ಆರ್‌ಬಿಐ ರೆಪೋ ದರ 50 ಮೂಲಾಂಶ ಇಳಿಸಿತು, ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ, ಇಲ್ಲಿದೆ ಆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆರ್‌ಬಿಐ ರೆಪೋ ದರ 50 ಮೂಲಾಂಶ ಇಳಿಸಿತು, ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ, ಇಲ್ಲಿದೆ ಆ ವಿವರ

ಆರ್‌ಬಿಐ ರೆಪೋ ದರ 50 ಮೂಲಾಂಶ ಇಳಿಸಿತು, ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ, ಇಲ್ಲಿದೆ ಆ ವಿವರ

ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ (ಜೂನ್ 6) ನಿರೀಕ್ಷೆ ಮೀರಿ ರೆಪೊ ದರವನ್ನು 50 ಮೂಲಾಂಶವನ್ನು ಇಳಿಕೆ ಮಾಡಿತು. ಈ ಕ್ರಮದಿಂದಾಗಿ ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ ಎಂಬ ಕುತೂಹಲ ಸಹಜ. ಅದಕ್ಕೆ ಸಂಬಂಧಿಸಿದ ವಿವರ ಇಲ್ಲಿದೆ.

ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ನೇತೃತ್ವದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ದರವನ್ನು 50 ಮೂಲಾಂಶದಷ್ಟು ಇಳಿಸಿದೆ.
ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ನೇತೃತ್ವದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ದರವನ್ನು 50 ಮೂಲಾಂಶದಷ್ಟು ಇಳಿಸಿದೆ.

ನಿಧಾನಗತಿಯ ಬೆಳವಣಿಗೆ ಮತ್ತು ಸ್ಥಿರವಾಗಿರುವ ಹಣದುಬ್ಬರ ಮಧ್ಯೆ, ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ (ಜೂನ್ 6) ನಿರೀಕ್ಷೆ ಮೀರಿ ರೆಪೊ ದರವನ್ನು 50 ಮೂಲಾಂಶವನ್ನು ಇಳಿಕೆ ಮಾಡಿತು. ಇದು ಮೂರನೇ ಸಲ ಆರ್‌ಬಿಐ ರೆಪೋ ದರ ಇಳಿಕೆ ಮಾಡಿರುವಂಥದ್ದು. ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ನೇತೃತ್ವದ ಆರು ಸದಸ್ಯರ ವಿತ್ತೀಯ ನೀತಿ ಸಮಿತಿ (ಎಂಪಿಸಿ) ರೆಪೋ ದರವನ್ನು 5.50 ಪ್ರತಿಶತಕ್ಕೆ ಇಳಿಸುವ ತೀರ್ಮಾನವನ್ನು ಪ್ರಕಟಿಸಿದೆ.

ಆರ್‌ಬಿಐ ರೆಪೋ ದರ 50 ಮೂಲಾಂಶ ಇಳಿಕೆ

ನೀವು ಮನೆ ಸಾಲ ಅಥವಾ ವಾಹನ ಸಾಲ ಪಡೆದವರು ಅಥವಾ ಪಡೆಯಲು ಸಜ್ಜಾಗಿದ್ದರೆ ಅಂಥವರಿಗೆ ಇದು ಖುಷಿಯ ಸುದ್ದಿ. ಆರ್‌ಬಿಐ ರೆಪೋ ದರವನ್ನು 50 ಮೂಲಾಂಶ ಇಳಿಕೆ ಮಾಡಿದೆ. ಸರಳವಾಗಿ ಹೇಳಬೇಕು ಎಂದರೆ 6 ಪ್ರತಿಶತ ಇರುವಂತಹ ರೆಪೋ ದರವನ್ನು ಶೇಕಡ 5.5ಕ್ಕೆ ಇಳಿಕೆ ಮಾಡಿದೆ. ಇದು ಸಾಲಗಳನ್ನು ಗ್ರಾಹಕರ ಕೈಗೆಟುಕುವಂತೆ ಮಾಡುವಲ್ಲಿ ನೆರವಾಗಲಿದೆ. ಏಪ್ರಿಲ್‌ನಲ್ಲಿ ಅರ್‌ಬಿಐ 25 ಮೂಲಾಂಶ ರೆಪೋ ದರ ಇಳಿಕೆ ಮಾಡಿತ್ತು.

ಬಹುದೊಡ್ಡ ಬಡ್ಡಿದರ ಇಳಿಕೆ: ಹಣದುಬ್ಬರ ಇಳಿಮುಖವಾಗುತ್ತಿರುವ ಮತ್ತು ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಸಂಯೋಜನೆಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸ್ಪಂದಿಸುತ್ತಿದೆ. ಗ್ರಾಹಕ ಹಣದುಬ್ಬರವು ಈಗ ಆರ್‌ಬಿಐನ ಗುರಿಯಾಗಿದ್ದು, ಇದು ಗುರಿಯ ಶ್ರೇಣಿ ಮತ್ತು ಏರುಗತಿಯಲ್ಲಿರುವ ಜಾಗತಿಕ ಅನಿಶ್ಚಿತತೆಗಳ ಒಳಗೊಂಡಿದೆ. ನೀತಿ ನಿರೂಪಕರು ಬೇಡಿಕೆಯನ್ನು ಉತ್ತೇಜಿಸುವುದಕ್ಕಾಗಿ ಈ ಆಕ್ರಮಣಕಾರಿ ಕ್ರಮವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ನಿಮ್ಮ ಮನೆ ಸಾಲ, ವಾಹನ ಸಾಲದ ಬಡ್ಡಿದರ ಇಳಿಕೆಯಾಗುತ್ತಾ

ರೆಪೋ ರೇಟ್ ಎಂಬುದು ವಾಣಿಜ್ಯ ಬ್ಯಾಂಕುಗಳಿಗೆ ಆರ್‌ಬಿಐ ಸಾಲ ನೀಡುವ ಮೊತ್ತಕ್ಕೆ ವಿಧಿಸುವ ಬಡ್ಡಿದರವಾಗಿದೆ. ಈ ರೆಪೋ ದರ ಇಳಿಕೆಯಾದಾಗ, ಬ್ಯಾಂಕುಗಳು ಕೂಡ ತಮ್ಮ ಸಾಲದ ಬಡ್ಡಿದರಗಳನ್ನು ಪರಿಷ್ಕರಿಸುತ್ತವೆ. ಇದು ಗ್ರಾಹಕರ ಸಾಲದ ಬಡ್ಡಿದರವನ್ನೂ ಇಳಿಯುವಂತೆ ಮಾಡುತ್ತದೆ.

ಒಂದೊಮ್ಮೆ ಬ್ಯಾಂಕುಗಳು ಸಂಪೂರ್ಣ ಪ್ರಯೋಜನವನ್ನು ಗ್ರಾಹಕರಿಗೆ ನೀಡಿದರೆ, ಗೃಹ ಸಾಲಗಳು, ಕಾರು ಸಾಲಗಳು ಮತ್ತು ಇತರ ವೈಯಕ್ತಿಕ ಸಾಲಗಳು ಅಗ್ಗವಾಗಬಹುದು. ಇದರ ಪರಿಣಾಮವಾಗಿ ಕಡಿಮೆ ಇಎಂಐಗಳು ಮತ್ತು ಸಾಲಗಾರರಿಗೆ ಬಡ್ಡಿ ಹೊರೆ ಕಡಿಮೆಯಾಗಬಹುದು. ಹೆಚ್ಚಿನ ವೆಚ್ಚದ ವಸತಿ ಮಾರುಕಟ್ಟೆಯನ್ನು ನ್ಯಾವಿಗೇಟ್ ಮಾಡುವ ಮನೆ ಖರೀದಿದಾರರಿಗೆ ಈ ಕ್ರಮದಿಂದ ಪ್ರಯೋಜನವಾಗಬಹುದು. ವಿಶೇಷವಾಗಿ ಮೊದಲ ಬಾರಿಗೆ ಖರೀದಿದಾರರು ಮತ್ತು ಅಪ್‌ಗ್ರೇಡ್ ಮಾಡಲು ಬಯಸುವವರಿಗೆ ಪ್ರಯೋಜನ ಹೆಚ್ಚು. ಡೆವಲಪರ್‌ಗಳು ಖರೀದಿದಾರರ ಭಾವನೆಯಲ್ಲಿ ಸುಧಾರಣೆಯನ್ನು ನಿರೀಕ್ಷಿಸುತ್ತಾರೆ. ಇದು ಹೆಚ್ಚಿನ ಬೇಡಿಕೆ ಮತ್ತು ಹೊಸ ಪ್ರಾಜೆಕ್ಟ್ ಶುರುವಾಗಲು ನೆರವಾಗಬಹುದು.

