ಅಯೋಧ್ಯೆಯಲ್ಲಿ ರಾಮ ನವಮಿ; 500 ವರ್ಷಗಳ ಬಳಿಕ ರಾಮಮಂದಿರದಲ್ಲಿ ರಾಮಜನ್ಮೋತ್ಸವ ಆಚರಣೆ, 50 ಕ್ವಿಂಟಾಲ್ ಹೂ ಅಲಂಕಾರ, ಸೂರ್ಯ ತಿಲಕ ವಿಶೇಷ
ಭಾರತದ ಉದ್ದಗಲಕ್ಕೂ ಈ ಸಲದ ರಾಮನವಮಿ ವಿಶೇಷ. ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮ ವಿರಾಜಮಾನನಾದ ಬಳಿಕದ ಮೊದಲ ರಾಮನವಮಿ ಇದು. 500 ವರ್ಷಗಳ ಬಳಿಕ ರಾಮಮಂದಿರದಲ್ಲಿ ರಾಮಜನ್ಮೋತ್ಸವ ಆಚರಣೆ ನಡೆಯುತ್ತಿದ್ದು, ಕ್ವಿಂಟಾಲ್ ಹೂ ಅಲಂಕಾರ, ಸೂರ್ಯ ತಿಲಕ ವಿಶೇಷ ಗಮನಸೆಳೆಯುತ್ತಿವೆ. ಅಯೋಧ್ಯೆ ರಾಮನವಮಿ ಆಚರಣೆ ಕುರಿತ ವಿವರ ವರದಿ ಇಲ್ಲಿದೆ.
ಲಖನೌ: ಅಯೋಧ್ಯೆ ಶ್ರೀ ರಾಮ ಜನ್ಮಭೂಮಿಯ ರಾಮ ಮಂದಿರದಲ್ಲಿ 500 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಮ ನವಮಿ ಆಚರಣೆಗೆ ಸಜ್ಜಾಗುತ್ತಿದೆ. ನೂತನ ರಾಮ ಮಂದಿರ ಇದೇ ವರ್ಷ ಜನವರಿ 22 ರಂದು ಲೋಕಾರ್ಪಣೆಯಾಗಿದ್ದು, ರಾಮಲಲಾ (ಬಾಲರಾಮ) ವಿರಾಜಮಾನನಾದ ಬಳಿಕ ನಡೆಯುತ್ತಿರುವ ಮೊದಲ ರಾಮನವಮಿ ಇದು. ಆದ್ದರಿಂದ ಅಯೋಧ್ಯೆಯಲ್ಲಿ ವಿಶೇಷ ಸಿದ್ಧತೆಗಳು ಭರದಿಂದ ಸಾಗಿದೆ. ರಾಮ ನವಮಿ ಎಂದರೆ ಶ್ರೀರಾಮನ ಜನ್ಮೋತ್ಸವ ಆಚರಣೆ.
ಈಗಾಗಲೇ ಹಿಂದುಗಳ ಹೊಸ ವರ್ಷ ಕ್ರೋಧಿ ನಾಮ ಸಂವತ್ಸರ ಶುರುವಾಗಿದೆ. ಏಪ್ರಿಲ್ 9 ರಿಂದ ಚೈತ್ರ ನವರಾತ್ರಿ ಆಚರಣೆಯೂ ಆರಂಭವಾಗಿದೆ. ಆದರೆ ಈ ಬಾರಿ ರಾಮ ನವಮಿ ಮತ್ತು ದುರ್ಗಾ ನವಮಿ ಏಪ್ರಿಲ್ 17ಕ್ಕೆ ನಡೆಯಲಿದೆ. ಭಾರತದಾದ್ಯಂತ ಶ್ರೀ ರಾಮ ನವಮಿ ಆಚರಣೆ ನಡೆಯುತ್ತಿದ್ದು, ಮನೆ ಮನೆಗಳಲ್ಲಿ ಈ ಬಾರಿ ಆಚರಣೆಯ ಹುಮ್ಮಸ್ಸು ಕಂಡುಬಂದಿದೆ.
ಅಯೋಧ್ಯೆ ರಾಮನವಮಿ; 50 ಕ್ವಿಂಟಾಲ್ ಹೂಗಳ ಅಲಂಕಾರ
ರಾಮನವಮಿ ಆಚರಣೆ ನಿಮಿತ್ತ ಅಯೋಧ್ಯೆ ರಾಮಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಶಾಸ್ತ್ರೀಯ ಗಾಯಕರು ಭಾವಗೀತಿ, ಭಜನೆ ಹಾಡುಗಳು ಮತ್ತು ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ದೇವಾಲಯವನ್ನು ಕೂಡ ವಿಶೇಷ ರೀತಿಯಲ್ಲಿ ಅಲಂಕರಿಸಲಾಗುತ್ತಿದೆ. 50 ಕ್ವಿಂಟಾಲ್ ದೇಶಿ ಹಾಗೂ ವಿದೇಶಿ ಹೂವುಗಳಿಂದ ದೇವಾಲಯವನ್ನು ಅಲಂಕರಿಸಲಾಗುತ್ತಿದೆ.
