Rahul Gandhi: ಮೋದಿ ಉಪನಾಮ ಕೇಸ್; ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ವಿರುದ್ಧ ಸುಪ್ರೀಂ ಮೆಟ್ಟಿಲೇರಿದ ರಾಹುಲ್ ಗಾಂಧಿ
Modi surname case: ಮೋದಿ ಸರ್ನೇಮ್ ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.
ನವದೆಹಲಿ: 'ಮೋದಿ ಉಪನಾಮ' ಹೇಳಿಕೆ ಸಂಬಂಧದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ ಗುಜರಾತ್ ಹೈಕೋರ್ಟ್ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಪ್ರಕರಣದಲ್ಲಿ ರಾಹುಲ್ ಗಾಂಧಿ ದೋಷಿ ಎಂದು ತೀರ್ಪು ನೀಡಿದ್ದ ಸೂರತ್ ಜಿಲ್ಲಾ (ಮ್ಯಾಜಿಸ್ಟ್ರೇಟ್) ನ್ಯಾಯಾಲಯ ಎರಡು ವರ್ಷಗಳ ಕಾಲ ಶಿಕ್ಷೆ ವಿಧಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು. ಇದರ ವಿರುದ್ಧ ಕಾಂಗ್ರೆಸ್ ಹಲವು ಬಾರಿ ಪ್ರತಿಭಟನೆಗಳನ್ನು ನಡೆಸಿದೆ.
ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ತೀರ್ಪು ಪ್ರಶ್ನಿಸಿ ಹಾಗೂ ಶಿಕ್ಷೆಗೆ ತಡೆ ಕೋರಿ ಸೂರತ್ನ ಸೆಷನ್ಸ್ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಏಪ್ರಿಲ್ 20 ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಸೆಷನ್ಸ್ ಕೋರ್ಟ್ ಅರ್ಜಿಯನ್ನು ತಿರಸ್ಕರಿಸಿತ್ತು.
ಆನಂತರ ಗುಜರಾತ್ ಹೈಕೋರ್ಟ್ಗೆ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಅಲ್ಲಿಯೂ ಅವರ ಅರ್ಜಿ ವಜಾಗೊಂಡಿತು. ಈ ಹಿನ್ನೆಲೆ ಇದೀಗ ಶಿಕ್ಷೆಗೆ ತಡೆ ನೀಡಲು ಕೋರಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದಾರೆ.
ಏನಿದು ಪ್ರಕರಣ?
2019ರಲ್ಲಿ ಕೋಲಾರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ, "ಚೌಕೀದಾರ್ ಶೇಕಡ 100ರಷ್ಟು ಕಳ್ಳ ಇದ್ದಾನೆ. ಒಂದು ಸಣ್ಣ ಪ್ರಶ್ನೆ ಕೇಳ್ತೇನೆ. ಎಲ್ಲಾ ಕಳ್ಳರು ಹೇಗೆ ಮೋದಿ ಎಂಬ ಸರ್ನೇಮ್ಗಳನ್ನು ಹೊಂದಿದ್ದಾರೆ? ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಇನ್ನೂ ಹುಡುಕಾಡಿದ್ರೆ ಇನ್ನಷ್ಟು ಮೋದಿಗಳು ಬಯಲಾಗಬಹುದು" ಎಂದು ಹೇಳಿಕೆ ನೀಡಿದ್ದರು.
ಇದರ ವಿರುದ್ಧ ಇದನ್ನು ಖಂಡಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಕೇಸ್ ದಾಖಲಿಸಿದ್ದರು. ಮಾರ್ಚ್ 23 ರಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿತ್ತು. ಅಲ್ಲದೇ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು.