ರಾಜೀವ ಹೆಗಡೆ ಬರಹ: ಡೊನಾಲ್ಡ್ ಟ್ರಂಪ್ ಪ್ರಮಾಣವಚನ ಭಾಷಣ, ದೇಶದ ಮತದಾರರಿಗೆ ನೀಡಿದ ಮಾತು ಉಳಿಸಿಕೊಳ್ಳುವ ನಾಯಕರು ನಮಗೆ ಸಿಗುವುದು ಯಾವಾಗ?
ಅಮೆರಿಕ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಮಾಡಿದ ಭಾಷಣದಲ್ಲಿ ನೀಡಿದ ಭರವಸೆಗಳು, ಭಾರತದಲ್ಲಿ ರಾಜಕೀಯ ನೇತಾರರ ನಡವಳಿಕೆಗಳ ಕುರಿತು ವಿಶ್ಲೇಷಣೆ ಮಾಡಿದ್ದಾರೆ ಬರಹಗಾರ, ಪತ್ರಕರ್ತ ರಾಜೀವ್ ಹೆಗಡೆ.

ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅತ್ಯಂತ ವಿವಾದಿತ ರಾಜಕಾರಣಿ, ಆಡಳಿತಗಾರರೆಂದರೆ ಡೊನಾಲ್ಡ್ ಟ್ರಂಪ್. ಟ್ರಂಪ್ ಅವರ ನೇರ ನುಡಿ, ಹಲವು ವರ್ತನೆಗಳ ಕಾರಣದಿಂದ ಸಾಕಷ್ಟು ಜನ ಬಹಿರಂಗವಾಗಿ ಹೊಗಳುವಾಗ ಒಂದಿಷ್ಟು ಅಡಿ ಬರಹಗಳನ್ನು ಇರಿಸಿಕೊಂಡಿರುತ್ತಾರೆ. ಆದರೆ ಭಾರತದ ಪ್ರಜೆಯಾಗಿ ನಾನು ಟ್ರಂಪ್ ಅವರನ್ನು ಇಷ್ಟಪಡಲು ಒಂದು ಬಲವಾದ ಕಾರಣವಿದೆ.
2016ರಲ್ಲಿ ಮೊದಲ ಬಾರಿಗೆ ಹಾಗೂ ಈಗ ಎರಡನೇ ಅವಧಿಗೆ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಳ್ಳುತ್ತಿದ್ದಂತೆ ಟ್ರಂಪ್ ಮಾಡಿದ ಘೋಷಣೆಗಳೇ ನನ್ನಿಷ್ಟಕ್ಕೆ ಪ್ರಮುಖ ಕಾರಣ. ಅಂದ್ಹಾಗೆ ಆ ಘೋಷಣೆಗಳ ಕಾನೂನು, ಸಾಮಾಜಿಕ, ಆರ್ಥಿಕ ಹಾಗೂ ಪ್ರಾದೇಶಿಕ ವಿಚಾರಗಳ ಬಗ್ಗೆ ಬರೆಯುವಷ್ಟು ತಜ್ಞ ಮಾಹಿತಿ ನನ್ನಲ್ಲಿಲ್ಲ. ಆದರೆ ಮತದಾರರನ್ನು ʼಟೇಕನ್ ಫಾರ್ ಗ್ರ್ಯಾಂಟೆಡ್ʼ ಎಂದುಕೊಳ್ಳದೇ, ತಾನು ಕೊಟ್ಟ ಭರವಸೆಯತ್ತ ಕೆಲಸ ಮಾಡುವ ನಿಷ್ಠೆಯು ಟ್ರಂಪ್ ಅವರಲ್ಲಿ ಕಾಣಿಸಿತು.
