Rajasthan Election Results 2023: ರಾಜಸ್ಥಾನ ಚುನಾವಣಾ ಫಲಿತಾಂಶ; ಕಾಂಗ್ರೆಸ್ ಹಿಂದಿಕ್ಕಿದ ಬಿಜೆಪಿಗೆ ಮುನ್ನಡೆ
ಆರಂಭಿಕ ಟ್ರೆಂಡ್ ಪ್ರಕಾರ ರಾಜಸ್ಥಾನ ವಿಧಾನಸಭೆ ಚುನಾವಣಾ ಮತ ಎಣಿಕೆಯಲ್ಲಿ ಕಾಂಗ್ರೆಸ್ 49 ಮತ್ತು ಬಿಜೆಪಿ 42 ರಲ್ಲಿ ಮುನ್ನಡೆ ಸಾಧಿಸಿವೆ.
ಜೈಪುರ್: ರಾಜಸ್ಥಾನ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬಹುತೇಕ ಮುಕ್ತಾಯವಾಗಿದ್ದು, ಬಿಜೆಪಿ ಭಾರಿ ಮುನ್ನಡೆ ಸಾಧಿಸಿದೆ. ಅಲ್ಲದೆ, ಅಧಿಕಾರ ರಚನೆಗೆ ಬೇಕಿರುವ 100 ಸಂಖ್ಯೆಯನ್ನು ಮೀರಿಸಿದೆ. ಪ್ರಸ್ತುತ ಮಾಹಿತಿ ಪ್ರಕಾರ 112 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಕಾಂಗ್ರೆಸ್ 68 ಹಾಗೂ ಇತರರು 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ರಾಜಸ್ಥಾನದಲ್ಲಿ ಬಿಜೆಪಿ ಗೆಲುವು ಪಕ್ಕಾ ಆಗಿದ್ದು, ಅಧಿಕೃತವಾಗಿ ಘೋಷಣೆ ಮಾತ್ರ ಬಾಕಿ ಇದೆ. ಕಾಂಗ್ರೆಸ್ ಸೋಲುವುದು ಖಚಿತವಾಗುತ್ತಿದ್ದಂತೆ ಸಿಎಂ ಅಶೋಕ್ ಗೆಹ್ಲೋಟ್ ಇಂದು ಸಂಜೆ ಸುದ್ದಿಗೋಷ್ಠಿ ಕರೆದಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಣೆ ಮಾಡಲಿದ್ದಾರೆ.
ಬೆಳಗಿನ ಆರಂಭದ ಟ್ರೆಂಡ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಪೈಪೋಟಿ ನೀಡಿದ್ದವು. ಕಾಂಗ್ರೆಸ್ 49 ಮತ್ತು ಬಿಜೆಪಿ 42 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ಹಂತ ಹಂತವಾಗಿ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಾರ್ಟಿ ಮುನ್ನಡೆಯನ್ನು ಸಾಧಿಸುತ್ತಲೇ ಬಂದಿದೆ.
ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿವ ಸಚಿನ್ ಪೈಲಟ್ ಅವರ ಬಣಗಳ ನಡುವೆ ಮುಸುಕಿನ ಗುದ್ದಾಟವೇ ಕಾಂಗ್ರೆಸ್ ಹಿನ್ನಡೆಗೆ ಕಾರಣ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸರ್ಕಾರ ರಚಿಸಿದಾಗಿನಿಂದಲೂ ಸಚಿನ್ ಪೈಲಟ್ ಅವರು ಗೆಹ್ಲೋಟ್ ಅವರ ವಿರುದ್ಧ ಫುಲ್ ರೆಬಲ್ ಆಗಿದ್ದರು. ಇದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
ರಾಜಸ್ಥಾನದ 200 ವಿಧಾನಸಭಾ ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಿಗೆ ನವೆಂಬರ್ 25ರ ಶನಿವಾರ ಮತದಾನ ನಡೆದಿತ್ತು. 51,756 ಮತಗಟ್ಟೆಗಳನ್ನು ಇಲ್ಲಿನ ಸ್ಥಾಪಿಸಲಾಗಿತ್ತು. 5,25,38,659 ಒಟ್ಟು ಮತದಾರರು ರಾಜಸ್ಥಾನದಲ್ಲಿದ್ದು, ಇದರಲ್ಲಿ 2,73,58,965 ಮಂದಿ ಪುರುಷರು, 2,51,79,694 ಮಹಿಳಾ ಮತದಾರಿದ್ದಾರೆ. 1 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃತಪಟ್ಟ ಹಿನ್ನೆಲೆಯಲ್ಲಿ ಇಲ್ಲಿ ಚುನಾವಣೆಯನ್ನು ಮುಂದೂಡಲಾಗಿದೆ.