ಸನಾತನ ಧರ್ಮವನ್ನ ಡೆಂಗ್ಯೂ, ಮಲೇರಿಯಾಗೆ ಹೋಲಿಕೆ: ಉದಯನಿಧಿ ಸ್ಟಾಲಿನ್​​ಗೆ ಬಿಜೆಪಿ, ಆರ್​ಎಸ್​ಎಸ್​ ನಾಯಕರ ತಿರುಗೇಟು ಹೀಗಿತ್ತು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸನಾತನ ಧರ್ಮವನ್ನ ಡೆಂಗ್ಯೂ, ಮಲೇರಿಯಾಗೆ ಹೋಲಿಕೆ: ಉದಯನಿಧಿ ಸ್ಟಾಲಿನ್​​ಗೆ ಬಿಜೆಪಿ, ಆರ್​ಎಸ್​ಎಸ್​ ನಾಯಕರ ತಿರುಗೇಟು ಹೀಗಿತ್ತು

ಸನಾತನ ಧರ್ಮವನ್ನ ಡೆಂಗ್ಯೂ, ಮಲೇರಿಯಾಗೆ ಹೋಲಿಕೆ: ಉದಯನಿಧಿ ಸ್ಟಾಲಿನ್​​ಗೆ ಬಿಜೆಪಿ, ಆರ್​ಎಸ್​ಎಸ್​ ನಾಯಕರ ತಿರುಗೇಟು ಹೀಗಿತ್ತು

Udhayanidhi Stalin On Sanatan Dharma: "ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕಾಗುತ್ತದೆ. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇವನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು" ಎಂದು ಉದಯನಿಧಿ ಸ್ಟಾಲಿನ್​​ ಹೇಳಿಕೆ ನೀಡಿದ್ದಾರೆ.

ಉದಯನಿಧಿ ಸ್ಟಾಲಿನ್ - ಅಮಿತ್​ ಶಾ
ಉದಯನಿಧಿ ಸ್ಟಾಲಿನ್ - ಅಮಿತ್​ ಶಾ

ಕಾಲಿವುಡ್​ ನಟ ಹಾಗೂ ತಮಿಳುನಾಡು ಯುವಜನ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಕೇಂದ್ರ ಗೃಹ ಸಚಿವ ಅಮಿತ್​ ಶಾ ಸೇರಿದಂತೆ ಬಿಜೆಪಿ ಹಾಗೂ ಆರ್​ಎಸ್​ಎಸ್​ ನಾಯಕರು ತಿರುಗೇಟು ನೀಡಿದ್ದಾರೆ.

ಉದಯನಿಧಿ ಸ್ಟಾಲಿನ್​​ ಹೇಳಿದ್ದೇನು?

ತಮಿಳುನಾಡು ಪ್ರಗತಿಪರ ಲೇಖಕರ ಕಲಾವಿದರ ಸಂಘವು ಶನಿವಾರ ಸನಾತನ ನಿರ್ಮೂಲನೆ ಎಂಬ ವಿಷಯದ ಕುರಿತು ಚೆನ್ನೈನಲ್ಲಿ ಆಯೋಜಿಸಿದ್ದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್, ಡೆಂಗ್ಯೂ, ಮಲೇರಿಯಾದಂತೆ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಬೇಕು ಎಂದಿದ್ದಾರೆ.

"ನನಗೆ ವಿಶೇಷ ಭಾಷಣ ಮಾಡಲು ಅವಕಾಶ ನೀಡಿದ ಈ ಸಮ್ಮೇಳನದ ಸಂಘಟಕರಿಗೆ ನಾನು ಧನ್ಯವಾದ ಹೇಳುತ್ತೇನೆ. ನೀವು ಸಮ್ಮೇಳನದ ಹೆಸರನ್ನು 'ಸನಾತನ ವಿರೋಧಿ ಸಮಾವೇಶ' ಎನ್ನುವುದಕ್ಕಿಂತ 'ಸನಾತನ ನಿರ್ಮೂಲನಾ ಸಮಾವೇಶ' ಎಂದು ಇರಿಸಿದ್ದೀರಿ, ಅದನ್ನು ನಾನು ಪ್ರಶಂಸಿಸುತ್ತೇನೆ. ಸನಾತನ ಧರ್ಮವು ಸಾಮಾಜಿಕ ನ್ಯಾಯದ ಕಲ್ಪನೆಗೆ ವಿರುದ್ಧವಾಗಿದೆ ಮತ್ತು ಅದನ್ನು ನಿರ್ಮೂಲನೆ ಮಾಡಬೇಕು. " ಎಂದು ಹೇಳಿದ್ದಾರೆ.

"ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕಾಗುತ್ತದೆ. ನಾವು ಡೆಂಗ್ಯೂ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಇವನ್ನು ನಿರ್ಮೂಲನೆ ಮಾಡಬೇಕು. ಹಾಗೆಯೇ ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಉದಯನಿಧಿ ಸ್ಟಾಲಿನ್​​ ಹೇಳಿಕೆ ನೀಡಿದ್ದಾರೆ.

ಉದಯನಿಧಿಗೆ ತಿರುಗೇಟು

ಉದಯನಿಧಿ ಸ್ಟಾಲಿನ್​​ ಹೇಳಿಕೆಗೆ ಸಿಡಿಮಿಡಿಗೊಂಡಿರುವ ಅಮಿತ್​ ಶಾ, “ಕಳೆದ ಎರಡು ದಿನಗಳಿಂದ ಇಂಡಿಯಾ ಮೈತ್ರಿಕೂಟವು ಸನಾತನ ಧರ್ಮವನ್ನು ಅವಮಾನಿಸುತ್ತಿದೆ. ಡಿಎಂಕೆ ಮತ್ತು ಕಾಂಗ್ರೆಸ್ ನಾಯಕರು ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸನಾತನ ಧರ್ಮವನ್ನು ಅಂತ್ಯಗೊಳಿಸುವುದಾಗಿ ಮಾತನಾಡುತ್ತಿದ್ದಾರೆ. ಅವರು ನಮ್ಮ ಸನಾತನ ಧರ್ಮವನ್ನು ಅವಮಾನಿಸುತ್ತಿರುವುದು ಇದೇ ಮೊದಲಲ್ಲ. ಇಂದು ಕಾಂಗ್ರೆಸ್ ಪಕ್ಷ ಮೋದಿಜಿ ಗೆದ್ದರೆ ಸನಾತನ ಸಂಸ್ಥೆ ಆಡಳಿತ ನಡೆಸುತ್ತದೆ ಎಂದು ಹೇಳುತ್ತಿದೆ. ಲಷ್ಕರ್-ಎ-ತೊಯ್ಬಾಗಿಂತ ಹಿಂದೂ ಸಂಘಟನೆಗಳು ಹೆಚ್ಚು ಅಪಾಯಕಾರಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ” ಎಂದರು.

"ಇಂತಹ ಹೇಳಿಕೆಗಳನ್ನು ನೀಡಲು ಅವರಿಗೆ ಯಾವುದೇ ಹಿಂಜರಿಕೆ ಇಲ್ಲ. ಉದಯನಿಧಿ ಹೇಳಿಕೆಯು ಭಾರತ ಮೈತ್ರಿಕೂಟದ ರಾಜಕೀಯ ತಂತ್ರದ ಒಂದು ಭಾಗವಾಗಿದೆ" ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್, "ನಮ್ಮದು ಸರ್ವಧರ್ಮೀಯ ದೇಶವಾಗಿದ್ದು ಮಾನವೀಯತೆ, ಜಾಗತೀಕರಣ ಮತ್ತು ಪ್ರಜಾಪ್ರಭುತ್ವದ ಸೂತ್ರವಾಗಿದೆ, ನಿಮ್ಮ ಧರ್ಮವನ್ನು ಅನುಸರಿಸಿ ಮತ್ತು ಗೌರವಿಸಿ ಹಾಗೇ ಇತರ ಧರ್ಮವನ್ನು ಅವಮಾನಿಸಬೇಡಿ. ಇದು ಪ್ರಜಾಪ್ರಭುತ್ವ ವಿರೋಧಿ, ಮಾನವೀಯತೆಯ ವಿರೋಧಿ, ದೇವರ ವಿರೋಧಿ, ಶಾಂತಿ, ಅಭಿವೃದ್ಧಿಯ ವಿರೋಧಿ ಮತ್ತು ಇಂತಹ ಹೇಳಿಕೆ ನೀಡುವವರು ಸಮೃದ್ಧ ರಾಷ್ಟ್ರಗಳ ವಿರೋಧಿಗಳು. ಇಂತಹ ರಾಜಕಾರಣಿಗಳನ್ನು ಪಕ್ಷಗಳು ಮತ್ತು ಜನರು ತಡೆಯಬೇಕು, ಇದರಿಂದ ರಾಷ್ಟ್ರದಲ್ಲಿ ದ್ವೇಷ ಹರಡುವುದಿಲ್ಲ" ಎಂದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.