ಗಣರಾಜ್ಯೋತ್ಸವ ಪರೇಡ್ ನೇರ ನೋಡಬೇಕು ಅನ್ನೋ ಆಸೆ, ಟಿಕೆಟ್ ಬುಕ್ ಮಾಡೋದು ಹೇಗೆ, ರಿಪಬ್ಲಿಕ್ ಡೇ ಟಿಕೆಟ್ ದರ ಎಷ್ಟು, ಇಲ್ಲಿದೆ ಪೂರ್ತಿ ವಿವರ
Republic Day 2025 parade: ನೀವು ಗಣರಾಜ್ಯ ಡೇ ಪೆರೇಡ್‌ಗೆ ಹಾಜರಾಗಲು ಯೋಜಿಸುತ್ತಿದ್ದೀರಾ? ರಿಪಬ್ಲಿಕ್ ಡೇ ಟಿಕೆಟ್ ದರ ಮತ್ತು ಇತರ ವಿವರಗಳನ್ನು ಒಳಗೊಂಡಂತೆ ಟಿಕೆಟ್‌ಗಳನ್ನು ಹೇಗೆ ಕಾಯ್ದಿರಿಸುವುದು ಎಂಬ ಮಾರ್ಗದರ್ಶಿ ವಿವರ ಇಲ್ಲಿದೆ.

Republic Day parade 2025: ಭಾರತ ತನ್ನ 76 ನೇ ಗಣರಾಜ್ಯೋತ್ಸವವನ್ನು ಜನವರಿ 26 ರ ಭಾನುವಾರದಂದು ಆಚರಿಸಲು ಸಜ್ಜಾಗಿದೆ. ಭಾರತೀಯರು ಸಂಭ್ರಮ ಸಡಗರಗಳೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮ ಕಣ್ತುಂಬಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಗಣರಾಜ್ಯೋತ್ಸವ ದೇಶದ ಹಬ್ಬವಾದ ಕಾರಣ ರಾಷ್ಟ್ರೀಯ ರಜಾದಿನವೂ ಹೌದು. ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ ಪಥಸಂಚಲನ. ಇದು ದೇಶದ ಸಾಂಸ್ಕೃತಿಕ ಶ್ರೀಮಂತಿಕೆ, ಮಿಲಿಟರಿ ಶಕ್ತಿಯ ಪ್ರದರ್ಶನಕ್ಕೆ ವೇದಿಕೆಯೂ ಹೌದು. ಈ ವರ್ಷದ ಗಣರಾಜ್ಯೋತ್ಸವ ಪರೇಡ್ ಕಾರ್ಯಕ್ರಮದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು. ಈ ಬಾರಿ ನೀವು ಕೂಡ ಗಣರಾಜ್ಯ ದಿನಾಚರಣೆಯಲ್ಲಿ ಭಾಗವಹಿಸುತ್ತೀರಾದರೆ ಅದಕ್ಕೂ ಅವಕಾಶ ಇದೆ. ಗಣರಾಜ್ಯೋತ್ಸವ ಪರೇಡ್ ನೇರ ನೋಡಬೇಕು ಅನ್ನೋ ಆಸೆ ಬಹಳಷ್ಟು ಇರುವವರು ಗಮನಿಸಬೇಕಾದ ವಿಷಯ ಇದು. ರಿಪಬ್ಲಿಕ್ ಡೇ ಟಿಕೆಟ್ ಬುಕ್ ಮಾಡೋದು ಹೇಗೆ, ರಿಪಬ್ಲಿಕ್ ಡೇ ಟಿಕೆಟ್ ದರ ಎಷ್ಟು, ಎಂಬಿತ್ಯಾದಿ ಪೂರ್ತಿ ವಿವರ ಇಲ್ಲಿದೆ.
ರಿಪಬ್ಲಿಕ್ ಡೇ 2025: ಆನ್‌ಲೈನ್ ಮೂಲಕ ರಿಪಬ್ಲಿಕ್ ಡೇ ಟಿಕೆಟ್ ಬುಕ್ ಮಾಡೋದು ಹೇಗೆ
1) ರಿಪಬ್ಲಿಕ್ ಡೇ ಟಿಕೆಟ್ ಪಡೆಯುವುದಕ್ಕೆ ಕೇಂದ್ರ ಸರ್ಕಾರದ ಅಧಿಕೃತ ವೆಬ್ ತಾಣ https://aamantran.mod.gov.in/login ಕ್ಕೆ ಭೇಟಿ ನೀಡಬೇಕು.