ಗರ್ಭಗುಡಿಯ ಜೊತೆಗೆ ಹೊರಗೋಡೆ, ಮೆಟ್ಟಿಲು, ಐದು ಮಂಟಪಗಳನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತಿದೆ. ಇದಲ್ಲದೆ ಸೇವಂತಿಗೆ, ಮಾರಿಗೋಲ್ಡ್ ಮತ್ತು ಗುಲಾಬಿ ಹೂವುಗಳಿಂದ ಜನ್ಮಸ್ಥಳದ ಮಾರ್ಗ ಮತ್ತು ಪ್ರವೇಶ ದ್ವಾರವನ್ನು ಅಲಂಕರಿಸಲಾಗುತ್ತಿದೆ. ರಾಮ ಮಂದಿರದ ಜೊತೆಗೆ ಕನಕ ಭವನ ಮತ್ತು ಹನುಮಂತನಗರವನ್ನು ಅದ್ಧೂರಿಯಾಗಿ ಅಲಂಕರಿಸಲಾಗುತ್ತಿದೆ ಎಂದು ಮಂದಿರದ ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಬಾಲರಾಮನ ಹಣೆಗೆ ಸೂರ್ಯತಿಲಕ
ಶ್ರೀ ರಾಮ ಜನ್ಮದಿನೋತ್ಸವ ಸಂದರ್ಭದಲ್ಲಿ ಏಪ್ರಿಲ್ 17 ರಂದು ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣಗಳ ತಿಲಕ ರಾಮಲಲಾ (ಬಾಲರಾಮ)ನ ಹಣೆಯಲ್ಲಿ ರಾರಾಜಿಸಲಿದೆ. ಸೂರ್ಯನ ಕಿರಣಗಳು ರಾಮಲಲಾ ಅವರ ಮುಖದ ತೇಜಸ್ಸನ್ನು ಹೆಚ್ಚಿಸಲಿದೆ. ಈ ಸೂರ್ಯ ತಿಲಕವು 75 ಮಿ.ಮೀ. ಆಕಾರದಲ್ಲಿ ಇರಲಿದ್ದು, ಈಗಾಗಲೇ ಅಣಕು ಪ್ರಯೋಗ ಯಶಸ್ವಿಯಾಗಿದೆ. ಬಾಲರಾಮನ ಹಣೆಯ ಮೇಲೆ ಇದು 4 ರಿಂದ 6 ನಿಮಿಷಗಳ ಕಾಲ ಗೋಚರಿಸಲಿದೆ.
ರಾಮ ನವಮಿ ಸಂದರ್ಭದಲ್ಲಿ ಲಕ್ಷಾಂತರ ಭಕ್ತರು ರಾಮಮಂದಿರಕ್ಕೆ ಬರಬಹುದು. ರಾಮಮಂದಿರಕ್ಕೆ ಬರಲು ಸಾಧ್ಯವಾಗದವರು ಮನೆಯಲ್ಲಿದ್ದುಕೊಂಡೇ, ರಾಮ ಮಂದಿರದಲ್ಲಿ ನಡೆಯುವ ರಾಮನವಮಿ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಬಹುದು. ಪ್ರಸಾರ ಭಾರತಿ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಿದೆ. ಇದೇ ವೇಳೆ, ಅಯೋಧ್ಯಾ ನಗರದಲ್ಲಿ 100ಕ್ಕೂ ಹೆಚ್ಚು ಎಲ್ ಇಡಿ ಟಿವಿಗಳನ್ನು ಅಳವಡಿಸಲಾಗುತ್ತಿದೆ. ಲೈವ್ ಟೆಲಿಕಾಸ್ಟ್ ಮೂಲಕ, ರಾಮ ಭಕ್ತರು ಮನೆಯಲ್ಲಿ ಕುಳಿತು ರಾಮಲಲಾ ಆಸ್ಥಾನದ ದರ್ಶನ ಮಾಡಬಹುದು ಎಂದು ಆಡಳಿತ ಮಂಡಳಿ ಮೂಲಗಳು ತಿಳಿಸಿವೆ.
ಅಯೋಧ್ಯೆ ಹವಾಮಾನ ಹೀಗಿದೆ ಗಮನಿಸಿ
ಉತ್ತರ ಭಾರತದಾದ್ಯಂತ ಬಿಸಿಲಿನ ತಾಪ ಹೆಚ್ಚಾಗಿದೆ. ಅನೇಕ ಕಡೆಗಳಲ್ಲಿ ಬಿಸಿಗಾಳಿ, ಉಷ್ಣ ಅಲೆಗಳ ಸಂಕಷ್ಟ ಉಂಟಾಗಿದೆ. ಅಯೋಧ್ಯೆಯಲ್ಲೂ ಬಿಸಿಲಿನ ಝಳ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರನ್ನು ಬಿಸಿಲ ತಾಪದಿಂದ ರಕ್ಷಿಸಲು 600 ಮೀಟರ್ ಉದ್ದದ ಟೆಂಟ್ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ಸಮಯದಲ್ಲಿ, ಬಿಸಿ ನೆಲವನ್ನು ತಪ್ಪಿಸಲು, ಹೆಚ್ಚು ಹೆಚ್ಚು ಪ್ರದೇಶಗಳಲ್ಲಿ ಚಾಪೆಗಳನ್ನು ಹಾಕಲಾಗುತ್ತಿದೆ. ಇದಲ್ಲದೇ 50ಕ್ಕೂ ಹೆಚ್ಚು ಕಡೆ ಕುಡಿಯುವ ನೀರು, ಒಆರ್ ಎಸ್ ಪೌಡರ್ ವ್ಯವಸ್ಥೆಯೂ ಇರಲಿದೆ ಎಂದು ಟ್ರಸ್ಟ್ ಮೂಲಗಳು ತಿಳಿಸಿವೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ವಿಭಾಗ