ಮಧ್ಯಮ ಆದಾಯದ ಮತ್ತು ಕೈಗೆಟುಕುವ ವಸತಿ ವಿಭಾಗದ ಮಾರುಕಟ್ಟೆ ಆರ್‌ಬಿಐನ ಈ ಕ್ರಮದಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುವ ನಿರೀಕ್ಷೆಯಿದೆ. ಡೆವಲಪರ್‌ಗಳು ಈ ದರವನ್ನು ಕಡಿತಗೊಳಿಸುವುದರೊಂದಿಗೆ ಹೆಚ್ಚು ಆಕರ್ಷಕ ಹಣಕಾಸು ಆಯ್ಕೆಗಳು ಮತ್ತು ಸುಧಾರಿತ ಸೌಕರ್ಯಗಳನ್ನು ನೀಡುವ ಅವಕಾಶವಾಗಿ. ಸಾಲ ಪಡೆಯುವ ವೆಚ್ಚವು ಹೆಚ್ಚಿನ ಗ್ರಾಹಕರನ್ನು ವಿಶೇಷವಾಗಿ ಮಧ್ಯ ಮತ್ತು ಉನ್ನತ ಮಟ್ಟದ ವಿಭಾಗದವರನ್ನು ಕಾರು ಖರೀದಿಸುವುದಕ್ಕೆ ಉತ್ತೇಜಿಸಬಹುದು.

ಆರ್‌ಬಿಐ ಎಂಪಿಸಿ ಸಭೆ; 5 ಮುಖ್ಯ ಅಂಶಗಳು

1) ನಿರೀಕ್ಷೆ ಮೀರಿದ ರೆಪೋ ದರ ಇಳಿಕೆ: ನಿರೀಕ್ಷೆ ಮೀರಿ ಆರ್‌ಬಿಐ ಮೂರನೇ ಬಾರಿ ರೆಪೋ ದರ ಇಳಿಕೆ ಮಾಡಿದೆ. ಈ ಬಾರಿ 50 ಮೂಲಾಂಶ ಇಳಿಕೆ ಮಾಡಿದ್ದು, ಅರ್ಥ ವ್ಯವಸ್ಥೆಗೆ ಉತ್ತೇಜನ ನೀಡುವುದಕ್ಕೆ ಕ್ರಮ ತೆಗೆದುಕೊಂಡಿದೆ. ಸಂಜಯ್ ಮಲ್ಹೋತ್ರಾ ಆರ್‌ಬಿಐ ಗವರ್ನರ್ ಆದ ಬಳಿಕ 100 ಮೂಲಾಂಶ ರೆಪೋ ದರ ಇಳಿಕೆಯಾದಂತಾಗಿದೆ. ಇದಕ್ಕೆ ಪೂರಕವಾಗಿ ಲಿಕ್ವಿಡ್ ಅಡ್ಜಸ್ಟ್‌ಮೆಂಟ್‌ ಫೆಸಿಲಿಟಿ ಅಧೀನದ ಸ್ಟ್ಯಾಂಡಿಂಗ್‌ ಡೆಪಾಸಿಟ್ ಫೆಸಿಲಿಟಿ (ಎಸ್‌ಡಿಎಫ್‌) ದರವನ್ನೂ ಶೇಕಡ 5.25ಕ್ಕೆ ಮತ್ತು ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (ಎಂಎಸ್‌ಎಫ್‌) ಮತ್ತು ಬ್ಯಾಂಕ್ ರೇಟ್ ಅನ್ನು ಶೇಕಡ 5.75ಕ್ಕೆ ಹೊಂದಾಣಿಕೆ ಮಾಡಿದೆ.

