Garbha Sanskar: ಗರ್ಭದಲ್ಲಿರುವ ಮಗುವಿಗೆ ಸಂಸ್ಕಾರ ನೀಡುವ ಅಭಿಯಾನ ಆರಂಭಿಸಲು ಆರ್‌ಎಸ್‌ಎಸ್ ಚಿಂತನೆ: ಸಂಸ್ಕಾರ ನೀಡುವುದು ಹೇಗೆ?
ಆರ್‌ಎಸ್‌ಎಸ್‌ನ ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್ ಇದೀಗ ಗರ್ಭಿಣಿಯರಿಗೆ ತಮ್ಮ ಶಿಶು ಗರ್ಭದಲ್ಲಿರುವಾಗಲೇ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸುವ ಗರ್ಭ ಸಂಸ್ಕಾರ ಎಂಬ ಹೊಸ ಅಭಿಯಾನವನ್ನು ಆರಂಭಿಸಲು ಉದ್ದೇಶಿಸಿದೆ.
ತಾಯಿಯ ಗರ್ಭದಲ್ಲಿರುವ ಮಗು ಅಥವಾ ಭ್ರೂಣವು ಇನ್ಮುಂದೆ ಭಗವದ್ಗೀತೆ ಅಥವಾ ರಾಮಾಯಣದ ಶ್ಲೋಕಗಳನ್ನು ಕಲಿಯಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಅಂಗಸಂಸ್ಥೆ ಸಂವರ್ಧಿನಿ ನ್ಯಾಸ್ ಇದೀಗ ಗರ್ಭಿಣಿಯರಿಗೆ ತಮ್ಮ ಶಿಶು ಗರ್ಭದಲ್ಲಿರುವಾಗಲೇ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸುವ ಗರ್ಭ ಸಂಸ್ಕಾರ ಎಂಬ ಹೊಸ ಅಭಿಯಾನವನ್ನು ಆರಂಭಿಸಲು ಉದ್ದೇಶಿಸಿದೆ. ಈ ಅಭಿಯಾನದಲ್ಲಿ ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು, ಯೋಗ ತರಬೇತುದಾರರು ಇರುತ್ತಾರೆ.
ಟ್ರೆಂಡಿಂಗ್ ಸುದ್ದಿ
"ಗರ್ಭದಲ್ಲಿರುವ ಶಿಶುಗಳಿಗೆ ಸಾಂಸ್ಕೃತಿಕ ಮೌಲ್ಯಗಳನ್ನು ನೀಡುವುದು (ಗರ್ಭಾ ಸೇ ಹಿ ಸಂಸ್ಕಾರ ಲಾನಾ ಹೈ) ಅಗತ್ಯ. ದೇಶವು ಪ್ರಮುಖ ಆದ್ಯತೆ ಎಂಬುದನ್ನು ಮಗುವಿಗೆ ಕಲಿಸುವ ಅಗತ್ಯವಿದೆ" ಎಂದು ಸಂವರ್ಧಿನಿ ನ್ಯಾಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.
ಇವರು ಶಿವಾಜಿಯ ತಾಯಿ ಜೀಜಾ ಬಾಯಿಯವರ ಉದಾಹರಣೆಯನ್ನು ನೀಡಿದ್ದಾರೆ. ಮಹಾನ್ ನಾಯಕನಿಗೆ ಜನ್ಮ ನೀಡುವಂತೆ ಜೀಜಾ ಬಾಯಿ ಹೇಗೆ ಪ್ರಾರ್ಥಿಸಿದರೋ ಮರಾಠ ತಾಯಂದಿರು ಇಂದು ಇದೇ ರೀತಿ ಮಾಡಬೇಕು ಎಂದರು.
