Rahul Gandhi Wayanad visit: ನಾಳೆ ವಯನಾಡುಗೆ ರಾಹುಲ್ ಗಾಂಧಿ: ಅನರ್ಹತೆ ಬಳಿಕ ಮಾಜಿ ಕ್ಷೇತ್ರದಲ್ಲಿ ರೋಡ್ ಶೋ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ (ಏ.11) ಕೇರಳದ ತಮ್ಮ ಮಾಜಿ ಕ್ಷೇತ್ರವಾದ ವಯನಾಡುಗೆ ಭೇಟಿ ನೀಡಿ, ರೋಡ್ ಶೋ ನಡೆಸಲಿದ್ದಾರೆ.
ನವದೆಹಲಿ: ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ (ಏ.11) ಕೇರಳದ ತಮ್ಮ ಮಾಜಿ ಕ್ಷೇತ್ರವಾದ ವಯನಾಡುಗೆ ಭೇಟಿ ನೀಡಲಿದ್ದಾರೆ. ತಮ್ಮ ಭೇಟಿಯ ವೇಳೆ ರಾಹುಲ್ ಗಾಂಧಿ ವಯನಾಡಿನಲ್ಲಿ ರೋಡ್ ಶೋ ನಡೆಸಿ, ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
'ಮೋದಿ ಉಪನಾಮ' ಹೇಳಿಕೆ ಸಂಬಂಧ ದಾಖಲಾದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಸೂರತ್ ನ್ಯಾಯಾಲಯವು ರಾಹುಲ್ ಗಾಂಧಿ ದೋಷಿ ಎಂದು ಹೇಳಿದ್ದು, 2 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ತೀರ್ಪಿನ ಬೆನ್ನಲ್ಲೇ ವಯನಾಡು ಲೋಕಸಭಾ ಸಂಸದರಾಗಿದ್ದ ಅವರನ್ನು ಅನರ್ಹಗೊಳಿಸಲಾಗಿತ್ತು. ಇದೀಹ ಅನರ್ಹತೆ ಬಳಿಕ ಮೊದಲ ಬಾರಿ ತಮ್ಮ ಮಾಜಿ ಕ್ಷೇತ್ರಕ್ಕೆ ರಾಹುಲ್ ಭೇಟಿ ನೀಡುತ್ತಿದ್ದಾರೆ.
2019ರ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಕೋಲಾರದಲ್ಲಿ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವ ಭರದಲ್ಲಿ, ಚೌಕೀದಾರ್ ಶೇಕಡ 100ರಷ್ಟು ಕಳ್ಳ ಇದ್ದಾನೆ. ಒಂದು ಸಣ್ಣ ಪ್ರಶ್ನೆ ಕೇಳ್ತೇನೆ. 'ಎಲ್ಲಾ ಕಳ್ಳರು ಹೇಗೆ ಮೋದಿ ಎಂಬ ಸರ್ನೇಮ್ಗಳನ್ನು ಹೊಂದಿದ್ದಾರೆ? ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ, ಇನ್ನೂ ಹುಡುಕಾಡಿದ್ರೆ ಇನ್ನಷ್ಟು ಮೋದಿಗಳು ಬಯಲಾಗಬಹುದು ಎಂದು ಹೇಳಿಕೆ ನೀಡಿದ್ದರು.
ಇದರ ವಿರುದ್ಧ ಇದನ್ನು ಖಂಡಿಸಿ ಬಿಜೆಪಿ ಶಾಸಕ ಮತ್ತು ಗುಜರಾತ್‌ನ ಮಾಜಿ ಸಚಿವ ಪೂರ್ಣೇಶ್ ಮೋದಿ ರಾಹುಲ್ ಗಾಂಧಿ ವಿರುದ್ಧ ಮಾನಹಾನಿ ಮೊಕದ್ದಮೆ ಕೇಸ್ ದಾಖಲಿಸಿದ್ದರು. ಮಾರ್ಚ್ 23 ರಂದು ಈ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ಸೂರತ್ ಜಿಲ್ಲಾ ನ್ಯಾಯಾಲಯ ರಾಹುಲ್ ಗಾಂಧಿಯನ್ನು ದೋಷಿ ಎಂದು ತೀರ್ಪು ನೀಡಿದೆ. ಅಲ್ಲದೇ 2 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಆದರೆ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಲಾಗಿತ್ತು.
