Ayodhya Ram Mandir: ಜನವರಿ 1, 2024ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ, ಗೃಹ ಸಚಿವ ಅಮಿತ್ ಶಾ ಘೋಷಣೆ
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಂದಿನ ವರ್ಷ ಜನವರಿ 1ರಂದು ರಾಮ ಮಂದಿರ ಸಿದ್ಧವಾಗಲಿದೆ ಎಂಧು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತ್ರಿಪುರಾದಲ್ಲಿ ಜನ ವಿಶ್ವಾಸ ಯಾತ್ರೆಯ ಭಾಷಣದಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ.
ತ್ರಿಪುರಾ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಮುಂದಿನ ವರ್ಷ ಜನವರಿ 1ರಂದು ರಾಮ ಮಂದಿರ ಸಿದ್ಧವಾಗಲಿದೆ ಎಂಧು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ತ್ರಿಪುರಾದಲ್ಲಿ ಜನ ವಿಶ್ವಾಸ ಯಾತ್ರೆಯ ಭಾಷಣದಲ್ಲಿ ಅಮಿತ್ ಶಾ ಈ ಮಾಹಿತಿ ನೀಡಿದ್ದಾರೆ. ಆದಿತ್ಯನಾಥ್ ಯೋಗಿ ಮತ್ತು ನರೇಂದ್ರ ಮೋದಿ ನೇತೃತ್ವದ ಬಿಜೆಪಿಯು ರಾಮಂದಿರ ನಿರ್ಮಾಣ ಮಾಡುತ್ತಿದ್ದು, ಮುಂದಿನ ವರ್ಷ ಆರಂಭದಲ್ಲಿಯೇ ಲೋಕಾರ್ಪಣೆಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಟ್ರೆಂಡಿಂಗ್ ಸುದ್ದಿ
ಹಿಂದಿನ ವರ್ಷದ ಸರಕಾರವು ರಾಮಮಂದಿರ ವಿಷಯದಲ್ಲಿ ಸುಳ್ಳು ಆರೋಪ ಮಾಡುತ್ತಿತ್ತು. ಆದರೆ, ಕೋರ್ಟ್ ತೀರ್ಪು ನೀಡಿದ ದಿನವೇ ಮೋದಿ ಸರಕಾರವು ರಾಮಮಂದಿರದ ಕೆಲಸವನ್ನು ಆರಂಭಿಸಿದೆ. ಮುಂದಿನ ವರ್ಷದ ಜನವರಿ ತಿಂಗಳಲ್ಲಿ ಶ್ರೀರಾಮ ಮಂದಿರ ಸಿದ್ಧವಾಗಲಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಲಭ್ಯವಾದ ಮಾಹಿತಿ ಪ್ರಕಾರ ರಾಮಮಂದಿರದ ಶೇಕಡ 50ರಷ್ಟು ಕೆಲಸಗಳು ಪೂರ್ಣಗೊಂಡಿದ್ದವು. "ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೇ.50ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿತ್ತು. ಅಲ್ಲದೇ ಡಿಸೆಂಬರ್ 2023ರಲ್ಲಿ ಗರ್ಭಗುಡಿ ಮತ್ತು ಮಂದಿರದ ಮೊದಲನೇ ಮಹಡಿ ಸಂಪೂರ್ಣವಾಗಿ ಸಿದ್ಧಗೊಳ್ಳಲಿದೆ ಎಂದೂ ಟ್ರಸ್ಟ್ ಮಾಹಿತಿ ನೀಡಿತ್ತು.
ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, 2024ರ ಜನವರಿಯಲ್ಲಿ ಗರ್ಭಗುಡಿಯಲ್ಲಿ ಪ್ರಭು ಶ್ರೀರಾಮನನ್ನು ಸ್ಥಾಪಿಸಲಾಗುವುದು ಎಂದು ಹೇಳಿದ್ದರು.
'ಸಿಂಗ್ ದ್ವಾರ್' ಎಂದು ಕರೆಯಲ್ಪಡುವ ರಾಮ ಮಂದಿರದ ಮುಖ್ಯ ದ್ವಾರ ಬಹುತೇಕ ಪೂರ್ಣಗೊಂಡಿದ್ದು, ಮಂದಿರದ 2.77 ಎಕರೆ ಪ್ರದೇಶದಲ್ಲಿ ಗ್ರ್ಯಾನೈಟ್ ಕಲ್ಲಿನಿಂದ ನಿರ್ಮಿಸಿದ ಒಟ್ಟು 392 ಕಂಬಗಳು ತಲೆಎತ್ತಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿತ್ತು.
ಮಂದಿರಕ್ಕೆ ಒಟ್ಟು 12 ಪ್ರವೇಶ ದ್ವಾರಗಳಿದ್ದು, ಎಲ್ಲಾ ಪ್ರವೇಶ ದ್ವಾರಗಳನ್ನು ತೇಗದ ಮರದಲ್ಲಿ ಮಾಡಲಾಗಿದೆ. ಅಲ್ಲದೇ ಸಂಪೂರ್ಣ ಮಂದಿರ ಭೂಕಂಪನ ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಗರ್ಭಗುಡಿಯಲ್ಲಿ 160 ಮತ್ತು ಮೊದಲ ಮಹಡಿಯಲ್ಲಿ 132 ಬೃಹತ್ ಕಂಬಗಳು ಇರಲಿವೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿತ್ತು.
ಮಂದಿರದ ಒಳಾಂಗಣದಲ್ಲಿ ಒಟ್ಟು ಐದು ಮಂದಿರಗಳನ್ನು ನಿರ್ಮಿಸಲಾಗುತ್ತಿದ್ದು, ಪಂಚದೇವ, ಸೂರ್ಯದೇವ ಹಾಗೂ ವಿಷ್ಣುದೇವ ಮಂದಿರಗಳನ್ನೂ ನಿರ್ಮಾಣ ಮಾಡಲಾಗುತ್ತಿದೆ. ಮಂದಿರಕ್ಕೆ ಸೂಕ್ತ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ನೀಡಿರುವ ಸಲಹೆಗಳನ್ನು ಚಾಚೂ ತಪ್ಪದೇ ಪಾಲಿಸಲಾಗುತ್ತಿದೆ. ಅಲ್ಲದೇ ಮಂದಿರ ಸಂಪೂರ್ಣ ಸಿದ್ಧವಾದ ಮೇಲೆ ಪ್ರವಾಸಿಗರ ಸಂಖ್ಯೆ ಹೆಚ್ಚಲಿದ್ದು, ಅಗತ್ಯ ಭಧ್ರತಾ ಕ್ರಮಗಳನ್ನು ಕೈಗೊಳ್ಳಲು ಪ್ರಧಾನಿ ಮೋದಿ ಸೂಚಿಸಿದ್ದಾರೆ ಎಂದು ಚಂಪತ್ ರಾಯ್ ತಿಳಿಸಿದ್ದರು.