Mantralayam : ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು; ಹೊರಡುವ ಮೊದಲು ಆನ್‌ಲೈನ್‌ನಲ್ಲೇ ರೂಮ್ ಬುಕ್ ಮಾಡಿ, ಸೇವಾ ಟಿಕೆಟ್ ಖರೀದಿಸಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Mantralayam : ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು; ಹೊರಡುವ ಮೊದಲು ಆನ್‌ಲೈನ್‌ನಲ್ಲೇ ರೂಮ್ ಬುಕ್ ಮಾಡಿ, ಸೇವಾ ಟಿಕೆಟ್ ಖರೀದಿಸಿ

Mantralayam : ರಾಯರ ಆರಾಧನೆಗೆ ಮಂತ್ರಾಲಯ ಸಜ್ಜು; ಹೊರಡುವ ಮೊದಲು ಆನ್‌ಲೈನ್‌ನಲ್ಲೇ ರೂಮ್ ಬುಕ್ ಮಾಡಿ, ಸೇವಾ ಟಿಕೆಟ್ ಖರೀದಿಸಿ

Raghavendra Aradhana 2023 Mantralayam: ಮಂತ್ರಾಲಯ ರಾಯರ ಆರಾಧನೆ ಮಹೋತ್ಸವ ಆಗಸ್ಟ್ 29 ರಿಂದ ಸೆಪ್ಟೆಂಬರ್ 4 ರವರೆಗೆ ನಡೆಯಲಿದೆ. ಮಠದ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ ರೂಮ್‌ ಬುಕ್ಕಿಂಗ್‌ ಮತ್ತು ಸೇವೆಗಳನ್ನು ಬುಕ್ಕಿಂಗ್‌ ಮಾಡಲು ಬಯಸುವವರಿಗೆ ಮಾಹಿತಿ ಇಲ್ಲಿದೆ.

ಮಂತ್ರಾಲಯ ಆನ್‌ಲೈನ್‌ ರೂಂ ಬುಕ್ಕಿಂಗ್‌ ಮಾಡುವುದು ಹೇಗೆ (ಸಾಂದರ್ಭಿಕ ಚಿತ್ರ)
ಮಂತ್ರಾಲಯ ಆನ್‌ಲೈನ್‌ ರೂಂ ಬುಕ್ಕಿಂಗ್‌ ಮಾಡುವುದು ಹೇಗೆ (ಸಾಂದರ್ಭಿಕ ಚಿತ್ರ) (srsmatha.org)

ಶ್ರೀರಾಘವೇಂದ್ರ ತೀರ್ಥ ಗುರುಸಾರ್ವಭೌಮರ ಆರಾಧನೆಗೆ ಭಕ್ತರು ಮಂತ್ರಾಲಯದ ಕಡೆ ಮುಖ ಮಾಡುತ್ತಿದ್ದಾರೆ. ರಾಯರ ಆರಾಧನೆಗೆ ಮಂತ್ರಾಲಯ ಸಜ್ಜುಗೊಂಡಿದ್ದು, ರಾಯರ ಭಕ್ತರು ಆನ್‌ಲೈನ್‌ನಲ್ಲಿಯೇ ರೂಂ ಬುಕ್‌ ಮಾಡಬಹುದು, ಸೇವಾ ಟಿಕೆಟ್‌ ಖರೀದಿಸಬಹುದು. ಶ್ರೀರಾಘವೇಂದ್ರಸ್ವಾಮಿಗಳ ಆರಾಧನಾ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ತುಂಗಾತೀರ ನಿವಾಸಿ ಕಲಿಯುಗದ ಕಾಮಧೇನು ಕಲ್ಪವೃಕ್ಷ, ಗುರು ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವಕ್ಕೆ ತೆರಳುವವರು ಆನ್‌ಲೈನ್‌ನಲ್ಲಿ ಕೊಠಡಿ ಬುಕ್ಕಿಂಗ್‌ ಮಾಡಿಕೊಳ್ಳುವುದು ಸೂಕ್ತ. ಆನ್‌ಲೈನ್‌ನಲ್ಲಿ ಕೊಠಡಿ ಬುಕ್ಕಿಂಗ್‌ ಮಾಡುವುದು ಹೇಗೆ, ಮಂತ್ರಾಲಯ ಸೇವೆಗಳನ್ನು ಆನ್‌ಲೈನ್‌ನಲ್ಲಿ ಬುಕ್ಕಿಂಗ್‌ ಮಾಡುವುದು ಹೇಗೆ ಎಂಬ ವಿವರ ಇಲ್ಲಿ ನೀಡಲಾಗಿದೆ.