2016ರಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗ ಸಾಕಷ್ಟು ಜನ ಅವರನ್ನು ಜೋಕರ್‌ರಂತೆ ಕಂಡಿದ್ದರು. ಅದರ ಹಿಂದೆ ಲೆಫ್ಟ್-ಲಿಬರಲ್ ಮಾಧ್ಯಮಗಳ ಚಿತಾವಣೆ ಕೂಡ ಇತ್ತು. ಆದರೆ ಅವರ ಮೊದಲ ಅವಧಿಯ ಕೊನೆಯ ವರ್ಷಗಳಲ್ಲಿ ಒಂದಿಷ್ಟು ಕಠಿಣ ನಿಲುವುಗಳು ಕಾಣಿಸಿದವು. ಆದರೆ ಈ ಬಾರಿ ಚುನಾವಣೆಗೆ ಧುಮುಕಿದಾಗ ಟ್ರಂಪ್ ಪ್ರಚಾರದಲ್ಲಿ ಮತ್ತಷ್ಟು ನಿಖರತೆ ಹಾಗೂ ಆಕ್ರಮಣಶೀಲ ವಿಚಾರಗಳಿದ್ದವು. ಅಮೆರಿಕವನ್ನು ಗ್ರೇಟ್ ಮಾಡುತ್ತೇನೆ ಎಂದು ಹೇಳಿಕೊಂಡು ಬೈಡನ್-ಕಮಲಾ ವಿರುದ್ಧ ಟ್ರಂಪ್ ಗುಡುಗಿದ್ದರು. ಪ್ರಚಾರದ ದಿನಗಳಿಂದ ಹಿಡಿದು, ನಿನ್ನೆ ಪ್ರಮಾಣವಚನ ಸ್ವೀಕರಿಸುವರೆಗೂ ಟ್ರಂಪ್ ಭರವಸೆಗಳನ್ನು ಭ್ರಮೆ, ಪ್ರಚಾರಕ್ಕೆ ಸೀಮಿತವೆಂದು ಸಾಕಷ್ಟು ರಾಜಕೀಯ ವಿಶ್ಲೇಷಕರು ಟೀಕಿಸಿದ್ದರು. ಆದರೆ ಪ್ರಮಾಣವಚನ ಸ್ವೀಕರಿಸಿದ ಬಳಿಕ ಟ್ರಂಪ್ ಮಾಡಿದ ಅರ್ಧ ಗಂಟೆಗೂ ಅಧಿಕ ಅವಧಿಯ ಭಾಷಣವು, ಅಮೆರಿಕ ಹಾಗೂ ಜಾಗತಿಕವಾಗಿ ಇರುವ ಒಂದಿಷ್ಟು ಸ್ಥಾಪಿತ ನಿಲುವುಗಳ ಬುಡವನ್ನೇ ಅಲ್ಲಾಡಿಸಿದೆ. ನಾನು ಇಲ್ಲಿಯವರೆಗೆ ಒಬ್ಬ ಅಧ್ಯಕ್ಷನು ತನ್ನ ಮೊದಲ ದಿನವೇ ಇಷ್ಟೊಂದು ಆಕ್ರಮಣಶಾಲಿ ಆಗಿರುವುದನ್ನು ನೋಡಿಲ್ಲ. ಇಲ್ಲವಾದಲ್ಲಿ ಈ ರೀತಿ ಕಾರ್ಯಪ್ರವೃತ್ತಿಯನ್ನು ನೋಡದ ಅಥವಾ ಅನುಭವಿಸದ ನಮಗೆ ಇದು ಆಕ್ರಮಣಶೀಲತೆಯಾಗಿ ಕಾಣಿಸುತ್ತಿರಬಹುದು.
ಟ್ರಂಪ್ ಅವರ ಪ್ರಮಾಣವಚನದ ಭಾಷಣದಲ್ಲೇ ಹತ್ತಕ್ಕೂ ಅಧಿಕ ಪ್ರಮುಖ ಘೋಷಣೆಗಳಿದ್ದವು. ಗಲ್ಫ್ ಅಮೆರಿಕಾ, ಡ್ರಿಲ್ ಬೇಬಿ ಡ್ರಿಲ್, ದ್ವಿ ಲಿಂಗ ವ್ಯವಸ್ಥೆ, ದಕ್ಷಿಣ ಅಮೆರಿಕ ಗಡಿಯಲ್ಲಿ ತುರ್ತು ಪರಿಸ್ಥಿತಿ, ವಲಸಿಗರ ಗಡಿಪಾರು, ಮಾದಕವಸ್ತು ಹಾಗೂ ವಿದೇಶಿ ಶಕ್ತಿಗಳನ್ನು ಭಯೋತ್ಪಾದನೆ ವ್ಯಾಪ್ತಿಗೆ ತರುವುದು ಸೇರಿ ಕೆಲ ಘೋಷಣೆಗಳು ಅಮೆರಿಕದಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಲಿದೆ. ಈ ಘೋಷಣೆಗಳಿಂದ ಏನಾಗುತ್ತದೆ ಅಥವಾ ಇಲ್ಲವೋ ಎನ್ನುವುದರ ಚರ್ಚೆಯನ್ನು ಆಸಕ್ತರು ಮಾಡಬಹುದು. ಆದರೆ ನನ್ನ ಪಾಲಿಗೆ ಓರ್ವ ರಾಜಕಾರಣಿಯು ತನ್ನ ಮತದಾರನ ಮೇಲೆ ಹೊಂದಿರಬಹುದಾದ ನಿಷ್ಠೆ ಎದ್ದು ಕಾಣುತ್ತದೆ.
ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಟ್ರಂಪ್‌ಗೆ ನಾಲ್ಕು ವರ್ಷಗಳ ಸಮಯವಿತ್ತು. ಮೊದಲ ದಿನವೇ ಈ ಆದೇಶ ಹೊರಡಿಸುತ್ತೇನೆ ಎಂದಿದ್ದರೂ ರಾಜಕಾರಣಿಗಳ ಬ್ಯಾಟಿಂಗ್‌ನಲ್ಲಿ ಟೆಸ್ಟ್ ಪಂದ್ಯಗಳೇ ಹೆಚ್ಚು ಕಾಣಿಸುತ್ತವೆ. ಈ ರೀತಿ ಮೊದಲ ಓವರನಲ್ಲಿಯೇ ಸ್ವಿಚ್ ಹಿಟ್ ಮಾಡುವ ಕೆಲಸ ಮಾಡುವುದಿಲ್ಲ. ಜನರನ್ನು ಮಂಗ ಮಾಡಲು ಸಮಯ ಹೊಂಚು ಹಾಕಿಕೊಂಡು ಘೋಷಣೆ ಮಾಡುವುದೇ ರಾಜಕಾರಣಿಗಳ ಸಹಜ ಪ್ರವೃತ್ತಿ. ಒಂದರ್ಥದಲ್ಲಿ ರಾಜಕಾರಣಿಗಳು ಹಾಗೂ ಮತದಾರರ ನಡುವಿನ ನ್ಯಾಚುರಲ್ ಜಸ್ಟೀಸ್ ಆಗಿರುತ್ತದೆ. ಅದೆಷ್ಟೋ ಸಲ ಅಧಿಕಾರದ ಕೊನೆಯ ದಿನದಲ್ಲಿ ಆಡಳಿತಾತ್ಮಕ ಆದೇಶ ಹೊರಡಿಸಿ, ಮತದಾರರ ಮುಂದೆ ಬುರುಡೆ ಬಿಡುವವರನ್ನು ಕೂಡ ನಾವು ನೋಡಿದ್ದೇವೆ.
ಆದರೆ ಇದೇ ಕಾರಣಕ್ಕೆ ಟ್ರಂಪ್ ವಿಭಿನ್ನವಾಗಿ ಕಾಣಿಸುತ್ತಾರೆ. ಎಲಾನ್ ಮಸ್ಕ್ ಅತ್ಯಾಪ್ತರಾದರೂ ಮೊದಲ ದಿನವೇ ಇ-ಕಾರುಗಳ ಖರೀದಿ ಮೇಲಿದ್ದ ನಿಯಮವನ್ನು ಸಡಿಲಗೊಳಿಸಿದರು. ಮತದಾರರಿಗೆ ನೀಡಿದ್ದ ಸಾಕಷ್ಟು ದೊಡ್ಡ ಭರವಸೆಗಳಿಗೆ ಸಂಬಂಧಿಸಿ ಮೊದಲ ದಿನವೇ ಆದೇಶ ಹೊರಡಿಸಿಬಿಟ್ಟರು. ಇಂತಹದೊಂದು ದಾಡಸೀತವನ್ನು ಪ್ರದರ್ಶಿಸಲು ಆತ ಟ್ರಂಪ್ ಆಗಿದ್ದರೆ ಮಾತ್ರ ಸಾಧ್ಯ.
ಈ ಅಚ್ಚರಿಗೆ ಕಾರಣವಿದೆ!
