Kannada News  /  Nation And-world  /  Report Says Coronation Of King Charles Iii Will Be In June Next Year
ಕಿಂಗ್‌ ಚಾರ್ಲ್ಸ್-III
ಕಿಂಗ್‌ ಚಾರ್ಲ್ಸ್-III (AP)

King Charles-III: 2023ರ ಜೂನ್ 3ಕ್ಕೆ ಕಿಂಗ್‌ ಚಾರ್ಲ್ಸ್‌ ಪಟ್ಟಾಣಿಷೇಕ: ಏಕಿಷ್ಟು ತಡ?

06 October 2022, 12:50 ISTHT Kannada Desk
06 October 2022, 12:50 IST

ಬ್ರಿಟನ್‌ನ ಮಹಾರಾಜ ಚಾರ್ಲ್ಸ್‌-III ಅವರ ಪಟ್ಟಾಭಿ‍ಷೇಕ 2023ರ ಜೂನ್ 3ರಂದು ನಡೆಯಲಿದೆ ಎಂದು ಬಕಿಂಗ್‌ಹ್ಯಾಮ್‌ ಅರಮನೆ ಮೂಲಗಳು ಖಚಿತಪಡಿಸಿವೆ. ಕಾರ್ಯಭಾರ ಆರಂಭಿಸುವ ವೇಳೆಗೆ ಮಹಾರಾಜ ಚಾರ್ಲ್ಸ್‌- III ಅವರ ವಯಸ್ಸು 74 ವರ್ಷ ದಾಟಲಿದ್ದು, ಈ ಮೂಲಕ ಅವರು ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ವಯಸ್ಕ ರಾಜನಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬುದು ವಿಶೇಷ.

ಲಂಡನ್: ಬ್ರಿಟನ್‌ನ ಮಹಾರಾಜ ಚಾರ್ಲ್ಸ್‌-III ಅವರ ಪಟ್ಟಾಭಿ‍ಷೇಕ 2023ರ ಜೂನ್ 3ರಂದು ನಡೆಯಲಿದೆ ಎಂದು ಬಕಿಂಗ್‌ಹ್ಯಾಮ್‌ ಅರಮನೆ ಮೂಲಗಳು ಖಚಿತಪಡಿಸಿವೆ. ಕ್ವೀನ್‌ ಎಲಿಜಬೆತ್-II ನಿಧನದ ಬಳಿಕ, ಕಿಂಗ್‌ ಚಾರ್ಲ್ಸ್-III‌ ಬ್ರಿಟನ್‌ ಮಹಾರಾಜರಾಗಿ ಅಧಿಕಾರ ನಡೆಸಲಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ವೆಸ್ಟ್‌ ಮಿನಿಸ್ಟರ್ ಅಬೆಯಲ್ಲಿ ಮಹಾರಾಜ ಚಾರ್ಲ್ಸ್‌-III ಅವರ ಪಟ್ಟಾಭಿಷೇಕ ಕಾರ್ಯಕ್ರಮ ನೆರವೇರಲಿದೆ. ಆದರೆ ಅವರ ತಾಯಿಯ ಪಟ್ಟಾಭಿಷೇಕ ಕಾರ್ಯಕ್ರಮಕ್ಕಿಂತ ಈ ಕಾರ್ಯಕ್ರಮ ಸರಳವಾಗಿ ನೆರವೇರಲಿದೆ ಎಂದು ಬಕಿಂಗ್‌ಹ್ಯಾಮ್‌ ಅರಮನೆ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಪ್ರದಾಯಗಳ ಪ್ರಕಾರ ಬ್ರಿಟನ್ ರಾಣಿ ಎಲಿಜಬೆತ್-II ಅವರು ನಿಧನರಾದ 2 ದಿನಗಳ ಬಳಿಕವೇ, ಮಹಾರಾಜ ಚಾರ್ಲ್ಸ್‌-III ಅವರ ಪಟ್ಟಾಭಿಷೇಕ ನೆರವೇರಿತ್ತು. ಆದರೆ ಕಿಂಗ್‌ ಚಾರ್ಲ್ಸ್-III ಅಧಿಕೃತವಾಗಿ 2023ರ ಜೂನ್ 3ರಂದು‌ ಕಾರ್ಯಭಾರ ಸ್ವೀಕರಿಸಲಿದ್ದಾರೆ. ಮಹಾರಾಜ ಚಾರ್ಲ್ಸ್‌-III ಅವರ ಪತ್ನಿ ಕೆಮಿಲ್ಲಾ ಪಾರ್ಕರ್ ಬ್ರಿಟನ್ ಕ್ವೀನ್ ಕಾನ್ಸರ್ಟ್‌ ಆಗಿ ಪಟ್ಟಾಭಿಷೇಕ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ರಾಣಿ ಕಿರೀಟ ತೊಡಲಿದ್ದಾರೆ.

