Attack on Rahul Gandhi office: ಕೇರಳದಲ್ಲಿ ರಾಹುಲ್ ಗಾಂಧಿಯ ಕಚೇರಿ ಧ್ವಂಸ - ವಿಡಿಯೋ ನೋಡಿ
ಕೇರಳದ ವಯನಾಡುವಿನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ನಡೆಸಿ, ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ.
ವಯನಾಡು (ಕೇರಳ): ಕೇರಳದ ವಯನಾಡುವಿನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಕಚೇರಿ ಮೇಲೆ ಎಸ್‌ಎಫ್‌ಐ ಕಾರ್ಯಕರ್ತರು ದಾಳಿ ನಡೆಸಿ, ಕಚೇರಿಯನ್ನು ಧ್ವಂಸಗೊಳಿಸಿದ್ದಾರೆ. ಇದೊಂದು ಘೋರ ಹಾಗೂ ಪೂರ್ವ ನಿಯೋಜಿತ ಕೃತ್ಯ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಗುಡ್ಡಗಾಡು ಪ್ರದೇಶಗಳಲ್ಲಿನ ಅರಣ್ಯಗಳ ಸುತ್ತ ಬಫರ್ ವಲಯಗಳನ್ನು ರಚಿಸುವ ವಿಷಯದಲ್ಲಿ ರಾಹುಲ್ ಗಾಂಧಿ ಮಧ್ಯಪ್ರವೇಶಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಪ್ರತಿಭಟನೆ ನಡೆಸಿದೆ.
ಎಸ್‌ಎಫ್‌ಐ ಧ್ವಜ ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸುತ್ತಾ ಬಂದು ಕಚೇರಿಗೆ ನುಗ್ಗಿದ್ದಾರೆ. ಕಚೇರಿಯ ಕಿಟಕಿಯ ಗಾಜುಗಳನ್ನು ಒಡೆದಿದ್ದಾರೆ, ಕಚೇರಿಯೊಳಗಿದ್ದ ವಸ್ತುಗಳನ್ನು ನಾಶ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಈ ದೃಶ್ಯಗಳು ಕಂಡು ಬಂದಿವೆ. ವಯನಾಡುವಿನಲ್ಲಿರುವ ರಾಹುಲ್ ಗಾಂಧಿಯವರ ಸಂಸದ ಕಚೇರಿ ಮೇಲೆ ಎಸ್‌ಎಫ್‌ಐ ಗೂಂಡಾಗಳಿಂದ ಭೀಕರ ದಾಳಿ. ಇದು ಗೂಂಡಾಗಿರಿ. ಸಿಪಿಎಂ ಒಂದು ಸಂಘಟಿತ ಮಾಫಿಯಾವಾಗಿ ಬದಲಾಗಿದೆ. ಈ ದಾಳಿಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ವಿ.ಡಿ.ಸತೀಸನ್ ಟ್ವೀಟ್ ಮಾಡಿದ್ದಾರೆ.
ಎಸ್‌ಎಫ್‌ಐ, ಇದು ಕೇರಳದ ಆಡಳಿತಾ ರೂಢ ಸಿಪಿಐ(ಎಂ)ನ ವಿದ್ಯಾರ್ಥಿ ಘಟಕವಾಗಿದ್ದರಿಂದ ಕಾಂಗ್ರೆಸ್ ಪಕ್ಷವು ಕೇರಳ ಸರ್ಕಾರದ ವಿರುದ್ಧ ಕಿಡಿಕಾರಿದೆ. ಅಲ್ಲದೇ ಕೆಲ ದಿನಗಳ ಹಿಂದೆ ಕೇರಳ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರ ಹೆಸರು ಕೇಳಿ ಬಂದ ಹಿನ್ನೆಲೆ ಅವರ ವಿರುದ್ಧ ಕೇರಳ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ನಡೆಸಿತ್ತು. ವಿಮಾನದೊಳಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಕಪ್ಪು ಬಣ್ಣದ ಅಂಗಿ ಸಿಎಂ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಹೀಗಾಗಿ ಇದಕ್ಕೆ ಪ್ರತಿಕಾರವಾಗಿ ಕೇರಳ ಸರ್ಕಾರ ಈ ಕೃತ್ಯ ಎಸಗಲು ಸಂಚು ರೂಪಿಸಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಇನ್ನು ಘಟನೆಯನ್ನು ಖಂಡಿಸಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು, ಶ್ರೀ ರಾಹುಲ್ ಗಾಂಧಿಯವರ ಕಚೇರಿಯ ಮೇಲೆ ಎಸ್‌ಎಫ್‌ಐ ಗೂಂಡಾಗಳು ನಡೆಸಿದ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇವೆ. ಅತ್ತ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಇಡಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ಇತ್ತ ಕೇರಳ ಸಿಪಿಐ (ಎಂ) ದುಷ್ಟ ಬಿಜೆಪಿಯನ್ನು ಸಂತೋಷಪಡಿಸುವಲ್ಲಿ ನೀಚವಾಗಿದೆ. ಅವರ ಅಸಹ್ಯ ಒಪ್ಪಂದ ಬಹಿರಂಗವಾಗಿದೆ ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಘಟನೆ ಬಗ್ಗೆ ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಹುಲ್ ಗಾಂಧಿಯವರ ವಯನಾಡು ಕಚೇರಿ ಮೇಲೆ ನಡೆದ ದಾಳಿಯನ್ನು ಬಲವಾಗಿ ಖಂಡಿಸುತ್ತೇನೆ. ನಮ್ಮ ದೇಶದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಮತ್ತು ಪ್ರಜಾಸತ್ತಾತ್ಮಕವಾಗಿ ಪ್ರತಿಭಟಿಸುವ ಹಕ್ಕಿದೆ. ಆದರೆ ಅದು ಮಿತಿಮೀರಬಾರದು. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.