ತೆಲಂಗಾಣದ ವನಜೀವಿ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಪರಿಸರವಾದಿ ರಾಮಯ್ಯ ನಿಧನ
ತೆಲಂಗಾಣದ ವನಜೀವಿ ಎಂದೇ ಪ್ರಸಿದ್ಧರಾಗಿದ್ದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಖ್ಯಾತ ಪರಿಸರವಾದಿ ವನಜೀವಿ ರಾಮಯ್ಯ ನಿಧನರಾಗಿದ್ದಾರೆ. ಪರಿಸರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಮಯ್ಯನವರು ಎಲ್ಲರಿಗೂ ಆದರ್ಶಪ್ರಾಯರು.

ತೆಲಂಗಾಣ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತು ಪ್ರಕೃತಿ ಪ್ರೇಮಿಯಾಗಿದ್ದ ವನಜೀವಿ ರಾಮಯ್ಯ ಅವರು ಇಂದು (ಏ.12) ಬೆಳಿಗ್ಗೆ ನಿಧನರಾಗಿದ್ದಾರೆ. 87 ವರ್ಷದ ದಾರಿಪಲ್ಲಿ ರಾಮಯ್ಯ ಅಲಿಯಾಸ್ ವನಜೀವಿ ರಾಮಯ್ಯ ಅವರು ಶನಿವಾರ ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವರದಿಯಾಗಿದ್ದು, ಎದೆ ನೋವು ಕಾಣಿಸಿಕೊಂಡ ಕಾರಣ ಅವರನ್ನು ಖಮ್ಮಂನ ಪ್ರಧಾನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆಗ ವೈದ್ಯರು ಅವರು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಮಯ್ಯ ಅವರು ಸಾಕಷ್ಟು ಪರಿಸರ ಪ್ರಗತಿ ಕಾರ್ಯಗಳನ್ನು ಮಾಡಿದ್ದಾರೆ.
ಮರಗಳ ವ್ಯಾಪ್ತಿಯನ್ನು ವಿಸ್ತರಿಸಲು ನೀಡಿದ ಕೊಡುಗೆಗಾಗಿ ರಾಮಯ್ಯ ಅವರಿಗೆ 2017 ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಲಾಗಿತ್ತು. ಒಂದು ಕೋಟಿಗೂ ಹೆಚ್ಚು ಸಸಿಗಳನ್ನು ನೆಟ್ಟು ಹಸಿರಿನ ಮಹತ್ವವನ್ನು ಜಗತ್ತಿಗೆ ಸಾರಿದ ರಾಮಯ್ಯನವರು "ವೃಕ್ಷೋ ರಕ್ಷತಿ ರಕ್ಷಿತಃ" ಎಂಬ ಘೋಷಣೆಯ ಫಲಕವನ್ನು ಯಾವಾಗಲೂ ತೊಟ್ಟುಕೊಂಡಿರುತ್ತಿದ್ದರು. ಪರಿಸರಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ರಾಮಯ್ಯನವರನ್ನು ಸಾಕಷ್ಟು ಕಡೆಗಳಲ್ಲಿ ಗೌರವಿಸಲಾಗುತ್ತಿತ್ತು ಮತ್ತು ಭವಿಷ್ಯದ ಪೀಳಿಗೆಗೆ ಅವರು ಸ್ಫೂರ್ತಿಯಾದವರು. ಪ್ರಕೃತಿಯ ಮೇಲಿನ ಅವರ ಪ್ರೀತಿ ಎಷ್ಟು ಅಪಾರವಾಗಿತ್ತೆಂದರೆ, ಅವರು ತಮ್ಮ ಮೂವರು ಮೊಮ್ಮಕ್ಕಳಿಗೆ ಮರಗಳ ಹೆಸರಿಟ್ಟಿದ್ದಾರೆ. ಪ್ರಕೃತಿ ಮತ್ತು ಹಸಿರಿನ ಮೇಲಿನ ಪ್ರೀತಿಯಿಂದ ಅವರು ತಮ್ಮ ಮೊಮ್ಮಕ್ಕಳಿಗೆ ಚಂದನಪುಷ್ಪ, ಹರಿತ ಲಾವಣ್ಯ ಮತ್ತು ವನಶ್ರೀ ಎಂದು ಹೆಸರಿಟ್ಟಿದ್ದಾರೆ.
ಅವರ ಹುಟ್ಟೂರು ತೆಲಂಗಾಣದ ಖಮ್ಮಂ ಜಿಲ್ಲೆಯ ರೆಡ್ಡಿಪಲ್ಲಿ. ತಮ್ಮ ಹುಟ್ಟೂರಾದ ರೆಡ್ಡಿಪಲ್ಲಿ ಜೊತೆಗೆ, ಅವರು ತಮ್ಮ ಪೂರ್ವಜರ ಗ್ರಾಮವಾದ ಮುತಗುಡೆಮ್ ಮತ್ತು ಸುತ್ತಮುತ್ತಲಿನ ಅನೇಕ ಹಳ್ಳಿಗಳಲ್ಲಿ ವ್ಯಾಪಕವಾಗಿ ಮರಗಳನ್ನು ನೆಟ್ಟಿದ್ದಾರೆ. ಖಾಲಿ ಜಾಗ ಇದ್ದಲ್ಲೆಲ್ಲಾ ಮರಗಳನ್ನು ನೆಡುವುದು ಅವರ ದಿನನಿತ್ಯದ ಕಾಯಕವಾಗಿತ್ತು. ಅವರು ತಮ್ಮ ಮನೆಯ ಅಂಗಳದಲ್ಲಿ ಮತ್ತು ಮನೆಯ ಇನ್ನುಳಿದ ಭಾಗಗಳಲ್ಲಿ ಹಲವು ರೀತಿಯ ಮರಗಳನ್ನು ಬೆಳೆಸಿದ್ದಾರೆ. ರೆಡ್ಡಿಪಲ್ಲಿ ಗ್ರಾಮದ ರಸ್ತೆಗಳ ಇಕ್ಕೆಲಗಳಲ್ಲಿ, ಸರ್ಕಾರಿ ಕಚೇರಿಗಳ ಆವರಣದಲ್ಲಿ, ಶಾಲೆಗಳಲ್ಲಿ ಮತ್ತು ಇತರ ಖಾಲಿ ಜಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಸಸಿಗಳನ್ನು ನೆಟ್ಟಿದ್ದಾರೆ. ಗ್ರಾಮದಲ್ಲಿ ಹಸಿರನ್ನು ಹೆಚ್ಚಿಸಲು ಅವರು ಅವಿರತವಾಗಿ ಶ್ರಮಿಸಿದ್ದರು. ಆದರೆ ಇಂತಹ ಪುಣ್ಯ ಜೀವಿಯಿಂದು ಇಹಲೋಕ ತ್ಯಜಿಸಿದ್ದಾರೆ.
ರಾಮಯ್ಯ ಅವರ ನಿಧನಕ್ಕೆ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದು, ಅವರ ನಿಧನ ಸಮಾಜಕ್ಕೆ "ಭರಿಸಲಾಗದ ನಷ್ಟ" ಎಂದು ಹೇಳಿದ್ದಾರೆ. ಪ್ರಕೃತಿ ಮತ್ತು ಪರಿಸರವಿಲ್ಲದೆ ಮನುಕುಲದ ಉಳಿವು ಅಸಾಧ್ಯ ಎಂದು ದರಿಪಲ್ಲಿ ರಾಮಯ್ಯ ಅವರು ಬಲವಾಗಿ ನಂಬಿದ್ದರು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ವಿಭಾಗ