ಕನ್ನಡ ಸುದ್ದಿ  /  Nation And-world  /  Ranil Wickremesinghe Elected As New Sri Lanka President

Sri Lanka Crisis: ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ರಾನಿಲ್‌ ವಿಕ್ರಮಸಿಂಘೆ!

ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಚುನಾಯಿತರಾಗಿದ್ದು, ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಹೊಸ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದೆ.

ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ರಾನಿಲ್‌ ವಿಕ್ರಮಸಿಂಘೆ!
ಶ್ರೀಲಂಕಾ ಅಧ್ಯಕ್ಷರಾಗಿ ಚುನಾಯಿತರಾದ ರಾನಿಲ್‌ ವಿಕ್ರಮಸಿಂಘೆ!

ಕೋಲಂಬೊ: ಅತ್ಯಂತ ಮಹತ್ವದ ಬೆಳವಣಿಗೆಯೊಂದರಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಚುನಾಯಿತರಾಗಿದ್ದು, ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ದ್ವೀಪ ರಾಷ್ಟ್ರ ಹೊಸ ರಾಜಕೀಯ ಬದಲಾವಣೆಗೆ ನಾಂದಿ ಹಾಡಿದೆ. ಎಸ್‌ಎಲ್‌ಪಿಪಿ ಬೆಂಬಲದಿಂದ ರಾನಿಲ್‌ ವಿಕ್ರಮಸಿಂಘೆ ಅವರು ಸರಳ ಬಹುಮತ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಾಜಿ ಅಧ್ಯಕ್ಷ ಗೋಟಬಯ ರಾಜಪಕ್ಸಾ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಇಂದು(ಜುಲೈ 20-ಬುಧವಾರ) ಚುನಾವಣೆ ನಡೆದಿತ್ತು. ಈ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷ ರಾನಿಲ್‌ ವಿಕ್ರಮಸಿಂಘೆ, ಎಸ್‌ಎಲ್‌ಪಿಪಿ ಸಂಸದ ಡಲ್ಲಾಸ್‌ ಅಲಹಪೆರುಮ ಹಾಗೂ ಎನ್‌ಪಿಪಿ ನಾಯಕ ಅನುರ ಕುಮಾರ ಡಿಸಾನಾಯಕೆ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳಾಗಿದ್ದರು.

ಈ ಮೂವರ ಪೈಕಿ ವಿಕ್ರಮಸಿಂಘೆ ಅವರು ಸರಳ ಬಹುಮತವನ್ನು ಗಳಿಸಿದ್ದು, ರಾನಿಲ್‌ ಅವರನ್ನು ಶ್ರೀಲಂಕಾದ ನೂತನ ಅಧ್ಯಕ್ಷರು ಎಂದು ಘೋಷಣೆ ಮಾಡಲಾಗಿದೆ. ರಾನಿಲ್‌ ವಿಕ್ರಮಸಿಂಘೆ ಅವರಿಗೆ 134 ಮತಗಳು ಲಭಿಸಿವೆ. ಆದರೆ ಹೊಸ ಅಧ್ಯಕ್ಷರ ಆಯ್ಕೆಯನ್ನು ಶ್ರೀಲಂಕಾದ ಜನತೆ ಸ್ವಾಗತಿಸಿಲ್ಲ ಎಂಬುದು ಸ್ಪಷ್ಟ. ಅಧ್ಯಕ್ಷರಾಗುವುದಕ್ಕೂ ಮೊದಲು ಶ್ರೀಲಂಕಾದ ಪ್ರಧಾನಿಯಾಗಿದ್ದ ರಾನಿಲ್‌ ವಿಕ್ರಮಸಿಂಘೆ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿದ್ದವು.

ಆಕ್ರೋಶಿತ ಪ್ರತಿಭಟನಾಕಾರರು ರಾನಿಲ್‌ ವಿಕ್ರಮಸಿಂಘೆ ಅವರ ಕಚೇರಿಗೆ ಬೆಂಕಿ ಹಚ್ಚಿದ್ದರು. ಆದರೆ ಬಳಿಕ ಗೋಟಬಯ ರಾಜಪಕ್ಸಾ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಹಂಗಾಮಿ ಅಧ್ಯಕ್ಷರಾಗಿ ರಾನಿಲ್‌ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡಿದ್ದರು. ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ರಾನಿಲ್‌ ವಿಕ್ರಮಸಿಂಘೆ ಅವರು ಸೇನೆ ಮತ್ತು ಪೊಲೀಸರಿಗೆ ಆದೇಶ ನೀಡಿದ್ದರು. ಅಲ್ಲದೇ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದರು.

