ಅಮೆರಿಕ ಪೌರತ್ವ ರದ್ದು ಮಾಡುವುದರಿಂದ ಭಾರತೀಯರಿಗೆ ಸದ್ಯಕ್ಕೆ ಯಾವ ನಷ್ಟವೂ ಇಲ್ಲ; ರಂಗಸ್ವಾಮಿ ಮೂಕನಹಳ್ಳಿ ಬರಹ
ಅಮೆರಿಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಡೊನಾಲ್ಡ್ ಟ್ರಂಪ್, ಅಕ್ರಮ ವಲಸಿಗರಿಗೆ ಜನ್ಮದತ್ತ ಪೌರತ್ವ ರದ್ದುಪಡಿಸಿದ್ದಾರೆ. ಈ ವಿಚಾರ ಬಹಳ ಸದ್ದು ಮಾಡುತ್ತಿದೆ. ಈ ನಿರ್ಧಾರ ವಿರೋಧಿಸಿ ಅಮೆರಿಕದ 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಚಾರವಾಗಿ ರಂಗಸ್ವಾಮಿ ಮೂಕನಹಳ್ಳಿ ಹಂಚಿಕೊಂಡಿರುವ ಪೋಸ್ಟ್ ಇಲ್ಲಿದೆ.

ಅಮೆರಿಕ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿದ್ದಾರೆ. ಟ್ರಂಪ್ 2017 ರಲ್ಲಿ ಮೊದಲ ಬಾರಿಗೆ ಅಮೆರಿಕ ಅಧ್ಯಕ್ಷರಾಗಿದ್ದರು, ಇದೀಗ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರಿಗೆ ಜನ್ಮದತ್ತ ಪೌರತ್ವ ರದ್ದುಪಡಿಸಿದ್ದಾರೆ.
ಕಳೆದ ವರ್ಷ ಚುನಾವಣಾ ಪ್ರಚಾರದ ಸಮಯದಲ್ಲೇ ಟ್ರಂಪ್ ಇದರ ಬಗ್ಗೆ ಹೇಳಿದ್ದರು, ಇದೀಗ ಹೇಳಿದಂತೆ ಆದೇಶಕ್ಕೆ ಸಹಿ ಮಾಡಿದ್ದಾರೆ. ಟ್ರಂಪ್ ಆದೇಶಕ್ಕೆ ತಡೆ ನೀಡಬೇಕು ಎಂದು ಅಮೆರಿಕದ 22 ರಾಜ್ಯಗಳ ಅಟಾರ್ನಿ ಜನರಲ್‌ಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಲೇಖಕ ರಂಗಸ್ವಾಮಿ ಮೂಕನಹಳ್ಳಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿಂದಾಚೆಗೆ ಇರುವುದು ರಂಗಸ್ವಾಮಿ ಮೂಕನಹಳ್ಳಿ ಅವರ ಫೇಸ್‌ಬುಕ್ ಪೋಸ್ಟ್.
ಟ್ರಂಪ್ ಶಕೆ 2.0 ; ಟ್ರಂಪಾಯಣ ಭಾಗ 1
ನಮ್ಮ ಟ್ರಂಪಣ್ಣ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಟಿ ಟ್ವೆಂಟಿ ಮ್ಯಾಚ್ ತರಹ ಬ್ಯಾಟಿಂಗ್ ಆಡೋಕೆ ಶುರು ಮಾಡಿದ್ದಾರೆ. ಇಡೀ ಜಗತ್ತು ಅವರತ್ತ ನೋಡುವಂತಹ ಬದಲಾವಣೆಗಳನ್ನು ತಂದಿದ್ದಾರೆ. ಅವು ಅವರ ದೇಶಕ್ಕೆ ಖಂಡಿತ ಒಳ್ಳೆಯವು. ಮೋದಿ ಸಾಹೇಬರಿಂದ ಟ್ರಂಪ್ ಪ್ರೇರಿತರಾಗಿರುವುದು ನೂರು ಪ್ರತಿಶತ ಕಣ್ಣಿಗೆ ಕಾಣುತ್ತಿದೆ. ಜಗತ್ತು ಏನೆಂದು ಕೊಳ್ಳುತ್ತೆ ಅಂತ ಕುಳಿತರೆ ಚರಿತ್ರೆ ಸೃಷ್ಟಿಸಲಾಗದು ಎನ್ನುವುದನ್ನು ಟ್ರಂಪಣ್ಣ ಮೋದಿಯವರಿಂದ ಕಲಿತ್ತಿದ್ದಾರೆ.
