Sabarimala Revenue: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ 39 ದಿನಗಳಲ್ಲಿ 204 ಕೋಟಿ ರೂಪಾಯಿ ಆದಾಯ
ಕೇರಳದ ಪ್ರಸಿದ್ಧ ಅಯ್ಯಪ್ಪ ಕ್ಷೇತ್ರವಾಗಿರುವ ಶಬರಿಮಲೆ ದೇವಸ್ಥಾನದಲ್ಲಿ ಮಂಡಲಪೂಜಾ ಉತ್ಸವದ ಸಂಭ್ರಮ. ನಾಳೆ ಮಂಡಲಪೂಜೆ ನಡೆಯಲಿದ್ದು, ಡಿಸೆಂಬರ್ 25ರ ತನಕ ಸಂಗ್ರಹವಾಗಿರುವ ಆದಾಯ ಹಿಂದಿನ ಅವಧಿಗೆ ಹೋಲಿಸಿದರೆ 18 ಕೋಟಿ ರೂಪಾಯಿ ಕಡಿಮೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ತಿಳಿಸಿದೆ.
ಪತ್ತನಂತಿಟ್ಟ: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಕಳೆದ 39 ದಿನಗಳ ಅವಧಿಯಲ್ಲಿ ಸಂಗ್ರಹವಾದ ಆದಾಯ ಪ್ರಮಾಣ ಕಳೆದ ವರ್ಷಕ್ಕೆ ಹೋಲಿಸಿದರೆ 18 ಕೋಟಿ ರೂಪಾಯಿ ಕಡಿಮೆ ಇದೆ ಎಂದು ತಿರುವಾಂಕೂರು ದೇವಸ್ವಂ ಬೋರ್ಡ್ ಅಧ್ಯಕ್ಷ ಪಿಎಸ್ ಪ್ರಶಾಂತ್ ತಿಳಿಸಿದ್ದಾರೆ.
ಮಂಡಲ ಪೂಜಾ ಉತ್ಸವದ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪಿಎಸ್ ಪ್ರಶಾಂತ್, ಮಂಡಲ ಪೂಜೆ ಶುರುವಾಗಿ 39 ದಿನಗಳಾಗಿವೆ. ಇಂದು 40ನೇ ದಿನ ಈ ಅವಧಿಯಲ್ಲಿ 204.30 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 222.98 ಕೋಟಿ ರೂಪಾಯಿ ಸಂಗ್ರಹವಾಗಿತ್ತು ಎಂದು ಹೇಳಿದರುವುದಾಗಿ ಪಿಟಿಐ ವರದಿ ಮಾಡಿದೆ.
ಭಕ್ತರು ಸಲ್ಲಿಸಿರುವ ಕಾಣಿಕೆ ರೂಪದಲ್ಲಿ 63.89 ಕೋಟಿ ರೂಪಾಯಿ ಸಂಗ್ರಹವಾಗಿದೆ. ಅರವಣ ಪ್ರಸಾದ ಮಾರಾಟದಿಂದ 96.32 ಕೋಟಿ ರೂಪಾಯಿ, ಅಪ್ಪಂ ಪ್ರಸಾದ ಮಾರಾಟದಿಂದ 12.38 ಕೋಟಿ ರೂಪಾಯಿ ಸಂಗ್ರಹವಾಗಿದೆ. ಮಂಡಲ ಪೂಜೆಯ ಅವಧಿಯಲ್ಲಿ ಡಿಸೆಂಬರ್ 25ರ ತನಕ 31, 43, 163 ಭಕ್ತರು ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆದಿದ್ಧಾರೆ. ಈ ಪೈಕಿ 7,25.049 ಭಕ್ತರಿಗೆ ಉಚಿತವಾಗಿ ಭೋಜನ ಪ್ರಸಾದ ಪೂರೈಸಲಾಗಿದೆ ಎಂದು ಪ್ರಶಾಂತ್ ವಿವರಿಸಿದರು.
ಮಂಡಲ ಪೂಜೆಯು ನಾಳೆ (ಡಿ.27) ನಡೆಯಲಿದ್ದು, ಬಳಿಕ ದೇವಸ್ಥಾನದ ಬಾಗಿಲು ಮುಚ್ಚಲಿದೆ. ಡಿಸೆಂಬರ್ 30 ರಂದು ಮಕರ ಜ್ಯೋತಿ ಉತ್ಸವಕ್ಕಾಗಿ ದೇವಸ್ಥಾನದ ಬಾಗಿಲು ಮತ್ತೆ ತೆರೆಯಲಿದೆ. ಜನವರಿ 15ರಂದು ಮಕರ ಜ್ಯೋತಿ ಉತ್ಸವ ನಡೆಯಲಿದೆ. '