ಭಾರತದಲ್ಲಿ ಒಂದು ರಾಜಕೀಯ ಪಕ್ಷವು ತಾನು ನೀಡಿದ ನೂರು ಭರವಸೆಗಳಲ್ಲಿ ಅರ್ಧದಷ್ಟು ವಿಚಾರಕ್ಕೆ ಆಡಳಿತಾತ್ಮಕ ಆದೇಶ ಹೊರಡಿಸಲು ಐದು ವರ್ಷಗಳು ಬೇಕಾಗುತ್ತದೆ. ಇಂತಹ ಸುಳ್ಳು ಭರವಸೆ, ಭ್ರಮೆ ಹುಟ್ಟಿಸುವ ಭಾಷಣ, ಅನುಷ್ಠಾನಕ್ಕೇ ಬಾರದ ಯೋಜನೆ, ಹೇಳಿಕೆಗೆ ಸೀಮಿತವಾಗುವ ಸ್ಲೋಗನ್‌ಗಳನ್ನು ಕೇಳಿ ಸುಸ್ತಾದ ನಮಗೆ ಈ ರೀತಿಯ ಮೊದಲ ದಿನದ ಪವರ ಹಿಟ್‌ಗಳು ಆಕರ್ಷಕವಾಗಿ ಕಾಣುವುದರ ಜತೆಗೆ ಅಚ್ಚರಿ ಮೂಡಿಸುತ್ತದೆ. ನಮ್ಮ ರಾಜಕಾರಣಿಗಳು ಸಾಕಷ್ಟು ರಿಲ್ಯಾಕ್ಸ್ ಮೂಡ್‌ನಲ್ಲಿರುತ್ತಾರೆ. ಪ್ರಮಾಣವಚನದ ದಿನದಂದು ಆ ಕಾರ್ಯಕ್ರಮವೇ ಮುಖಪುಟಕ್ಕೆ ಸೀಮಿತವಾಗಿರಲಿ ಎಂದು ಲೆಕ್ಕಾಚಾರ ಮಾಡುತ್ತಾರೆ. ಆ ಬಳಿಕ ಎಲ್ಲ ಟಿಆರ್‌ಪಿ, ಹಬ್ಬ, ಹರಿದಿನ ನೋಡಿಕೊಂಡು ಇನ್ನೊಂದು ಘೋಷಣೆ ಮಾಡುತ್ತಾರೆ. ಕೆಲವೊಮ್ಮೆ ತಮಗೆ ಬೇಡದ ವಿಚಾರ ಮುನ್ನೆಲೆಗೆ ಬಂದಿದ್ದರೆ ಅದನ್ನು ಮರೆಸಲು ದೊಡ್ಡ ಭರವಸೆ ಈಡೇರಿಸುವ ಮಾತುಗಳನ್ನಾಡುತ್ತಾರೆ. ಒಟ್ಟಿನಲ್ಲಿ ಒಂದೇ ದಿನ ಹತ್ತಾರು ಲೀಡ್ ಸ್ಟೋರಿ ಕೊಡುವುದೇಕೆ ಎಂದು ಪತ್ರಕರ್ತರ ಆಯಾಮದಲ್ಲಿ ರಾಜಕಾರಣಿಗಳು ಆಲೋಚಿಸುತ್ತಾರೆ. ಪತ್ರಕರ್ತರಿಗೆ ಕಷ್ಟ ಕೊಡುವುದು ಬೇಡವೆಂದು ಕಂತು ಕಂತುಗಳಲ್ಲಿ ಘೋಷಣೆ ಮಾಡುತ್ತಾರೆ. ಆದರೆ ಪಾಪ ಏನು ಮಾಡುವುದು, ಕೆಲವು ಕಂತುಗಳಿಗೆ ಮುಹೂರ್ತವೇ ಕೂಡಿ ಬರುವುದಿಲ್ಲ.
ಗಮನಸೆಳೆದ ಇನ್ನೆರಡು ವಿಚಾರ
1. ಟ್ರಂಪ್ ಪ್ರಮಾಣವಚನ ಸ್ವೀಕರಿಸುತ್ತಿರುವ ವೇದಿಕೆಯಲ್ಲೇ ಅಧ್ಯಕ್ಷರ ಹಿಂಭಾಗದಲ್ಲಿ ಅಮೆರಿಕದ ದಿಗ್ಗಜ ಕಂಪೆನಿಗಳ ಸಿಇಒಗಳು ಕೂತಿದ್ದರು. ಜಗತ್ತಿನ ಅರ್ಧದಷ್ಟು ಸಿರಿವಂತಿಕೆ ಅದೇ ವೇದಿಕೆಯಲ್ಲಿದೆ ಎನ್ನುವಂತಿತ್ತು. ಆ ಮೂಲಕ ಜಗತ್ತಿಗೆ ಅಮೆರಿಕದ ಶಕ್ತಿಯನ್ನು ಮತ್ತೊಮ್ಮೆ ಪ್ರದರ್ಶಿಸುವ ಕೆಲಸವೂ ಅದಾಗಿರಬಹುದು. ಆ ದೇಶವು ಇಂದು ವಿಶ್ವದ ದೊಡ್ಡಣ್ಣನಾಗಿದ್ದರೆ ಅದು ಬೃಹತ್ ಉದ್ಯಮ ಹಾಗೂ ಹೂಡಿಕೆದಾರರಿಂದ ಎನ್ನುವುದನ್ನು ನಾವು ಮರೆಯಲಾಗದು. ಆದರೆ ನಾವು ಭಾರತದಲ್ಲಿ ಉದ್ಯಮಿಗಳನ್ನು ಹಳಿಯುವುದರಲ್ಲೇ ಕಾಲ ಕಳೆಯುತ್ತೇವೆ. ನಾನು ಸಣ್ಣವನಿದ್ದಾಗ ಟೀಕಾಕಾರರ ಭಾಷಣದ ಕೇಂದ್ರಬಿಂದು ಟಾಟಾ-ಬಿರ್ಲಾ ಆಗಿರುತ್ತಿದ್ದರು. ಈಗ ಕಾಲ ಬದಲಾಗಿ ಅಂಬಾನಿ-ಅದಾನಿಯಾಗಿದ್ದಾರೆ. ಒಂದೊಮ್ಮೆ ನಮ್ಮ ಪ್ರಧಾನಿ ಪ್ರಮಾಣವಚನದ ವೇದಿಕೆಯಲ್ಲಿ ಇವರೆಲ್ಲ ಕಾಣಿಸಿಕೊಂಡರೆ ಕೆಲವರು ಮೈ ಪರೆಚಿಕೊಂಡು ಕಿರುಚಲು ಆರಂಭಿಸುತ್ತಾರೆ. ಆದರೆ ಜಾಗತಿಕ ಪವರ್ ಹಬ್ ಆಗಲು ಇಂತಹ ಹಾವು-ಏಣಿಯಾಟ ಸಹಾಯ ಮಾಡುವುದಿಲ್ಲ.
2. ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಅವರು ಪಕ್ಕದಲ್ಲೇ ಕುಳಿತಾಗ ಅವರ ಕೆನ್ನೆಗೆ ಒಮ್ಮೆಯಲ್ಲ, ಪದೇಪದೆ ಬಾರಿಸಿದಂತೆ ಆದೇಶಗಳನ್ನು ರಿವರ್ಸ್ ಮಾಡಿ ಘೋಷಣೆ ಮಾಡುವುದು ಸಣ್ಣ ವಿಚಾರವಲ್ಲ. ಯಾವುದೇ ರಾಜಕಾರಣಿಯು ಸಾಮಾನ್ಯವಾಗಿ ಇಂತಹ ನೇರ ಹಣಾಹಣಿ ಮಾಡಲು ಇಷ್ಟಪಡುವುದಿಲ್ಲ. ಪ್ರತಿ ಘೋಷಣೆಯ ಬಳಿಕವೂ ವೇದಿಕೆಯಲ್ಲಿದ್ದವರೆಲ್ಲ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಆದರೆ ಬೈಡನ್-ಕಮಲಾ ಮಾತ್ರ ಹಿಂಸೆಯಿಂದ ಕುಳಿತಿದ್ದರು. ಇದನ್ನು ಅವಮಾನವೆಂದು ಕೆಲವರು ವಿಶ್ಲೇಷಿಸಬಹುದು. ಆದರೆ ತಪರಾಕಿಗೆ ಹೊಡೆದಂತೆ ಮುಖದೆದುರು ಹೇಳಲು ಅಷ್ಟೇ ಪ್ರಮಾಣದ ಆತ್ಮಸ್ಥೈರ್ಯವೂ ಬೇಕು.
ಕೊನೆಯದಾಗಿ: ಟ್ರಂಪ್ ಮಾಡಿದ ಅಥವಾ ಮುಂದೆ ಮಾಡುವ ಕೆಲವು ಘೋಷಣೆಗಳಿಂದ ಭಾರತಕ್ಕೂ ಸಮಸ್ಯೆ ಆಗಬಹುದು. ಹೀಗಾಗಿ ನಾನು ಟ್ರಂಪ್ ಹಾಗೂ ಅಮೆರಿಕದ ಜಪವನ್ನು ಖಂಡಿತ ಮಾಡುತ್ತಿಲ್ಲ. ಬದಲಾಗಿ ನಮ್ಮ ದೇಶದ ರಾಜಕೀಯ ಪಕ್ಷ ಹಾಗೂ ನಾಯಕರಿಗೆ ಯಾವತ್ತು ಈ ರೀತಿ ತನ್ನ ದೇಶ ಹಾಗೂ ಮತದಾರರ ಮೇಲೆ ನಿಷ್ಠೆ ಬರಲಿದೆ, ನುಡಿದಂತೆ ನಡೆದುಕೊಳ್ಳುತ್ತಾರೆ ಎನ್ನುವ ಕುತೂಹಲದೊಂದಿಗೆ ಟ್ರಂಪ್ ಘೋಷಣೆಯನ್ನು ನೋಡುತ್ತಿದ್ದೇನೆಯಷ್ಟೆ.
- ರಾಜೀವ್ ಹೆಗಡೆ, ಲೇಖಕ