2) ಹಣದುಬ್ಬರ ಮುನ್ನೋಟ ಇಳಿಕೆ: ಗ್ರಾಹಕ ಸೂಚ್ಯಂಕ ಆಧಾರಿತ ಹಣದುಬ್ಬರ ಮುನ್ನೋಟವನ್ನು ಪ್ರಸಕ್ತ ಹಣಕಾಸು ವರ್ಷಕ್ಕೆ ಶೇಕಡ 4 ರಿಂದ ಶೇಕಡ 3.7ಕ್ಕೆ ಇಳಿಕೆ ಮಾಡಲಾಗಿದೆ. ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 3.9ರಿಂದ ಶೇಕಡ 3.6, ಎರಡನೇ ತ್ರೈಮಾಸಿಕದಲ್ಲಿ ಶೇಕಡ 3.9 ರಿಂದ ಶೇಕಡ 3.4, ಮೂರನೇ ತ್ರೈಮಾಸಿಕದಲ್ಲಿ ಶೇಕಡ 3.9 ರಿಂದ ಶೇಕಡ 3.8, ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 4.2 ರಿಂದ ಶೇಕಡ 4.4ಕ್ಕೆ ಪರಿಷ್ಕರಿಸಿ ಮುನ್ನೋಟ ಒದಗಿಸಿದೆ.

3) ಬೆಳವಣಿಗೆ ಮುನ್ನೋಟ ಸ್ಥಿರ: ಆರ್‌ಬಿಐ ಪ್ರಸಕ್ತ ಹಣಕಾಸು ವರ್ಷದ ಎರಡನೇ ಎಂಪಿಸಿ ಸಭೆಯಲ್ಲಿ ದೇಶದ ಜಿಡಿಪಿ ಬೆಳವಣಿಗೆಯನ್ನು ಶೇಕಡ 6.5ಕ್ಕೆ ಸ್ಥಿರವಾಗಿ ಇಟ್ಟುಕೊಂಡಿದೆ. ಇದು ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡ 6.5, 2ನೇ ತ್ರೈಮಾಸಿಕದಲ್ಲಿ ಶೇಕಡ 6.7, ಮೂರನೇ ತ್ರೈಮಾಸಿಕದಲ್ಲಿ ಶೇಕಡ 6.6, ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡ 6.3 ಎಂದು ಅದು ಹೇಳಿದೆ.

4) ನಗದು ಮೀಸಲು ಅನುಪಾತ ಇಳಿಕೆ: ಅನಿರೀಕ್ಷಿತವಾಗಿ ನಗದು ಮೀಸಲು ಅನುಪಾತ (ಸಿಆರ್‌ಆರ್‌)ವನ್ನು ಆರ್‌ಬಿಐ 100 ಮೂಲಾಂಶ ಇಳಿಕೆ ಮಾಡಿದ್ದು, ಶೇಕಡ 3ಕ್ಕೆ ಇಳಿಸಿದೆ. ಇದು ಸಾಲ ವಿತರಣೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.

5) ಅಸುರಕ್ಷಿತ ಸಾಲ ವಿತರಣೆಗೆ ಆದ್ಯತೆ: ಅಸುರಕ್ಷಿತ ಸಾಲ ವಿತರಣೆ, ಕ್ರೆಡಿಟ್ ಕಾರ್ಡ್‌ಗಳಿಗೆ ಉತ್ತೇಜನ ನೀಡುವ ಉದ್ದೇಶವನ್ನೂ ಆರ್‌ಬಿಐ ಪ್ರಕಟಿಸಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.