2) ಮೊದಲೇ ಖಾತೆ ಇದ್ದರೆ ಹೆಸರು ವಿವರ ನೋಂದಾಯಿಸಬೇಕಾದ್ದಿಲ್ಲ. ಇಲ್ಲದೇ ಇದ್ದರೆ ಹೊಸದಾಗಿ ಖಾತೆ ತೆರೆಯಬೇಕು. ಅದಕ್ಕಾಗಿ https://aamantran.mod.gov.in/register ಗೆ ಭೇಟಿ ನೀಡಬೇಕು. ಅಲ್ಲಿ ಹೆಸರು, ಇಮೇಲ್ ಐಡಿ, ಮೊಬೈಲ್ ನಂಬರ್ ದಾಖಲಿಸಿ. ಒಟಿಪಿ ಬರುತ್ತದೆ. ಅದನ್ನೂ ನಮೂದಿಸಿ ಖಾತೆ ತೆರೆಯಿರಿ
3) ಇಷ್ಟಾದ ಬಳಿಕ, https://aamantran.mod.gov.in/login ತಾಣದಲ್ಲಿ ಲಾಗಿನ್ ಆಗಿ.
4) ಜನವರಿ 25, 26, 27ರ ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ಬುಕ್ ಮಾಡಬಹುದು.
5) ನಿಮ್ಮ ಐಡಿ ಮತ್ತು ಮೊಬೈಲ್ ನಂಬರ್ ದಾಖಲಿಸಿ ವೆರಿಫಿಕೇಶನ್ ಮಾಡಿಸಿಕೊಂಡು, ಟಿಕೆಟ್ ಮಾದರಿ ಮತ್ತು ಸಂಖ್ಯೆಗೆ ಅನುಗುಣವಾಗಿ ಹಣ ಪಾವತಿಸಿ.
6) ಹಣ ಪಾವತಿಸಿದ ಬಳಿಕ ನಿಮ್ಮ ಟಿಕೆಟ್‌ಗಳು ಪಕ್ಕಾ ಆಗುತ್ತವೆ. ಅದರ ವಿವರವನ್ನು ನಿಮ್ಮ ಮೊಬೈಲ್, ಇಮೇಲ್‌ಗೆ ರವಾನಿಸಲಾಗುತ್ತದೆ.
ರಿಪಬ್ಲಿಕ್ ಡೇ 2025: ಮೊಬೈಲ್ ಆಪ್ ಮೂಲಕ ರಿಪಬ್ಲಿಕ್ ಡೇ ಟಿಕೆಟ್ ಬುಕ್ ಮಾಡೋದು ಹೇಗೆ
ರಕ್ಷಣಾ ಸಚಿವಾಲಯವು ಆಮಂತ್ರಣ್ ಮೊಬೈಲ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು iOS (ಆಪ್ ಸ್ಟೋರ್) ಮತ್ತು ಆಂಡ್ರಾಯ್ಡ್ (ಗೂಗಲ್ ಪ್ಲೇ) ಎರಡರಲ್ಲೂ ಲಭ್ಯವಿದೆ. ಟಿಕೆಟ್‌ಗಳನ್ನು ಖರೀದಿಸಲು, ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ. ಓಪನ್ ಮಾಡಬೇಕು. ಟಿಕೆಟ್ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ನಿಮ್ಮ ಖರೀದಿಯನ್ನು ಪೂರ್ಣಗೊಳಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿದರೆ ಸಾಕು.
ರಿಪಬ್ಲಿಕ್ ಡೇ 2025: ಆಪ್‌ಲೈನ್‌ನಲ್ಲಿ ಟಿಕೆಟ್ ಪಡೆಯುವುದು ಹೇಗೆ
ರಕ್ಷಣಾ ಸಚಿವಾಲಯವು ಆಫ್‌ಲೈನ್ ಬುಕಿಂಗ್‌ಗಾಗಿ ನವದೆಹಲಿಯಾದ್ಯಂತ ಹಲವಾರು ಟಿಕೆಟ್ ಕೌಂಟರ್‌ಗಳನ್ನು ಸ್ಥಾಪಿಸಿದೆ. ಟಿಕೆಟ್ ಮಾರಾಟವು ಜನವರಿ 7 ರಂದು ಪ್ರಾರಂಭವಾಯಿತು.ಜನವರಿ 25, 2025 ರವರೆಗೆ ಮುಂದುವರಿಯುತ್ತದೆ. ವಾರದ ದಿನಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಮತ್ತು ಭಾನುವಾರ ಮತ್ತು ರಜಾದಿನಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ಕೌಂಟರ್‌ಗಳು ತೆರೆದಿರುತ್ತವೆ. ಟಿಕೆಟ್ ಬುಕ್ ಮಾಡುವಾಗ ಮಾನ್ಯತೆ ಹೊಂದಿರುವ ಫೋಟೋ ಐಡಿ ಅಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾಪರವಾನಗಿಯನ್ನು ಜತೆಗಿಟ್ಟುಕೊಂಡಿರಬೇಕು.
ರಿಪಬ್ಲಿಕ್ ಡೇ ಟಿಕೆಟ್ ಕೌಂಟರ್‌ಗಳು, ರಿಪಬ್ಲಿಕ್ ಡೇ ಟಿಕೆಟ್ ದರ
ದೆಹಲಿಯ ಉತ್ತರ ಬ್ಲಾಕ್ ರೌಂಡ್ ಅಬೌಟ್, ಸೇನಾ ಭವನ (ಗೇಟ್ ನಂ. 2), ಪ್ರಗತಿ ಮೈದಾನ (ಗೇಟ್ ನಂ. 1), ಜಂತರ್ ಮಂತರ್ (ಮುಖ್ಯ ಗೇಟ್), ಶಾಸ್ತ್ರಿ ಭವನ (ಗೇಟ್ ನಂ. 3 ಹತ್ತಿರ), ಜಾಮ್‌ನಗರ ಹೌಸ್ (ಇಂಡಿಯಾ ಗೇಟ್ ಎದುರು), ಕೆಂಪು ಕೋಟೆ (ಆಗಸ್ಟ್ 15 ಉದ್ಯಾನವನದ ಒಳಗೆ ಮತ್ತು ಜೈನ ದೇವಾಲಯದ ಎದುರು), ಸಂಸತ್ ಭವನ (ಸ್ವಾಗತ ಕಚೇರಿ) - ಸಂಸತ್ ಸದಸ್ಯರಿಗೆ ವಿಶೇಷ ಕೌಂಟರ್ ತೆರೆಯಲಾಗಿದೆ.
ರಿಪಬ್ಲಿಕ್ ಡೇ ಪರೇಡ್ ಟಿಕೆಟ್ ದರ 100 ರೂಪಾಯಿ ಮತ್ತು 20 ರೂಪಾಯಿ ಪ್ರತಿ ಟಿಕೆಟ್‌ಗೆ, ಬೀಟಿಂಗ್ ರೀಟ್ರೀಟ್ ಫುಲ್ ಡ್ರೆಸ್ ರಿಹರ್ಸಲ್ ಟಿಕೆಟ್ ದರ 20 ರೂಪಾಯಿ, ಬೀಟಿಂಗ್ ರೀಟ್ರೀಟ್ ಕಾರ್ಯಕ್ರಮದ ಟಿಕೆಟ್ ದರ 100 ರೂಪಾಯಿ.
ರಿಪಬ್ಲಿಕ್ ಡೇ ಕಾರ್ಯಕ್ರಮ ನಡೆಯುವ ಕರ್ತವ್ಯ ಪಥಕ್ಕೆ ಸಮೀಪ ಉದ್ಯೋಗ ಭವನ ಸ್ಟೇಷನ್ (ಯೆಲ್ಲೋ ಲೈನ್), ಸೆಂಟ್ರಲ್ ಸೆಕ್ರೆಟೇರಿಯಟ್ ಸ್ಟೇಷನ್ (ಯೆಲ್ಲೋ ಮತ್ತು ವಯೋಲೆಟ್ ಲೈನ್) ಮೆಟ್ರೋ ರೈಲು ನಿಲ್ದಾಣಗಳಿವೆ.
