Rajnath Singh: ಭಾರತದ ಜಾಗತಿಕ ವಿಶ್ವಾಸಾರ್ಹತೆ ದಿನೇ ದಿನೇ ಹೆಚ್ಚುತ್ತಿದೆ: ರಾಜನಾಥ್ ಸಿಂಗ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಜಾಗತಿಕ ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾರತದ ಅಭಿಪ್ರಾಯವನ್ನು ಈಗ ಮೊದಲಿಗಿಂತಲೂ ಹೆಚ್ಚು ಗಂಭೀರವಾಗಿ ಆಲಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತದ ಬಗೆಗಿನ ಜಾಗತಿಕ ಕಲ್ಪನೆ ಬದಲಾಗುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಎತ್ತರಕ್ಕೆ ಏರಿದೆ ಎಂದು ರಾಜನಾಥ್ ಹೇಳಿದ್ದಾರೆ.
ಲಖನೌ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಜಾಗತಿಕ ವಿಶ್ವಾಸಾರ್ಹತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಭಾರತದ ಅಭಿಪ್ರಾಯವನ್ನು ಈಗ ಮೊದಲಿಗಿಂತಲೂ ಹೆಚ್ಚು ಗಂಭೀರವಾಗಿ ಆಲಿಸಲಾಗುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಉತ್ತರ ಪ್ರದೇಶದ ಲಖನೌದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್, ಭಾರತದ ಬಗೆಗಿನ ಜಾಗತಿಕ ಕಲ್ಪನೆ ಬದಲಾಗುತ್ತಿದೆ. ಜಾಗತಿಕ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಎತ್ತರಕ್ಕೆ ಏರಿದೆ. ಭಾರತದ ಅಭಿಪ್ರಾಯಗಳನ್ನು ಈಗ ಹಿಂದೆಂದಿಗಿಂತಲೂ ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುತ್ತಿದೆ ಎಂದು ಹೇಳಿದರು.
ಜಗತ್ತಿನ ಹಲವು ರಾಷ್ಟ್ರಗಳಿಗೆ ಭೇಟಿ ನೀಡುವ ಮತ್ತು ಅಲ್ಲಿನ ಜನರೊಂದಿಗೆ ಸಂವಾದ ನಡೆಸುವ ಅವಕಾಶ ನನಗೆ ಒದಗಿ ಬಂದಿದೆ. ಹೀಗೆ ಅನ್ಯ ರಾಷ್ಟ್ರಗಳಿಗೆ ಭೇಟಿ ನೀಡಿದಾಗಲೆಲ್ಲಾ ನಾನು ಅಲ್ಲಿನ ಜನರಿಂದ ಭಾರತದ ಬಗ್ಗೆ ಉತ್ತಮ ಅಭಿಪ್ರಾಯಗಳನ್ನೇ ಕೇಳಿದ್ದೇನೆ. ಅನ್ಯ ರಾಷ್ಟ್ರಗಳು ಭಾರತದ ಬಗ್ಗೆ ಹೊಂದಿರುವ ಗೌರವ ಕಂಡು ಹೆಮ್ಮೆ ಎನಿಸುತ್ತದೆ ಎಂದು ರಾಜನಾಥ್ ಸಿಂಗ್ ಇದೇ ವೇಳೆ ನುಡಿದರು.
ಮೊದಲೆಲ್ಲಾ ಭಾರತವು ಜಾಗತಿಕ ವೇದಿಕೆಯಲ್ಲಿ ತನ್ನ ಅಭಿಪ್ರಾಯ ಮಂಡಿಸಿದಾಗ ಅದರ ಕುರಿತು ಅಷ್ಟು ಮಹತ್ವ ಕೊಡುತ್ತಿರಲಿಲ್ಲ. ಬಹುಶ: ಭಾರತ ಅಷ್ಟು ಗಟ್ಟಿಯಾಗಿ ತನ್ನ ವಾದವನ್ನು ಮಂಡಿಸುತ್ತಲೇ ಇರಲಿಲ್ಲ. ಆದರೆ ಈಗ ಸನ್ನಿವೇಶ ಬದಲಾಗಿದೆ. ಜಾಗತಿಕ ವೇದಿಕೆಯಲ್ಲಿ ಭಾರತ ಮಾತನಾಡಿದಾಗಲೆಲ್ಲಾ, ಜಗತ್ತು ಅದನ್ನು ಅತ್ಯಂತ ಗಂಭೀರವಾಗಿ ಆಲಿಸುತ್ತದೆ. ಭಾರತದ ಅಭಿಪ್ರಾಯಗಳಿಗೆ ಜಾಗತಿಕ ವೇದಿಕೆಯಲ್ಲಿ ಮನ್ನಣೆ ಸಿಗುತ್ತಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಇದೆಲ್ಲಾ ಸಾಧ್ಯವಾಗಿದ್ದು ಭಾರತದ ಜನರ ಒಗ್ಗಟ್ಟು ಮತ್ತು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ದಿಟ್ಟ ನಿಲುವುಗಳಿಂದ. ಬದಲಾದ ಭಾರತ ಭವಿಷ್ಯದಲ್ಲಿ ಜಾಗತಿಕ ಭೂಪಟದಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಳ್ಳಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜನಾಥ್ ಸಿಂಗ್ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.
ಇದಕ್ಕೂ ಮೊದಲು ತಾಂಜಾನೀಯಾದ ರಕ್ಷಣಾ ಸಚಿವ ಸ್ಟೆರ್ಗೋಮೆನಾ ಲಾರೆನ್ಸ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ ರಾಜನಾಥ್ ಸಿಂಗ್, ಉಭಯ ರಾಷ್ಟ್ರಗಳ ನಡುವಿನ ರಕ್ಷಣಾ ಸಂಬಂಧ ಮತ್ತಷ್ಟು ಗಟ್ಟಿಯಾಗುವತ್ತ ಹೆಜ್ಜೆ ಇರಿಸಲಾಗಿದೆ ಎಂದು ತಿಳಿಸಿದರು. ತಾಂಜಾನೀಯಾವನ್ನು ಪಶ್ಚಿಮ ಹಿಂದೂ ಮಹಾಸಾಗರ ವಲಯದ ಪ್ರಮುಖ ಪಾಲುದಾರ ರಾಷ್ಟ್ರವನ್ನಾಗಿ ಭಾರತ ನೋಡುತ್ತದೆ. ಭಾರತ-ತಾಂಜಾನೀಯಾ ನಡುವೆ ಹೆಚ್ಚಿನ ಮಿಲಿಟರಿ ಒಪ್ಪಂದಗಳಿಗೆ ನಾವು ಒತ್ತು ನೀಡಲಿದ್ದೇವೆ ಎಂದು ರಾಜನಾಥ್ ಸಿಂಗ್ ಭರವಸೆ ನೀಡಿದರು.
ಭಾರತ-ತಾಂಜಾನೀಯಾ ನಡುವಿನ ರಕ್ಷಣಾ ಸಹಕಾರ ಮುಂಬರುವ ದಶಕಗಳಲ್ಲಿ ಗರಿಷ್ಠ ಮಟ್ಟ ತಲುಪಲಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಉಭಯ ರಾಷ್ಟ್ರಗಳ ನಡುವಿನ ಈ ರಕ್ಷಣಾ ಸಹಕಾರ ಈ ಭಾಗದ ಭದ್ರತೆಯ ವಾಗ್ದಾನವನ್ನು ಖಾತರಿಗೊಳಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ವೇಳೆ ಹೇಳಿದರು.
ವಿಭಾಗ