ಅವರು ಉಗ್ರ ರೈಟು ಕಣ್ರೀ , ಅವರು ರೈಟು ಅಂದ ಮಾತ್ರಕ್ಕೆ ಅದು ಭಾರತಕ್ಕೆ ಒಳ್ಳೆಯದು ಎನ್ನುವ ಯೋಚನೆಯಲ್ಲಿ ನೀವಿದ್ದರೆ ನಿಮ್ಮಂತಹ ಪರಮ ಸುಖಿ ಬೇರೆಯೊಬ್ಬರಿಲ್ಲ ! ಆತ ಯಾವತ್ತಿಗೂ ಅಮೇರಿಕಾ ಫಸ್ಟ್ ಎನ್ನುವ ಮನಸ್ಥಿತಿಯವರು , ಜೊತೆಗೆ ವ್ಯಾಪಾರಿ ! ಕೇಳುವುದಿನ್ನೇನು ? ಆತ ಮೊದಲ ಬಾಲಿನಲ್ಲಿ ಸಿಕ್ಸರ್ ಹೊಡೆದಿರುವುದು ಜಗತ್ತಿಗೆ ಆಶ್ಚರ್ಯ ತಂದಿದೆ. ಮುಂದಿನ್ನೇನು ಕಾದಿದೆಯೋ ಎನ್ನುವ ಭಯಕ್ಕೆ ಷೇರು ಮಾರುಕಟ್ಟೆ ಭೇದಿ ಮಾಡಿಕೊಂಡಿದೆ. ಆತ ತಂದಿರುವ ಬದಲಾವಣೆಗಳೇನು ? ಅದು ಭಾರತದ ಮೇಲೆ , ಭಾರತೀಯರ ಮೇಲೆ ಯಾವ ಪರಿಣಾಮ ಬೀರಬಹುದು ? ಎನ್ನುವುದನ್ನು ಒಂದೊಂದಾಗಿ ನೋಡೋಣ .
ಮೊದಲಿಗೆ ಸಿಟಿಜನ್ ಶಿಪ್ ಬೈ ಬರ್ತ್ ಕಾಯಿದೆ ತಿದ್ದುಪಡಿ
ನಿನ್ನೆಯ ತನಕ ಅಮೇರಿಕ ನೆಲದಲ್ಲಿ ಹುಟ್ಟಿದ ಮಗುವನ್ನು ಅಮೆರಿಕನ್ ಎಂದು ಪರಿಗಣಿಸಲಾಗುತ್ತಿತ್ತು, ಮತ್ತು ಆ ಮಗುವಿಗೆ ಹುಟ್ಟಿದ ತಕ್ಷಣ ಅಲ್ಲಿಯ ಪೌರತ್ವ ಸಿಗುತ್ತಿತ್ತು. ಸರಿ ಇದರಿಂದ ತೊಂದರೆಯೇನು ? ಟ್ರಂಪ್ ಇದರಲ್ಲಿ ಅದೇನು ತಿದ್ದುಪಡಿ ಮಾಡಿದರು ಎನ್ನುವ ಪ್ರಶ್ನೆ ನಿಮ್ಮದು ಅಲ್ವಾ ? ಅದೆಷ್ಟೇ ಮುಂದುವರಿದ ದೇಶವಾದರೂ ಕಾನೂನಿನಲ್ಲಿ ಬಹಳ ಐಬುಗಳು ಉಳಿದುಕೊಂಡು ಬಿಡುತ್ತವೆ. ಗಮನಿಸಿ ಅಮೇರಿಕ ದೇಶದಲ್ಲಿ ಇಲ್ಲಿಗಲ್, ಅಂದರೆ ಕಾನೂನು ಬಾಹಿರವಾಗಿ ಇದ್ದವರಿಗೆ ಮಗು ಜನಿಸಿದರೆ ಆ ಮಗುವನ್ನೂ ಕೂಡ ಅಮೆರಿಕನ್ ಎಂದು ಪರಿಗಣಿಸಲಾಗುತ್ತದೆ. ಅಲ್ಲಿಯ ಪೌರತ್ವ ಪಡೆದ ಮಗುವಿನ ಸಂರಕ್ಷಣೆ , ನಾವು ಆ ಮಗುವನ್ನು ಹೆತ್ತವರು ಎಂದು ಮಗುವನ್ನು ಮುಂದಿಟ್ಟು ಕೊಂಡು ಇಲ್ಲಿಗಲ್ ಇಮ್ಮಿಗ್ರೆಂಟ್ಸ್ ಕೂಡ ಇಲ್ಲಿ ಲೀಗಲ್ ಆಗುತ್ತಿದ್ದರು. ಇದರ ಜೊತೆಗೆ ಬೇರೆ ದೇಶಗಳಲ್ಲಿ ಇರುವ ಮೇಲ್ಮಧ್ಯಮ ವರ್ಗದ ಜನ ಅಮೇರಿಕಾ ವೀಸಾ ಪಡೆದು ಅಲ್ಲಿಗೆ ಹೋಗಿ ಮಗುವನ್ನು ಮಾಡಿಕೊಳ್ಳುತ್ತಿದ್ದರು. ಮಗು ಬೈ ಬರ್ತ್ ಅಮೆರಿಕನ್ ಪೌರತ್ವ ಪಡೆದುಕೊಳ್ಳುತ್ತಿತ್ತು. ಮಿಕ್ಕಿದ್ದು ನಿಮಗೆ ಗೊತ್ತಾಗಿರುತ್ತೆ. ಇಲ್ಲ ಅಂದರೆ ಒಂದು ಉದಾಹರಣೆ ಕೊಡುತ್ತೇನೆ.
ಕೇರಳ ದಂಪತಿಗಳು ಅಮೇರಿಕ ವೀಸಾ ಪಡೆದು ಅಮೆರಿಕಾಗೆ ಹೋಗುತ್ತಾರೆ ಎಂದುಕೊಳ್ಳಿ , ಎಲ್ಲರಿಗೂ ಸುಲಭವಾಗಿ ವೀಸಾ ಸಿಗುವುದಿಲ್ಲ. ಹತ್ತು ವರ್ಷದ ವಿಸಿಟ್ ವೀಸಾ ಅಮೇರಿಕಾ ಕೊಡುತ್ತದೆ. ಅಲ್ಲಿಗೆ ಹೋದವರು ಅಲ್ಲಿ ಮಕ್ಕಳನ್ನು ಮಾಡಿಕೊಂಡರೆ ಆ ಮಗು ಅಮೆರಿಕನ್ ಎನ್ನಿಸಿಕೊಳ್ಳುತ್ತದೆ. ಮಜಾ ನೋಡಿ ಪ್ರವಾಸಿಗರಾಗಿ ಅಥವಾ ತಾತ್ಕಾಲಿಕವಾಗಿ ಅಲ್ಲಿದ್ದು ಕೆಲಸ ಮಾಡದೆ ಇದ್ದರೂ ಅಲ್ಲಿ ಮಕ್ಕಳನ್ನು ಹೆತ್ತ ಕಾರಣಕ್ಕೆ ಅಮೆರಿಕನ್ ಸಿಟಿಜನ್ ಶಿಪ್ ಸಿಕ್ಕಿ ಬಿಡುತ್ತಿತ್ತು , ಯಸ್ ನಿನ್ನೆಯ ತನಕ ! (30 ದಿನ ಟೈಮ್ ಇರುತ್ತೆ , ನಂತರ ಹುಟ್ಟಿದ ಮಕ್ಕಳಿಗೆ ಇಲ್ಲ )
ಇದೆ ರೀತಿ ಶತ್ರು ದೇಶದ , ಅಮೇರಿಕ ಹಿತ ಬಯಸದ ಯಾರಾದರೂ ಅಮೆರಿಕನ್ ನೆಲದಲ್ಲಿ ಮಕ್ಕಳು ಮಾಡಿಕೊಂಡರೆ ಸಾಕಿತ್ತು , ಆ ಮಕ್ಕಳು ಅಮೆರಿಕನ್ ಆಗಿ ಬಿಡುತ್ತಿದ್ದವು ! ಈ ಹುಚ್ಚಾಟಕ್ಕೆ ಟ್ರಂಪ್ ಚರಮಗೀತೆ ಹಾಡಿದ್ದಾರೆ.
