಮುದ್ರಾಂಕ ಪತ್ರದಲ್ಲಿ ವಿವರವನ್ನು ಟೈಪ್ ಮಾಡಬೇಕು.
- ಡೀಡ್ ನೋಂದಣಿಯಾಗಬೇಕಿದ್ದರೆ ಖರೀದಿದಾರರು ಮತ್ತು ಮಾರಾಟಗಾರರು ಇಬ್ಬರು ಸಾಕ್ಷಿಗಳೊಂದಿಗೆ ಸಬ್-ರಿಜಿಸ್ಟ್ರಾರ್ ಆಫೀಸ್‌ಗೆ ಹೋಗಬೇಕು. ಹೋಗುವಾಗ ಫೋಟೊ, ಐಡಿ, ಅಗತ್ಯ ದಾಖಲೆಪತ್ರಗಳನ್ನು ಕೊಂಡೊಯ್ಯಬೇಕು.
- ಆಸ್ತಿ ನೋಂದಣಿಗೆ ಮೊದಲು ನೋಂದಣಿ ಶುಲ್ಕ ಪಾವತಿಸಬೇಕು.
- ದಾಖಲೆಗಳನ್ನು ದೃಢೀಕರಿಸಿ ಆಸ್ತಿ ನೋಂದಾಯಿಸಿದ ಬಳಿಕ ರಸೀದಿ ನೀಡಲಾಗುತ್ತದೆ. 2ರಿಂದ 7 ದಿನಗಳ ಬಳಿಕ ಮತ್ತೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ಸೇಲ್ ಡೀಡ್ ಪಡೆದುಕೊಳ್ಳಬೇಕು.
ದೇಶದ ಕೆಲವು ರಾಜ್ಯಗಳಲ್ಲಿ ಈಗ ಆನ್‌ಲೈನ್ ಮೂಲಕ ಆಸ್ತಿ ನೋಂದಾಯಿಸಬಹುದು. ಕರ್ನಾಟಕದ ಕಾವೇರಿ ಆನ್‌ಲೈನ್ ಪೋರ್ಟಲ್ ಮೂಲಕವೂ ಆಸ್ತಿ ನೋಂದಣಿ ಪ್ರಕ್ರಿಯೆ ಮಾಡಬಹುದು. ಆನ್‌ಲೈನ್‌ನಲ್ಲಿ ಮುದ್ರಾಂಕ ಶುಲ್ಕ ಲೆಕ್ಕ ಹಾಕಬಹುದು, ಮುದ್ರಾಂಕ ಶುಲ್ಕ ಪಾವತಿಸಬಹುದು ಮತ್ತು ನೋಂದಣಿ ಶುಲ್ಕವನ್ನು ಆನ್‌ಲೈನ್‌ನಲ್ಲಿಯೇ ಪಾವತಿಸಬಹುದು. ವೆಬ್‌ಸೈಟ್‌ನಿಂದ ಪಾವತಿ ರಸೀದಿಯೂ ದೊರಕುತ್ತದೆ.
- ಆನ್‌ಲೈನ್‌ನಲ್ಲಿ ಆಸ್ತಿ ನೋಂದಾಯಿಸುವ ಸಮಯದಲ್ಲಿ ಸಾಕಷ್ಟು ರಿಸರ್ಚ್ ಮಾಡಿ. ಈ ಹಿಂದೆ ನೋಂದಣಿ ಮಾಡಿರುವವರ ಅನುಭವ ಪಡೆದುಕೊಳ್ಳಿ.
- ಮುದ್ರಾಂಕ ಶುಲ್ಕ ದರವನ್ನು ಲೆಕ್ಕ ಹಾಕಿ. ಬಳಿಕ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕ ಪಾವತಿಸಿ. ರಸೀದಿ ಡೌನ್‌ಲೋಡ್ ಮಾಡಿಕೊಳ್ಳಿ.
- ಈ ರಸೀದಿಯೊಂದಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
- ಪ್ರಾಪರ್ಟಿ ಮೌಲ್ಯ 50 ಲಕ್ಷ ರೂ.ಗಿಂತ ಹೆಚ್ಚಿದ್ದರೆ ಆಸ್ತಿ ಮೌಲ್ಯದ ಶೇ. 1 ಟಿಡಿಎಸ್ ಪಾವತಿಸಬೇಕು.
- ಆನ್‌ಲೈನ್ ನೋಂದಣಿ ಸಮಯದಲ್ಲಿ ಹೆಸರು, ವಿಳಾಸ, ಆಸ್ತಿಯ ಬಗೆ, ಮಾಲೀಕತ್ವದ ಸ್ಥಿತಿ, ಆಸ್ತಿಯ ವಿವರಣೆ, ಆಸ್ತಿಯ ದಾಖಲೆ ಇತ್ಯಾದಿಗಳನ್ನು ನಮೂದಿಸಬೇಕು.
(ಆಸ್ತಿ ಆಸ್ತಿ ನೋಂದಣಿಗೆ ಸಂಬಂಧಪಟ್ಟಂತೆ ಇದು ಮಾಹಿತಿಗಾಗಿ ನೀಡಲಾದ ಬರಹವಾಗಿದೆ. ತಜ್ಞರಿಂದ ಮಾಹಿತಿ ಪಡೆದುಕೊಂಡು ಮುಂದುವರೆಯಿರಿ)
ವಿಭಾಗ