ಈಗಾಗಲೇ ಕಿಂಗ್‌ ಚಾರ್ಲ್ಸ್-III‌ ಅವರಿಗೆ ಬ್ರಿಟನ್‌ ಮಹಾರಾಜರ ಕಿರೀಟ ತೊಡಿಸಲಾಗಿದೆ. ಆದರೆ ಎಲ್ಲಾ ಅಗತ್ಯ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕವೇ ಅವರು ಅಧಿಕೃತವಾಗಿ ಕಾರ್ಯಾರಂಭ ಮಾಡಲಿದ್ದಾರೆ. ಕಾರ್ಯಭಾರ ಆರಂಭಿಸುವ ವೇಳೆಗೆ ಮಹಾರಾಜ ಚಾರ್ಲ್ಸ್‌- III ಅವರ ವಯಸ್ಸು 74 ವರ್ಷ ದಾಟಲಿದ್ದು, ಈ ಮೂಲಕ ಅವರು ಬ್ರಿಟನ್ ಇತಿಹಾಸದಲ್ಲೇ ಅತ್ಯಂತ ವಯಸ್ಕ ರಾಜನಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬುದು ವಿಶೇಷ.

ಬ್ರಿಟನ್ ದೇಶದ ರಾಜಮನೆತನದ ಸಂಪ್ರದಾಯಗಳ ಪ್ರಕಾರ, ನೂತನವಾಗಿ ಪಟ್ಟಾಭಿಷೇಕ ಮಾಡಲಾಗುವ ರಾಜ, ತನ್ನ ಕಿರೀಟವನ್ನು ಧರಿಸಿ ಎಡ್ವರ್ಡ್‌ ಚೇರ್ ಎಂಬ ಆಸನದ ಮೇಲೆ ಕೂರಬೇಕಾಗುತ್ತದೆ. ಬ್ರಿಟನ್ ಮಹಾರಾಜರ ಈ ಆಸನಕ್ಕೆ ಎಡ್ವರ್ಡ್ಸ್ ಚೇರ್ ಎಂದು 1661ರಲ್ಲಿ ನಾಮಕರಣ ಮಾಡಲಾಗಿತ್ತು. ಆಗ ಕಿಂಗ್ ಚಾರ್ಲ್ಸ್-II ಅವರ ಪಟ್ಟಾಭಿಷೇಕದ ವೇಳೆ ಈ ಆಸನಕ್ಕೆ ಎಡ್ವರ್ಡ್ಸ್ ಚೇರ್ ಎಂದು ನಾಮಕರಣ ಮಾಡಲಾಗಿತ್ತು.

