ಸತತ 11ನೇ ಬಾರಿಗೆ ರೆಪೋ ದರದಲ್ಲಿ ಬದಲಾವಣೆ ಇಲ್ಲ; ಶೇಕಡ 6.5 ರೆಪೋ ದರ ಮುಂದುವರಿಕೆಗೆ ಆರ್‌ಬಿಐ ಎಂಪಿಸಿ ಸಭೆಯಲ್ಲಿ ತೀರ್ಮಾನ
RBI MPC meeting: ಭಾರತೀಯ ರಿಸರ್ವ್ ಬ್ಯಾಂಕ್ ವಿತ್ತೀಯ ನೀತಿ ಸಭೆ ಬಳಿಕ ತೀರ್ಮಾನಗಳ ವಿವರಗಳನ್ನು ಗವರ್ನರ್ ಶಕ್ತಿಕಾಂತ ದಾಸ್ ಪ್ರಕಟಿಸಿದ್ದಾರೆ. ಇದರಂತೆ, ಸತತ 11ನೇ ಬಾರಿಗೆ ರೆಪೋ ದರದಲ್ಲಿ ಬದಲಾವಣೆ ಇಲ್ಲ. ಶೇಕಡ 6.5 ರೆಪೋ ದರ ಮುಂದುವರಿಕೆಗೆ ಆರ್‌ಬಿಐ ಎಂಪಿಸಿ ಸಭೆಯಲ್ಲಿ ತೀರ್ಮಾನ ಮಾಡಿರುವುದಾಗಿ ಅವರು ತಿಳಿಸಿದರು.
RBI MPC meeting: ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯಲ್ಲಿ ರೆಪೊ ದರವನ್ನು ಶೇಕಡಾ 6.5 ರಲ್ಲೇ ಸ್ಥಿರವಾಗಿ ಇಟ್ಟುಕೊಳ್ಳಲು ನಿರ್ಧರಿಸಿದೆ. ಈ ನಿರ್ಧಾರವನ್ನು 4:2 ಬಹುಮತದಿಂದ ತೆಗೆದುಕೊಳ್ಳಲಾಗಿದೆ ಎಂದು ಆರ್‌ಬಿಐ ಗವರ್ನರ್ ಶತಿಕಾಂತ ದಾಸ್ ಶುಕ್ರವಾರ (ಡಿಸೆಂಬರ್ 6) ಪ್ರಕಟಿಸಿದ್ದಾರೆ. ಸತತ 11ನೇ ಅವಧಿಗೆ ರೆಪೋ ದರವನ್ನು ಶೇಕಡ 6.5 ರಲ್ಲೇ ಮುಂದುವರಿಸಲಾಗಿದೆ. ಸ್ಟ್ಯಾಂಡಿಂಗ್ ಡೆಪಾಸಿಟ್ ಫೆಸಿಲಿಟಿ (ಎಸ್‌ಡಿಎಫ್) ದರವನ್ನೂ ಶೇಕಡ 6.25ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ. ಇದೇ ವೇಳೆ, ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ ಮತ್ತು ಬ್ಯಾಂಕ್ ರೇಟ್ ಅನ್ನು ಶೇಕಡ 6.75 ರಲ್ಲೇ ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದರು.
ಆರ್‌ಬಿಐ ಎಂಪಿಸಿ ಸಭೆಯ ಪ್ರಮುಖ ತೀರ್ಮಾನಗಳು; ಶಕ್ತಿಕಾಂತ್ ದಾಸ್ ಹೇಳಿರುವುದಿಷ್ಟು
ಸೆಪ್ಟೆಂಬರ್‌ಗೆ ಕೊನೆಗೊಂಡ ಮೂರು ತಿಂಗಳ ಅವಧಿಯಲ್ಲಿ 5.4 ಶೇಕಡಾ ಬೆಳವಣಿಗೆ ದಾಖಲಾಗಿದೆ. ಇದು ಏಳು ತ್ರೈಮಾಸಿಕಗಳಲ್ಲಿನ ನಿಧಾನಗತಿಯ ಬೆಳವಣಿಗೆಯಾಗಿ ದಾಖಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಬೆಳವಣಿಗೆಯನ್ನು ಈಗ 6.6 ಪ್ರತಿಶತದಷ್ಟು ಎಂದು ಆರ್‌ಬಿಐ ಅಂದಾಜಿಸಿದೆ. ಇದು ಹಿಂದಿನ ಅಂದಾಜು 7.2 ಪ್ರತಿಶತಕ್ಕಿಂತ ಕಡಿಮೆಯಾಗಿದೆ ಎಂದು ಶಕ್ತಿಕಾಂತ್ ದಾಸ್ ವಿವರಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ನೈಜ ಜಿಡಿಪಿಯ ಬೆಳವಣಿಗೆಯು 5.4 ಪ್ರತಿಶತದಷ್ಟು ನಿರೀಕ್ಷಿತಕ್ಕಿಂತ ಕಡಿಮೆಯಾಗಿದೆ. ಉತ್ಪಾದನಾವಲಯದ ದುರ್ಬಲ ಕಾರ್ಯಕ್ಷಮತೆ, ಗಣಿಗಾರಿಕೆ ಚಟುವಟಿಕೆಯಲ್ಲಿನ ಸಂಕೋಚನ ಮತ್ತು ಕಡಿಮೆ ವಿದ್ಯುತ್ ಬೇಡಿಕೆಯಿಂದಾಗಿ ಕೈಗಾರಿಕಾ ಬೆಳವಣಿಗೆಯಲ್ಲಿ ಮೊದಲ ತ್ರೈಮಾಸಿಕದಲ್ಲಿ 7.4 ಪ್ರತಿಶತದಿಂದ ಎರಡನೇ ತ್ರೈಮಾಸಿಕದಲ್ಲಿ 2.1 ಪ್ರತಿಶತಕ್ಕೆ ಗಣನೀಯ ಕುಸಿತವು ಈ ಕುಸಿತಕ್ಕೆ ಕಾರಣವಾಯಿತು ಎಂದು ಶಕ್ತಿಕಾಂತ್ ದಾಸ್ ವಿವರಿಸಿದ್ದಾರೆ.
