ಪಿಜಿ, ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸ್ಪ್ರಿಂಗ್ ಫ್ಯಾನ್‌ ಅಳವಡಿಕೆಗೆ ಆದೇಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಪಿಜಿ, ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸ್ಪ್ರಿಂಗ್ ಫ್ಯಾನ್‌ ಅಳವಡಿಕೆಗೆ ಆದೇಶ

ಪಿಜಿ, ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಗೆ ಸ್ಪ್ರಿಂಗ್ ಫ್ಯಾನ್‌ ಅಳವಡಿಕೆಗೆ ಆದೇಶ

ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳು ಹೆಚ್ಚು ಭಾರವನ್ನು ತಡೆಯುವುದಿಲ್ಲ. ಯಾರಾದರೂ ಆ ಫ್ಯಾನ್​ಗೆ ನೇಣು ಬಿಗಿದುಕೊಂಡರೆ ಅದು ಭಾರ ತಡೆಯಲಾಗದೆ ಕೆಳಗೆ ಬೀಳುತ್ತದೆ. ಹೀಗಾಗಿ ಈ ಆದೇಶ ಹೊರಡಿಸಲಾಗಿದೆ.

ಸ್ಪ್ರಿಂಗ್ ಫ್ಯಾನ್‌ ಅಳವಡಿಕೆಗೆ ಆದೇಶ (ಪ್ರಾತಿನಿಧಿಕ ಚಿತ್ರ)
ಸ್ಪ್ರಿಂಗ್ ಫ್ಯಾನ್‌ ಅಳವಡಿಕೆಗೆ ಆದೇಶ (ಪ್ರಾತಿನಿಧಿಕ ಚಿತ್ರ)

ಕೋಟ (ರಾಜಸ್ಥಾನ): ನಾನಾ ಕಾರಣಗಳಿಂದ ಪಿಜಿ (ಪೇಯಿಂಗ್ ಗೆಸ್ಟ್) ಮತ್ತು ಹಾಸ್ಟೆಲ್​ಗಳಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದೆ. ಇದನ್ನು ಗಮನಿಸಿದ ರಾಜಸ್ಥಾನದ ಕೋಟ ಜಿಲ್ಲಾಡಳಿತವು ಎಲ್ಲಾ ಹಾಸ್ಟೆಲ್‌ಗಳು ಮತ್ತು ಪಿಜಿಗಳ ಕೊಠಡಿಗಳಲ್ಲಿ ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳನ್ನು ಅಳವಡಿಸಲು ಆದೇಶಿಸಿದೆ.

ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳು ಹೆಚ್ಚು ಭಾರವನ್ನು ತಡೆಯುವುದಿಲ್ಲ. ಯಾರಾದರೂ ಆ ಫ್ಯಾನ್​ಗೆ ನೇಣು ಬಿಗಿದುಕೊಂಡರೆ ಅದು ಭಾರ ತಡೆಯಲಾಗದೆ ಕೆಳಗೆ ಬೀಳುತ್ತದೆ. ಹೀಗಾಗಿ ಈ ಆದೇಶ ಹೊರಡಿಸಲಾಗಿದೆ.

ಭಾರತದ ಕೋಚಿಂಗ್​ ಹಬ್​ ಎಂದು ಹೆಸರಾದ ಪ್ರವೇಶಾತಿ ಪರೀಕ್ಷೆಗಳ ತರಬೇತಿ ಕೇಂದ್ರವಾದ ಕೋಟದಲ್ಲಿ ಈ ವರ್ಷ 21 ವಿದ್ಯಾರ್ಥಿಗಳು ಪಿಜಿ ಮತ್ತು ಹಾಸ್ಟೆಲ್​ಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಇದು ತುರ್ತು ಸುಧಾರಣೆಗಳ ಕರೆಗಳನ್ನು ಪ್ರೇರೇಪಿಸಿತು. ಹೀಗಾಗಿ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಒದಗಿಸಲು ಮತ್ತು ಆತ್ಮಹತ್ಯೆ ತಡೆಯಲು ಸ್ಪ್ರಿಂಗ್-ಲೋಡೆಡ್ ಫ್ಯಾನ್‌ಗಳನ್ನು ಅಳವಡಿಸಲು ಸೂಚಿಸಲಾಗಿದೆ.

ಕೋಟ ಜಿಲ್ಲಾಧಿಕಾರಿ ಓಂ ಪ್ರಕಾಶ್ ಬಂಕರ್ ಅವರು ಹೊರಡಿಸಿದ ಆದೇಶದಲ್ಲಿ, "ಕೋಟದಲ್ಲಿ ಓದುತ್ತಿರುವ/ವಾಸಿಸುತ್ತಿರುವ ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲ ಮತ್ತು ಭದ್ರತೆಯನ್ನು ಒದಗಿಸಲು ಮತ್ತು ಕೋಟ ನಗರದಲ್ಲಿ ಕೋಚಿಂಗ್ ವಿದ್ಯಾರ್ಥಿಗಳ ಆತ್ಮಹತ್ಯೆಯನ್ನು ತಡೆಯಲು, ರಾಜ್ಯದ ಎಲ್ಲಾ ಹಾಸ್ಟೆಲ್/ಪಿಜಿ ನಿರ್ವಾಹಕರ ಜೊತೆ ಶನಿವಾರ ನಡೆದ ಸಭೆಯಲ್ಲಿ ಚರ್ಚಿಸಿದಂತೆ ಪ್ರತಿ ಕೊಠಡಿಯಲ್ಲಿನ ಫ್ಯಾನ್‌ಗಳಲ್ಲಿ ಸ್ಪ್ರಿಂಗ್ ಅಳವಡಿಸಲು ನಿರ್ದೇಶಿಸಲಾಗಿದೆ" ಎಂದು ತಿಳಿಸಲಾಗಿದೆ.