ಮಂತ್ರಾಲಯ ರಾಯರ ಆರಾಧನಾ ಮಹೋತ್ಸವ ದಿನಾಂಕ

ಮಂತ್ರಾಲಯ ರಾಯರ ಆರಾಧನೆ ಮಹೋತ್ಸವ ಆಗಸ್ಟ್‌ 2023ರ ಕೊನೆಯ ವಾರ ನಡೆಯಲಿದೆ. ಅಂದರೆ ಆಗಸ್ಟ್ 29 ರಿಂದ ಪ್ರಾರಂಭವಾಗುವ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು, ಸೆಪ್ಟೆಂಬರ್ 4 ರವರೆಗೆ ವಿಜ್ರಂಭಣೆಯಿಂದ ನಡೆಯಲಿವೆ. ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುವ ಭಕ್ತರನ್ನು ಸ್ವಾಗತಿಸಲು ಮಂತ್ರಾಲಯ ಸಜ್ಜುಗೊಂಡಿದೆ.

ಗುರುರಾಯರ ಆರಾಧನೆ- ಕಾರ್ಯಕ್ರಮಗಳ ವಿವರ

ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವದ ವೇಳೆ ಪ್ರತಿದಿನ ಸಂಜೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ಅಧ್ಯಾತ್ಮ, ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 7.30 ಗಂಟೆಗೆ ಧ್ವಜಾರೋಹಣ, ಪ್ರಾರ್ಥನೋತ್ಸವ, ಪ್ರಭಾ ಉತ್ಸವ, ಧನ್ಯೋತ್ಸವ, ಋುಗ್ವೇದ ನಿತ್ಯ ನೂತನ ಉಪಕರ್ಮ ಕಾರ್ಯಕ್ರಮ ಇರುತ್ತದೆ. ಆಗಸ್ಟ್‌ 30ರಂದು ಶಾಖೋತ್ಸವ ರಜತ ಮಂಟಪೋತ್ಸವ, ಯಜುರ್ವೇದ ನಿತ್ಯ ನೂತನ ಉಪಕರ್ಮ ಕಾರ್ಯಕ್ರಮ ನಡೆಯಲಿದೆ. ಸೆಪ್ಟೆಂಬರ್‌ 1ನೇ ತಾರೀಕಿನಂದು ಮಧ್ಯಾರಾಧನಾ ಮಹಾಪಂಚಾಮೃತ ಅಭಿಷೇಕ, ಸ್ವರ್ಣ ರಥೋತ್ಸವ ಇರಲಿದೆ. ಇದೇ ದಿನ ತಿರುಮಲ ತಿರುಪತಿ ದೇವಸ್ಥಾನದಿಂದ ಶ್ರೀರಾಯರ ಮೂಲ ಬೃಂದಾವನಕ್ಕೆ ಶ್ರೀ ಶ್ರೀನಿವಾಸದೇವರ ಶೇಷವಸ್ತ್ರ ತಂದು ಸಮರ್ಪಿಸಲಾಗುತ್ತದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಮಾಹಿತಿ ನೀಡಿದ್ದಾರೆ.

