ಕರ್ನಾಟಕದ ಜನಪ್ರತಿನಿಧಿಗಳಿಗೆ ತಮಿಳುನಾಡು ರಸ್ತೆಯಲ್ಲಿ ಮೂಗು ಸವೆಸಬೇಕು; ರಾಜೀವ ಹೆಗಡೆ ಬರಹ
ಕರ್ನಾಟಕದ ರಸ್ತೆಗಳಿಗೆ ಹೋಲಿಸಿದರೆ ತಮಿಳುನಾಡು ರಸ್ತೆಗಳು ಎಷ್ಟೋ ಉತ್ತಮ. ಅಲ್ಲಿನ ಸಾಕಷ್ಟು ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ಸಿಕ್ಕಿದೆ. ಆದರೆ ಕರ್ನಾಟಕದಲ್ಲಿ ಪರಿಸ್ಥಿತಿ ಆ ರೀತಿ ಇಲ್ಲ. ಇಲ್ಲಿನ ಜನಪ್ರತಿನಿಧಿಗಳಿಗೆ ತಮಿಳುನಾಡು ರಸ್ತೆಯಲ್ಲಿ ಮೂಗು ಸವೆಸಬೇಕು ಎಂದು ಲೇಖಕ ರಾಜೀವ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. (ಬರಹ: ರಾಜೀವ ಹೆಗಡೆ)

ತಾಲೂಕು, ಜಿಲ್ಲೆಗಳಿಗೆ ಆರಿಸಿ ಬರುವ ಬಹುತೇಕ ಜನಪ್ರತಿನಿಧಿಗಳು ಅಭಿವೃದ್ಧಿಗಿಂತ ಹೆಚ್ಚಾಗಿ ವೈಯಕ್ತಿಕ ಲಾಭವನ್ನೇ ಎದುರು ನೋಡುತ್ತಾರೆ. ಚುನಾವಣೆಗೂ ಮುನ್ನ ಕೈ ಮುಗಿದು ಮತ ಕೇಳುವ ರಾಜಕಾರಣಿಗಳು, ಗೆದ್ದ ನಂತರ ಜನರ ಕಷ್ಟಗಳನ್ನು ಕೇಳುವ ಸೌಜನ್ಯ ತೋರುವುದಿಲ್ಲ. ಆದರೆ ಕೆಲವೊಂದು ರಾಜ್ಯಗಳಲ್ಲಿ ಕೆಲವು ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾರೆ. ಅಭಿವೃದ್ಧಿಗೆ ಪ್ರಯತ್ನಿಸುತ್ತಾರೆ. ಕರ್ನಾಟಕಕ್ಕೆ ಹೋಲಿಸಿದರೆ ತಮಿಳುನಾಡಿನ ರಸ್ತೆಗಳು ಉತ್ತಮ ಸ್ಥಿತಿಯಲ್ಲಿದೆ ಎಂದು ಲೇಖಕ ರಾಜೀವ್ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದೇ ವಿಚಾರವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರ ಪೋಸ್ಟನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ. ಇಲ್ಲಿಂದಾಚೆಗೆ ಇರುವುದು ಮಧುಸೂಧನ್ ಅವರ ಬರಹ.
ಯಾವುದೇ ರಾಜ್ಯ ಅಥವಾ ಪ್ರದೇಶಕ್ಕೆ ಭೇಟಿ ನೀಡಿದಾಗ, ಅಲ್ಲಿಯ ರಸ್ತೆಗಳು ಸ್ಥಳೀಯ ಜನಪ್ರತಿನಿಧಿ ಹಾಗೂ ಸರ್ಕಾರದ ಕಾರ್ಯನಿಷ್ಠೆಗೆ ಕನ್ನಡಿ ಹಿಡಿಯುವಂತಿರುತ್ತದೆ. ನೀವು ಸಂಚರಿಸುವ ರಸ್ತೆಯಲ್ಲಿ ಹೊಂಡಗಳು ಕಾಣಿಸುತ್ತಿವೆಯೆಂದರೆ ಅಲ್ಲೊಬ್ಬ ಅಸಮರ್ಥ ಜನ ಪ್ರತಿನಿಧಿ ಇದ್ದಾನೆ ಎಂದು ಯಾವುದೇ ಸಂದೇಹವಿಲ್ಲದೇ ಹೇಳಬಹುದು. ಇಂತಹ ಕಿತ್ತುಹೋದ ರಸ್ತೆಗೆ ಟೋಲ್ ಸಂಗ್ರಹವಾಗುತ್ತಿದೆಯೆಂದರೆ ಲೂಟಿಕೋರ ಜನಪ್ರತಿನಿಧಿಯನ್ನು ಅಲ್ಲಿಯ ಜನ ಹೊಂದಿದ್ದಾರೆ ಎಂದು ನಿಸ್ಸಂಶಯವಾಗಿ ಷರಾ ಹಾಕಬಹುದು.