2022ರ ಡಿಸೆಂಬರ್​ನಲ್ಲಿ ಆದೇಶವೊಂದನ್ನು ಹೊರಡಿಸಿದ್ದ ಕೋಟ ಜಿಲ್ಲಾಡಳಿತ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ರಜೆ, ಗರಿಷ್ಠ 80 ವಿದ್ಯಾರ್ಥಿಗಳ ತರಗತಿ ಸಾಮರ್ಥ್ಯ ಮತ್ತು ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಾನಸಿಕ ಮೌಲ್ಯಮಾಪನಗಳನ್ನು ಕಡ್ಡಾಯಗೊಳಿಸುವಂತೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ಗಳು, ಹಾಸ್ಟೆಲ್‌ಗಳು ಮತ್ತು ಪಿಜಿಗಳ ಮಾಲೀಕರಿಗೆ ಸೂಚಿಸಿತ್ತು. ಇದೀಗ ಈ ಆದೇಶವನ್ನೂ ಕಡ್ಡಾಯವಾಗಿ ಪಾಲಿಸುವಂತೆ ಜಿಲ್ಲಾಡಳಿತ ಸೂಚಿಸಿದೆ. ಆದೇಶವನ್ನು ಅನುಸರಿಸದ ವಸತಿ ಮತ್ತು ಸಂಸ್ಥೆಗಳನ್ನು ವಶಪಡಿಸಿಕೊಂಡು ಮಾಲೀಕರ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಕೋಟ ಆತ್ಮಹತ್ಯೆ ಪ್ರಕರಣಗಳು

ಕೋಟದಲ್ಲಿ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ) ತಯಾರಿ ನಡೆಸುತ್ತಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ ಈ ಸೂಚನೆ ನೀಡಲಾಗಿದೆ. ಇದು ಕೋಟ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ 4ನೇ ಮತ್ತು ಈ ವರ್ಷ 21ನೇ ಆತ್ಮಹತ್ಯೆ ಪ್ರಕರಣವಾಗಿದೆ.

ಆಗಸ್ಟ್ 11 ರಂದು, ಬಿಹಾರದ 17 ವರ್ಷದ ಜೆಇಇ ಆಕಾಂಕ್ಷಿ ಮಹಾವೀರ್ ನಗರದ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆಗಸ್ಟ್ 4 ರಂದು, ಬಿಹಾರದ 17 ವರ್ಷದ ಎಂಜಿನಿಯರಿಂಗ್ ಆಕಾಂಕ್ಷಿ ಮಹಾವೀರ್ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಒಂದು ದಿನ ಮುಂಚೆ ಅಂದರೆ ಆಗಸ್ಟ್ 3 ರಂದು, ಉತ್ತರ ಪ್ರದೇಶದ NEET ಆಕಾಂಕ್ಷಿಯೊಬ್ಬರು ವಿಜ್ಞಾನ್​​ ನಗರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದನು.

ಪೊಲೀಸ್ ಮಾಹಿತಿ ಪ್ರಕಾರ, ಕೋಟಾದಲ್ಲಿ 2022 ರಲ್ಲಿ 15, 2019 ರಲ್ಲಿ 18, 2018 ರಲ್ಲಿ 20, 2017 ರಲ್ಲಿ ಏಳು, 2016 ರಲ್ಲಿ 17, ಮತ್ತು 2015 ರಲ್ಲಿ 18 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2020 ಮತ್ತು 2021 ರಲ್ಲಿ ಯಾವುದೇ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿಲ್ಲ. ಇನ್ನು 2023ರ 21 ಆತ್ಮಹತ್ಯೆಗಳಲ್ಲಿ ಹೆಚ್ಚಿನವರು ಜೆಇಇ ಮತ್ತು ಎನ್‌ಇಇಟಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಗಳಾಗಿದ್ದಾರೆ.

ದೇಶದಾದ್ಯಂತದ ವಿದ್ಯಾರ್ಥಿಗಳು ಪ್ರತಿ ವರ್ಷ ರಾಜಸ್ಥಾನದ ಕೋಟ ಪಟ್ಟಣಕ್ಕೆ ಬರುತ್ತಾರೆ, ಸುಮಾರು 2,25,000 ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪರೀಕ್ಷೆಗಾಗಿ ಇಕ್ಕಟ್ಟಾದ ಕ್ಲಾಸ್​ ರೂಂಗಳಲ್ಲಿ ಅಧ್ಯಯನ ಮಾಡುತ್ತಾರೆ. 2018 ರಲ್ಲಿ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS) ನಡೆಸಿದ ಅಧ್ಯಯನವು ಪಟ್ಟಣದ ಹಲವಾರು ವಿದ್ಯಾರ್ಥಿಗಳು ಖಿನ್ನತೆ, ಅನಾರೋಗ್ಯ, ಆತಂಕ ಮತ್ತು ತರಬೇತಿಯ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ಸ್ವಯಂ-ಹಾನಿ, ಮಾದಕ ದ್ರವ್ಯ ಸೇವನೆ, ನಿಂದನೆ, ಬೆದರಿಸುವಿಕೆಯಂತಹ ಅತಿರೇಕದ ನಿದರ್ಶನಗಳನ್ನು ಸಹ ಈ ವರದಿ ಕಂಡುಹಿಡಿದಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.