Rishabh Pant: ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಿಷಭ್ ಪಂತ್ ಮುಂಬೈ ಅಂಬಾನಿ ಆಸ್ಪತ್ರೆಗೆ ಸ್ಥಳಾಂತರ
ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅವರಿಗೆ ಅಸ್ಥಿರಜ್ಜು ಚಿಕಿತ್ಸೆ ನಡೆಸಬೇಕಾಗಿದ್ದು, ಡೆಹ್ರಾಡೂನ್ ಆಸ್ಪತ್ರೆಯಿಂದ ಮುಂಬೈಗೆ ಸ್ಥಳಾಂತರ ಮಾಡಲು ಉದ್ದೇಶಿಸಲಾಗಿದೆ.
ನವದೆಹಲಿ: ಇತ್ತೀಚೆಗೆ ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ರಿಷಭ್ ಪಂತ್ ಅವರಿಗೆ ಅಸ್ಥಿರಜ್ಜು ಚಿಕಿತ್ಸೆ ನಡೆಸಬೇಕಾಗಿದ್ದು, ಡೆಹ್ರಾಡೂನ್ ಆಸ್ಪತ್ರೆಯಿಂದ ಮುಂಬೈಗೆ ಸ್ಥಳಾಂತರ ಮಾಡಲಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಿಳಿಸಿದೆ.
ಟ್ರೆಂಡಿಂಗ್ ಸುದ್ದಿ
ರಿಷಭ್ ಪಂತ್ ಅವರ ಮುಂದಿನ ಚಿಕಿತ್ಸೆಯ ಹೊಣೆಯನ್ನು ಬಿಸಿಸಿಐ ತೆಗೆದುಕೊಳ್ಳಲಿದ್ದು, ಏರ್ ಅಂಬ್ಯುಲೆನ್ಸ್ ಮೂಲಕ ಅವರನ್ನು ಡೆಹ್ರಾಡೂನ್‌ನಿಂದ ಮುಂಬೈಗೆ ಕರೆದೊಯ್ಯಲಾಗುತ್ತದೆ. ಇವರ ಆರೋಗ್ಯದ ಕುರಿತು ಬಿಸಿಸಿಐನ ವೈದ್ಯಕೀಯ ತಂಡವು ನಿಗಾ ವಹಿಸಲಿದೆ.
ಅಪಘಾತಗೊಂಡ ದಿನದಿಂದ ರಿಷಭ್ ಪಂತ್‌ಗೆ ಇಲ್ಲಿಯವರೆಗೆ ಡೆಹ್ರಾಡೂನ್‌ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇನ್ನು ಮುಂದೆ ಇವರಿಗೆ ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಇವರಿಗೆ ಮೊಣಕಾಲು ಮತ್ತು ಬಲಗಾಲಿನ ಮಂಡಿಯ ಲಿಗಮೆಂಟ್ ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ. "ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಮುಂಬೈಗೆ ರವಾನೆ ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಬಿಸಿಸಿಐ ಆಡಳಿತ ಮಂಡಳಿ ತೆಗೆದುಕೊಳ್ಳುತ್ತಿದೆ. ಡಿಸೆಂಬರ್ 30ರಂದು ಕಾರು ಅಪಘಾತಗೊಂಡ ಬಳಿಕ ವರು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರನ್ನು ಮುಂಬೈಗೆ ಏರ್ ಅಂಬ್ಯುಲೆನ್ಸ್ ಮೂಲಕ ಕರೆದೊಯ್ಯಲಾಗುತ್ತದೆʼʼ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
"ಇವರನ್ನು ಮುಂಬೈನ ಕೋಕಿಲಾಬೆನ್ ಧೀರುಭಾಯ್ ಅಂಬಾನಿ ಹಾಸ್ಪಿಟಲ್ ಆಂಡ್ ಮೆಡಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನಲ್ಲಿ ದಾಖಲಿಸಲಾಗುತ್ತದೆ. ಅಲ್ಲಿ ಕ್ರೀಡಾ ಔಷಧ ವಿಭಾಗದ ಮುಖ್ಯಸ್ಥರಾದ ಡಾ. ದಿನ್ಶಾ ಪರ್ದಿವಾಲಾ ಅವರ ನೇತೃತ್ವದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ರಿಷಭ್ ಅವರು ಚೇತರಿಸಿಕೊಳ್ಳುವವರೆಗೆ ಅವರ ಆರೋಗ್ಯದ ಕುರಿತು ಬಿಸಿಸಿಐ ವೈದ್ಯಕೀಯ ತಂಡ ನಿಗಾ ವಹಿಸಲಿದೆʼʼ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅಗತ್ಯಬಿದ್ದರೆ ಬ್ರಿಟನ್ ಅಥವಾ ಅಮೆರಿಕದ ತಜ್ಞರ ಸಲಹೆ ಪಡೆಯಲಾಗುವುದು ಎಂದು ದಿನ್ಶಾ ಪರ್ದಿವಾಲಾ ಹೇಳಿದ್ದಾರೆ.
