ಕನ್ನಡ ಸುದ್ದಿ  /  Nation And-world  /  Rahul Gandhi S Savarkar Statment: Savarkarji Helped British Says Rahul Gandhi Shows Letter As Proof Video Police Complaint Registered

Rahul Gandhiʼs Savarkar Statment: ಸಾವರ್ಕರ್‌ ಬಗ್ಗೆ ರಾಹುಲ್‌ ಗಾಂಧಿ ಹೇಳಿಕೆ; ದೂರ ನಿಂತ ಉದ್ಧವ್‌; ದೂರು ದಾಖಲಿಸಿದ ಸಾವರ್ಕರ್‌ ಮೊಮ್ಮಗ

Rahul Gandhiʼs Savarkar Statment: ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಮಹಾರಾಷ್ಟ್ರದಲ್ಲಿ ಮುನ್ನಡೆದಿದೆ. ಇದೇ ವೇಳೆ ಅವರು ಬುಲ್ಧಾನಾ ಜಿಲ್ಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ಸಾವರ್ಕರ್‌ ವಿಚಾರ ಪ್ರಸ್ತಾಪಿಸಿದ್ದರು. ಸಾರ್ವಕರ್‌ ಅವರು ಬ್ರಿಟಿಷರಿಗೆ ಸಹಾಯ ಮಾಡಿದರು ಎಂದು ಪತ್ರವನ್ನು ದಾಖಲೆಯಾಗಿ ಪ್ರದರ್ಶಿಸಿದ್ದರು.

ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ
ಭಾರತ್‌ ಜೋಡೋ ಯಾತ್ರೆ ಸಂದರ್ಭದಲ್ಲಿ ರಾಹುಲ್‌ ಗಾಂಧಿ (ANI)

ಮುಂಬೈ: 'ಅವರು ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಬರೆದಿದ್ದರು ಮತ್ತು ಪಿಂಚಣಿ ಸ್ವೀಕರಿಸಿದರು' ಮತ್ತು ಅವರು 'ಭಯದಿಂದ ಹಾಗೆ ಮಾಡಿದರು' - ಮತ್ತು 'ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ' ಎಂಬುದು ನನಗೆ ಸ್ಪಷ್ಟವಾಗಿದೆ ಎಂದು ವಿನಾಯಕ ದಾಮೋದರ್‌ ಸಾವರ್ಕರ್ ಕುರಿತಾದ ತಮ್ಮ ಹೇಳಿಕೆಯನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಗುರುವಾರ ಸಮರ್ಥಿಸಿಕೊಂಡರು

"ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಒಳಗೊಂಡಿರುವ ದಾಖಲೆ ನನ್ನ ಬಳಿ ಇದೆ. ಅದರಲ್ಲಿ 'ನಾನು ಬದುಕಬೇಕು ಎಂದು ಬೇಡಿಕೊಳ್ಳುತ್ತೇನೆ ಸರ್, ನಿಮ್ಮ ಅತ್ಯಂತ ಆಜ್ಞಾಧಾರಕ ಸೇವಕ' ಎಂದು ಬರೆದಿದ್ದಾರೆ. ಇದು ನಾನು ಬರೆದದ್ದಲ್ಲ ... ಆದರೆ, ಸಾವರ್ಕರ್‌ಜೀ ಬರೆದದ್ದು. ಪ್ರತಿಯೊಬ್ಬರೂ ಈ ದಾಖಲೆಯನ್ನು ಓದಲಿ" ಎಂದು ರಾಹುಲ್‌ ಗಾಂಧಿ ಹೇಳಿದರು.

“ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದಾರೆ ಎಂಬುದು ನನಗೆ ತುಂಬಾ ಸ್ಪಷ್ಟವಾಗಿದೆ” ಎನ್ನುತ್ತ ಪತ್ರದಲ್ಲಿರುವ ಉಲ್ಲೇಖವನ್ನು ನೀಲಿ ಬಣ್ಣದಿಂದ ಹೈಲೈಟ್‌ ಮಾಡಿರುವುದನ್ನು ರಾಹುಲ್‌ ಗಾಂಧಿ ಪ್ರದರ್ಶಿಸಿದರು.

"ಸಾವರ್ಕರ್ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. ಆದರೆ ಮಹಾತ್ಮ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ವರ್ಷಗಳ ಕಾಲ ಜೈಲಿನಲ್ಲಿದ್ದರು. ಯಾವುದೇ ಪತ್ರವನ್ನು ಬರೆಯಲಿಲ್ಲ. ಭಯದ ಕಾರಣದಿಂದ ಸಾವರ್ಕರ್‌ಜೀ ಈ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂದು ನಾನು ನಂಬುತ್ತೇನೆ" ಎಂದು ರಾಹುಲ್‌ ಗಾಂಧಿ ವಿವರಿಸುತ್ತ ಹೇಳಿದರು.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಟೀಕಿಸಿದ ರಾಹುಲ್‌ ಗಾಂಧಿ, 'ಈ ಪತ್ರವನ್ನು ನೋಡಿ. ಅಗತ್ಯ ಇದೆ ಎಂದಾದರೆ ಇದರ ಪ್ರತಿಗಳನ್ನು ನಿಮಗೆ ಕಳುಹಿಸಿಕೊಡುವೆ' ಎಂದು ಅವರಿಗೆ ಮಾಧ್ಯಮಗಳ ಮೂಲಕ ಹೇಳಿದರು.

ರಾಹುಲ್‌ ಗಾಂಧಿ ಹೇಳಿಕೆಗೆ ಫಡ್ನವೀಸ್‌ ಏನು ಹೇಳಿದ್ರು?

ರಾಹುಲ್ ಗಾಂಧಿ ನಾಚಿಕೆಯೇ ಇಲ್ಲದೆ ಸುಳ್ಳು ಹೇಳಿದ್ದಾರೆ ಎಂದು ಫಡ್ನವೀಸ್ ಆರೋಪಿಸಿದ್ದಾರೆ.

"... 11 ವರ್ಷಗಳ ಕಾಲ ಸಾವರ್ಕರ್ ಅವರಂತೆ ಎಷ್ಟು ಕಾಂಗ್ರೆಸ್ ನಾಯಕರು ನೋವನ್ನು ಅನುಭವಿಸಿದ್ದಾರೆಂದು ತಿಳಿಯಬೇಕು. ಅಂತಹ ಸುದೀರ್ಘ ಚಿತ್ರಹಿಂಸೆಯ ನಡುವೆಯೂ ಅವರು ಸ್ವಾತಂತ್ರ್ಯದ ಹಾಡನ್ನು ಹಾಡಿದ್ದಾರೆ" ಎಂದು ಫಡ್ನವೀಸ್‌ ಹೇಳಿದರು.

ಮುಖ್ಯಮಂತ್ರಿ ಶಿಂಧೆ ಏನು ಹೇಳಿದ್ರು?

ಶಿವಸೇನೆಯ ಬಂಡಾಯ ಗುಂಪಿನ ನಾಯಕ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಕೂಡ ರಾಹುಲ್‌ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ. ಸಾವರ್ಕರ್‌ ಅವರನ್ನು ಅಪಮಾನಿಸಿದ ಯಾರನ್ನೂ ಮಹಾರಾಷ್ಟ್ರದ ಜನ ಬಿಡುವುದಿಲ್ಲ. ಅವರನ್ನು ಸಹಿಸುವುದೂ ಇಲ್ಲ. ಉದ್ಧವ್‌ ಠಾಕ್ರೆ ಈ ವಿಚಾರದಲ್ಲಿ ರಾಹುಲ್‌ ಬಗ್ಗೆ ಮೃದು ಧೋರಣೆ ತಳೆದಿರುವುದನ್ನೂ ಗಮನಿಸಿದ್ದೇವೆ ಎಂದು ಹೇಳಿದರು.

ಅಂತರ ಕಾಯ್ದುಕೊಂಡ ಉದ್ಧವ್‌ ಠಾಕ್ರೆ

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕಾಂಗ್ರೆಸ್‌ ಸಖ್ಯದಲ್ಲಿದ್ದರೂ, ರಾಹುಲ್‌ ಗಾಂಧಿ ಅವರ ಸಾವರ್ಕರ್‌ ಹೇಳಿಕೆಯನ್ನು ಒಪ್ಪುವುದಿಲ್ಲ ಎಂದು ಹೇಳಿ ಅಂತರ ಕಾಯ್ದುಕೊಂಡಿದ್ದಾರೆ.

ಸ್ವಾತಂತ್ರ್ಯ ವೀರ ಸಾವರ್ಕರ್‌ ಅವರ ಬಗ್ಗೆ ನಮಗೆ ಅಪಾರ ಗೌರವ ಇದೆ. ಅದನ್ನು ಅಳಿಸಿಹಾಕಲಾಗದು ಎಂದು ಉದ್ಧವ್‌ ಇಂದು ಬೆಳಗ್ಗೆ ಹೇಳಿದ್ದರು.

ಸಾವರ್ಕರ್‌ ಕುರಿತ ಹೇಳಿಕೆ ಮತ್ತು ವಿವಾದದ ಹಿನ್ನೆಲೆ

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ರಾಹುಲ್‌ ಗಾಂಧಿಯವರ ಹೇಳಿಕೆಯ ಕಾರಣ ಇತಿಹಾಸದ ಪುಟಗಳಲ್ಲಿ ಸಾವರ್ಕರ್‌ ವಿಚಾರದ ವಿವಾದ ಮಂಗಳವಾರ ಶುರುವಾಗಿದೆ.

ಮುಂಡಾ ಅವರನ್ನು ಕಾಂಗ್ರೆಸ್ 'ಕಣ್ಮಣಿ' ಎಂದು ಪ್ರತಿಪಾದಿಸಿದ ರಾಹುಲ್‌ ಗಾಂಧಿ ಮತ್ತು "... ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಕ್ಷಮಾದಾನ ಅರ್ಜಿಗಳನ್ನು ಬರೆದ ಮತ್ತು ಪಿಂಚಣಿ ಸ್ವೀಕರಿಸಿದ ಸಾವರ್ಕರ್‌ಜಿ... ಆರಾಧ್ಯ ದೈವ' ಎಂದು ಟೀಕಿಸಿದ್ದರು.

ರಾಹುಲ್‌ ಗಾಂಧಿ ವಿರುದ್ಧ ಪೊಲೀಸ್‌ ದೂರು

ವಿನಾಯಕ್ ದಾಮೋದರ ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಅವರ ಮೊಮ್ಮಗ ರಂಜಿತ್ ಸಾವರ್ಕರ್ ದೂರು ದಾಖಲಿಸಿದ್ದಾರೆ. ಎಎನ್‌ಐ ಜತೆ ಮಾತನಾಡಿದ ಅವರು, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಾವರ್ಕರ್ ಅವರನ್ನು ಅವಮಾನಿಸಿದ್ದು ಇದೇ ಮೊದಲಲ್ಲ, ಈ ಹಿಂದೆ ಸಾವರ್ಕರ್ ಅವರನ್ನು ಅವಮಾನಿಸಿದ್ದು, ಹೀಗಾಗಿ ರಾಹುಲ್ ಗಾಂಧಿ ವಿರುದ್ಧ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದೇನೆ ಎಂದು ಬೆಳಗ್ಗೆ ಹೇಳಿದ್ದರು. ಪೊಲೀಸ್‌ ದೂರು ದಾಖಲಾಗಿರುವುದನ್ನು ಪಿಟಿಐ ವರದಿ ದೃಢೀಕರಿಸಿದೆ.

IPL_Entry_Point