Narayana Murthy - Rishi Sunak: ಅಳಿಯ ಕುರಿತು ಹೆಮ್ಮೆಯಾಗುತ್ತಿದೆ, ರಿಷಿ ಸುನಕ್‌ಗೆ ಅಭಿನಂದಿಸಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ
ರಿಷಿಗೆ ಅಭಿನಂದನೆಗಳು. ನಾವು ಆತನ ಕುರಿತು ಹೆಮ್ಮೆ ಹೊಂದಿದ್ದೇವೆ ಮತ್ತು ಆತನಿಗೆ ಯಶಸ್ಸು ದೊರಕಲೆಂದು ಹಾರೈಸುತ್ತೇವೆʼʼ ಎಂದು ನಾರಾಯಣ ಮೂರ್ತಿಯವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು: ಬ್ರಿಟನ್‌ನ ನೂತನ ಪ್ರಧಾನಮಂತ್ರಿಯಾಗಿ ಆಯ್ಕೆಯಾಗಿರುವ ತನ್ನ ಅಳಿಯ ರಿಷಿ ಸುನಕ್‌ಗೆ ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅಭಿನಂದನೆ ಸಲ್ಲಿಸಿದ್ದಾರೆ. ಬ್ರಿಟನ್‌ಗೆ ಭಾರತ ಮೂಲದ, ಹಿಂದೂ ಮತ್ತು ಬಿಳಿಯನಲ್ಲದ ಮೊದಲ ವ್ಯಕ್ತಿ ಪ್ರಧಾನಿ ಆಯ್ಕೆಯಾಗಿರುವುದಕ್ಕೆ ಭಾರತ ಸಂಭ್ರಮ ಪಡುತ್ತಿದೆ. ಇದೀಗ ತನ್ನ ಅಳಿಯ ಪ್ರಧಾನ ಮಂತ್ರಿಯಾಗಿರುವ ಕುರಿತು ಇನ್ಫೋಸಿಸ್‌ನ ನಾರಾಯಣ ಮೂರ್ತಿ ಅಧಿಕೃತವಾಗಿ ಅಭಿನಂದನೆ ಸಲ್ಲಿಸಿದ್ದಾರೆ.
"ರಿಷಿಗೆ ಅಭಿನಂದನೆಗಳು. ನಾವು ಆತನ ಕುರಿತು ಹೆಮ್ಮೆ ಹೊಂದಿದ್ದೇವೆ ಮತ್ತು ಆತನಿಗೆ ಯಶಸ್ಸು ದೊರಕಲೆಂದು ಹಾರೈಸುತ್ತೇವೆʼʼ ಎಂದು ನಾರಾಯಣ ಮೂರ್ತಿಯವರು ಸುದ್ದಿ ಸಂಸ್ಥೆ ಪಿಟಿಐಗೆ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. "ಈತನು ಯುನೈಟೆಡ್ ಕಿಂಗ್‌ಡಮ್‌ನ ಜನರಿಗೆ ಒಳ್ಳೆಯದನ್ನೇ ಮಾಡುತ್ತೇನೆ ಎಂದು ನಾವು ಭರವಸೆ ಹೊಂದಿದ್ದೇವೆʼʼ ಎಂದು ಅವರು ಹೇಳಿದ್ದಾರೆ.