ಅಧ್ಯಕ್ಷೀಯ ಚುನಾವಣೆಯಲ್ಲಿ ರಾನಿಲ್‌ ವಿಕ್ರಮಸಿಂಘೆ ಅವರಿಗೆ 134 ಮತಗಳು ಲಭಿಸಿದ್ದು, ಪ್ರತಿಸ್ಪರ್ಧಿ ಡಲ್ಲಾಸ್‌ ಅಲಹಪೆರುಮ ಹಾಗೂ ಎನ್‌ಪಿಪಿ ನಾಯಕ ಅನುರ ಕುಮಾರ ಡಿಸಾನಾಯಕೆ ಅವರಿಗೆ ಅನುಕ್ರಮವಾಗಿ 82 ಮತ್ತು 3 ಮತಗಳು ಲಭಿಸಿವೆ.

ಒಟ್ಟು ಆರು ಬಾರಿ ಶ್ರೀಲಂಕಾದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿರುವ ರಾನಿಲ್‌ ವಿಕ್ರಮಸಿಂಘೆ ಇದೇ ಮೊದಲ ಬಾರಿಗೆ ಅಧ್ಯಕ್ಷರಾಗಿ ಶ್ರೀಲಂಕಾವನ್ನು ಮುನ್ನಡೆಸಲಿದ್ದಾರೆ. ಶ್ರೀಲಂಕಾ ತೀವ್ರ ತೆರನಾದ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದ್ದು, ನಾವೆಲ್ಲಾ ಒಂದಾಗಿ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅಧ್ಯಕ್ಷರಾಗಿ ಚುನಾಯಿತರಾದ ಬಳಿಕ ಮಾತನಾಡಿದ ಮೊದಲ ಭಾಷಣದಲ್ಲಿ ರಾನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

ಶ್ರೀಲಂಕಾದ ಈ ಬಿಕ್ಕಟ್ಟು ತಾತ್ಕಾಲಿಕವಾಗಿದ್ದು, ಒಂದು ದೇಶವಾಗಿ ನಾವು ಈ ಬಿಕ್ಕಟ್ಟಿನಿಂದ ಹೊರಬರಲಿದ್ದೇವೆ. ಶ್ರೀಲಂಕಾ ಮತ್ತೆ ಅಭಿವೃದ್ಧಿಯ ಪಥದ ಮೇಲೆ ಮರಳಲಿದೆ ಎಂಬ ವಿಶ್ವಾಸ ನನ್ನಲ್ಲಿದ್ದು, ಈ ಗುರಿ ಸಾಧನೆಗೆ ನಾನು ಶ್ರೀಲಂಕಾದ ಸಮಸ್ತ ಪ್ರಜೆಗಳ ಬೆಂಬಲ ನಿರೀಕ್ಷಿಸುತ್ತೇನೆ ಎಂದು ರಾನಿಲ್‌ ವಿಕ್ರಮಸಿಂಘೆ ಹೇಳಿದ್ದಾರೆ.

ಆದರೆ ರಾನಿಲ್‌ ವಿಕ್ರಮಸಿಂಘೆ ವಿರುದ್ಧ ಈಗಲೂ ವಿರೋಧ ಪ್ರದರ್ಶನಗಳು ನಡೆಯುತ್ತಿದ್ದು, ಅಧ್ಯಕ್ಷರ ನಿವಾಸದ ಎದುರು ಪ್ರತಿಭಟನಾಕಾರರು ತಮ್ಮ ಧರಣಿಯನ್ನು ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ತೀವ್ರ ಆರ್ಥಿಕ ಮತ್ತು ರಾಜಕೀಯ ಬಿಕ್ಕಟ್ಟಿನಿಂದ ಜರ್ಜರಿತವಾಗಿರುವ ಶ್ರೀಲಂಕಾಗೆ ನೂತನ ಅಧ್ಯಕ್ಷರು ದೊರೆತಿದ್ದು, ರಾನಿಲ್‌ ವಿಕ್ರಮಸಿಂಘೆ ಶ್ರೀಲಂಕಾದ ಬಿಕ್ಕಟ್ಟನ್ನು ಹೇಗೆ ಪರಿಹರಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

IPL_Entry_Point

ವಿಭಾಗ