ಅಮೆರಿಕನ್ ನೆಲದಲ್ಲಿ ಹುಟ್ಟಿದ ಎಲ್ಲಾ ಮಕ್ಕಳಿಗೂ ಪೌರತ್ವ ಸುಲಭವಾಗಿ ಸಿಕ್ಕುವುದಿಲ್ಲ ಎನ್ನುವ ಕಾನೂನು ಬದಲಾವಣೆ ತಂದಿದ್ದಾರೆ. ಅದನ್ನು ನಿನ್ನೆಯಿಂದಲೇ ಜಾರಿ ಗೊಳಿಸಿದ್ದಾರೆ. ಹೀಗಾಗಿ ಪ್ರವಾಸಿಗರಾಗಿ ಹೋಗಿ ಅಲ್ಲಿ ಮಕ್ಕಳು ಮಾಡಿಕೊಂಡರೆ ಆ ಮಗುವಿಗೆ ಅಲ್ಲಿನ ಪೌರತ್ವ ದಕ್ಕುವುದಿಲ್ಲ. ಇದೇ ರೀತಿ ಇಲ್ಲಿಗಲ್ ಇಮಿಗ್ರಂಟ್ ಮಕ್ಕಳಿಗೂ ಪೌರತ್ವ ಸಿಕ್ಕುವುದಿಲ್ಲ. ಪೋಷಕರ ಬ್ಯಾಗ್ರೌಂಡ್ ಚೆಕ್ ಮಾಡಲಾಗುತ್ತದೆ. ಅಮೇರಿಕಾಕ್ಕೆ ಪರವಿಲ್ಲದವರು ಅನ್ನಿಸಿದರೆ ಪೌರತ್ವ ಸಿಕ್ಕುವುದಿಲ್ಲ.
ಕೊನೆಯಾಗಲಿದೆ ಬರ್ತ್ ಟೂರಿಸಂ
ಇಂಡಿಯಾ ಮತ್ತು ಮೆಕ್ಸಿಕೋ ದೇಶದಿಂದ ಆಗುತ್ತಿದ್ದ 'ಬರ್ತ್ ಟೂರಿಸಂ' ಕೊನೆಯಾಗುತ್ತದೆ. ಇಲ್ಲಿಗಲ್ ಇಮಿಗ್ರಂಟ್ಸ್‌ಗೆ ತೊಂದರೆಯಾಗುತ್ತದೆ. ಉಳಿದಂತೆ ಅಲ್ಲಿ ನೆಲೆಸಿರುವ ಭಾರತೀಯ ಉದ್ಯೋಗಿಗಳು H1B ಸಹಿತ ಇನ್ನಿತರ ವೀಸಾದಲ್ಲಿ ಅಲ್ಲಿರುವ ಗ್ರೀನ್ ಕಾರ್ಡ್ ಪಡೆಯಲಾಗದ ಭಾರತೀಯ ದಂಪತಿಗಳಿಗೆ ಜನಿಸುವ ಮಕ್ಕಳಿಗೆ ಆಟೋಮಾಟಿಕ್ ಪೌರತ್ವ ಸಿಕ್ಕುವುದಿಲ್ಲ. ನಿಮಗೆಲ್ಲಾ ಗೊತ್ತಿರಲಿ ಈ ಹೆಚ್ ಒನ್ ಬಿ ವೀಸಾದಲ್ಲಿ ಸಿಂಹಪಾಲು ಭಾರತೀಯರದ್ದು ! ಇವರೆಲ್ಲರಿಗೂ ತೊಂದರೆಯಾಗುತ್ತೆ. ಆದರೆ ಇದರಿಂದ ಅಮೆರಿಕಕ್ಕೆ ಲಾಭವಾಗುತ್ತೆ. ಸರಿ ಸುಮಾರು 30 ಲಕ್ಷ ಭಾರತೀಯರು ಅಮೆರಿಕನ್ ಪೌರತ್ವ ಹೊಂದಿದ್ದಾರೆ. ಈ ಬದಲಾವಣೆಯಿಂದ ಅಮೆರಿಕನ್ ಇಂಡಿಯನ್ಸ್ ಸಂಖ್ಯೆ ಕುಸಿತವಾಗುತ್ತದೆ. ಮುಂದಿನ ಎರಡು , ಮೂರು ದಶಕದಲ್ಲಿ ಭಾರತೀಯ ಅಮೆರಿಕನ್ ಸಂಖ್ಯೆ ಹೆಚ್ಚಾಗಿ ಅವರು ಅಲ್ಲಿನ ಆಯಾಕಟ್ಟಿನ ಜಾಗದಲ್ಲಿ ಕೂರುವುದಕ್ಕೆ ಟ್ರಂಪ್ ನಿರ್ಧಾರ ಕಡಿವಾಣ ಹಾಕಲಿದೆ.