ತಮಿಳುನಾಡು ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ
ಹೀಗಿರುವಾಗ, ಕರ್ನಾಟಕದ ಕಿತ್ತುಹೋದ ರಾಷ್ಟ್ರೀಯ ಹಾಗೂ ಸ್ಥಳೀಯ ರಸ್ತೆಗಳಲ್ಲಿ ಓಡಾಡಿದ್ದ ನನಗೆ ತಮಿಳುನಾಡು ರಸ್ತೆಗಳು ನಿಜವಾಗಿಯೂ ʼನೈಸ್ʼ ಆಗಿ ಕಾಣಿಸಿತು. ಐದು ದಿನಗಳ ಕಾಲ ಸುಮಾರು 1400 ಕಿ.ಮೀ ದೂರವನ್ನು ತಮಿಳುನಾಡಿನಲ್ಲಿ ಕ್ರಮಿಸಿದ್ದೇನೆ. ಅದರಲ್ಲಿ ಮಧುರೈ, ರಾಮೇಶ್ವರಂ, ಕುಂಭಕೋಣಂ ನಗರದೊಳಗಿನ ಸ್ವಲ್ಪ ರಸ್ತೆ ಬಿಟ್ಟರೆ ಎಲ್ಲಿಯೂ ನಮಗೆ ಕಚ್ಚಾ ರಸ್ತೆಯೇ ಸಿಕ್ಕಿಲ್ಲ. ನಾವು ಪ್ರಯಾಣಿಸಿದ ಕೆಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದಲ್ಲೂ, ಅತ್ಯುತ್ತಮವಾದ ಸರ್ವಿಸ್ ರಸ್ತೆಯ ಸೌಕರ್ಯ ನೀಡಲಾಗಿತ್ತು. ಹೀಗಾಗಿ ನಮ್ಮ ಒಟ್ಟಾರೆ ಪ್ರಯಾಣದಲ್ಲಿ ಕಚ್ಚಾ ರಸ್ತೆ ಸಿಕ್ಕಿರುವುದು 15-20 ಕಿ.ಮೀಗೆ ಸೀಮಿತವಾಗಿರಬಹುದು. ಅದೇ ಕರ್ನಾಟಕದಲ್ಲಿ ನೂರು ಕಿ.ಮೀ ದೂರವನ್ನು ಉತ್ತಮ ರಸ್ತೆಯಲ್ಲಿ ಚಲಿಸಲು ಆಗದು. ತಮಿಳುನಾಡಿನ ಈ ರಸ್ತೆಗಳಲ್ಲಿ ಪ್ರಯಾಣಿಸುವಾಗ ನಾನು ಮೂರು ಅಂಶಗಳನ್ನು ಗಮನಿಸಿದೆ.
ಮೊದಲನೇಯದು, ಅಲ್ಲಿನ ಸಾಕಷ್ಟು ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿಯ ಮಾನ್ಯತೆ ಸಿಕ್ಕಿದೆ. ಹೀಗಾಗಿ ಎರಡು ಪಥದ ಅದೆಷ್ಟೋ ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿಯ ಟ್ಯಾಗ್ ಹಾಗೂ ಟೋಲ್ ಸಂಗ್ರಹವಾಗುತ್ತದೆ. ದ್ವಿಪಥದ ರಸ್ತೆಯಾಗಿದ್ದರೂ ಸಾಕಷ್ಟು ಅಗಲದ ಜತೆಗೆ ಗುಣಮಟ್ಟವನ್ನು ಹೊಂದಿವೆ. ಹಾಗಂದ ಮಾತ್ರಕ್ಕೆ ರಾಜ್ಯ ಹೆದ್ದಾರಿಗಳ ಗುಣಮಟ್ಟ ಕೆಟ್ಟದಾಗಿದೆಯೆಂದೂ ಅಲ್ಲ.
ಎರಡನೇಯದು, ಇನ್ನೂ ಅಪೂರ್ಣವಾಗಿರುವ ಹಲವು ರಾಷ್ಟ್ರೀಯ ಹೆದ್ದಾರಿಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿಲ್ಲ. ಒಂದೆರಡು ಸೇತುವೆ ಕಾಮಗಾರಿ ಅಥವಾ ಇನ್ನಿತರ ಸಣ್ಣ ಕೆಲಸವಿದ್ದರೂ ಟೋಲ್ ಸಂಗ್ರಹವನ್ನು ಎನ್‌ಎಚ್‌ಎಐ ಮಾಡುತ್ತಿಲ್ಲ.
