Republic Day 2025: ದೆಹಲಿಯ ಕರ್ತವ್ಯಪಥದಲ್ಲಿ ಭವ್ಯ ಪರೇಡ್‌ ಶುರು; ಮಿನಿ ಭಾರತ ಅನಾವರಣ, ಯೋಧರು, ಕಲಾವಿದರ ದೇಶಾಭಿಮಾನದ ಮಹಾಸಂಗಮ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Republic Day 2025: ದೆಹಲಿಯ ಕರ್ತವ್ಯಪಥದಲ್ಲಿ ಭವ್ಯ ಪರೇಡ್‌ ಶುರು; ಮಿನಿ ಭಾರತ ಅನಾವರಣ, ಯೋಧರು, ಕಲಾವಿದರ ದೇಶಾಭಿಮಾನದ ಮಹಾಸಂಗಮ

Republic Day 2025: ದೆಹಲಿಯ ಕರ್ತವ್ಯಪಥದಲ್ಲಿ ಭವ್ಯ ಪರೇಡ್‌ ಶುರು; ಮಿನಿ ಭಾರತ ಅನಾವರಣ, ಯೋಧರು, ಕಲಾವಿದರ ದೇಶಾಭಿಮಾನದ ಮಹಾಸಂಗಮ

Republic Day 2025: ಭಾರತದ ಶಕ್ತಿ ಹಾಗೂ ಸಂಸ್ಕೃತಿಯ ಸಂಗಮದಂತೆಯೇ ಭಾಸವಾಗುವ, ಮಿನಿ ಭಾರತವನ್ನು ಅನಾವರಣಗೊಳಿಸುವ ದೆಹಲಿಯ ಗಣರಾಜ್ಯೋತ್ಸವ ಪರೇಡ್‌ ಶುರುವಾಗಿದೆ.

ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ ಶುರುವಾಗಿದೆ.
ದೆಹಲಿಯಲ್ಲಿ ಗಣರಾಜ್ಯೋತ್ಸವ ಪರೇಡ್‌ ಶುರುವಾಗಿದೆ.

Republic Day 2025: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಡಗರ, ಚಳಿಯ ನಡುವೆಯೂ ದೇಶಾಭಿಮಾನವನ್ನು ಬಿಂಬಿಸುವ ಮೆರವಣಿಗೆ. ಸಹಸ್ರಾರು ಮಂದಿ ಖುಷಿಯಿಂದಲೇ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಕ್ಷಣ. ಸುಮಾರು ಒಂದೂವರೆ ಗಂಟೆಗಳ ಕಾಲ ಕರ್ತವ್ಯಪಥದಲ್ಲಿ ಭಾರತದ ಕಲೆ, ಸಂಸ್ಕೃತಿ, ಹತ್ತಾರು ಕ್ಷೇತ್ರಗಳಲ್ಲಿನ ಸಾಧನೆಯನ್ನು ಬಿಂಬಿಸುವ ಹಿರಿಮೆಯ ಪ್ರದರ್ಶನ, ಯೋಧರು, ಕಲಾವಿದರು, ಸಾಧಕರ ಸಮ್ಮಿಲನದ ಖುಷಿಯ ಕ್ಷಣಗಳು, ಇಡೀ ಕರ್ತವ್ಯಪಥವು ಮಿನಿ ಭಾರತವಾಗಿಯೇ ಪರಿವರ್ತನೆಯಾಗಿತ್ತು. ಭಾರತ ಮಾತ್ರವಲ್ಲದೇ ಹೊರ ದೇಶಗಳಿಂದಲೂ ಆಗಮಿಸಿರುವ ಗಣ್ಯರು ಈ ಬಾರಿಯ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಾಕ್ಷೀಕರಿಸಿದರು. ಅದರಲ್ಲೂ ಇಂಡೋನೇಷ್ಯಾದ ಅಧ್ಯಕ್ಷರು ಹಾಗೂ ಅವರ ತಂಡ ವಿಶೇಷ ಅತಿಥಿಯಾಗಿದ್ದಾರೆ. ಗಣರಾಜೋತ್ಸವ ಪರೇಡ್‌ ಬೆಳಿಗ್ಗೆಯೇ ಆರಂಭವಾಗಿದ್ದು, ಸುಮಾರು 90 ನಿಮಿಷಗಳ ಕಾಲ ಮೆರವಣಿಗೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಗೌರವ ಸಲ್ಲಿಸುವುದರೊಂದಿಗೆ ಸಮಾರಂಭವು ಪ್ರಾರಂಭವಾಯಿತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಡಿದ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿ ನಂತರ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದರು.

ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರು ಗಣರಾಜ್ಯೋತ್ಸವ ಪರೇಡ್‌ಗೆ ಮುಖ್ಯ ಅತಿಥಿಯಾಗಿದ್ದರು. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರಬೋವೋ ಅವರು ಕರ್ತವ್ಯಪಥಕ್ಕೆ ಆಗಮಿಸಿದರು. ಅವರನ್ನು ಪ್ರಧಾನಿ ನರೇಂದ್ರ ಮೋದಿ ಬರ ಮಾಡಿಕೊಂಡರು.  ವಿಶೇಷ ಅತಿಥಿಯೊಂದಿಗೆ ರಾಷ್ಟ್ರಪತಿ ವಿಶೇಷ ವಾಹನದಲ್ಲಿ ಅಶ್ವಾರೋಹಿ ಪಡೆಯ ಹಿನ್ನೆಲೆಯೊಂದಿಗೆ ಪರೇಡ್‌ನತ್ತ ಆಗಮಿಸಿದರು. ಪ್ರಧಾನಿ ನರೇಂದ್ರ ಮೋದಿ ಕೂಡ ಕರ್ತವ್ಯ ಪಥಕ್ಕೆ ಬಂದರು. 

152 ಸದಸ್ಯರನ್ನು ಒಳಗೊಂಡಿರುವ ಇಂಡೋನೇಷಿಯಾದ ರಾಷ್ಟ್ರೀಯ ಸಶಸ್ತ್ರ ಪಡೆಗಳ ಮೆರವಣಿಗೆಯ ತುಕಡಿ ಮತ್ತು 190 ಸದಸ್ಯರೊಂದಿಗೆ ಇಂಡೋನೇಷ್ಯಾದ ಮಿಲಿಟರಿ ಅಕಾಡೆಮಿಯ ಬ್ಯಾಂಡ್ ಪರೇಡ್‌ನಲ್ಲಿ ಭಾಗವಹಿಸಿದೆ. ರಾಷ್ಟ್ರೀಯ ಪ್ರಾಮುಖ್ಯತೆಯ ಕಾರ್ಯಕ್ರಮಗಳಲ್ಲಿ 'ಜನ ಸಹಭಾಗಿತ್ವ' ಹೆಚ್ಚಿಸುವ ಸರ್ಕಾರದ ಉದ್ದೇಶಕ್ಕೆ ಅನುಗುಣವಾಗಿ ಇದನ್ನು ನೋಡಲು ಸುಮಾರು 10,000 ಅತಿಥಿಗಳನ್ನು ಆಹ್ವಾನಿಸಲಾಗಿದೆ. ಇದರಡಿ ಈ ಬಾರಿ ಇಂಡೋನೇಷ್ಯಾದ ತಂಡಗಳು ಕಾರ್ಯಕ್ರಮದಲ್ಲಿ ಭಾಗಿಯಾದವು.

ಲೆಫ್ಟಿನೆಂಟ್ ಅಹಾನ್ ಕುಮಾರ್ ನೇತೃತ್ವದ 61 ಅಶ್ವಸೈನ್ಯದ ಮೊದಲ ಸೇನಾ ತುಕಡಿಯು ಗಣರಾಜ್ಯೋತ್ಸವ ಪರೇಡ್‌ ಅನ್ನು ಮುನ್ನಡೆಸಿತು. 1953 ರಲ್ಲಿ ಆರಂಭಗೊಂಡ 61 ಅಶ್ವಸೈನ್ಯವು ವಿಶ್ವದಲ್ಲಿ ಏಕೈಕ ಸೇವೆ ಸಲ್ಲಿಸುತ್ತಿರುವ ಹಾರ್ಸ್ಡ್ ಕ್ಯಾವಲ್ರಿ ರೆಜಿಮೆಂಟ್ ಎನ್ನುವ ವಿಶೇಷತೆ ಹೊಂದಿದೆ.ಇದು ಕೂಡ ಗಮನ ಸೆಳೆಯಿತು.

ನಾರಿ ಶಕ್ತಿ (ಮಹಿಳಾ ಶಕ್ತಿ) ಅನ್ನು ಪ್ರತಿನಿಧಿಸುವ ಎಲ್ಲಾ ಮೂರು ಪಡೆಗಳ ಅನುಭವಿ ಮಹಿಳಾ ಅಧಿಕಾರಿಗಳು - ಲೆಫ್ಟಿನೆಂಟ್ ಕರ್ನಲ್ ರವೀಂದ್ರಜೀತ್ ರಾಂಧವಾ, ಲೆಫ್ಟಿನೆಂಟ್ ಕಮಾಂಡರ್ ಮಣಿ ಅಗರ್ವಾಲ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ರುಚಿ ಸಹಾ, ಸಶಸ್ತ್ರ ಪಡೆಗಳನ್ನು ರೂಪಿಸುವಲ್ಲಿ ಮಹಿಳೆಯರ ಪ್ರಮುಖ ಪಾತ್ರವನ್ನು ಪ್ರದರ್ಶಿಸಿದರು. ಕರ್ತವ್ಯ ಪಥದಲ್ಲಿ ಸಾಗುವ ತುಕಡಿಗಳಲ್ಲಿ ಸಹಾಯಕ ಕಮಾಂಡೆಂಟ್ ಐಶ್ವರ್ಯಾ ಜಾಯ್ ಎಂ ನೇತೃತ್ವದ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ನ 148 ಸದಸ್ಯರ ಸಂಪೂರ್ಣ ಮಹಿಳಾ ಮೆರವಣಿಗೆಯ ತುಕಡಿಯೂ ನಾರಿ ಶಕ್ತಿಯ ಸಂಕೇತದಂತಿತ್ತು.

300 ಸಾಂಸ್ಕೃತಿಕ ಕಲಾವಿದರು ದೇಶದ ವಿವಿಧ ಭಾಗಗಳಿಂದ ಬಂದ ಸಂಗೀತ ವಾದ್ಯಗಳೊಂದಿಗೆ ‘ಸಾರೆ ಜಹಾನ್ ಸೆ ಅಚ್ಛಾ’ ನುಡಿಸುವ ಮೂಲಕ ಮೆರವಣಿಗೆಗೆ ಚಾಲನೆ ದೊರಕಿತು. ವಾದ್ಯಗಳ ಮೇಳವು ಶೆಹನಾಯಿ, ಸುಂದರಿ, ನಾದಸ್ವರಂ, ಬೀನ್, ಮಶಕ್ ಬೀನ್, ರಣಸಿಂಗ - ರಾಜಸ್ಥಾನ, ಕೊಳಲು, ಕರ್ನಾಟಕದ ಕರಡಿ ಮಜಲು, ಮೊಹೂರಿ, ಸಂಖ, ತುಟಾರಿ, ಧೋಲ್, ಗಾಂಗ್, ನಿಶಾನ್, ಚಾಂಗ್, ತಾಶಾ, ಸಾಂಬಲ್, ಚೆಂಡ, ಇಡಕ್ಕಾ, ಲೆಜಿಮ್, ಲೆಜಿಮ್, , ಗುಡುಮ್ ಬಾಜಾ, ತಾಳಮ್ ಮತ್ತು ಮೊನ್ಬಾಹ್ ವಿಶೇಷವಾಗಿದ್ದವು. ಇಡೀ ಭಾರತದ ಕಲೆ ಹಾಗೂ ಸಂಸ್ಕೃತಿಯೇ ಅಲ್ಲಿ ಮೇಳೈಸಿದಂತಿತ್ತು.

ಮೂವತ್ತೊಂದು ಕೋಷ್ಟಕವು 'ಸ್ವರ್ಣಿಂ ಭಾರತ್: ವಿರಾಸತ್ ಔರ್ ವಿಕಾಸ್' ವಿಷಯದ ಮೇಲೆ ಕರ್ತವ್ಯ ಪಥಕ್ಕೆ ಕಳೆ ತಂದಿತು. ಮೊದಲಿಗೆ, ಭಾರತದ ರಕ್ಷಣೆಯ ತ್ರಿಪಡೆಗಳ ಕೋಷ್ಟಕವು ಸಶಸ್ತ್ರ ಪಡೆಗಳ ಶಕ್ತಿ ಪ್ರದರ್ಶನವಾದರೆ ಇದರೊಟ್ಟಿಗೆ ಕನಿಷ್ಠ 5,000 ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೊದಲ ಬಾರಿಗೆ ಇಡೀ ಕರ್ತವ್ಯ ಪಥವನ್ನು ಆವರಿಸಿದ್ದು ಈ ಬಾರಿ ವಿಶೇಷ.

ಟಿ-90 (ಭೀಷ್ಮ) ಟ್ಯಾಂಕ್, ನಾಗ್‌ ಕ್ಷಿಪಣಿ ವ್ಯವಸ್ಥೆ ಜೊತೆಗೆ ಬಿಎಂಪಿ-2 ಶರತ್, ಬ್ರಹ್ಮೋಸ್ ಕ್ರೂಸ್ ಕ್ಷಿಪಣಿ, ಪಿನಾಕಾ ಮಲ್ಟಿ-ಲಾಂಚರ್ ರಾಕೆಟ್ ಸಿಸ್ಟಮ್, ಆಕಾಶ್ ವೆಪನ್ ಸಿಸ್ಟಮ್, ಲೈಟ್ ಸ್ಪೆಷಲಿಸ್ಟ್ ವೆಹಿಕಲ್ (ಬಜರಂಗ) ಸೇರಿದಂತೆ ಕೆಲವು ಮಿಲಿಟರಿ ಯಂತ್ರಾಂಶಗಳು ಗಣರಾಜೋತ್ಸವ ಪರೇಡ್‌ನಲ್ಲಿ ಭಾರತದ ಸಾಧನೆಯನ್ನು ಬಿಂಬಿಸಿದವು.ಮೌಂಟೆಡ್ ಪದಾತಿ ದಳದ ಮಾರ್ಟರ್ ಸಿಸ್ಟಮ್ (ಐರಾವತ್), 'ಶಶಕ್ತ್ ಔರ್ ಸುರಕ್ಷಿತ್ ಭಾರತ್' ವಿಷಯದ ಮೇಲೆ ಮೂರು ಸಶಸ್ತ್ರ ಸೇವೆಗಳ ನಡುವೆ ಸಂವಹನವನ್ನು ಸುಲಭಗೊಳಿಸುವ ಜಂಟಿ ಕಾರ್ಯಾಚರಣೆಯ ಪ್ರದರ್ಶನ ಈ ಬಾರಿ ಇತ್ತು. ಸ್ಥಳೀಯ ಅರ್ಜುನ್ ಮುಖ್ಯ ಯುದ್ಧ ಟ್ಯಾಂಕ್, ತೇಜಸ್ ಎಂಕೆII ಯುದ್ಧ ವಿಮಾನ, ಸುಧಾರಿತ ಲಘು ಹೆಲಿಕಾಪ್ಟರ್, ವಿಧ್ವಂಸಕ ಐಎನ್‌ಎಸ್ ವಿಶಾಖಪಟ್ಟಣಂ ಮತ್ತು ರಿಮೋಟ್ ಪೈಲಟ್ ವಿಮಾನದೊಂದಿಗೆ ಭೂಮಿ, ನೀರು ಮತ್ತು ಗಾಳಿಯಲ್ಲಿ ಸಿಂಕ್ರೊನೈಸ್ ಮಾಡಿದ ಕಾರ್ಯಾಚರಣೆಯನ್ನು ವಿವರಿಸಲು ಯುದ್ಧಭೂಮಿಯ ಸನ್ನಿವೇಶವನ್ನು ಪ್ರದರ್ಶಿಸಲಾಯಿತು.

ಭಾರತದ ನಾನಾ ರಾಜ್ಯಗಳ ಕಲೆ ಸಂಸ್ಕೃತಿ ಹಾಗೂ ಅಲ್ಲಿನ ಮಹತ್ವವನ್ನು ಸಾರುವ ಸ್ತಬ್ಧಚಿತ್ರಗಳ ಮೆರವಣಿಗೆಯೂ ಆಕರ್ಷಕವಾಗಿತ್ತು, ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿರುವ ಪಾರಂಪರಿಕ ದೇಗುಲಗಳ ತಾಣ ಈ ಬಾರಿ ಸ್ತಬ್ಧಚಿತ್ರ ರೂಪ ಪಡೆದಿತ್ತು. ಅದೇ ರೀತಿ ಆಯಾ ರಾಜ್ಯಗಳ ಹಿನ್ನೆಲೆಯ ಸ್ತಬ್ಧಚಿತ್ರಗಳು ಮೆರಗು ತಂದವು.

ಕ್ರೀಡೆಯಲ್ಲಿ ಭಾರತಕ್ಕೆ ಕೀರ್ತಿ ತಂದ ದಿಗ್ಗಜರನ್ನು ಗೌರವದ ಪ್ರದರ್ಶನಕ್ಕೆ ಸೇರಿಸಲಾಗಿತ್ತು. ಅವರಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಸುಬೇದಾರ್ ಮುರಳಿಕಾಂತ್ ಪೇಟ್ಕರ್ ಅವರ ಕಥೆಯು ಬಾಲಿವುಡ್ ಚಲನಚಿತ್ರ ಚಂದು ಚಾಂಪಿಯನ್‌ಗೆ ಸ್ಫೂರ್ತಿಯೊಂದಿಗೆ ಪ್ರದರ್ಶನದಲ್ಲಿ ಗಮನ ಸೆಳೆಯಿತು.

 

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.