Rahul Gandhi: ಸರ್ಕಾರಿ ಬಂಗಲೆ ಖಾಲಿ ಮಾಡಲು ರಾಹುಲ್ ಗಾಂಧಿಗೆ ನೋಟಿಸ್
ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಸರ್ಕಾರಿ ಬಂಗಲೆ ತೆರವು ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯ ಹೌಸಿಂಗ್ ಕಮಿಟಿ ನೋಟಿಸ್ ನೀಡಿದೆ.
ನವದೆಹಲಿ: ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಂಡ ಬೆನ್ನಲ್ಲೇ ಸರ್ಕಾರಿ ಬಂಗಲೆ ತೆರವು ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯ ಹೌಸಿಂಗ್ ಕಮಿಟಿ ನೋಟಿಸ್ ನೀಡಿದೆ.
ರಾಷ್ಟ್ರ ರಾಜಧಾನಿಯ 12, ತುಘಲಕ್ ಲೇನ್ನಲ್ಲಿರುವ ಬಂಗಲೆಯನ್ನು ಏಪ್ರಿಲ್ 23ರ ಒಳಗೆ ಖಾಲಿ ಮಾಡುವಂತೆ ನೋಟಿಸ್ ನೀಡಲಾಗಿದೆ. 2004ರಲ್ಲಿ ಮೊದಲ ಬಾರಿ ಲೋಕಸಭಾ ಸಂಸದರಾದಾಗ ರಾಹುಲ್ ಗಾಂಧಿಗೆ ಸರ್ಕಾರದಿಂದ ಈ ಬಂಗಲೆಯನ್ನು ಮಂಜೂರು ಮಾಡಲಾಗಿತ್ತು. ನಿಯಮದ ಪ್ರಕಾರ, ಅನರ್ಹಗೊಂಡ ಸಂಸದರು ಸರ್ಕಾರಿ ವಸತಿಗೆ ಅರ್ಹರಲ್ಲ ಮತ್ತು ಅಧಿಕೃತ ಬಂಗಲೆಯನ್ನು ಖಾಲಿ ಮಾಡಲು 30 ದಿನಗಳ ಅವಧಿಯನ್ನು ನೀಡಲಾಗುತ್ತದೆ.
2004 ರಲ್ಲಿ ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಮೊದಲ ಬಾರಿಗೆ ಆಯ್ಕೆಯಾದ ರಾಹುಲ್ ಗಾಂಧಿ ಲೋಕಸಭೆಯ ಸಂಸದರಾಗಿರುವುದು ಇದು ನಾಲ್ಕನೇ ಅವಧಿಯಾಗಿದೆ. 2019 ರಲ್ಲಿ ಅವರು ಅಮೇಥಿಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ಸೋತರು, ಆದರೆ ಕೇರಳದ ವಯನಾಡ್ ಕ್ಷೇತ್ರದಿಂದ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.
ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್ ಮಾನಹಾನಿ ಮೊಕದ್ದಮೆಯಲ್ಲಿ ಎರಡು ವರ್ಷಗಳ ಅವಧಿಗೆ ಶಿಕ್ಷೆಗೊಳಗಾದ ನಂತರ ಕಾಂಗ್ರೆಸ್ ನಾಯಕನನ್ನು ಮಾರ್ಚ್ 24 ರಂದು ಲೋಕಸಭೆಯಿಂದ ಅನರ್ಹಗೊಳಿಸಲಾಯಿತು.
2019 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಕರ್ನಾಟಕದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್ ಗಾಂಧಿ, 'ಎಲ್ಲಾ ಕಳ್ಳರು ಹೇಗೆ ಮೋದಿ ಎಂಬ ಸರ್ನೇಮ್ಗಳನ್ನು ಹೊಂದಿದ್ದಾರೆ' ಎಂದು ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಕೇಸ್ ದಾಖಲಿಸಿದ್ದರು.
ಮಾರ್ಚ್ 23 ರಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೇ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ಇದೆ. ತೀರ್ಪು ಪ್ರಕಟವಾದ ಬೆನ್ನಲ್ಲೇ ಲೋಕಸಭೆಯಿಂದ ವಯನಾಡು ಸಂಸದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಲಾಗಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ತಮ್ಮ ಟ್ವಿಟರ್ ಬಯೋವನ್ನು ಬದಲಾಯಿಸಿಕೊಂಡಿದ್ದು, ಸಂಸದ ಎಂದು ಇದ್ದ ಜಾಗದಲ್ಲಿ ‘ಅನರ್ಹ ಸಂಸದ’ ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿದ್ದನ್ನು ಖಂಡಿಸಿ ದೇಶದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇಂದೂ ಕೂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಇಂದು ವಿರೋಧ ಪಕ್ಷದ ನಾಯಕರು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವಿಷಯದಲ್ಲಿ ಕಾನೂನು ಮತ್ತು ರಾಜಕೀಯವಾಗಿ ಹೋರಾಡುವುದಾಗಿ ಕಾಂಗ್ರೆಸ್ ಹೇಳಿದೆ.
ಲೋಕಸಭೆಯ ಸಂಸದ ಸ್ಥಾನದಿಂದ ಅನರ್ಹಗೊಂಡ ಬಳಿಕವೂ, ಎರಡು ವರ್ಷಗಳ ಶಿಕ್ಷೆಯನ್ನು ಅನುಭವಿಸುವ ಸಾಧ್ಯತೆಯನ್ನೂ ಲೆಕ್ಕಿಸದೆ ರಾಹುಲ್ ಗಾಂಧಿ ಅವರು ಅದಾನಿ ಗ್ರೂಪ್‌ನ ಮುಖ್ಯಸ್ಥ ಗೌತಮ್ ಅದಾನಿ ಅವರೊಂದಿಗಿನ ಸಂಬಂಧದ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸುತ್ತಲೇ ಇದ್ದಾರೆ.
ವಿಭಾಗ