ಸೂರತ್ ಜಿಲ್ಲಾ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಹಾಗೂ ಶಿಕ್ಷೆಗೆ ತಡೆ ಕೋರಿ ರಾಹುಲ್ ಗಾಂಧಿ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಗೆ ಗುಜರಾತ್‌ನ ಸೂರತ್ನ ಸೆಷನ್ಸ್ ಕೋರ್ಟ್ ಸಮ್ಮತಿಸಿದೆ. ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಮೇ 3 ರಂದು ನಡೆಸಲಿರುವ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ನೀಡಲಾಗಿರುವ ಜಾಮೀನನ್ನು ಏಪ್ರಿಲ್ 13ರ ವರೆಗೆ ವಿಸ್ತರಣೆ ಮಾಡಿದೆ.
ಗುಜರಾತ್‌ನಲ್ಲಿ ಮಾಜಿ ಸಚಿವ ಪೂರ್ಣೇಶ್ ಮೋದಿ ಮಾನನಷ್ಟ ಪ್ರಕರಣ ದಾಖಲಿಸಿದ್ದರೆ, ಬಿಹಾರದಲ್ಲಿ ಬಿಜೆಪಿ ನಾಯಕ, ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಕೇಸ್ ದಾಖಲಿಸಿದ್ದರು. ಇದೀಗ ಏಪ್ರಿಲ್ 12 ರಂದು ರಾಹುಲ್ ಗಾಂಧಿ ಹೇಳಿಕೆ ದಾಖಲಿಸಲು ಪಾಟ್ನಾ ವಿಶೇಷ ನ್ಯಾಯಾಲಯವು ರಾಹುಲ್ ಗಾಂಧಿಗೆ ಸಮನ್ಸ್ ನೀಡಿದೆ.
ರಾಹುಲ್ ಹೊಸ ವಿವಾದ
'ಮೋದಿ ಉಪನಾಮ' ಹೇಳಿಕೆ ಪ್ರಕರಣದ ನಡುವೆ ಶನಿವಾರ ( ಏ.8) ರಾಹುಲ್ ಗಾಂಧಿ ಟ್ವೀಟ್ ಮಾಡಿ ಮತ್ತೊಂದು ವಿವಾದಕ್ಕೆ ಸಿಲುಕಿದ್ದಾರೆ. ಉದ್ಯಮಿ ಗೌತಮ್ ಅದಾನಿ ಜೊತೆಗೆ ಬಿಜೆಪಿಗೆ ಸೇರ್ಪಡೆಗೊಂಡ ಹಾಗೂ ತಮ್ಮ ಪಕ್ಷದೊಂದಿಗೆ ದಶಕಗಳ ಹಳೆಯ ಸಂಬಂಧವನ್ನು ಕೊನೆಗೊಳಿಸಿದ ಮಾಜಿ ಕಾಂಗ್ರೆಸ್ ನಾಯಕರ ಹೆಸರನ್ನು ಪೋಸ್ಟ್ ಮಾಡಿದ್ದರು. ಇದರಲ್ಲಿ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, ಮಾಜಿ ಸಂಸದ ಗುಲಾಂ ನಬಿ ಆಜಾದ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ನಾಯಕ ಅನಿಲ್ ಆಂಟೋನಿ ಮತ್ತು ಮಾಜಿ ಸಿಎಂ ಕಿರಣ್ ರೆಡ್ಡಿ ಇದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು, ಅದಾನಿ ವಿವಾದಕ್ಕೆ ತಮ್ಮ ಹೆಸರನ್ನು ಜೋಡಿಸಿಮಾಡಿರುವ ಟ್ವೀಟ್‌ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದ್ದಾರೆ.