ರಾಯರ ಆರಾಧನೆ- ಆನ್‌ಲೈನ್‌ನಲ್ಲಿ ರೂಂ ಬುಕ್‌ ಮಾಡಿ

ಮಂತ್ರಾಲಯ ರಾಯರ ಮಠಕ್ಕೆ ಹೋಗಿ ರಾಯರ ಆರಾಧನೆಯಲ್ಲಿ ಪಾಲ್ಗೊಳ್ಳುವವರು ಮಠದ ವೆಬ್‌ಸೈಟ್‌ನಲ್ಲಿ ರೂಂ ಬುಕ್‌ ಮಾಡಬಹುದು. ಮೊದಲಿಗೆ www.srsmatha.org ವೆಬ್‌ಸೈಟ್‌ಗೆ ಹೋಗಿ. ಬಳಿಕ ಅಲ್ಲಿ ಆನ್‌ಲೈನ್‌ ಸರ್ವೀಸ್‌ ಬುಕ್ಕಿಂಗ್‌ ಎಂಬ ವಿಭಾಗವನ್ನು ಕ್ಲಿಕ್‌ ಮಾಡಿ. ಅಲ್ಲಿ ಕಾಣಿಸುವ ಅಡ್ವಾನ್ಸ್‌ ರೂಂ ಬುಕ್ಕಿಂಗ್‌ ಮೆನುವನ್ನು ಕ್ಲಿಕ್‌ ಮಾಡಿ. ಇಲ್ಲಿ ರೂಂ ಬುಕ್ಕಿಂಗ್‌ ವಿಭಾಗವನ್ನು ಕ್ಲಿಕ್‌ ಮಾಡಬಹುದು. ಒಮ್ಮೆ ಕೊಠಡಿ ಬುಕ್ಕಿಂಗ್‌ ಮಾಡಿದ ಬಳಿಕ ರೂಂ ಕ್ಯಾನ್ಸಲೇಷನ್‌ ಅಥವಾ ರಿಫಂಡ್‌ ಸೌಲಭ್ಯ ಇರುವುದಿಲ್ಲ. ಒಂದು ಲಾಗಿನ್‌ ಐಡಿಯಲ್ಲಿ ತಿಂಗಳಿಗೆ ಗರಿಷ್ಠ ಎರಡು ಕೊಠಡಿ ಬುಕ್‌ ಮಾಡಲು ಮಾತ್ರ ಅವಕಾಶವಿರುತ್ತದೆ. ಏಕ ವ್ಯಕ್ತಿಗೆ ಕೊಠಡಿ ನೀಡಲಾಗುವುದಿಲ್ಲ. ಈ ರೀತಿ ಬುಕ್ಕಿಂಗ್‌ ಮಾಡಿದ್ದರೆ ಕ್ಯಾನ್ಸಲ್‌ ಮಾಡಲಾಗುತ್ತದೆ, ಬುಕ್ಕಿಂಗ್‌ ಮೊತ್ತ ರಿಫಂಡ್‌ ಮಾಡಲಾಗವುದಿಲ್ಲ. ಎಲ್ಲಾ ಕೊಠಡಿಗಳಲ್ಲಿ ಇಬ್ಬರು ಮಾತ್ರ ಇರಲು ಅವಕಾಶ. ಹೆಚ್ಚುವರಿ ಬೆಡ್‌ ಒದಗಿಸಲಾಗುವುದಿಲ್ಲ ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಕನಿಷ್ಠ 3 ದಿನ ಮತ್ತು ಗರಿಷ್ಠ 60 ದಿನ ಮೊದಲು ಕೊಠಡಿ ಬುಕ್ಕಿಂಗ್‌ ಮಾಡಲು ಅವಕಾಶವಿರುತ್ತದೆ. ಸದ್ಯ ಆನ್‌ಲೈನ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಆಗಸ್ಟ್‌ 28ರಿಂದ ಸೆಪ್ಟೆಂಬರ್‌ 3ರವರೆಗೆ ಎಲ್ಲಾ ಕೊಠಡಿಗಳು ಭರ್ತಿಯಾಗಿವೆ.

ಮಂತ್ರಾಲಯ ಆನ್‌ಲೈನ್‌ ಸೇವೆಗಳನ್ನು ಬುಕ್ಕಿಂಗ್‌ ಮಾಡುವುದು ಹೇಗೆ?

ಆನ್‌ಲೈನ್‌ ಮೂಲಕ ಮಂತ್ರಾಲಯದ ವಿವಿಧ ಸೇವೆಗಳನ್ನು ಬುಕ್ಕಿಂಗ್‌ ಮಾಡಲು ಅವಕಾಶವಿದೆ. ಇದಕ್ಕಾಗಿ ಮಠದ ವೆಬ್‌ಸೈಟ್‌ನ ಆನ್‌ಲೈನ್‌ ಸೇವಾ ವಿಭಾಗವನ್ನು ಕ್ಲಿಕ್‌ ಮಾಡಿ. ಡೈಲಿ ಸೇವಾ, ಸಾಮೂಹಿಕ ಸೇವಾ, ಪ್ರಸಾದ ಸೇವಾ ಎಂಬ ಮೂರು ವಿಭಾಗಗಳಲ್ಲಿ ನಿಮಗೆ ಬೇಕಾದ ಸೇವೆಯನ್ನು ಬುಕ್ಕಿಂಗ್‌ ಮಾಡಲು ಅವಕಾಶವಿದೆ.

ಮಂತ್ರಾಲಯ ಮಠದ ವೆಬ್‌ಸೈಟ್‌ ಲಿಂಕ್‌: https://srsmatha.org

ಮಂತ್ರಾಲಯ ಮಠದ ಕಚೇರಿಯ ದೂರವಾಣಿ ಸಂಖ್ಯೆ: +91-08512-279459/28

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.