ರಾಜ್‌ಕೋಟ್ ಗೇಮಿಂಗ್ ಜೋನ್ ಅಗ್ನಿ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ; ಪರಿಹಾರ ಘೋಷಣೆ, ತನಿಖೆಗೆ ಎಸ್‌ಐಟಿ ರಚಿಸಿದ ಗುಜರಾತ್ ಸರ್ಕಾರ
ರಾಜ್‌ಕೋಟ್ ಟಿಆರ್‌ಪಿ ಗೇಮಿಂಗ್ ಜೋನ್ ಭೀಕರ ಅಗ್ನಿ ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಮೃತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಈಗಾಗಲೇ 24 ಮಂದಿ ಬೆಂಕಿಯಲ್ಲಿ ಸಜೀವ ದಹನವಾಗಿದ್ದಾರೆ. ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ ಮಿಡಿದಿದ್ದಾರೆ.

ದೆಹಲಿ: ಗುಜರಾತ್‌ನ ರಾಜ್‌ಕೋಟ್‌ನಲ್ಲಿರುವ ಟಿಆರ್‌ಪಿ ಗೇಮಿಂಗ್ ಜೋನ್‌ನಲ್ಲಿ (Rajkot TRP Gaming Zone Fire Incident) ಸಂಭವಿಸಿರುವ ಭೀಕರ ಬೆಂಕಿಯ ದುರಂತದಲ್ಲಿ ಕನಿಷ್ಠ 24 ಮಂದಿ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವದಿಯಾಗಿದೆ. ಭೀಕರ ದುರಂತಕ್ಕೆ ಸಂಬಂಧಿಸಿದಂತೆ ಗೇಮಿಂಗ್ ಜೋನ್‌ನ ಮಾಲೀಕರು ಮತ್ತು ವ್ಯವಸ್ಥಾಪಕರನ್ನು ಪೊಲೀಸರು ಬಂಧಿಸಲಾಗಿದೆ ಎಂದು ರಾಜ್‌ಕೋಟ್ ನಗರ ಪೊಲೀಸ್ ಆಯಕ್ತು ರಾಜು ಭಾರ್ಗವ ತಿಳಿಸಿದ್ದಾರೆ.
ಘಟನೆಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. "ರಾಜ್‌ಕೋಟ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಎಲ್ಲರೊಂದಿಗಾದರೂ ನನ್ನ ಆಲೋಚನೆಗಳಿವೆ. ಗಾಯಾಳುಗಳಿಗಾಗಿ ಪ್ರಾರ್ಥಿಸುತ್ತೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ಸ್ಥಳೀಯ ಆಡಳಿತವು ಕೆಲಸ ಮಾಡುತ್ತಿದೆ" ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
ರಾಜ್‌ಕೋಟ್‌ನಲ್ಲಿ ನಡೆದ ಅಗ್ನಿ ದುರಂತ ನಮ್ಮೆಲ್ಲರಿಗೂ ದುಃಖ ತಂದಿದೆ. ಸ್ವಲ್ಪ ಸಮಯದ ಹಿಂದೆ ಗುಜರಾತ್ ಸಿಎಂ ಭೂಪೇಂದ್ರ ಭಾಯಿ ಪಟೇಲ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ನೆರವು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ ನನಗೆ ತಿಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಸಿಎಂ ಭೂಪೇಂದ್ರ ಪಟೇಲ್, ಮೃತರ ಕುಟುಂಬಗಳಿಗೆ 4 ಲಕ್ಷ ರೂ ಮತ್ತು ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ಘೋಷಣೆ ಮಾಡಿರುವುದಾಗಿ ಹೇಳಿದ್ದಾರೆ. ರಾಜ್‌ಕೋಟ್ ಟಿಆರ್‌ಪಿ ಗೇಮಿಂಗ್ ಜೋನ್‌ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ. ಗಾಯಗೊಂಡವರಿಗೆ ತಕ್ಷಣದ ಚಿಕಿತ್ಸೆಗೆ ವ್ಯವಸ್ಥೆಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ" ಎಂದು ಭೂಪೇಂದ್ರ ಪಟೇಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಘಟನೆ ಸಂಬಂಧ ತನಿಖೆಗೆ ವಿಶೇಷ ತನಿಖಾ ದಳ (ಎಸ್‌ಐಟಿ)ವನ್ನು ರಚಿಸಲಾಗಿದೆ ಎಂದು ವರದಿಯಾಗಿದೆ. ಗೇಮಿಂಗ್ ಚಟುವಟಿಕೆಗಳಿಗಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಕಟ್ಟಡದಲ್ಲಿ ಸಂಜೆ 5 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಮಕ್ಕಳು ಸೇರಿದಂತೆ ಹಲವಾರು ಜನರು ಆಟಗಳನ್ನು ಆಡುತ್ತಿದ್ದರು ಎಂದು ಅವರು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಾಲ್ಕು ಅಗ್ನಿಶಾಮಕ ದಳದ ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿದವು. ತಾತ್ಕಾಲಿಕ ಕಟ್ಟಡವನ್ನು ಆವರಿಸಿದ ಬೆಂಕಿಯು ಅದರ ಕುಸಿತಕ್ಕೆ ಕಾರಣವಾಯಿತು, ಬೆಂಕಿಯನ್ನು ನಿಯಂತ್ರಿಸುವ ಅಗ್ನಿಶಾಮಕ ಇಲಾಖೆಯ ಪ್ರಯತ್ನಗಳಿಗೆ ದೊಡ್ಡ ಸವಾಲಾಯಿತು.
ಬೇಸಿಗೆ ರಜೆ ಮತ್ತು ವಾರಾಂತ್ಯದ ಕಾರಣ ಹಲವಾರು ಮಕ್ಕಳು ಸ್ಥಳದಲ್ಲಿದ್ದ ಕಾರಣ ಸಾವುನೋವುಗಳ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈವರೆಗೆ 24 ಶವಗಳನ್ನು ಹೊರ ತೆಗೆಯಲಾಗಿದೆ. ರಾಜ್‌ಕೋಟ್ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ ಎಂದು ರಾಜ್‌ಕೋಟ್ ವಲಯ 1 ರ ಉಪ ಪೊಲೀಸ್ ಆಯುಕ್ತ ಸುಧೀರ್ ದೇಸಾಯಿ ಮಾಹಿತಿ ನೀಡಿದ್ದಾರೆ.
