ಈ ಧರ್ಮ ಅನುಸರಿಸುವ ಜನರು ವಿಶ್ವದಲ್ಲೇ ಹೆಚ್ಚು ಶ್ರೀಮಂತರಂತೆ; ಜನರ ಕುತೂಹಲ ಹೆಚ್ಚಿಸಿದ ವರದಿಯ ಆಸಕ್ತಿದಾಯಕ ಅಂಶಗಳಿವು
ವಿಶ್ವದ ಒಟ್ಟು ಜನಸಂಖ್ಯೆ 800 ಕೋಟಿಗೂ ಹೆಚ್ಚು. ಈ ಪೈಕಿ ಇದರಲ್ಲಿ ಕ್ರೈಸ್ತ ಧರ್ಮವನ್ನು ಅನುಸರಿಸುವ ಜನರ ಸಂಖ್ಯೆಯೇ ಹೆಚ್ಚು. ಜಗತ್ತಿನಲ್ಲಿ ಯಾವ ಧರ್ಮಕ್ಕೆ ಸೇರಿದ ಜನರು ಹೆಚ್ಚು ಶ್ರೀಮಂತರು ಎನ್ನುವ ಚರ್ಚೆ ಇತ್ತೀಚೆಗೆ ಜೋರಾಗಿದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ.

ಜಗತ್ತಿನಲ್ಲಿ ಹಲವು ಜಾತಿ-ಧರ್ಮಗಳನ್ನು ಅನುಸರಿಸುವ ಜನರಿದ್ದಾರೆ. ಕೆಲವು ದೇಶಗಳಲ್ಲಿ ಒಂದೇ ಧರ್ಮದ ಜನರ ಸಂಖ್ಯೆ ಹೆಚ್ಚಿದ್ದರೆ, ಭಾರತದಂತಹ ದೇಶಗಳಲ್ಲಿ ಹಲವು ಧರ್ಮಗಳ ಜನರು ಸಹಬಾಳ್ವೆ ನಡೆಸುತ್ತಿದ್ದಾರೆ. ಅತ್ತ ಆರ್ಥಿಕ ಸ್ಥಿತಿಯ ನೆಲೆಗಟ್ಟಿನಲ್ಲಿ ನೋಡಿದಾಗ, ವಿವಿಧ ವರ್ಗಗಳ ಜನರೂ ಇರುತ್ತಾರೆ. ಜಗತ್ತಿನ ಶ್ರೀಮಂತ ವ್ಯಕ್ತಿಗಳ ಪಟ್ಟಿ ನೋಡಿದರೆ, ಒಂದು ಕಾಲದಲ್ಲಿ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರು. ಈಗ ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ವಿಶ್ವದ ನಂಬರ್ ವನ್ ಶ್ರೀಮಂತ. ಇವರಂತೆಯೇ ಹಲವು ಶ್ರೀಮಂತ ವ್ಯಕ್ತಿಗಳು ಕೋಟಿಕೋಟಿ ಲೆಕ್ಕದಲ್ಲಿ ಆಸ್ತಿ ಹೊಂದಿದ್ದಾರೆ. ನಿವ್ವಳ ಆಸ್ತಿ ಮೌಲ್ಯದ ಪ್ರಕಾರ, ಭಾರತದಲ್ಲಿ ಮುಖೇಶ್ ಅಂಬಾನಿ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬುದು ಬಹುತೇಕ ಎಲ್ಲರಿಗೂ ತಿಳಿದಿದೆ.
ಇಲ್ಲಿ ಇಷ್ಟೆಲ್ಲಾ ಪೀಠಿಕೆ ಹಾಕಲು ಕಾರಣವಿದೆ. ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಜಗತ್ತಿನ ಅತ್ಯಂತ ಶ್ರೀಮಂತ ಧರ್ಮ ಯಾವುದು ಎಂಬ ಚರ್ಚೆ ಜೋರಾಗಿದೆ. ಅಂದರೆ, ಯಾವ ಧರ್ಮಕ್ಕೆ ಸೇರಿದ ಜನರು ಆರ್ಥಿಕವಾಗಿ ಹೆಚ್ಚು ಸಿರಿವಂತರು ಎಂಬ ಚರ್ಚೆ ಇದು. ನೆಟ್ಟಿಗರು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳು ಯಾವ ಧರ್ಮದಲ್ಲಿ ಹೆಚ್ಚಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ವ್ಯಕ್ತಪಡಿಸಿದ್ದಾರೆ.
ವಿಶ್ವದಲ್ಲಿ ಒಟ್ಟಾರೆ 800 ಕೋಟಿಗೂ ಅಧಿಕ ಜನರಿದ್ದಾರೆ. ಇದರಲ್ಲಿ ಕ್ರೈಸ್ತ ಧರ್ಮಕ್ಕೆ ಸೇರಿದ ಜನರ ಸಂಖ್ಯೆ ಹೆಚ್ಚು. ಅಂದರೆ ಒಟ್ಟು ಜನಸಂಖ್ಯೆಯಲ್ಲಿ ಸುಮಾರು 238 ಕೋಟಿ ಜನರು ಕ್ರಿಶ್ಚಿಯನ್ ಧರ್ಮದವರು. ಉಳಿದಂತೆ 191 ಕೋಟಿಯಷ್ಟು ಜನರು ಇಸ್ಲಾಂ ಧರ್ಮಕ್ಕೆ ಸೇರಿದವರಾಗಿದ್ದರೆ, 116 ಕೋಟಿ ಜನರು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ ಎಂದು ಜಾಗತಿಕ ಜನಸಂಖ್ಯಾ ವರದಿಗಳು ಹೇಳುತ್ತವೆ.
ಕ್ರೈಸ್ತ ಧರ್ಮೀಯರಲ್ಲಿ ಹೆಚ್ಚು ಸಂಪತ್ತು
ಕ್ರೈಸ್ತ ಧರ್ಮಕ್ಕೆ ಸೇರಿದ ಜನರ ಸಂಖ್ಯೆ ವಿಶ್ವದಲ್ಲಿ ಹೆಚ್ಚು. ಅದೇ ರೀತಿ ಕ್ರಿಶ್ಚಿಯನ್ ಧರ್ಮ ಅನುಸರಿಸುವ ಜನರು ವಿಶ್ವದಲ್ಲಿ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎಂದು ‘ನ್ಯೂ ವರ್ಲ್ಡ್ ವೆಲ್ತ್’ ವರದಿ ತಿಳಿಸಿದೆ. ಇಲ್ಲೂ, ಇಸ್ಲಾಂ ಧರ್ಮದಲ್ಲಿ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಶ್ರೀಮಂತರಿದ್ದಾರೆ. ಇದೇ ವೇಳೆ ಹಿಂದೂ ಧರ್ಮದ ಜನರು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಬರುತ್ತಾರೆ.
ವಿಶ್ವದಾದ್ಯಂತ ಕ್ರಿಶ್ಚಿಯನ್ನರು ಅತಿ ಹೆಚ್ಚು ಶ್ರೀಮಂತರು ಎಂಬುದನ್ನು ವರದಿ ಹೇಳುತ್ತಿದೆ. ನಂತರದ ಸ್ಥಾನದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ಇದ್ದಾರೆ. ಇದೇ ವೇಳೆ, ವಿಶ್ವದ ಸಂಪತ್ತಿನ ಬಹುಪಾಲು ಭಾಗವು ಯಾವುದೇ ಧರ್ಮವನ್ನು ಅನುಸರಿಸದ ಜನರ ಒಡೆತನದಲ್ಲಿದೆ ಎಂಬುದನ್ನೂ ಈ ವರದಿ ಹೇಳಿದೆ.
ಶೇ 55ರಷ್ಟು ಆಸ್ತಿ ಒಂದೇ ಧರ್ಮ ಅನುಸರಿಸುವ ಜನರಲ್ಲಿ!
‘ನ್ಯೂ ವರ್ಲ್ಡ್ ವೆಲ್ತ್’ ವರದಿಯ ಪ್ರಕಾರ, ಧರ್ಮದ ಆಧಾರದಲ್ಲಿ 'ಹೆಚ್ಚು ನಿವ್ವಳ ಮೌಲ್ಯ ಹೊಂದಿರುವ ವ್ಯಕ್ತಿಗಳ' ಪಟ್ಟಿಯಲ್ಲಿ ಕ್ರಿಶ್ಚಿಯನ್ನರು ಪ್ರಾಬಲ್ಯ ಹೊಂದಿದ್ದಾರೆ. ಅಂದರೆ 1 ಮಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚು ಮೌಲ್ಯದ ಆಸ್ತಿ ಹೊಂದಿರುವ ಜನರನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗಿದೆ. ವರದಿಯ ಪ್ರಕಾರ, ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಜನರು ವಿಶ್ವದ ಒಟ್ಟು ಸಂಪತ್ತಿನ ಶೇ 55ರಷ್ಟು ಆಸ್ತಿ ಹೊಂದಿದ್ದಾರೆ.
ಪ್ರಪಂಚದಾದ್ಯಂತದ ಮುಸ್ಲಿಂ ಸಮುದಾಯದ ಜನರು ವಿಶ್ವದ ಒಟ್ಟು ಸಂಪತ್ತಿನ ಶೇ 5.9ರಷ್ಟು ಆಸ್ತಿ ಹೊಂದಿದ್ದಾರೆ. ಇದೇ ವೇಳೆ ಮೂರನೇ ಸ್ಥಾನದಲ್ಲಿರುವ ಹಿಂದೂ ಧರ್ಮದ ಜನರು ಒಟ್ಟು ಸಂಪತ್ತಿನ ಶೇ 3.3 ಪ್ರಮಾಣದ ಆಸ್ತಿ ಹೊಂದಿದ್ದಾರೆ. ಯಹೂದಿ ಧರ್ಮ ಅನುಸರಿಸುವ ಜನರ ಒಟ್ಟು ಸಂಪತ್ತು ಶೇ 1.1ರಷ್ಟಿದೆ ಎಂದು ವರದಿ ಹೇಳಿದೆ.
ಕುತೂಹಲಕಾರಿ ಅಂಶವೆಂದರೆ, ವಿಶ್ವದ ಒಟ್ಟು ಸಂಪತ್ತಿನ ಒಂದು ದೊಡ್ಡ ಭಾಗವು ಯಾವುದೇ ಧರ್ಮವನ್ನು ಅನುಸರಿಸದ ಜನರಲ್ಲಿದೆಯಂತೆ. ಒಟ್ಟು ಆಸ್ತಿಯ ಶೇ. 34.8 ರಷ್ಟು ಪಾಲು ಈ ಭಿನ್ನ ವರ್ಗದ ಜನರ ಬಳಿ ಇದೆ ಎಂದು ರಿಪೋರ್ಟ್ ಹೇಳಿದೆ.
