Sanjay Raut: ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆ ರಾಹುಲ್‌ ಗಾಂಧಿ ಅವರಿಗಿದೆ: ಸಂಜಯ್‌ ರಾವತ್‌ ಅಭಿಮತ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sanjay Raut: ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆ ರಾಹುಲ್‌ ಗಾಂಧಿ ಅವರಿಗಿದೆ: ಸಂಜಯ್‌ ರಾವತ್‌ ಅಭಿಮತ

Sanjay Raut: ದೇಶದ ಪ್ರಧಾನಿಯಾಗುವ ಎಲ್ಲಾ ಅರ್ಹತೆ ರಾಹುಲ್‌ ಗಾಂಧಿ ಅವರಿಗಿದೆ: ಸಂಜಯ್‌ ರಾವತ್‌ ಅಭಿಮತ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ದೇಶದ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಯೂ ಇದೆ ಎಂದು ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವತ್‌ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ(ಜ.21-ಶನಿವಾರ) ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಸೇರಿಕೊಂಡಿದ್ದ ಸಂಜಯ್‌ ರಾವತ್‌, ರಾಹುಲ್‌ ಗಾಂಧಿ ಅವರ ನಾಯಕತ್ವವನ್ನು ಹೊಗಳಿದ್ದಾರೆ.

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (ANI)

ಶ್ರೀನಗರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ದೇಶದ ಪ್ರಧಾನಮಂತ್ರಿಯಾಗುವ ಎಲ್ಲಾ ಅರ್ಹತೆಯೂ ಇದೆ ಎಂದು ಶಿವಸೇನೆ(ಉದ್ಧವ್‌ ಠಾಕ್ರೆ ಬಣ) ನಾಯಕ ಸಂಜಯ್‌ ರಾವತ್‌ ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ(ಜ.21-ಶನಿವಾರ) ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್‌ ಜೋಡೋ ಯಾತ್ರೆಯನ್ನು ಸೇರಿಕೊಂಡಿದ್ದ ಸಂಜಯ್‌ ರಾವತ್‌, ರಾಹುಲ್‌ ಗಾಂಧಿ ಅವರ ನಾಯಕತ್ವವನ್ನು ಹೊಗಳಿದ್ದಾರೆ.

ರಾಹುಲ್‌ ಗಾಂಧಿ ಅವರಲ್ಲಿ ಖಂಡಿತವಾಗಿಯೂ ನಾಯಕತ್ವ ಗುಣಗಳಿವೆ. ಆಡಳಿತ ಪಕ್ಷ ಅವರ ವ್ಯಕ್ತಿತ್ವದ ಬಗ್ಗೆ ಸುಳ್ಳು ಪ್ರಚಾರ ನಡೆಸುತ್ತಿದೆ. ಅವರು ಈ ದೇಶದ ಪ್ರಧಾನಿಯಾಗಲು ಯೋಗ್ಯರು ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆ ತಿಳಿದಿದೆ ಎಂದು ಸಂಜಯ್‌ ರಾವತ್‌ ಹೇಳಿರುವುದು ಗಮನ ಸೆಳೆದಿದೆ.

"ಸೈದ್ಧಾಂತಿಕ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳು ಏನೇ ಇರಲಿ, ರಾಹುಲ್ ಗಾಂಧಿ ಮಾತ್ರ 2024ರ ಲೋಕಸಭೆ ಚುನಾವಣೆಯಲ್ಲಿ ತಮ್ಮ ನಾಯಕತ್ವ ಗುಣವನ್ನು ಪ್ರದರ್ಶಿಸಲಿದ್ದಾರೆ ಎಂಬುದರಲ್ಲಿ ನಮಗೆ ಯಾವುದೇ ಅನುಮಾನವಿಲ್ಲ. ರಾಹುಲ್‌ ಗಾಂಧಿ ಖಂಡಿತವಾಗಿಯೂ ಬಿಜೆಪಿಗೆ ಪ್ರಬಲ ಪ್ರತಿರೋಧ ಒಡ್ಡುವುದು ಖಚಿತ ಎಂಬುದು ನಮ್ಮ ನಂಬಿಕೆ ಎಂದು ಸಂಜಯ್‌ ರಾವತ್‌ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ್‌ ಜೋಡೋ ಯಾತ್ರೆಯು, ದೇಶದಲ್ಲಿ ಮನೆ ಮಾಡಿರುವ ದ್ವೇಷ ಮತ್ತು ಭಯದ ವಾತಾವರಣವನ್ನು ದೂರ ಮಾಡುವ ಉದ್ದೇಶ ಹೊಂದಿದೆ. ಕಾಂಗ್ರೆಸ್‌ ತನ್ನ ಪಕ್ಷದ ಬ್ಯಾನರ್‌ ಅಡಿ ವಿರೋಧ ಪಕ್ಷಗಳನ್ನು ಒಂದುಗೂಡಿಸುವ ಉದ್ದೇಶ ಈ ಯಾತ್ರೆಗಿಲ್ಲ. ಇದೇ ಕಾರಣಕ್ಕೆ ನಾನು ಈ ಯಾತ್ರೆಯನ್ನು ಸೇರಿಕೊಂಡಿದ್ದೇನೆ. ರಾಹುಲ್‌ ಗಾಂಧಿ ಅವರ ಒಳ್ಳೆಯ ಉದ್ದೇಶಗಳಿಗೆ ನನ್ನ ಬೆಂಬಲವಿದೆ ಎಂದು ಸಂಜಯ್‌ ರಾವತ್‌ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ನಾಯಕನ ಕುರಿತು ಬಿಜೆಪಿ ತಪ್ಪು ಗ್ರಹಿಕೆಗಳನ್ನು ಬಿತ್ತಿದೆ. ಆದರೆ ಅವರ ಕುರಿತಾದ ಎಲ್ಲಾ ಊಹಾಪೋಹಗಳನ್ನು ಈ ಯಾತ್ರೆಯು ದೂರ ಮಾಡಿದೆ. ಅವರಲ್ಲಿ ಈ ದೇಶದ ಪ್ರಧಾನಿಯಾಗುವ ಸಾಮರ್ಥ್ಯ ಇದೆ ಎಂಬ ಸತ್ಯವನ್ನು ಜನ ಮನಗಂಡಿದ್ದಾರೆ ಎಂದು ಸಂಜಯ್‌ ರಾವತ್‌ ನುಡಿದರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬರೋಬ್ಬರಿ 3,500 ಕಿ.ಮೀ. ಪಾದಯಾತ್ರೆ ಮಾಡುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಇದಕ್ಕೆ ಸಾಕಷ್ಟು ದೃಢತೆ ಹಾಗೂ ದೇಶದ ಬಗ್ಗೆ ಪ್ರೀತಿ ಇರಬೇಕಾಗುತ್ತದೆ. ರಾಹುಲ್‌ ಇಷ್ಟು ಸುದೀರ್ಘ ಯಾತ್ರೆ ಮಾಡುವ ಮೂಲಕ, ದೇಶದ ಬಗ್ಗೆ ತಮಗಿರುವ ಕಾಳಜಿಯನ್ನು ಪ್ರದರ್ಶಿಸಿದ್ದಾರೆ. ಈ ಯಾತ್ರೆಯಲ್ಲಿ ನನಗೆ ಯಾವ ರಾಜಕೀಯವೂ ಕಾಣಿಸುತ್ತಿಲ್ಲ ಎಂದು ಸಂಜಯ್‌ ರಾವತ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಪ್ರಧಾನಿಯಾಗಲು ತಮಗೆ ಬಯಕೆ ಇಲ್ಲ ಎಂದು ರಾಹುಲ್ ಗಾಂಧಿ ಸ್ವತಃ ಹೇಳುತ್ತಿದ್ದಾರೆ. ಆದರೆ ಜನರು ಅವರನ್ನು ಉನ್ನತ ಹುದ್ದೆಯಲ್ಲಿ ನೋಡಲು ಬಯಸಿದಾಗ, ಅವರಿಗೆ ಬೇರೆ ಯಾವುದೇ ಆಯ್ಕೆ ಉಳಿದಿರುವುದಿಲ್ಲ. ಒಂದಲ್ಲ ಒಂದು ದಿನ ಅವರು ಈ ದೇಶದ ಪ್ರಧಾನಿಯಾಗುವುದು ಖಚಿತ ಎಂಬುದು ನನ್ನ ದೃಢವಾದ ನಂಬಿಕೆ ಎಂದು ಸಂಜಯ್‌ ರಾವತ್‌ ಹೇಳಿದರು.

ಇನ್ನು ತೃತೀಯ ರಂಗ ರಚನೆಯ ಸಾಧ್ಯತೆಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಂಜಯ್‌ ರಾವತ್‌, ಕಾಂಗ್ರೆಸ್ ಹೊರತುಪಡಿಸಿದ ತೃತೀಯ ರಂಗ ಸ್ಥಾಪನೆಯ ಪರಿಕಲ್ಪನೆ ವಾಸ್ತವಿಕತೆಗೆ ದೂರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶಾದ್ಯಂತ ಕಾಂಗ್ರೆಸ್‌ ತನ್ನ ಅಸ್ತಿತ್ವವನ್ನು ಹೊಂದಿದೆ. ಹೀಗಾಗಿ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್‌ನ್ನು ಹೊರಗಿಟ್ಟು ಮೈತ್ರಿಕೂಟ ರಚಿಸುವುದು ಅಸಾಧ್ಯದ ಮಾತು. 2024ರಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿ ಹೊರಹೊಮ್ಮಲಿದೆ. ಇದನ್ನು ಬಿಜೆಪಿ ವಿರೋಧಿ ಪಕ್ಷಗಳು ಅರಿತುಕೊಳ್ಳಬೇಕು ಎಂದು ಸಂಜಯ್‌ ರಾವತ್‌ ಇದೇ ವೇಳೆ ಮನವಿ ಮಾಡಿದರು.

ನನ್ನ ನಾಯಕರ ಆದೇಶದಂತೆ ನಾನು ಭಾರತ್‌ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದ್ದೇನೆ. ಇದು ನನಗೆ ಒಳ್ಳೆಯ ಅನುಭವವನ್ನು ನೀಡಿದೆ. ರಾಹುಲ್‌ ಗಾಂಧಿ ಅವರೊಂದಿಗೆ ಸೇರಿ ಸತ್ಯದ ಪರವಾಗಿ ಧ್ವನಿ ಎತ್ತಿರುವುದು ನನಗೆ ಸಂತಸ ತಂದಿದೆ ಎಂದು ಸಂಜಯ್‌ ರಾವತ್‌ ಹೇಳಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.