Omicron BF.7 Cases in India: ಭಾರತದಲ್ಲಿ ಘಾತಕ ವೈರಾಣುವಿನ ನಾಲ್ಕು ಪ್ರಕರಣ ಪತ್ತೆ: ಕಠಿಣ ನಿರ್ಬಂಧಗಳು ಬೀಳಲಿವೆಯಾ ಮತ್ತೆ?
ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಚೀನಾದಲ್ಲಿ ಭಾರೀ ಕೋವಿಡ್ ಉಲ್ಬಣಕ್ಕೆ ಚಾಲನೆ ನೀಡುತ್ತಿರುವ, ಓಮಿಕ್ರಾನ್ BF.7 ಉಪ-ವೇರಿಯಂಟ್‌ನ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಗುಜರಾತ್ ಮತ್ತು ಒಡಿಶಾದಲ್ಲಿಈ ಪ್ರಕರಣಗಳು ಬೆಳಕಿಗೆ ಬಂದಿವೆ. ಆದರೆ ಈ ರೋಗಿಗಳು ಸೂಕ್ತ ಚಿಕಿತ್ಸೆಯ ಬಳಿಕ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ನವದೆಹಲಿ: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಚೀನಾದಲ್ಲಿ ಭಾರೀ ಕೋವಿಡ್ ಉಲ್ಬಣಕ್ಕೆ ಚಾಲನೆ ನೀಡುತ್ತಿರುವ, ಓಮಿಕ್ರಾನ್ BF.7 ಉಪ-ವೇರಿಯಂಟ್‌ನ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ಗುಜರಾತ್ ಮತ್ತು ಒಡಿಶಾದಲ್ಲಿಈ ಪ್ರಕರಣಗಳು ಬೆಳಕಿಗೆ ಬಂದಿವೆ.
ಗುಜರಾತ್‌ನ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಮಾರಕ ಕೊರೊನಾವೈರಸ್ ಹೊಸ ತಳಿಯ ಎರುಡ ಪ್ರಕರಣಗಳು ಪತ್ತೆಯಾಗಿವೆ. ಅಕ್ಟೋಬರ್-ನವೆಂಬರ್‌ನಲ್ಲಿ BF.7 ಮತ್ತು BF.12 ರೂಪದ ಓಮಿಕ್ರಾನ್ ಸೋಂಕಿತ ರೋಗಿಗಳು ವರದಿಯಾಗಿದ್ದು, ಅವರನ್ನು ಹೋಮ್ ಐಸೋಲೇಷನ್‌ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗಿದೆ. ಈಗ ಇಬ್ಬರೂ ಸೋಂಕಿತರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದಾರೆ ಎಂದು ಗುಜರಾತ್ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.
ಎಲ್ಲಾ ಕೋವಿಡ್-ಪಾಸಿಟಿವ್ ಪ್ರಕರಣಗಳ ಮಾದರಿಗಳನ್ನು INSACOG ಜೀನೋಮ್ ಸೀಕ್ವೆನ್ಸಿಂಗ್ ಲ್ಯಾಬ್‌ಗಳಿಗೆ ಕಳುಹಿಸಲು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಿದೆ. INSACOG ಭಾರತದಲ್ಲಿನ ವಿವಿಧ ಕೋವಿಡ್ ಮಾದರಿಗಳನ್ನು ಅಧ್ಯಯನ ಮಾಡುವ ಮತ್ತು ಮೇಲ್ವಿಚಾರಣೆ ನಡೆಸುವ ಹೊಣೆಯನ್ನು ಹೊತ್ತುಕೊಂಡಿದೆ. ಇದನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಮ್ಯಾಪ್ ಮಾಡಲಾಗಿದೆ.
ಕೋವಿಡ್-19 ಮುನ್ನೆಚ್ಚರಿಕಾ ಕ್ರಮವಾಗಿ, ಅಂತರಾಷ್ಟ್ರೀಯ ಪ್ರಯಾಣಿಕರ ರ‍್ಯಾಂಡಮ್ ಸ್ಯಾಂಪಲ್ ಪರೀಕ್ಷೆಯನ್ನು ಇಂದಿನಿಂದ ದೇಶಾದ್ಯಂತ ವಿಮಾನ ನಿಲ್ದಾಣಗಳಲ್ಲಿ ಪ್ರಾರಂಭಿಸಲಾಗಿದೆ. ಯಾವುದೇ ಭೀತಿಗೆ ಕಾರಣವಿಲ್ಲದಿದ್ದರೂ, ಜನನಿಬಿಡ ಪ್ರದೇಶಗಳಲ್ಲಿ ಜನರು ಮಾಸ್ಕ್ ಧರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಪ್ರಾಥಮಿಕ ಮುನ್ಸೂಚನೆ ನೀಡಿದೆ.
ಪ್ರಸ್ತುತವಾಗಿ ಸಾರ್ವಜನಿಕ ಸಭೆಗಳು ಅಥವಾ ಪ್ರವಾಸಿ ತಾಣಗಳಿಗೆ ಯಾವುದೇ ಕೋವಿಡ್ ನಿರ್ಬಂಧನೆಗಳು ಇಲ್ಲದೇ ಇದ್ದರೂ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಇಲಾಖೆಯು ಸೂಚ್ಯವಾಗಿ ತಿಳಿಸಿದೆ.