ಬಟ್ ..., ಬಟ್ ... ಅದು ಅಮೇರಿಕಾ ಕಣ್ರೀ ... , ಅಮೇರಿಕಾ ! 22 ರಾಜ್ಯಗಳು ಟ್ರಂಪ್ ಈ ನಿರ್ಧಾರದ ವಿರುದ್ಧ ಆಗಲೇ ದಾವೆ ಹಾಕಿವೆ. ಮುಂದೇನಾಗುತ್ತೆ ಕಾಯ್ದು ನೋಡೋಣ. ಇದರಿಂದ ಅಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಬದಲಾವಣೆ ಆಗುತ್ತದೆ. ಭಾರತಕ್ಕೆ , ಭಾರತೀಯರಿಗೆ ಯಾವ ನಷ್ಟವೂ ಸದ್ಯಕ್ಕೆ ಇಲ್ಲ.
ಟ್ರಂಪ್ ತಂದ ಬದಲಾವಣೆಗಳು ಪಾರ್ಟ್ 2 ಗೆ ಕಾಯುವಿರಲ್ಲ !
This line is key: The executive order says the Fourteenth Amendment has always excluded from birthright citizenship persons who were born in the United States but not “subject to the jurisdiction thereof.”
ಶುಭವಾಗಲಿ, ಎಂದು ರಂಗಸ್ವಾಮಿ ಮೂಕನಹಳ್ಳಿ ಬರೆದುಕೊಂಡಿದ್ದಾರೆ.
ನಂಗಂತೂ ತುಂಬಾ ಕುತೂಹಲ. ಟ್ರಂಪ್ ನಿಲುವು ಒಂಥರಾ ಇಷ್ಟ, ನೋಡೋಣ, ನಮ್ಮ ಮನೆಯಲ್ಲಿ ನೆನ್ನೆಯಿಂದ ಅದೇ ಮಾತು. ಅಪ್ಪ ಅಮ್ಮನನ್ನು ಬಾಣಂತನಕ್ಕೆ ಕರೆಸಿಕೊಳ್ಳುವುದು ನಿಲ್ಲುತ್ತದೆ. ಬಾಣಂತನಕ್ಕೆ ಇಲ್ಲಿಗೇ ಬರುತ್ತಾರೆ. 50 ರ ಹರೆಯದವರು ಸಾಂಬ್ರಾಣಿ, ಅಂಟಿನುಂಡೆ, ಲೇಹ್ಯ ಹಿಡಿದು ಹೋಗುವುದು ಕಡಿಮೆಯಾಗುತ್ತದೆ. ಇಲ್ಲಿಯ ಆಸ್ಪತ್ರೆಗಳಲ್ಲಿ ಸೂಪರ್ ಸ್ಪೆಷಾಲಿಟಿ ವಾರ್ಡುಗಳು ಹೆಚ್ಚುತ್ತವೆ. ಅಲ್ಲಿಯ ಗೈನಾಕಾಲಜಿಸ್ಟ್‌ಗಳಿಗೆ ಕೆಲಸ ಕಡಿಮೆಯಾಗುತ್ತದೆ ಎಂದು ಫೇಸ್‌ಬುಕ್ ಯೂಸರ್‌ಗಳು ರಂಗಸ್ವಾಮಿ ಅವರ ಬರಹಕ್ಕೆ ಪ್ರತಿಕ್ರಿಯಿಸಿದ್ದಾರೆ.
