ಕನ್ನಡ ಸುದ್ದಿ  /  Nation And-world  /  Rahul Gandhi Convicted Surat District Court Holds Rahul Gandhi Guilty In Criminal Defamation Case Over Modi Surname Remark

Rahul Gandhi Convicted: ಮೋದಿ ಸರ್‌ನೇಮ್‌ ಅವಹೇಳನ; ರಾಹುಲ್‌ ಗಾಂಧಿಗೆ 2 ವರ್ಷ ಜೈಲು ಶಿಕ್ಷೆ- ಸೂರತ್‌ ಕೋರ್ಟ್‌ ತೀರ್ಪು

Rahul Gandhi Convicted: 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.

ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ (PTI)

ಸೂರತ್‌: 'ಮೋದಿ ಉಪನಾಮ' ಹೇಳಿಕೆಗೆ ಸಂಬಂಧಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ಜಿಲ್ಲಾ ನ್ಯಾಯಾಲಯ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.

ಇದಾಗಿ ಸ್ವಲ್ಪ ಹೊತ್ತಿನಲ್ಲೇ ಅವರಿಗೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಕ್ಕೆ ಅವಕಾಶ ಮಾಡಿದ ಕೋರ್ಟ್‌, ಜಾಮೀನು ಕೂಡ ಮಂಜೂರು ಮಾಡಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 ರ ಪ್ರಕಾರ ಅವರು ತಪ್ಪಿತಸ್ಥರೆಂದು ಸಾಬೀತಾಯಿತು. ಇದು ಎರಡು ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಒದಗಿಸುತ್ತದೆ. ಬಳಿಕ 10,000 ರೂಪಾಯಿ ಬಾಂಡ್ ಬದಲಿಗೆ ಜಾಮೀನಿನ ಮೇಲೆ ರಾಹುಲ್‌ ಗಾಂಧಿ ಅವರನ್ನು ಬಿಡುಗಡೆ ಮಾಡಲಾಗಿದೆ. ತನ್ನ ಅಪರಾಧದ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಬೇಕು ಎಂದು ರಾಹುಲ್ ಗಾಂಧಿಯವರು ಕೇಳಿಕೊಂಡ ಕಾರಣ, ನ್ಯಾಯಾಲಯವು ಶಿಕ್ಷೆಯನ್ನು ಅಮಾನತುಗೊಳಿಸಿ, ಜಾಮೀನು ನೀಡಿದೆ.

ಈ ಆದೇಶವನ್ನು ಗುಜರಾತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಮೂರು ತಿಂಗಳ ಕಾಲಾವಕಾಶವಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದುಷಿ ಹೇಳಿದ್ದಾರೆ.

ಮಾರ್ಚ್ 17 ರಂದು ನ್ಯಾಯಾಲಯವು ಈ ವಿಷಯದ ಅಂತಿಮ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಮಾರ್ಚ್ 23 ರಂದು ತೀರ್ಪನ್ನು ಪ್ರಕಟಿಸುವುದಾಗಿ ಹೇಳಿತ್ತು. ರಾಹುಲ್‌ ಗಾಂಧಿ ತಮ್ಮ ಹೇಳಿಕೆಯನ್ನು ದಾಖಲಿಸಲು 2021ರ ಅಕ್ಟೋಬರ್‌ನಲ್ಲಿ ನ್ಯಾಯಾಲಯಕ್ಕೆ ಮೂರನೇ ಮತ್ತು ಕೊನೆಯ ಬಾರಿಗೆ ಹಾಜರಾಗಿದ್ದರು. ಅಲ್ಲದೇ ನಿರ್ದೋಷಿ ಎಂದು ಹೇಳಿಕೊಂಡಿದ್ದರು.