ಮೂರನೇಯದು, ಕಾಮಗಾರಿಗಳು ನಡೆಯುತ್ತಿರುವ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆಗಳ ಗುಣಮಟ್ಟವನ್ನು ಉತ್ತಮವಾಗಿ ಕಾಪಾಡಿಕೊಳ್ಳಲಾಗಿದೆ. ಅಲ್ಲಿಯೂ ಹೊಂಡಗಳು ಸಿಗುವುದು ತೀರಾ ವಿರಳ ಎನ್ನಬಹುದು.
ಹೀಗಂದ ಮಾತ್ರಕ್ಕೆ ಈ ರಸ್ತೆಗಳಲ್ಲಿ ಯಾವುದೇ ಸಮಸ್ಯೆಯಿಲ್ಲವೆಂದಲ್ಲ. ತಮಿಳುನಾಡಿನ ರಸ್ತೆಗಳಲ್ಲಿ ಹಂಪ್ಸ್‌ಗಳು ಅಷ್ಟಾಗಿ ಸಿಗುವುದಿಲ್ಲ. ಆದರೆ ಪದೇಪದೆ ಬ್ಯಾರಿಕೇಡ್‌ಗಳು ವಾಹನ ಚಾಲಕರಿಗೆ ಅತಿಯಾಗಿ ಕಾಡುತ್ತದೆ. ಹಾಗೆಯೇ ಅಲ್ಲಿಯ ರಸ್ತೆಗಳಲ್ಲಿ ಲಾರಿ ಮತ್ತು ಬೈಕ್‌ಗಳ ಬಗ್ಗೆ ಅತಿಯಾದ ಎಚ್ಚರಿಕೆ ವಹಿಸಬೇಕಾಗುತ್ತದೆ.
ಈ ವ್ಯತ್ಯಾಸಕ್ಕೆ ಕಾರಣವೇನು?
ಕೇಂದ್ರ ಸರ್ಕಾರವನ್ನು ಕರ್ನಾಟಕದಿಂದ ಪ್ರತಿನಿಧಿಸುವ ಅಥವಾ ಈ ಹಿಂದೆ ಪ್ರತಿನಿಧಿಸಿದ ಸಚಿವರ ಇಚ್ಛಾಶಕ್ತಿ ಕೊರತೆಯಿಂದ ನಮ್ಮಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಪ್ರಮಾಣ ಕಡಿಮೆ ಇರಬಹುದು ಅಥವಾ ಇರುವ ರಸ್ತೆಗಳ ಗುಣಮಟ್ಟ ಕೂಡಾ ಕಡಿಮೆ ಎನ್ನಬಹುದು. ಆದರೆ ಇದಕ್ಕಿಂತ ಇನ್ನೊಂದು ಗಂಭೀರವಾದ ವಿಚಾರವಿದೆ. ಕರ್ನಾಟಕದ ರೀತಿಯಲ್ಲಿ ತಮಿಳುನಾಡಿನಲ್ಲೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕವೇ ಟೋಲ್ ಸಂಗ್ರಹವಾಗುತ್ತದೆ. ಆದಾಗ್ಯೂ ಅಪೂರ್ಣವಾಗಿರುವ ಹತ್ತಾರು ರಸ್ತೆಗಳಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಉದಾಹರಣೆಗೆ ತುಮಕೂರು-ಕೆ.ಬಿ ಕ್ರಾಸ್‌ನಲ್ಲಿ ನಿರ್ಮಾಣವೇ ಆಗದ ರಸ್ತೆಗೆ ₹60 ಟೋಲ್ ಸಂಗ್ರಹಿಸಲಾಗುತ್ತಿದೆ.
ಮಂಗಳೂರು-ಕಾರವಾರ ಮಾರ್ಗದಲ್ಲಿ ಮುಖ್ಯಮಂತ್ರಿ ಎಚ್ಚರಿಕೆಯ ಹೊರತಾಗಿಯೂ ಕಾಮಗಾರಿ ಮುಗಿಸದೇ ಟೋಲ್ ವಸೂಲಿ ಆಗುತ್ತಿದೆ. ಎರಡೂ ರಾಜ್ಯದಲ್ಲಿರುವುದು ಎನ್‌ಎಚ್‌ಎಐ ಆಗಿದ್ದರೂ, ಅವರಿಗೆ ಮೂಗು ದಾರ ಹಾಕುವ ಸ್ಥಳೀಯ ಸರ್ಕಾರ ಅಥವಾ ಜವಾಬ್ದಾರಿಯುತ ಜನಪ್ರತಿನಿಧಿಗಳನ್ನು ಹೊಂದುವ ಪುಣ್ಯವನ್ನು ನಾವು ಕನ್ನಡಿಗರು ಮಾಡಿಲ್ಲ ಎನ್ನುವುದು ದಿಟವಾಗುತ್ತದೆ. ಇಲ್ಲವಾದಲ್ಲಿ ಒಂದೇ ಸಂಸ್ಥೆಯು ಬೇರೆ ಬೇರೆ ರಾಜ್ಯದಲ್ಲಿ ವಿಭಿನ್ನವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿರಲಿಲ್ಲ. ಗುತ್ತಿಗೆದಾರರೊಂದಿಗೆ ನಮ್ಮ ಸರ್ಕಾರ ಅಥವಾ ಜನಪ್ರತಿನಿಧಿಗಳು ಅಷ್ಟೊಂದು ʼಉತ್ತಮʼ ಸಂಬಂಧ ಹೊಂದಿರುವ ಕಾರಣದಿಂದ ಕಾಮಗಾರಿ ಮುಗಿಯದೇ ಟೋಲ್ ಪಡೆದರೂ, ಕಾಮಗಾರಿ ಮಾಡುವಾಗ ಉತ್ತಮ ಸರ್ವಿಸ್ ರಸ್ತೆ ನೀಡದಿದ್ದರೂ ತಲೆ ಕೆಡಿಸಿಕೊಳ್ಳುವುದಿಲ್ಲ.
ಸಂಚಾರ ನಿಯಮ ಪಾಲನೆ!
ನಾವು ಐದು ದಿನ ತಮಿಳುನಾಡಿನಲ್ಲಿ ಸಂಚರಿಸುವಾಗ ಒಮ್ಮೆಯೂ ಕಾರನ್ನು 100 ಕಿಮೀ/ಗಂ ವೇಗಕ್ಕಿಂತ ಹೆಚ್ಚು ಓಡಿಸಿಲ್ಲ. ಆ ರಾಜ್ಯದ ಹಲವು ಹೆದ್ದಾರಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಸಂಚಾರ ನಿಯಮ ಉಲ್ಲಂಘನೆಯ ದಂಡದ ನೋಟಿಸ್ ನಿಮ್ಮೂರಿನ ವಿಳಾಸಕ್ಕೆ ಕೂಡಲೇ ಬರುತ್ತದೆ. ಹಾಗೆಯೇ ಪ್ರವಾಸಿ ತಾಣಗಳಿಗೆ ಹೋದಾಗ ನೋ ಪಾರ್ಕಿಂಗ್ ಜಾಗದಲ್ಲಿ ವಾಹನ ನಿಲ್ಲಿಸುವಾಗಲೂ ಎಚ್ಚರಿಕೆ ವಹಿಸಿ. ಅಂದ್ಹಾಗೆ ತಮಿಳುನಾಡಿನ ಬಹುತೇಕ ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯೂ ಹೌದು.
ಪ್ರವಾಸಿಗರ ಶೋಷಣೆಯಿಲ್ಲ!
ಗೋವಾ ಹಾಗೂ ಕೇರಳಕ್ಕೆ ಕಾಲಿಡುತ್ತಿದ್ದಂತೆ ಪಕ್ಕದ ರಾಜ್ಯಗಳ ವಾಹನಗಳನ್ನು ನೋಡಿದ ಕೂಡಲೇ ವಸೂಲಿಗೆ ಕಾರಣ ಹುಡುಕುತ್ತಲೇ ಇರುತ್ತಾರೆ. ಏನೂ ಸಿಗದಿದ್ದರೆ, ವಾಹನದ ಲೈಟ್‌ನ್ನು ಚೆಕ್ ಮಾಡಿ ಹಣ ವಸೂಲಿ ಮಾಡುತ್ತಾರೆ ಎನ್ನುವ ಆರೋಪಗಳಿವೆ. ಆದರೆ ತಮಿಳುನಾಡಿನಲ್ಲಿ ನಮಗೆ ಪೊಲೀಸರು ಕಾಣಿಸಿದ್ದು ತೀರಾ ವಿರಳ. ಕೆಲವೆಡೆ ಬ್ಯಾರಿಕೇಡ್ ಹಾಕಿಕೊಂಡು ಪರಿಶೀಲಿಸುತ್ತಿದ್ದರೂ, ಪಕ್ಕದ ರಾಜ್ಯದ ವಾಹನವೆಂದು ನಿಲ್ಲಿಸಿ ಶೋಷಣೆ ಮಾಡಲಿಲ್ಲ. ಪೊಲೀಸರ ಈ ವರ್ತನೆ ಇಷ್ಟವಾಯಿತು. ಇಂತಹ ವರ್ತನೆ ಪ್ರವಾಸಿಗರ ಮನವನ್ನು ಗೆಲ್ಲುತ್ತವೆ.