ಸದ್ಯ ದೇಶದಲ್ಲಿ ಯಾವುದೇ ಕೋವಿಡ್-19 ಪ್ರೋಟೋಕಾಲ್ ಕಾರ್ಯನಿರ್ವಹಿಸುತ್ತಿಲ್ಲ. ಜೂನ್ ಬಳಿಕ ಕೇಂದ್ರ ಸರ್ಕಾರದ ಸಲಹೆಯ ಮೇರೆಗೆ, ಯಾವುದೇ ರಾಜ್ಯದಲ್ಲಿ ಮಾಸ್ಕ್ ಕಡ್ಡಾಯವಲ್ಲ. ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸಬೇಕೆಂದು ಈಗ ಕೇಂದ್ರ ಸಲಹೆ ನೀಡಿದೆಯಾದರೂ, ಮಾಸ್ಕ್ ಬಳಕೆ ಕಡ್ಡಾಯದ ನಿರ್ಧಾರವನ್ನು ಆಯಾ ರಾಜ್ಯಗಳೇ ಕೈಗೊಳ್ಳಬೇಕು ಎಂದು ಸ್ಪಷ್ಟಪಡಿಸಿದೆ.
ವಿಮಾನ ನಿಲ್ದಾಣಗಳಲ್ಲಿಯೂ ಮಾಸ್ಕ್ ಕಡ್ಡಾಯ ಎಂಬ ನಿಯಮ ಇಲ್ಲವಾದರೂ, ನವೆಂಬರ್‌ನಲ್ಲಿ ಕಳುಹಿಸಿದ ಸಲಹೆಯಂತೆ ಸಾಮಾಜಿಕ ಅಂತರವನ್ನು ಕಾಪಾಡುವುದು ಕಡ್ಡಾಯವಾಗಿದೆ.
"ಕೋವಿಡ್ ಇನ್ನೂ ಮುಗಿದಿಲ್ಲ. ನಾನು ಸಂಬಂಧಪಟ್ಟ ಎಲ್ಲರಿಗೂ ಎಚ್ಚರಿಕೆ ವಹಿಸಲು ಮತ್ತು ಕಣ್ಗಾವಲು ಬಲಪಡಿಸಲು ಸೂಚಿಸಿದ್ದೇನೆ. ಯಾವುದೇ ಪರಿಸ್ಥಿತಿಯನ್ನು ನಿರ್ವಹಿಸಲು ನಾವು ಸಿದ್ಧರಿದ್ದೇವೆ" ಎಂದು ತಜ್ಞರು ಮತ್ತು ಉನ್ನತ ಅಧಿಕಾರಿಗಳ ಸಭೆಯ ನಂತರ ಕೇಂದ್ರ ಸಚಿವ ಮನ್ಸೂಖ್ ಮಾಂಡವಿಯಾ ಸ್ಪಷ್ಟಪಡಿಸಿದ್ದಾರೆ.
ಕೋವಿಡ್ ಕುರಿತ ರಾಷ್ಟ್ರೀಯ ಕಾರ್ಯಪಡೆಯ ಮುಖ್ಯಸ್ಥರಾಗಿರುವ NITI ಆಯೋಗದ ಸದಸ್ಯ ವಿಕೆ ಪಾಲ್, ಸಾಕಷ್ಟು ಪರೀಕ್ಷೆಗಳನ್ನು ನಡೆಸುವ ಕಾರ್ಯಕ್ಕೆ ಮತ್ತೆ ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ಮಾರ್ಗಸೂಚಿಗಳಲ್ಲಿ ಇನ್ನೂ ಯಾವುದೇ ಬದಲಾವಣೆ ಇಲ್ಲ ಎಂದೂ ವಿಕೆ ಪಾಲ್ ತಿಳಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ದೇಶವು 129 ಹೊಸ ಸೋಂಕುಗಳನ್ನು ವರದಿ ಮಾಡಿದೆ ಮತ್ತು ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 3,408 ಆಗಿದೆ. ಕಳೆದ 24 ಗಂಟೆಗಳಲ್ಲಿ ಓರ್ವ ವ್ಯಕ್ತಿ ಕೋವಿಡ್‌ನಿಂದ ಮೃತಪಟ್ಟಿದ್ದು, ದೇಶದ ಒಟ್ಟಾರೆ ಸಾವಿನ ಸಂಖ್ಯೆ 5,30,677ಕ್ಕೆ ತಲುಪಿದೆ.
ತನ್ನ ಶೂನ್ಯ-ಕೋವಿಡ್ ನೀತಿಯ ಅಡಿಯಲ್ಲಿ ಲಾಕ್‌ಡೌನ್ ಮತ್ತು ಸಾಮೂಹಿಕ ಪರೀಕ್ಷೆ ಸೇರಿದಂತೆ ಕಡ್ಡಾಯ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಚೀನಾ ಹಿಂತೆಗೆದುಕೊಂಡಿದೆ. ಇದರಿಂದ ಚೀನಾದಲ್ಲಿ ಮತ್ತೆ ಅತಿರೇಕದ ಕೋವಿಡ್ ಉಲ್ಬಣವನ್ನು ಕಾಣಬಹುದಾಗಿದ್ದು, ರೋಗಿಗಳ ಮಿತಿಮೀರಿದ ಹೊರೆಯನ್ನು ನಿಭಾಯಿಸಲು ಆಸ್ಪತ್ರೆಗಳು ಹತಾಶವಾಗಿ ಪ್ರಯತ್ನಿಸುತ್ತಿವೆ.
ಬೀಜಿಂಗ್‌ನ ಸ್ಥಳೀಯ ಅಧಿಕಾರಿಗಳು ಮಂಗಳವಾರ ಕೋವಿಡ್‌ನಿಂದ ಐದು ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದ್ದಾರೆ. ಔಷಧಾಲಯಗಳಲ್ಲಿ ಔಷಧಿಗಳ ಲಭ್ಯತೆ ಕಡಿಮೆಯಾಗುತ್ತಿದೆ ಎಂದೂ ಚೀನಾದ ಅಧಿಕಾರಿಗಳು ಎಚ್ಚರಿಸಿದ್ದಾರೆ.
ವಿಭಾಗ