Tomato Price Hike: ಕೆಜಿ ಟೊಮೆಟೊ ಬೆಲೆ 300 ರೂಪಾಯಿಗೆ ಏರಿಕೆ ಸಾಧ್ಯತೆ; ರಾಜಭವನದಲ್ಲಿ ಟೊಮೆಟೊ ಸೇವನೆ ನಿಲ್ಲಿಸಲು ಪಂಜಾಬ್ ಗವರ್ನರ್ ಆದೇಶ
Punjab governor Banwarilal Purohit: ಆಹಾರ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ನಾಗರಿಕರಿಗೆ ಒಗ್ಗಟ್ಟು ಸೂಚಿಸುವ ನಿಟ್ಟಿನಲ್ಲಿ ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರು ತಮ್ಮ ಅಧಿಕೃತ ನಿವಾಸವಾಗಿರುವ ರಾಜಭವನದಲ್ಲಿ ಟೊಮೆಟೊ ಸೇವನೆ ನಿಲ್ಲಿಸಲು ಆದೇಶ ಹೊರಡಿಸಿದ್ದಾರೆ.

ಚಂಡೀಗಢ (ಪಂಜಾಬ್): ಟೊಮೆಟೊ ಬೆಲೆಯಲ್ಲಿ ಆತಂಕಕಾರಿ ಏರಿಕೆಯ ಮಧ್ಯೆ, ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಅವರು ತಮ್ಮ ಅಧಿಕೃತ ನಿವಾಸವಾಗಿರುವ ರಾಜಭವನದಲ್ಲಿ ಟೊಮೆಟೊ ಸೇವನೆ ನಿಲ್ಲಿಸಲು ಗುರುವಾರ (ಆಗಸ್ಟ್ 3) ಆದೇಶ ಹೊರಡಿಸಿದ್ದಾರೆ.
ಪಂಜಾಬ್ನಲ್ಲಿ ಸದ್ಯ ಒಂದು ಕೆಜಿ ಟೊಮೆಟೊ 200 ರೂ.ಗೂ ಹೆಚ್ಚು ದರದಲ್ಲಿ ಮಾರಾಟವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇದರ ಬೆಲೆ 300 ರೂ.ಗೆ ತಲುಪುವ ಸಾಧ್ಯತೆ ಇದೆ ಎಂದು ಸಗಟು ವ್ಯಾಪಾರಿಗಳು ತಿಳಿಸಿದ್ದಾರೆ. ಆಹಾರ ಬೆಲೆ ಏರಿಕೆಯ ಪರಿಣಾಮವನ್ನು ಎದುರಿಸುತ್ತಿರುವ ನಾಗರಿಕರಿಗೆ ಒಗ್ಗಟ್ಟು ಸೂಚಿಸುವ ನಿಟ್ಟಿನಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯಪಾಲರ ನಿವಾಸದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
"ಒಂದು ವಸ್ತುವಿನ ಬಳಕೆಯನ್ನು ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಅದರ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ. ಬೇಡಿಕೆಯನ್ನು ಕಡಿಮೆ ಮಾಡುವುದರಿಂದ ಸ್ವಯಂಚಾಲಿತವಾಗಿ ಬೆಲೆ ಕಡಿಮೆಯಾಗುತ್ತದೆ. ಜನರು ಸದ್ಯಕ್ಕೆ ತಮ್ಮ ಮನೆಯಲ್ಲಿ ಟೊಮೆಟೊ ಬದಲು ಪರ್ಯಾಯ ಪದಾರ್ಥಗಳನ್ನು ಬಳಸುತ್ತಾರೆ ಮತ್ತು ಬೆಲೆ ಏರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತಾರೆ ಎಂದು ನಾನು ಭಾವಿಸುತ್ತೇನೆ" ಎಂದು ರಾಜ್ಯಪಾಲರು ಹೇಳಿದ್ದಾರೆ.
"ಟೊಮೆಟೊಗಳ ಬೆಲೆಯಲ್ಲಿ ಅಭೂತಪೂರ್ವ ಏರಿಕೆಯೊಂದಿಗೆ ಜನರು ಹೋರಾಡುತ್ತಿದ್ದಾರೆ. ಪೂರೈಕೆ ಅಡೆತಡೆಗಳು, ಹವಾಮಾನ ಪರಿಸ್ಥಿತಿಗಳು ಮತ್ತು ಮಾರುಕಟ್ಟೆಯ ಇತರ ಸಮಸ್ಯೆಗಳು ಬೆಲೆ ಏರಿಕೆಗೆ ಕಾರಣವಾಗಿದೆ. ತಮ್ಮ ಸ್ವಂತ ನಿವಾಸದಲ್ಲಿ ಟೊಮೆಟೊ ಸೇವನೆಯನ್ನು ತ್ಯಜಿಸುವ ಮೂಲಕ, ರಾಜ್ಯಪಾಲರು ಈ ಸವಾಲಿನ ಸಮಯದಲ್ಲಿ ಸಹಾನುಭೂತಿ, ಮಿತವ್ಯಯ ಮತ್ತು ಸಂಪನ್ಮೂಲಗಳ ಜವಾಬ್ದಾರಿಯುತ ಬಳಕೆಯ ಮಹತ್ವವನ್ನು ಒತ್ತಿಹೇಳುವ ಗುರಿಯನ್ನು ಹೊಂದಿದ್ದಾರೆ" ಎಂದು ಪ್ರಕಟಣೆ ತಿಳಿಸಿದೆ.
ಈ ಪರಿಸ್ಥಿತಿಯು ಸಾಮಾನ್ಯ ನಾಗರಿಕರ ಮೇಲೆ ಹೊರೆಯನ್ನುಂಟುಮಾಡುತ್ತದೆ ಎಂದು ಹೇಳಿರುವ ಚಂಡೀಗಢದ ಕೇಂದ್ರಾಡಳಿತ ಪ್ರದೇಶದ (UT) ಆಡಳಿತಾಧಿಕಾರಿಯೂ ಆಗಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ , ಗಗನಕ್ಕೇರುತ್ತಿರುವ ಟೊಮೆಟೊ ಬೆಲೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ತಮ್ಮ ಕಳವಳ ಮತ್ತು ಸಹಾನುಭೂತಿಯನ್ನು ವ್ಯಕ್ತಪಡಿಸಿದ್ದಾರೆ.