ರಾಹುಲ್‌ ಗಾಂಧಿಯ ವೈಯಕ್ತಿಕ ಹಾಜರಾತಿಗೆ ಒತ್ತಾಯಿಸಿ ದೂರುದಾರರ ಮನವಿಯ ಮೇಲೆ ನಡೆಸಲಾದ ವಿಚಾರಣೆಗೆ ಗುಜರಾತ್ ಹೈಕೋರ್ಟ್ ಈ ವರ್ಷ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಕಳೆದ ತಿಂಗಳು ಸೂರತ್ ನ್ಯಾಯಾಲಯದಲ್ಲಿ ಅಂತಿಮ ವಾದಗಳು ಪುನರಾರಂಭಗೊಂಡವು. ರಾಹುಲ್‌ ಪರ ವಕೀಲರು ನ್ಯಾಯಾಲಯದ ಪ್ರಕ್ರಿಯೆಗಳು "ದೋಷಪೂರಿತ" ಎಂದು ವಾದಿಸಿದ್ದರು.

ಈ ಕೇಸ್‌ ಸಂಬಂಧ ಕೋರ್ಟ್‌ನಲ್ಲಿ ಹಾಜರಾಗುವ ಸಲುವಾಗಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಗುಜರಾತ್‌ನ ಸೂರತ್‌ಗೆ ತಲುಪಿದರು. "ಮೋದಿ ಉಪನಾಮ"ದ ಬಗ್ಗೆ 2019ರಲ್ಲಿ ಮಾಡಿದ ಟೀಕೆಗಳ ವಿರುದ್ಧದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ತೀರ್ಪಿನ ನಿರೀಕ್ಷೆಯೊಂದಿಗೆ ತಲುಪಿದ ಅವರಿಗೆ ಈಗ ಹಿನ್ನಡೆಯಾಗಿದೆ.

ಜಿಪಿಸಿಸಿ ಅಧ್ಯಕ್ಷ ಜಗದೀಶ್ ಠಾಕೂರ್, ಶಾಸಕಾಂಗ ಪಕ್ಷದ ನಾಯಕ ಅಮಿತ್ ಚಾವ್ಡಾ, ಹಿರಿಯ ನಾಯಕ ಅರ್ಜುನ್ ಮೊದ್ವಾಡಿಯಾ, ಗುಜರಾತ್‌ನ ಎಐಸಿಸಿ ಉಸ್ತುವಾರಿ ರಘು ಶರ್ಮಾ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರು ಗಾಂಧಿ ಅವರನ್ನು ಬರಮಾಡಿಕೊಳ್ಳಲು ಸೂರತ್ ವಿಮಾನ ನಿಲ್ದಾಣಕ್ಕೆ ಬಂದಿದ್ದರು.

ರಾಹುಲ್‌ ಗಾಂಧಿ ಪರ ಶಕ್ತಿ ಮತ್ತು ಬೆಂಬಲದ ಪ್ರದರ್ಶನವಾಗಿ ನಗರದ ವಿವಿಧ ಸ್ಥಳಗಳಲ್ಲಿ ಬೃಹತ್ ಸಂಖ್ಯೆಯ ಪಕ್ಷದ ಕಾರ್ಯಕರ್ತರು ಜಮಾಯಿಸಿದರು, ಅವರನ್ನು 'ಶೇರ್-ಎ-ಹಿಂದುಸ್ತಾನ್' (ಹಿಂದೂಸ್ತಾನದ ಸಿಂಹ) ಎಂದು ಹೊಗಳಿದ ಪೋಸ್ಟರ್‌ಗಳು ಮತ್ತು "ಬಿಜೆಪಿಯ ಸರ್ವಾಧಿಕಾರದ ಎದುರು ಕಾಂಗ್ರೆಸ್ ತಲೆಬಾಗುವುದಿಲ್ಲ" ಎಂಬ ಫಲಕಗಳನ್ನು ಪ್ರದರ್ಶಿಸಿದರು.

"ಎಲ್ಲ ಕಳ್ಳರಿಗೂ ಸಾಮಾನ್ಯ ಎಂಬಂತೆ ʻಮೋದಿʼ ಎಂಬ ಉಪನಾಮ ಹೇಗೆ ಬಂತು?" ಎಂದು ರಾಹುಲ್‌ ಗಾಂಧಿ ಲೇವಡಿ ಮಾಡಿದ್ದರು. ಇದರ ವಿರುದ್ಧ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್‌ ಗಾಂಧಿ ವಿರುದ್ಧ ಕ್ರಿಮಿನಲ್‌ ಡಿಫಾಮೇಶನ್‌ ಕೇಸ್‌ ದಾಖಲಿಸಿದ್ದರು.