ಚಿಲ್ಲರೆ ಹಣದುಬ್ಬರ ಪ್ರಮಾಣ ಶೇಕಡ 48ಕ್ಕೆ ಏರಿಕೆ
ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ದೇಶದ ಆರ್ಥಿಕ ಚಟುವಟಿಕೆಗಳು ಮಂದಗತಿಯಲ್ಲಿದ್ದವು. ಇದು ಒಟ್ಟಾರೆ ಅರ್ಥ ವ್ಯವಸ್ಥೆಯ ಚಟುವಟಿಕೆಯನ್ನು ಕೆಳಮಟ್ಟಕ್ಕೆ ಇಳಿಸಿತು. ಆದಾಗ್ಯೂ, ಹಬ್ಬದ ಸಂದರ್ಭದ ಬೇಡಿಕೆ ಮತ್ತು ಗ್ರಾಮೀಣ ಭಾಗದ ಆರ್ಥಿಕ ಚಟುವಟಿಕೆಗಳ ಕಾರಣ ಚೇತರಿಕೆ ಕಂಡಿದೆ ಎಂದು ಶಕ್ತಿಕಾಂತ ದಾಸ್ ವಿವರಿಸಿದರು.
ಸೆಂಟ್ರಲ್ ಬ್ಯಾಂಕ್ ತನ್ನ ಚಿಲ್ಲರೆ ಹಣದುಬ್ಬರ ಮುನ್ಸೂಚನೆಯನ್ನು ಹಣಕಾಸು ವರ್ಷ 2025 ಕ್ಕೆ 4.8 ಪ್ರತಿಶತಕ್ಕೆ ಏರಿಸಿತು. ಈ ಹಿಂದೆ, ಇದು ಶೇಕಡ 4.5 ಎಂದು ಗುರಿ ನಿಗದಿಪಡಿಸಿತ್ತು. ಆದರೆ, ಪ್ರಸ್ತುತ ಸನ್ನಿವೇಶಕ್ಕೆ ಅನುಗುಣವಾಗಿ ಇದನ್ನು ಏರಿಸಲಾಗಿದೆ ಎಂದು ಶಕ್ತಿಕಾಂತ ದಾಸ್ ಹೇಳಿದರು.
ವರ್ಷದ ಕೊನೆಯ ಎಂಪಿಸಿ ಸಭೆ, ಫೆಬ್ರವರಿಯಲ್ಲಿ ಮುಂದಿನ ಸಭೆ
ಇದು ಭಾರತೀಯ ರಿಸರ್ವ್ ಬ್ಯಾಂಕ್‌ನ ವಿತ್ತೀಯ ನೀತಿ ಸಭೆ (ಎಂಪಿಸಿ) ಈ ವರ್ಷದ ಕೊನೆಯ ಸಭೆಯಾಗಿತ್ತು. ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ನಡೆದ ಸಭೆಯನ್ನು ನಡೆಸಿತ್ತು. ಮುಂದಿನ ಸಭೆ ಫೆಬ್ರವರಿಯಲ್ಲಿ ನಿಗದಿಪಡಿಸಲಾಗಿದೆ.
ವಾಣಿಜ್ಯ ಬ್ಯಾಂಕುಗಳು ತಮ್ಮ ಸೆಕ್ಯುರಿಟಿಗಳನ್ನು ಆರ್‌ಬಿಐಗೆ ಮಾರಾಟ ಮಾಡುವ ಮೂಲಕ ಹಣವನ್ನು ಎರವಲು ಪಡೆಯುವ ದರವೇ ರೆಪೋ ದರ. ರಿವರ್ಸ್ ರೆಪೋ ದರ ಎಂದರೆ ಕೇಂದ್ರ ಬ್ಯಾಂಕ್ ಹಣವನ್ನು ಎರವಲು ಪಡೆಯುವ ದರವಾಗಿದೆ. ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ವ್ಯಾಪಾರೋದ್ಯಮಗಳು ಕ್ರೆಡಿಟ್ ಮತ್ತು ಹೂಡಿಕೆಗಳನ್ನು ಹೆಚ್ಚಿಸಲು ಈ ದರಗಳು ಪ್ರಮುಖವಾಗಿವೆ. ಈ ದರಗಳ ಹೆಚ್ಚಳವು ವ್ಯವಹಾರಗಳಿಗೆ ಸಾಲವನ್ನು ದುಬಾರಿಯಾಗಿಸುತ್ತದೆ. ಹಣದ ಪೂರೈಕೆಯನ್ನು ಸೀಮಿತಗೊಳಿಸುತ್ತದೆ ಮತ್ತು ಹಣದುಬ್ಬರವನ್ನು ಕಡಿಮೆ ಮಾಡಿಸುತ್ತದೆ. ಎಚ್‌ಡಿಎಫ್‌ಸಿ ಬ್ಯಾಂಕ್ ವರದಿಯ ಪ್ರಕಾರ, ಆ ಸಭೆಯಲ್ಲಿ ರೆಪೋ ದರವನ್ನು ಹೆಚ್ಚಿಸಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.