ಸಾಂಪ್ರದಾಯಿಕವಾಗಿ ಪಟ್ಟಾಭಿಷೇಕ ವಿಧಿ ವಿಧಾನಗಳು ನಡೆದ ಬಳಿಕ ರಾಣಿ ಕಾನ್ಸರ್ಟ್ ಹಾಗೂ ರಾಜ ಚಾರ್ಲ್ಸ್ ಇಬ್ಬರೂ ಕೂಡಾ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಕಿಂಗ್‌ಹ್ಯಾಮ್ ಅರಮನೆಯಲ್ಲೇ ಈ ಎಲ್ಲಾ ವಿಧಿ ವಿಧಾನಗಳು ನೆರವೇರಲಿವೆ. ಕಳೆದ ಸೆಪ್ಟೆಂಬರ್ 10 ರಂದು ಕಿಂಗ್ ಚಾರ್ಲ್ಸ್-III‌ ಅವರು ಬ್ರಿಟನ್ ಹಾಗೂ ಕಾಮನ್‌ವೆಲ್ತ್‌ನ ಉತ್ತರಾಧಿಕಾರಿ ರಾಜನಾಗಿ ಅಧಿಕಾರ ಸ್ವೀಕರಿಸಿ ಭಾಷಣ ಮಾಡಿದ್ದರು. ಈ ವೇಳೆ ಅವರು ತಮ್ಮ ತಾಯಿಯ ಸೇವೆ ಹಾಗೂ ಸಾಧನೆಯನ್ನು ಕೊಂಡಾಡಿದ್ದರು.

ಬ್ರಿಟನ್, ವಿಶ್ವಾದ್ಯಂತ ಇರುವ ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಶಾಂತಿ, ಸಮೃದ್ದಿ ನೆಲೆಸಲಿ ಎಂದು ಕಿಂಗ್ ಚಾರ್ಲ್ಸ್-III‌‌ ತಮ್ಮ ಭಾಷಣದಲ್ಲಿ ಆಶಿಸಿದ್ದರು. ಸಂವಿಧಾನಬದ್ಧ ಸರ್ಕಾರದ ಒಳಿತನ್ನು ಬಯಸಿದ್ದ ಅವರು, ತಮ್ಮ ರಾಜ ಕುಟುಂಬ ಪಾಲನೆ ಮಾಡಿಕೊಂಡು ಬಂದಿರುವ ಪದ್ದತಿಗಳನ್ನು ಮುಂದುವರೆಸಿಕೊಂಡು ಹೋಗಲು ಬದ್ಧ ಎಂದು ಘೋಷಿಸಿದ್ದರು.

ಕಳೆದ ಸೆ.8 ರಂದು ಬ್ರಿಟನ್‌ ದೇಶವನ್ನು ಸುದೀರ್ಘ ಕಾಲ ಆಳಿದ್ದ ಮಹಾರಾಣಿ ಕ್ವೀನ್‌ ಎಲಿಜಬೆತ್-II ನಿಧನರಾಗಿದ್ದರು. 6 ಫೆಬ್ರವರಿ 1952 ರಂದು ಬ್ರಿಟನ್‌ ಮಹಾರಾಣಿಯಾಗಿ ಅಧಿಕಾರ ಸ್ವೀಕರಿಸಿದ್ದ ರಾಣಿ ಎಲಿಜಬೆತ್‌, ತಮ್ಮ ನಿಧನದವರೆಗೂ ಅದೇ ಪಟ್ಟದಲ್ಲಿ ಮುಂದುವರೆದಿದ್ದರು.

ಬ್ರಿಟನ್‌ ಮಹಾರಾಣಿ ಕ್ವೀನ್‌ ಎಲಿಜಬೆತ್‌ ಅವರ ಅಂತ್ಯಸಂಸ್ಕಾರದಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ವಿಶ್ವದ 200ಕ್ಕೂ ಹೆಚ್ಚು ದೇಶಗಳ ಗಣ್ಯರು ಭಾಗವಹಿಸಿದ್ದರು. ಮಹಾರಾಣಿ ಎಲಿಜಬೆತ್‌ ನಿಧನದಿಂದ ಸುದೀರ್ಘ ಇತಿಹಾಸವೊಂದು ಅಂತ್ಯವಾಗಿದೆ ಎಂದು ಭಾರತ ತನ್ನ ಶೋಕ ಸಂದೇಶದಲ್ಲಿ ಉಲ್ಲೇಖಿಸಿತ್ತು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ವಿಭಾಗ