Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್‌ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್‌ ಬುಕ್‌ ಮಾಡಿ! ಇಲ್ಲಿದೆ ವಿವರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್‌ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್‌ ಬುಕ್‌ ಮಾಡಿ! ಇಲ್ಲಿದೆ ವಿವರ

Republic Day 2023: ಕರ್ತವ್ಯಪಥದಲ್ಲಿ ಕುಳಿತು ಗಣತಂತ್ರ ದಿನದ ಪರೇಡ್‌ ನೋಡುವಾಸೆಯೇ?; ಆನ್‌ಲೈನಲ್ಲಿ ಟಿಕೆಟ್‌ ಬುಕ್‌ ಮಾಡಿ! ಇಲ್ಲಿದೆ ವಿವರ

Republic Day 2023: ಟಿಕೆಟ್‌ ಖರೀದಿ, ಪಾಸ್‌ ಪಡೆಯುವ ಪ್ರಕ್ರಿಯೆಯನ್ನು ಈ ಆಮಂತ್ರಣ ಪೋರ್ಟಲ್‌ ಬಹಳ ಸರಳಗೊಳಿಸಿದೆ. ಬಳಕೆದಾರ ಸ್ನೇಹಿ ಪ್ರಕ್ರಿಯೆಯನ್ನಾಗಿಸಿದೆ. ಅಲ್ಲದೆ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿದೆ. ಟಿಕೆಟ್‌ ಬುಕ್‌ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ.

ಆಮಂತ್ರಣ ಪೋರ್ಟಲ್‌ನ ಮುಖಪುಟ
ಆಮಂತ್ರಣ ಪೋರ್ಟಲ್‌ನ ಮುಖಪುಟ

ಆನ್‌ಲೈನ್‌ ಇನ್ವಿಟೇಶನ್‌ ಮ್ಯಾನೇಜ್‌ಮೆಂಟ್‌ ಪೋರ್ಟಲ್‌ (www.aamantran.mod.gov.in) ಅನ್ನು ಕೇಂದ್ರ ಸರ್ಕಾರ ಶುಕ್ರವಾರ ಲೋಕಾಪರ್ಣೆ ಮಾಡಿದೆ. ಗಣರಾಜ್ಯ ದಿನ ಮತ್ತು ಸ್ವಾತಂತ್ರ್ಯ ದಿನದ ಕಾರ್ಯಕ್ರಮಗಳನ್ನು ವೀಕ್ಷಿಸುವುದಕ್ಕೆ ಸಾರ್ವಜನಿಕರಿಗೆ ಈ ಪೋರ್ಟಲ್‌ ಇಂದಿನಿಂದ ನೆರವಾಗುತ್ತದೆ.

ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್‌ ಭಟ್‌ ಈ ಪೋರ್ಟಲ್‌ ಅನ್ನು ಇಂದು ನವದೆಹಲಿಯಲ್ಲಿ ಲೋಕಾರ್ಪಣೆ ಮಾಡಿದರು. ಇದು ಸರ್ಕಾರದ ಇ-ಗವರ್ನೆನ್ಸ್‌ ಉಪಕ್ರಮವಾಗಿದೆ.

