Republic Day: 75ನೇ ಗಣರಾಜ್ಯೋತ್ಸವ ಸಂಭ್ರಮ; ಭಾರತದ ಸಂವಿಧಾನದ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Republic Day: 75ನೇ ಗಣರಾಜ್ಯೋತ್ಸವ ಸಂಭ್ರಮ; ಭಾರತದ ಸಂವಿಧಾನದ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳಿವು

Republic Day: 75ನೇ ಗಣರಾಜ್ಯೋತ್ಸವ ಸಂಭ್ರಮ; ಭಾರತದ ಸಂವಿಧಾನದ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ವಿಚಾರಗಳಿವು

Republic Day 2024: ಇದೇ ಜನವರಿ 26 ರಂದು ಭಾರತವು 75ನೇ ವರ್ಷದ ಗಣರಾಜ್ಯೋತ್ಸವ ದಿನವನ್ನು ಆಚರಿಸುತ್ತಿದೆ. ಭಾರತದ ಸಂವಿಧಾನದ ಬಗ್ಗೆ ಅದರ ಮಹತ್ವದ ಬಗ್ಗೆ ನಿಮಗೆ ತಿಳಿದಿದೆ. ಆದರೆ ಸಂವಿಧಾನ ರಚನೆಯ ಸಂಬಂಧ ನಿಮಗೆ ತಿಳಿದಿರದ ಕೆಲವು ಕುತೂಹಲಕಾರಿ ಅಂಶಗಳು ಇಲ್ಲಿವೆ.

75ನೇ ಗಣರಾಜ್ಯೋತ್ಸವ ಸಂಭ್ರಮ, ಸಂವಿಧಾನದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಚಾರಗಳು
75ನೇ ಗಣರಾಜ್ಯೋತ್ಸವ ಸಂಭ್ರಮ, ಸಂವಿಧಾನದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲದ ವಿಚಾರಗಳು (PC: Unsplash)

Republic Day 2024: ಈ ಬಾರಿ ಭಾರತವು 75ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಪ್ರತಿ ವರ್ಷದಂತೆ ಈ ವರ್ಷವು ಭಾರತವು ಗಣರಾಜ್ಯೋತ್ಸವ ದಿನದಂದು ವಿಶೇಷ ಅತಿಥಿಯನ್ನು ಭಾರತಕ್ಕೆ ಕರೆಸುತ್ತಿದೆ. ಈ ಬಾರಿ ಭಾರತದ ಗಣತಂತ್ರ ದಿನಕ್ಕೆ ವಿಶೇಷ ಅತಿಥಿಯಾಗಿ ಫ್ರಾನ್ಸ್​ ಅಧ್ಯಕ್ಷ ಇಮಾನ್ಯುವಲ್​ ಮ್ಯಾಕ್ರನ್​ ಆಗಮಿಸುತ್ತಿದ್ದಾರೆ. ಅಲ್ಲದೇ ಭಾರತದಲ್ಲಿ ಗಣರಾಜ್ಯೋತ್ಸವ ದಿನದಂದು ಫ್ರಾನ್ಸ್​​ನಿಂದ ಆಗಮಿಸುತ್ತಿರುವ ಆರನೇ ಅಧ್ಯಕ್ಷ ಎಂಬ ಕೀರ್ತಿಗೆ ಇಮ್ಯಾನುವಲ್​ ಮ್ಯಾಕ್ರನ್​ ಪಾತ್ರರಾಗಿದ್ದಾರೆ. ಭಾರತದ 75ನೇ ಗಣರಾಜ್ಯೋತ್ಸವ ದಿನಕ್ಕೆ ವಿಶೇಷ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಜೊ ಬಿಡೈನ್​​ಗೆ ಆಹ್ವಾನ ನೀಡಲಾಗಿತ್ತು. ಆದರೆ ಜೊ ಬಿಡೈನ್​ರಿಗೆ ಈ ಸಮಯದಲ್ಲಿ ಭಾರತದ ಪ್ರವಾಸ ಸಾಧ್ಯವಿಲ್ಲದ ಕಾರಣ ಫ್ರಾನ್ಸ್​ ಅಧ್ಯಕ್ಷರಿಗೆ ಆಹ್ವಾನ ನೀಡಲಾಗಿದೆ .

ಹೆಚ್ಚಿನ ಜನರಿಗೆ ಗೊತ್ತಿಲ್ಲದ ವಿಚಾರಗಳು

ಭಾರತವು ಈ ಬಾರಿ 75ನೇ ಗಣತಂತ್ರ ದಿನವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಸಂವಿಧಾನ ರಚನೆಯ ಸಂಬಂಧ ಕೆಲವು ವಿಶೇಷವಾದ ಘಟನೆಗಳ ಬಗ್ಗೆ ತಿಳಿದುಕೊಳ್ಳೋಣ . ಭಾರತದ ಸಂವಿಧಾನವನ್ನು 1949ರ ನವೆಂಬರ್​ 26ರಂದು ಅಂಗೀಕರಿಸಲಾಗಿತ್ತು. ಹೀಗಾಗಿ ಸಂವಿಧಾನ ಶಿಲ್ಪಿ ಡಾ.ಬಿ ಆರ್​ ಅಂಬೇಡ್ಕರ್​ರ ಸವಿನೆನಪಿಗಾಗಿ ಭಾರತವು ಪ್ರತಿ ವರ್ಷ ನವೆಂಬರ್​ 26ರಂದು ಸಂವಿಧಾನ ದಿನವನ್ನು ಆಚರಿಸುತ್ತದೆ. ಭಾರತದ ಸಂವಿಧಾನವು ವಿಶ್ವದ ಅತೀ ದೊಡ್ಡ ಸಂವಿಧಾನವಾಗಿದೆ. ಈ ಸಂವಿಧಾನವನ್ನು ಡಾ. ಬಿಆರ್​ ಅಂಬೇಡ್ಕರ್​ ಅವರು ಬ್ರಿಟನ್​, ಜರ್ಮನಿ, ಕೆನಡಾ ಹಾಗೂ ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಅನೇಕ ದೇಶಗಳ ಸಂವಿಧಾನಗಳಿಂದ ಸ್ಪೂರ್ತಿ ಪಡೆದು ರಚಿಸಲಾಗಿದೆ.

ಇನ್ನೊಂದು ಗಮನಿಸಬೇಕಾದ ವಿಚಾರ ಏನೆಂದರೆ ಭಾರತೀಯ ಸಂವಿಧಾನವನ್ನು ಸಂಪೂರ್ಣ ಕೈ ಬರಹದಲ್ಲಿಯೇ ಬರೆಯಲಾಗಿದೆ. ಪಾರ್ಲಿಮೆಂಟ್​ನ ಲೈಬ್ರರಿಯಲ್ಲಿ ಇಂದಿಗೂ ಭಾರತದ ಕೈ ಬರಹದ ಸಂವಿಧಾನದ ಪ್ರತಿಯನ್ನು ಸಂರಕ್ಷಿಸಿ ಇಡಲಾಗಿದೆ. ಇದು ಕೈ ಬರಹದಲ್ಲಿ ಬರೆಯಲಾದ ವಿಶ್ವದ ಅತೀ ದೊಡ್ಡ ಸಂವಿಧಾನ ಕೂಡ ಹೌದು. 2 ವರ್ಷಗಳ ಸಮಯಾವಕಾಶ ತೆಗೆದುಕೊಂಡು ಭಾರತದ ಸಂವಿಧಾನ ರಚಿಸಲಾಗಿದೆ. ನಿಖರವಾಗಿ ಹೇಳಬೇಕು ಎಂದರೆ ಸರಿಯಾಗಿ 11 ತಿಂಗಳು 18 ದಿನಗಳ ಸಮಯಾವಕಾಶವನ್ನು ತೆಗೆದುಕೊಂಡು ಭಾರತದ ಸಂವಿಧಾನವನ್ನು ಬರೆಯಲಾಗಿದೆ. ಸಂವಿಧಾನದ ಮೂಲ ಪ್ರತಿಯನ್ನು ಹಿಂದಿ ಹಾಗೂ ಇಂಗ್ಲೀಷ್​ ಭಾಷೆಯಲ್ಲಿ ಕೈ ಬರಹದಲ್ಲಿ ಬರೆಯಲಾಗಿದೆ.

ಸಂವಿಧಾನವನ್ನು ಕೈ ಬರಹದಲ್ಲಿ ಬರೆದಿದ್ದ ನಾರಾಯಣ ರಾಯ್ಝಾದಾ

ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿದವರು ಡಾ. ಬಿಆರ್​ ಅಂಬೇಡ್ಕರ್​ . ಇದೇ ಕಾರಣಕ್ಕೆ ಅಂಬೇಡ್ಕರ್​ರಿಗೆ ಸಂವಿಧಾನ ಶಿಲ್ಪಿ ಎಂಬ ಬಿರುದನ್ನೂ ನೀಡಲಾಗಿದೆ. ಆದರೆ ಸಂವಿಧಾನವನ್ನು ಪ್ರೇಮ್​ ಬಿಹಾರಿ ನಾರಾಯಣ ರಾಯ್ಝಾದಾ ಎಂಬವರು ಕೈ ಬರಹದಲ್ಲಿ ಬರೆದಿದ್ದರು.

ಆರು ತಿಂಗಳ ಅವಧಿಯನ್ನು ಪಡೆದುಕೊಂಡು ಕೈ ಬರಹದಲ್ಲಿ ಬರೆದಿದ್ದಾರೆ. ಅದನ್ನು ಬರೆಯಲು ಪ್ರೇಮ್​ ಬಿಹಾರಿ ನಾರಾಯಣ ರಾಯ್ಝಾದಾ ಅವರು 433 ಪೆನ್​ ನಿಬ್​ಗಳನ್ನು ಬಳಕೆ ಮಾಡಿದ್ದರಂತೆ..! ಭಾರತದ ಸಂವಿಧಾನವನ್ನು ರೂಪಿಸುವಲ್ಲಿ ಬಹುಮುಖ್ಯ ಪಾತ್ರವನ್ನು ವಹಿಸಿದ ಡಾ. ಬಿ ಆರ್​ ಅಂಬೇಡ್ಕರ್​ನ್ನು ಭಾರತ ಇಂದಿಗೂ ಆರಾಧಿಸುತ್ತಿದೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್​ರ ಮಾರ್ಗದರ್ಶನದಲ್ಲಿ ರೂಪುಗೊಂಡ ಭಾರತದ ಈ ಸಂವಿಧಾನ ಇಂದಿಗೂ ಭಾರತಕ್ಕೆ ಆದರ್ಶಪ್ರಾಯವಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.