Republic Day 2024: ಜ 26 ರಂದೇ ಗಣರಾಜ್ಯೋತ್ಸವ ಆಚರಿಸುವುದೇಕೆ? ಇತಿಹಾಸ, ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
Republic Day 2024: ಭಾರತವು ಈ ಬಾರಿ 75ನೇ ವರ್ಷದ ಗಣರಾಜ್ಯೋತ್ಸವ ಸಂಭ್ರಮದಲ್ಲಿದೆ. ಭಾರತವು ಈ ದಿನದಂದೇ ಏಕೆ ಗಣರಾಜ್ಯೋತ್ಸವವನ್ನು ಆಚರಿಸುತ್ತಿದೆ..? ಗಣರಾಜ್ಯೋತ್ಸವ ದಿನಾಚರಣೆ ಹಿಂದಿನ ಇತಿಹಾಸವೇನು? ಅದರ ಮಹತ್ವವೇನು? ಇಲ್ಲಿದೆ ಮಾಹಿತಿ

Republic Day 2024: ಭಾರತವು ಪ್ರತಿ ವರ್ಷ ಜನವರಿ 26ರಂದು ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತದೆ. ಈ ವರ್ಷ ಭಾರತವು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದ ಹೊಸ್ತಿಲಿನಲ್ಲಿದೆ. ಗಣರಾಜ್ಯೋತ್ಸವದ ಪ್ರಯುಕ್ತ ರಾಷ್ಟ್ರ ರಾಜಧಾನಿ ದೆಹಲಿ ಕರ್ತವ್ಯ ಪಥ (ರಾಜಪಥ)ದಲ್ಲಿ ಪಥಸಂಚಲನ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧ ರಾಜ್ಯಗಳ ಸಾಂಸ್ಕೃತಿಕ ಮೆರಗನ್ನು ಸಾರುವ ಸ್ತಬ್ಧ ಚಿತ್ರಗಳ ಪ್ರದರ್ಶನವನ್ನೂ ಮಾಡಲಾಗುತ್ತದೆ. ಭಾರತದ 75ನೇ ವರ್ಷದ ಗಣರಾಜ್ಯೋತ್ಸವದ ಅತಿಥಿಯಾಗಿ ಫ್ರಾನ್ಸ್ನ ಅಧ್ಯಕ್ಷ ಎಮಾನ್ಯುಲ್ ಮ್ಯಾಕ್ರನ್ ಆಗಮಿಸಲಿದ್ದಾರೆ.
ಭಾರತೀಯರು ಪ್ರತಿ ವರ್ಷ ಗಣರಾಜ್ಯೋತ್ಸವದ ದಿನದಂದು ಸ್ತಬ್ಧಚಿತ್ರಗಳ ಪ್ರದರ್ಶನದ ಮೂಲಕ ಭಾರತದ ಶ್ರೀಮಂತ ಸಂಸ್ಕೃತಿ , ಪರಂಪರೆ , ದೇಶವು ಸಾಧಿಸಿದ ಪ್ರಗತಿ ಹಾಗೂ ಸಾಧನೆಗಳನ್ನು ಸಾರುತ್ತಲೇ ಬಂದಿದ್ದಾರೆ. ಭಾರತೀಯ ವಾಯುಸೇನೆ, ನೌಕಾಪಡೆ ಹಾಗೂ ಭೂಸೇನೆಯ ಮೈನವರೇಳಿಸುವ ಪ್ರದರ್ಶನಗಳು ಕೂಡ ಗಣರಾಜ್ಯೋತ್ಸವ ದಿನಾಚರಣೆಯ ಪ್ರಮುಖ ಆಕರ್ಷಣೆಗಳ ಪೈಕಿ ಒಂದಾಗಿದೆ.
ಗಣರಾಜ್ಯೋತ್ಸವ ದಿನಾಚರಣೆಯ ಇತಿಹಾಸ
1950ರ ಜನವರಿ 26ರಂದು ಭಾರತೀಯ ಸಂವಿಧಾನವನ್ನು ಔಪಚಾರಿಕವಾಗಿ ಅಂಗೀಕರಿಸಲಾಯಿತು. ಹೀಗಾಗಿ ಅಂದಿನಿಂದ ಜನವರಿ 26ನ್ನು ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಭಾರತವು 1947ರ ಆಗಸ್ಟ್ 15ರಂದು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿಯನ್ನು ಪಡೆದ ಭಾರತಕ್ಕಾಗಿ ಸಂವಿಧಾನ ರಚನೆಯ ಕಾರ್ಯ ಆರಂಭಗೊಂಡಿತು. ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ರಚಿಸಿದ ಭಾರತೀಯ ಸಂವಿಧಾನವು 1950ರ ಜನವರಿ 26ರಂದು ಜಾರಿಗೆ ಬಂದಿತು. 1946ರ ಡಿಸೆಂಬರ್ 9ರಂದು ಭಾರತದ ಮೊಟ್ಟ ಮೊದಲ ಸಂವಿಧಾನ ಸಂಬಂಧಿ ಸಭೆ ನಡೆಸಲಾಯಿತು. 1949ರ ನವೆಂಬರ್ 26ರಂದು ಅಂತಿಮ ಬಾರಿ ಸಭೆ ಸೇರಿತು. ಈ ದಿನವನ್ನು ಸಂವಿಧಾನ ದಿನವಾಗಿಯೂ ಆಚರಿಸಲಾಗುತ್ತದೆ.
1950ರ ಜನವರಿ 26ರಂದು ಭಾರತವು ಗಣರಾಜ್ಯವಾಗಿದೆ ಎಂಬುದನ್ನು ತಿಳಿಸಲು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಭಾರತದ ಬಾವುಟವನ್ನು ಹಾರಿಸಿದ್ದರು. ಈ ದಿನದಂದು ಭಾರತವು ಗಣರಾಜ್ಯವಾಗಿ ಕರೆಸಿಕೊಂಡ ಹಿನ್ನೆಲೆಯಲ್ಲಿ ಈ ದಿನವನ್ನು ರಾಷ್ಟ್ರೀಯ ಹಬ್ಬದ ದಿನವನ್ನಾಗಿ ಪರಿಗಣಿಸವಂತೆ ನಿರ್ಧರಿಸಲಾಯ್ತು.
ವಿದೇಶದಿಂದ ಗಣ್ಯ ವ್ಯಕ್ತಿಗಳ ಆಹ್ವಾನ
ಭಾರತವು ಪ್ರತಿ ವರ್ಷವು ಗಣರಾಜ್ಯೋತ್ಸವ ದಿನಕ್ಕೆ ವಿದೇಶದಿಂದ ಗಣ್ಯ ವ್ಯಕ್ತಿಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸುತ್ತದೆ. ಭಾರತದ ಮೊಟ್ಟ ಮೊದಲ ಗಣರಾಜ್ಯೋತ್ಸವ ಅತಿಥಿಯಾಗಿ ಭಾರತಕ್ಕೆ ಇಂಡೋನೇಷ್ಯಾದ ಅಧ್ಯಕ್ಷ ಸುಕರ್ನೋ ಆಗಮಿಸಿದ್ದರು. ಭಾರತವು 1955ರಿಂದ ಗಣರಾಜ್ಯೋತ್ಸವ ಪರೇಡ್ ನಡೆಸುತ್ತಾ ಬಂದಿದೆ. ಈಗ ಮೋದಿ ಸರ್ಕಾರವು ಕರ್ತವ್ಯಪಥ ಎಂದು ಮರು ನಾಮಕರಣ ಮಾಡಿರುವ ಸ್ಥಳವನ್ನು ಮೊದಲು ರಾಜಪಥ ಎಂದು ಕರೆಯಲಾಗುತ್ತದೆ. ಮೊಟ್ಟ ಮೊದಲ ಬಾರಿಗೆ ಗಣರಾಜ್ಯೋತ್ಸವ ಮೆರವಣಿಗೆ ನಡೆದ ಗಣರಾಜ್ಯೋತ್ಸವ ದಿನದಂದು ಭಾರತಕ್ಕೆ ವಿಶೇಷ ಅತಿಥಿಯಾಗಿ ಪಾಕಿಸ್ತಾನದ ಗವರ್ನರ್ ಜನರಲ್ ಮಲಿಕ್ ಗುಲಾಮ್ ಮಹಮ್ಮದ್ ಆಗಮಿಸಿದ್ದರು.
ಗಣರಾಜ್ಯೋತ್ಸವ ದಿನವನ್ನು ಇಡೀ ಭಾರತೀಯರು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ರಾಷ್ಟ್ರಪತಿಗಳು ರಾಷ್ಟ್ರಧ್ವಜ ಹಾರಿಸುತ್ತಾರೆ. ಇದಾದ ಬಳಿಕ ವಿವಿಧ ರಾಜ್ಯಗಳು ಹಾಗೂ ಸರ್ಕಾರಿ ಇಲಾಖೆಗಳಿಂದ ಭವ್ಯ ಮೆರವಣಿಗೆ ನಡೆಯತ್ತದೆ. ಜೊತೆಗೆ ಮಿಲಿಟರಿ ಹಾಗೂ ಸಾಂಸ್ಕೃತಿಕ ಪ್ರದರ್ಶನವಿರುತ್ತದೆ. ಭಾರತದ ರಾಷ್ಟ್ರಪತಿಗಳು ಪರಮವೀರ ಚಕ್ರ, ಅಶೋಕ ಚಕ್ರ ಹಾಗೂ ವೀರಚಕ್ರವನ್ನು ವೀರ ಯೋಧರಿಗೆ ನೀಡುತ್ತಾರೆ. ಅಲ್ಲದೇ ಪದ್ಮ ಪ್ರಶಸ್ತಿಗಳನ್ನು ಅರ್ಹ ನಾಗರಿಕ ನೀಡಿ ಗೌರವಿಸಲಾಗುತ್ತದೆ .
'ಮನೆ-ಮನದಲ್ಲಿ ಶ್ರೀರಾಮ' ಸರಣಿಗೆ ನೀವೂ ಬರೆಯಿರಿ.
ಇಮೇಲ್: ht.kannada@htdigital.in