ಅಪಘಾತಕ್ಕೀಡಾದ ಕ್ರಿಕೆಟಿಗ ರಿಷಬ್ ಪಂತ್ ಅವರು ಅತಿ ವೇಗವಾಗಿ ಕಾರು ಚಲಾಯಿಸುತ್ತಿರಲಿಲ್ಲ ಅಥವಾ ಮದ್ಯ ಸೇವಿಸಿರಲಿಲ್ಲ ಎಂದು ಈಗಾಗಲೇ ಉತ್ತರಾಖಂಡದ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಘಟನೆಯ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿದ್ದು, ಕಾರು ವೇಗವಾಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದ್ದನ್ನು ಕಾಣಬಹುದು. ಹೀಗಾಗಿ ಕಾರು ಅತಿವೇಗವಾಗಿ ಓಡಿದ್ದೇ ಅಪಘಾತಕ್ಕೆ ಕಾರಣವಿರಬಹುದು ಎಂದು ಹೇಳಲಾಗಿತ್ತು.
“ನಾವು ಉತ್ತರ ಪ್ರದೇಶ ಗಡಿಯಿಂದ ನರ್ಸನ್‌ನ ಅಪಘಾತ ಸ್ಥಳದವರೆಗೆ ಎಂಟರಿಂದ 10 ಸ್ಪೀಡ್ ಕ್ಯಾಮರಾಗಳನ್ನು ಪರಿಶೀಲಿಸಿದ್ದೇವೆ. ರಿಷಭ್ ಪಂತ್‌ರ ಕಾರು ಆ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಂಟೆಗೆ 80 ಕಿಮೀ ವೇಗದ ಮಿತಿಯನ್ನು ದಾಟಿಲ್ಲ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಾಣುವ ಪ್ರಕಾರ, ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಗಾಳಿಯಲ್ಲಿ ತೂರಿ ಮುಂದೆ ಹೋಗಿದೆ. ಹೀಗಾಗಿ ಹೆಚ್ಚಿನ ವೇಗದಲ್ಲಿ ಸಾಗಿರುವಂತೆ ಕಾಣಿಸಿದೆ. ನಮ್ಮ ತಾಂತ್ರಿಕ ತಂಡವೂ ಅಪಘಾತದ ಸ್ಥಳವನ್ನು ಪರಿಶೀಲಿಸಿದೆ. ಅತಿವೇಗವನ್ನು ಸೂಚಿಸುವ ಯಾವುದನ್ನೂ ನಾವು ಕಂಡುಕೊಂಡಿಲ್ಲ,” ಎಂದು ಹರಿದ್ವಾರದ ಹಿರಿಯ ಪೊಲೀಸ್ ಅಧೀಕ್ಷಕ (ಎಸ್‌ಎಸ್‌ಪಿ) ಅಜಯ್ ಸಿಂಗ್ ಹೇಳಿದ್ದರು.
ಪಂತ್ ಚೇತರಿಸಿಕೊಳ್ಳಲು ಆರು ತಿಂಗಳಿಗಿಂತ ಹೆಚ್ಚು ಸಮಯ ಬೇಕಾಗಬಹುದು ಎಂದು ಈ ಹಿಂದೆಯೇ ವೈದ್ಯರು ಹೇಳಿದ್ದರು. ಉತ್ತರಾಖಂಡದಿಂದ ದೆಹಲಿಗೆ ಬರುತ್ತಿದ್ದಾಗ ರೂರ್ಕಿ ಬಳಿ ಪಂತ್ ಪ್ರಯಾಣಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ರೈಲಿಂಗ್‌ಗೆ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು.