ಕನ್ನಡ ಸುದ್ದಿ  /  Nation And-world  /   <Span Class='webrupee'>₹</span>2 Thousand Crore Deal To Get Shiv Sena Name And Symbol Says Sanjay Raut

Sanjay Raut: ಶಿವಸೇನೆ ಹೆಸರು, ಚಿಹ್ನೆ ಪಡೆಯಲು 2 ಸಾವಿರ ಕೋಟಿ ರೂ.ಡೀಲ್: ಸಂಜಯ್ ರಾವತ್ ಆರೋಪ

ಶಿವಸೇನೆ ಪಕ್ಷದ ಚಿಹ್ನೆ ಮತ್ತು ಹೆಸರು ವಿಚಾರದಲ್ಲಿ ನ್ಯಾಯ ಸಿಕ್ಕಿಲ್ಲ, ಎಲ್ಲಾ ವ್ಯಾಪಾರ ನಡೆಯುತ್ತಿದೆ ಎಂದಿರುವ ಸಂಸದ ಸಂಜಯ್ ರಾವುತ್, ಏಕನಾಥ್ ಶಿಂಧೆ ಬಣಕ್ಕೆ ಪಕ್ಷದ ಚಿಹ್ನೆ ಹಾಗೂ ಹೆಸರು ನೀಡಲು 2 ಸಾವಿರ ಕೋಟಿ ಡೀಲ್ ನಡೆದಿದೆ ಎಂದು ಆರೋಪಿಸಿದ್ದಾರೆ.

ಸಂಸದ ಸಂಜಯ್ ರಾವತ್ (HT PHOTO)
ಸಂಸದ ಸಂಜಯ್ ರಾವತ್ (HT PHOTO)

ಮುಂಬೈ: ಕೇಂದ್ರ ಚುನಾವಣಾ ಆಯೋಗ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಹೆಸರು ಹಾಗೂ ಪಕ್ಷದ ಚಿಹ್ನೆ ಬಿಲ್ಲು ಬಾಣ ನೀಡಿ ಆದೇಶ ನೀಡಿರುವ ಕುರಿತು ಸಂಸದ ಸಂಜಯ್‌ ರಾವತ್ ಹೊಸ ಬಾಂಬ್ ಸಿಡಿಸಿದ್ದಾರೆ.

ಶಿವಸೇನೆ ಹೆಸರು ಹಾಗೂ ಪಕ್ಷದ ಚಿಹ್ನೆ ಬಿಲ್ಲು ಬಾಣ ಪಡೆಯಲು ಎರಡು ಸಾವಿರ ಕೋಟಿ ರೂಪಾಯಿಗಳ ಡೀಲ್ ನಡೆದಿದೆ ಎಂದು ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ರಾವತ್ ಗಂಭೀರ ಆರೋಪ ಮಾಡಿದ್ದಾರೆ.

ಅತಿ ಶೀಘ್ರದಲ್ಲೇ ಈ ಡೀಲ್ ಬಗ್ಗೆ ರಿವೀಲ್ ಮಾಡುವುದಾಗಿ ರಾವತ್ ಹೇಳಿದ್ದಾರೆ. ಸದ್ಯ ಮಹಾರಾಷ್ಟ್ರ ರಾಜಕೀಯದಲ್ಲಿ ರಾವತ್ ಅವರ ಆರೋಪ ಸಂಚಲನ ಮೂಡಿಸಿದೆ.

ಸಿಎಂ ಏಕನಾಥ್ ಶಿಂಧೆ ಬಣಕ್ಕೆ ಶಿವಸೇನೆ ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ನೀಡಿ ಚುನಾವಣಾ ಆಯೋಗದ ಆದೇಶ ನೀಡಿತ್ತು. ಈ ಆದೇಶದ ಹಿನ್ನಲೆಯಲ್ಲಿ ಚುನಾವಣಾ ಆಯೋಗದ ವಿರುದ್ಧವೂ ಕೆಂಡ ಕಾರಿದ್ದಾರೆ.

ಪಕ್ಷದ ಹೆಸರು ಮತ್ತು ಚುನಾವಣಾ ಚಿಹ್ನೆಯನ್ನು ಖರೀದಿಸಲು 2 ಸಾವಿರ ಕೋಟಿ ರೂಪಾಯಿಗಳ ವಹಿವಾಟು ನಡೆದಿದೆ ಎಂದು ತಿಳಿಸಿದ್ದಾರೆ. ಇದು ನೂರಕ್ಕೆ ನೂರಷ್ಟು ಸತ್ಯ ಎಂದಿರುವ ರಾವತ್, ತಮ್ಮ ಬಳಿ ಸಾಕ್ಷ್ಯವಿದೆ ಎಂದು ಅಂತಲೂ ಹೇಳಿದ್ದಾರೆ.

ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಬಿಲ್ಡರ್ ಒಬ್ಬರು ಇದನ್ನು ಹೇಳಿದ್ದರು ಎಂತಲೂ ಸ್ಪಷ್ಟಪಡಿಸಿದ್ದಾರೆ. ಸಾಕ್ಷ್ಯಾಧಾರಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು ಎಂದು ಸಂಜಯ್ ರಾವತ್ ಟ್ವಿಟ್ಟರ್ ಮಾಹಿತಿ ಹಂಚುಕೊಂಡಿದ್ದಾರೆ.

ಶಿವಸೇನೆಯ ಒಂದು ಬಣ ಉದ್ಧವ್ ಠಾಕ್ರೆ ಅವರಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಬಳಿಕ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ಬೆನ್ನಲ್ಲೇ ಬಿಜೆಪಿ ಬೆಂಬಲದೊಂದಿಗೆ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು.

ಆ ಬಳಿಕ ಪಕ್ಷದ ಹೆಸರು, ಚುನಾವಣಾ ಚಿಹ್ನೆ ಯಾರಿಗೆ ಸಿಗಲಿದೆ ಎಂಬ ಕುತೂಹಲ ಮೂಡಿತ್ತು. ಅಂತಿಮವಾಗಿ ಚುನಾವಣಾ ಆಯೋಗ ಏಕನಾಥ್ ಶಿಂಧೆ ಅವರ ಬಣಕ್ಕೆ ಶಿವಸೇನೆ ಹೆಸರು ಮತ್ತು ಪಕ್ಷದ ಚಿಹ್ನೆಯಾದ ಬಿಲ್ಲು ಬಾಣವನ್ನು ನೀಡಿ ಆದೇಶ ನೀಡಿತ್ತು.

ಇದರಿಂದ ರೊಚ್ಚಿಗೆದ್ದ ಸಂಜಯ್ ರಾವತ್, ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಶಿಂಧೆ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವುದರ ಹಿಂದೆ ಯಾವುದೇ ನ್ಯಾಯವಿಲ್ಲ ಮತ್ತು ಇದು ವ್ಯಾಪಾರಕ್ಕಾಗಿ ಎಂದು ಆರೋಪಿಸಿದ್ದಾರೆ.

"ಈ ವಿಚಾರದಲ್ಲಿ ಇದುವರೆಗೆ 2 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆದಿದೆ. ಇದು ನನ್ನ ಪ್ರಾಥಮಿಕ ಅಂದಾಜಿನಷ್ಟೆ. ಚುನಾವಣಾ ಆಯೋಗದ ನಿರ್ಧಾರವನ್ನು ಅವರು ಖರೀದಿಸಿದ್ದಾರೆ. ಇದು ನಾನೇ ಸಿದ್ಧಪಡಿಸಿದ ಎಫ್‌ಐಆರ್ ಎಂದು ಸಂಜಯ್ ರಾವತ್ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರ, ಮುಖಂಡರು, ನಿರ್ಲಜ್ಜರ ಗುಂಪು ಶಾಸಕರನ್ನು 50 ಕೋಟಿ ರೂ., ಸಂಸದರನ್ನು 100 ಕೋಟಿ ರೂ.ಗೆ ಖರೀದಿಸುತ್ತಿದ್ದಾರೆ. ಕೌನ್ಸಿಲರ್‌ಗಳಿಗೆ 1 ಕೋಟಿ ರೂ. ನೀಡಿ ಖರೀದಿಸಿದ್ದಾರೆ.

ಇನ್ನ ಪಕ್ಷದ ಹೆಸರು ಮತ್ತು ಪಕ್ಷದ ಚಿಹ್ನೆಯನ್ನು ಖರೀದಿಸಲು ನೀವು ಎಷ್ಟು ಖರ್ಚು ಮಾಡುತ್ತೀರಿ ಎಂದು ನೀವು ಊಹಿಸಬಹುದು. ನನ್ನ ಮಾಹಿತಿಯ ಪ್ರಕಾರ ಇದು 2 ಸಾವಿರ ಕೋಟಿ ರೂಪಾಯಿ ಎಂದು ಉದ್ಧವ್ ಠಾಕ್ರೆ ಆಪ್ತ ಸಂಜಯ್ ರಾವುತ್ ಆರೋಪಿಸಿದ್ದಾರೆ.

ಸದ್ಯ ಮಹಾರಾಷ್ಟ್ರ ರಾಜ್ಯ ರಾಜಕೀಯದಲ್ಲಿ ಶಿವಸೇನೆ ಪಕ್ಷದ ಹೆಸರು, ಚಿಹ್ನೆ ವಿಚಾರದಲ್ಲಿ ಭಾರಿ ವಾಕ್ಸಮರವೇ ನಡೆಯುತ್ತಿದೆ. ಇದು ಇನ್ನೂ ಯಾವ ಮಟ್ಟಕ್ಕೆ ಹೋಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

IPL_Entry_Point