ಕಾರ್ಯಕ್ರಮಕ್ಕೆ ಆಹ್ವಾನಿತ ಗಣ್ಯರು ಮತ್ತು ಅತಿಥಿಗಳು ತಮ್ಮ ಇ-ಆಹ್ವಾನ ಪತ್ರಿಕೆಯನ್ನು ಈ ಪೋರ್ಟಲ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಕರ್ತವ್ಯ ಪಥದಲ್ಲಿ ಕುಳಿತು ಪರೇಡ್‌ ಮತ್ತು ಕಾರ್ಯಕ್ರಮ ವೀಕ್ಷಿಸಲು ಬಯಸುವ ಸಾರ್ವಜನಿಕರು ಕೂಡ ಆನ್‌ಲೈನ್‌ ಮೂಲಕ ಟಿಕೆಟ್‌ ಖರೀದಿಸಲು ಈ ಪೋರ್ಟಲ್‌ ನೆರವಾಗುತ್ತದೆ. ಯಾವುದೇ ಭೌಗೋಳಿಕ ಮಿತಿ ಇಲ್ಲದೆ ಸಾರ್ವಜನಿಕರು ಈ ಪೋರ್ಟಲನ್ನು ಬಳಸಬಹುದು. ಗಣತಂತ್ರ ಪರೇಡ್‌, ಸ್ವಾತಂತ್ರ್ಯ ದಿನದ ಕಾರ್ಯಕ್ರಮ ವೀಕ್ಷಣೆಗೆ ಟಿಕೆಟ್‌ ಖರೀದಿಸಬಹುದು. ಒಬ್ಬರು 10 ಟಿಕೆಟ್‌ ತನಕ ಖರೀದಿಸಬಹುದು.

ಟಿಕೆಟ್‌ ಖರೀದಿ, ಪಾಸ್‌ ಪಡೆಯುವ ಪ್ರಕ್ರಿಯೆಯನ್ನು ಈ ಪೋರ್ಟಲ್‌ ಬಹಳ ಸರಳಗೊಳಿಸಿದೆ. ಬಳಕೆದಾರ ಸ್ನೇಹಿ ಪ್ರಕ್ರಿಯೆಯನ್ನಾಗಿಸಿದೆಯಲ್ಲದೆ, ಸರ್ಕಾರ ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡಿದೆ.

ಆಮಂತ್ರಣ ಪೋರ್ಟಲ್‌ನಲ್ಲಿರುವ ಫೀಚರ್ಸ್‌ ಏನೇನು?

ಆಮಂತ್ರಣ ಪೋರ್ಟಲ್‌ನಲ್ಲಿ ಈ ಕೆಳಗಿನ ಫೀಚರ್ಸ್‌ ಇವೆ.

  • ಕ್ಯೂಆರ್‌ ಕೋಡ್‌ ಆಧಾರಿತ ದೃಢೀಕರಣ ವ್ಯವಸ್ಥೆ. ಇದು ಸುಧಾರಿತ ಸುರಕ್ಷತೆಯನ್ನು ಖಾತರಿಗೊಳಿಸುತ್ತದೆ.
  • ಪಾಸ್‌/ ಟಿಕೆಟ್‌ಗಳನ್ನು ಇಮೇಲ್‌/ ಎಸ್‌ಎಂಎಸ್‌ ಮೂಲಕ ಡಿಜಿಟಲ್‌ ಆಗಿ ರವಾನಿಸುತ್ತದೆ.
  • ಟಿಕೆಟ್‌ ಅನ್ನು ಕ್ಯಾನ್ಸಲ್‌ ಅಥವಾ ವರ್ಗಾವಣೆ ಮಾಡುವುದು ಸಾಧ್ಯವಿಲ್ಲ.
  • ಆಹ್ವಾನಿತರಿಂದ ಪಾಸ್‌ ಸ್ವೀಕೃತಿ ದೃಢೀಕರಿಸುವ ಆರ್‌ಎಸ್‌ವಿಪಿ ಆಯ್ಕೆಯೂ ಇದೆ.
  • ಭವಿಷ್ಯದ ಕಾರ್ಯಕ್ರಮಗಳ ಉತ್ತಮ ನಿರ್ವಹಣೆಗಾಗಿ ಪೋಸ್ಟ್‌ ಇವೆಂಟ್‌ ಡೇಟಾ ಸಿಗಲಿದೆ.
  • ಇ- ಆಹ್ವಾನ ಪತ್ರಗಳನ್ನು ಈ ಪೋರ್ಟಲ್‌ ಮೂಲಕ ಒದಗಿಸುವುದಲ್ಲದೆ, ಗೃಹ ಸಚಿವಾಲಯವು ಸೇನಾ ಭವನ (ಗೇಟ್‌ ನಂ.2), ಶಾಸ್ತ್ರಿ ಭವನ (ಗೇಟ್‌ ನಂ.3), ಜಂತರ್‌ ಮಂತರ್‌ (ಮುಖ್ಯದ್ವಾರದ ಬಳಿ), ಪ್ರಗತಿ ಮೈದಾನ (ಗೇಟ್‌ ನಂ.1)ಗಳಲ್ಲಿ ಟಿಕೆಟ್‌ ಖರೀದಿಗೆ ಬೂತ್‌/ಕೌಂಟರ್‌ಗಳನ್ನು ಸ್ಥಾಪಿಸಲಿದೆ.

ಇದಲ್ಲದೆ, ಸಂಸದರಿಗಾಗಿ ಪಾರ್ಲಿಮೆಂಟ್‌ ಹೌಸ್‌ (ರಿಸೆಪ್ಶನ್‌ ಆಫೀಸ್‌) ನಲ್ಲಿ ವಿಶೇಷ ಕೌಂಟರ್‌ ತೆರೆಯಲಿದೆ. ಈ ಕೌಂಟರ್‌ ಜನವರಿ 18ರಂದು ತೆರೆಯಲಿದೆ. ಇದು ಪೂರ್ವಾಹ್ನ 10ರಿಂದ ಮಧ್ಯಾಹ್ನ 12.30ರ ತನಕ, ಅಪರಾಹ್ನ 2 ಗಂಟೆಯಿಂದ ಸಂಜೆ 4.30ರ ತನಕ ತೆರೆದಿರಲಿದೆ. ಹೆಚ್ಚಿನ ಮಾಹಿತಿಗೆ www.mod.gov.in, www.indianrdc.mod.gov.in ಗಳನ್ನು ಗಮನಿಸಬಹುದು.

ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್‌ ಮಾಡುವುದು ಹೇಗೆ?

ಹಂತ 1 - ಆಮಂತ್ರಣ ವೆಬ್‌ಸೈಟ್‌ (https://aamantran.mod.gov.in/login) ಓಪನ್‌ ಮಾಡುವುದು.

ಹಂತ 2 - “Don't have an Account? Sign Up for Buying tickets” ಎಂದು ಬರೆದಿರುವಲ್ಲಿ ಸೈನ್‌ ಅಪ್‌ ಫಾರ್‌ ಬೈಯಿಂಗ್‌ ಟಿಕೆಟ್‌ ಕ್ಲಿಕ್‌ ಮಾಡಿ.

ಹಂತ 3 - ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ ಮತ್ತು ಇತರೆ ಅಗತ್ಯ ದಾಖಲೆಗಳನ್ನು ಭರ್ತಿ ಮಾಡಿ ಖಾತೆ ತೆರೆಯಬೇಕು. ಅದಾದ ಬಳಿಕ ಮತ್ತೆ ಮೇನ್‌ಪೇಜ್‌ಗೆ ಬರಬೇಕು.

ಹಂತ 4 - ಇಲ್ಲಿ ನಿಮ್ಮ ಮೊಬೈಲ್‌ ನಂಬರ್‌ ನಮೂದಿಸಿ, ಕ್ಯಾಪ್ಚಾ ನಮೂದಿಸಿ ರಿಕ್ವೆಸ್ಟ್‌ ಒಟಿಪಿ ಕ್ಲಿಕ್‌ ಮಾಡಿ.

ಹಂತ 5 - ಒಟಿಪಿ ನಮೂದಿಸಿ ಉಳಿದ ಪ್ರಕ್ರಿಯೆಗಳನ್ನು ಪೂರೈಸಿ.

ರಕ್ಷಣಾ ಇಲಾಖೆಯ ವಕ್ತಾರರ ಈ ಕೆಳಗಿನ ಟ್ವೀಟ್‌ನಲ್ಲಿರುವ ವಿಡಿಯೋವನ್ನು ವೀಕ್ಷಿಸಬಹುದು. ಆ ಮೂಲಕವೂ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಹುದು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.