ನೂರಾರು ವರ್ಷಗಳ ಕಾಲ ಭಾರತವನ್ನು ಆಡಳಿತ ಮಾಡಿದ್ದ ಬ್ರಿಟಿಷರಿಗೆ ಈಗ ಭಾರತ ಮೂಲದ ವ್ಯಕ್ತಿಯೊಬ್ಬರು ಪ್ರಧಾನ ಮಂತ್ರಿಯಾಗುತ್ತಿದ್ದಾರೆ. ಕೇವಲ 45 ದಿನ ಆಡಳಿತ ನಡೆಸಿ ನಿರ್ಗಮಿಸಿದ ಲಿಜ್ ಟ್ರಸ್ ಅವರಿಂದ ರಾಜಕೀಯ ಬಿಕ್ಕಟ್ಟು ಏರ್ಪಟ್ಟಿತ್ತು. ಒಟ್ಟು ಬಲದ ಅರ್ಧಕ್ಕೂ ಹೆಚ್ಚು ಸಂಸದರು ರಿಷಿ ಸುನಕ್ ಅವರಿಗೆ ಪ್ರಧಾನಿಯಾಗಲು ಹಸಿರು ನಿಶಾನೆ ತೋರಿಸಿದ್ದಾರೆ. ರಿಷಿ ಸುನಕ್ ಅವರು ಪ್ರಧಾನಿ ರೇಸ್‌ನಲ್ಲಿ ಆಯ್ಕೆಯಾಗಿರುವುದು ಭಾರತದಲ್ಲಿ ಹೊಸ ಸಂಭ್ರಮ ಮೂಡಿಸಿದೆ.
ಸುನಾಕ್ 1980ರಲ್ಲಿ ಹ್ಯಾಂಪ್ಶೈರ್ನ ಸೌಥಾಂಪ್ಟನ್ನಲ್ಲಿ ಜನಿಸಿದ್ದಾರೆ. 42 ವರ್ಷದ ರಿಷಿ ಅವರು ಇಂಗ್ಲೆಂಡ್‌ನ ಯುವ ಪ್ರಧಾನಿ. ಪಂಜಾಬ್ ಮೂಲದ ಕುಟುಂಬ. ಅವರ ಅಜ್ಜ ಅರವತ್ತರ ದಶಕದಲ್ಲಿ ಪೂರ್ವ ಆಪ್ರಿಕಾದಿಂದ ಬ್ರಿಟನ್‌ಗೆ ವಲಸೆ ಬಂದವರು. ರಿಷಿ ಅವರ ತಂದೆ ಯಶವೀರ್ ವೃತ್ತಿಯಲ್ಲಿ ವೈದ್ಯರು. ತಾಯಿ ಉಷಾ ಔಷಧ ಮಳಿಗೆಯ ಮಾಲಕರಾಗಿದ್ದಾರೆ.
ರಿಷಿ ಸುನಕ್ ಅವರು ಆಕ್ಸ್ಫರ್ಡ್ನ ಲಿಂಕನ್ ಕಾಲೇಜಿನಲ್ಲಿ ರಾಜಕೀಯ, ಆರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ. ಇವರು ಸ್ಟಾನ್ಫೋರ್ಡ್ ವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ ನಾರಾಯಣ ಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರ ಪರಿಚಯವಾಗಿದ್ದು ಇದೇ ಸ್ಟಾನ್ಫೋರ್ಡ್ ವಿವಿಯಲ್ಲೇ. ಇವರ ಪರಿಚಯ ಪ್ರೇಮಕ್ಕೆ ತಿರುಗಿ 2009ರಲ್ಲಿ ವಿವಾಹವಾದರು. ಈ ಮೂಲಕ ಇನ್ಫೋಸಿಸ್ ನಾರಾಯಣ ಮೂರ್ತಿಯ ಅಳಿಯನಾದರು.
2019ರ ಸಾರ್ವತ್ರಿಕ ಚುನಾವಣೆಯ ವೇಳೆಗೆ ರಿಷಿ ಸುನಾಕ್ ಅವರು ಬೋರಿಸ್ ಜಾನ್ಸನ್ ಅವರ ಜತೆ ಇದ್ದರು. ಆ ಸಮಯದಲ್ಲಿ ರಿಷಿ ಸುನಾಕ್ ಅವರು ಬೋರಿಸ್ ಬಲಗೈ ಬಂಟನಂತೆ ಕಾರ್ಯನಿರ್ವಹಿಸಿದ್ದರು. ಬೋರಿಸ್ ಪರವಾಗಿ ಟಿವಿ ವಾಹಿನಿಗಳ ಚರ್ಚಾ ಕಾರ್ಯಕ್ರಮಗಳಲ್ಲಿ ಇವರೇ ಭಾಗವಹಿಸುತ್ತಿದ್ದರು. ಬೋರಿಸ್ ಅಭೂತಪೂರ್ವ ಗೆಲುವಿಗೆ ರಿಷಿ ಕಾರಣರಾಗಿದ್ದರು.
ಬ್ರಿಟನ್‌ನ ಪ್ರಧಾನಿಯಾಗುವ ಮೊದಲೇ ಹಲವು ವಿಷಯಗಳ ಕುರಿತು ಟೀಕೆಗಳೂ ಎದುರಾಗಿದ್ದವು. ಪತ್ನಿ ಅಕ್ಷತಾ ಮೂರ್ತಿ ಅವರು ವಿದೇಶಿ ವ್ಯವಹಾರದಲ್ಲಿ ಬ್ರಿಟನ್‌ಗೆ ತೆರಿಗೆ ಕಟ್ಟಿಲ್ಲವೆಂಬ ಆರೋಪವು ಇವರನ್ನು ಮುಜುಗರಕ್ಕೆ ದೂಡಿತ್ತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ನಿಯಮ ಮೀರಿ ಪಾರ್ಟಿ ಮಾಡಿದ್ದೂ ಟೀಕೆಗೆ ಗುರಿಯಾಗಿತ್ತು.
ಸುನಕ್ ಅವರು 42 ವರ್ಷದವರಾಗಿದ್ದು, ಸಣ್ಣ ವಯಸ್ಸಿಗೆ ಪ್ರಧಾನಿ ಪಟ್ಟಕ್ಕೇರಿದ್ದಾರೆ. ಬ್ರಿಟನ್‌ನ ಯುವ ಪ್ರಧಾನಿ ಎಂಬ ಕೀರ್ತಿಗೂ ಅವರು ಭಾಜನರಾಗಿದ್ದಾರೆ. ಬ್ರಿಟನ್‌ನ ಕಳೆದ 200 ವರ್ಷಗಳ ಇತಿಹಾಸದಲ್ಲಿ, ರಿಷಿ ಸುನಕ್ 42ನೇ ವಯಸ್ಸಿಗೆ ಪ್ರಧಾನಿಯಾಗಿದ್ದಾರೆ.
ಭಾನುವಾರ ಸಂಜೆ ಬೋರಿಸ್ ಜಾನ್ಸನ್ ರೇಸ್‌ನಿಂದ ಹೊರಗುಳಿದ ನಂತರ ಲಿಜ್ ಟ್ರಸ್‌ಗೆ ಪ್ರತಿಸ್ಪರ್ಧಿಯಾಗಿ ಕೇವಲ ಆರು ವಾರಗಳ ಹಿಂದೆ ಪ್ರಧಾನಿ ಹುದ್ದೆಯ ರೇಸ್‌ನಲ್ಲಿ ಸೋತ ಸುನಕ್ ಅವರ ಪರವಾಗಿ ಈ ಸಲ ಪಕ್ಷದ ಸದಸ್ಯರಿಂದ ಹೆಚ್ಚಿನ ಒಲವು ವ್ಯಕ್ತವಾಗಿದೆ.
ರಿಷಿ ಸುನಕ್ ಅವರು ಭಾರತೀಯ ಮೂಲದ ಮೊದಲ ಬ್ರಿಟಿಷ್ ಪ್ರಧಾನ ಮಂತ್ರಿ, ಬ್ರಿಟನ್‌ನ ಮೊದಲ ಬಿಳಿಯರಲ್ಲದ ನಾಯಕ ಮತ್ತು ಉನ್ನತ ಹುದ್ದೆಗೆ ಏರಿದ ಮೊದಲ ಹಿಂದೂ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. ಬೋರಿಸ್ ಜಾನ್ಸನ್ ಸರ್ಕಾರದ ಪತನಕ್ಕೆ ಕಾರಣವಾದ ಜುಲೈ 2022 ರಲ್ಲಿ ಮಾಜಿ ಚಾನ್ಸಲರ್ ರಾಜೀನಾಮೆ ನೀಡಿದ್ದರು.