"ಸಂಸ್ಕೃತಿ ಮತ್ತು ಮೌಲ್ಯವನ್ನು ಮಗುವು ಗರ್ಭದಲ್ಲಿರುವಾಗಲೇ ಕಲಿಯಬೇಕೆಂಬ ಉದ್ದೇಶದಿಂದ ಈ ಅಭಿಯಾನ ಆರಂಭಿಸಲಾಗುತ್ತಿದೆ. ಮಗುವಿಗೆ ಎರಡು ವರ್ಷವಾಗುವ ತನಕ ಈ ಅಭಿಯಾನ ಮುಂದುವರೆಸಲಾಗುತ್ತದೆ" ಎಂದು ಮರಾಠೆ ಹೇಳಿದ್ದಾರೆ.
ಅಭಿಮನ್ಯುವು ತಾಯಿಯ ಗರ್ಭದಲ್ಲಿರುವಾಗಲೇ ಚಕ್ರವ್ಯೂ ಬೇಧಿಸುವುದನ್ನು ಕಲಿತ ಕತೆ ಗೊತ್ತಿರಬಹುದು. ಕೃಷ್ಣನು ಸುಭದ್ರೆಗೆ ಚಕ್ರವ್ಯೂಹದ ಕುರಿತು ಹೇಳುತ್ತಿರುವ ಸಂದರ್ಭದಲ್ಲಿ ಹೊಟ್ಟೆಯಲ್ಲಿದ್ದ ಮಗು ಅಭಿಮನ್ಯು ಕೇಳಿಸಿಕೊಳ್ಳುತ್ತಾನೆ. ಆದರೆ, ಚಕ್ರವ್ಯೂಹದಿಂದ ಹೊರಬರುವುದು ಹೇಗೆ ಎಂದು ಕೃಷ್ಣ ಹೇಳುತ್ತಿದ್ದಾಗ ಸುಭದ್ರೆ ಮಲಗಿರುತ್ತಾಳೆ. ಹೀಗಾಗಿ, ಅಭಿಮನ್ಯುವಿಗೆ ಚಕ್ರವ್ಯೂಹದಿಂದ ಹೊರಕ್ಕೆ ಬರಲಾಗುವುದಿಲ್ಲ.
ಏನಿದು ಗರ್ಭ ಸಂಸ್ಕಾರ?
‘ಗರ್ಭ‘ ಎಂದರೆ ಬಸಿರು , ‘ಸಂಸ್ಕಾರ‘ ಎಂದರೆ ಮೌಲ್ಯ ಶಿಕ್ಷಣ. ‘ಗರ್ಭ ಸಂಸ್ಕಾರ‘ ಎಂದರೆ ಗರ್ಭ ಮೌಲ್ಯ ಶಿಕ್ಷಣ. ಇನ್ನು ಹುಟ್ಟದ ಮಗುವಿಗೆ ತಾಯಿಯ ಗರ್ಭವೇ ಜಗತ್ತು. ಪ್ರಾಪಂಚಿಕ ಅರಿವು ಇರದ ಆ ಮಗುವಿಗೆ ಗರ್ಭದಲ್ಲಿಯೇ ಸಂಸ್ಕಾರವನ್ನು ನೀಡಲಾಗುತ್ತದೆ. ಆಯುರ್ವೇದ ವಿಧಾನದಲ್ಲಿ ಮಗುವಿನ ಆರೋಗ್ಯಯುತ ಬೆಳವಣಿಗೆಗೆ ಮತ್ತು ಜೀವನಕ್ಕೆ ಬೇಕಾದ ಸದ್ಗುಣಗಳನ್ನು ಗರ್ಭದಲ್ಲಿಯೇ ತರಬೇತಿ ನೀಡಲಾಗುತ್ತದೆ.
ಗರ್ಭ ಸಂಸ್ಕಾರವು ಗರ್ಭಾಶಯದೊಳಗೆ ಮಗುವಿನ ಪಾತ್ರ ಮತ್ತು ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ನಂಬಲಾಗಿದೆ. ಯೋಗ, ಧ್ಯಾನ, ಮಂತ್ರ ಪಠಣ, ಸಂಗೀತ ಆಲಿಸುವಿಕೆ ಇತ್ಯಾದಿಗಳ ಮೂಲಕ ಗರ್ಭದೊಳಗಿರುವ ಮಗುವಿಗೆ ಗರ್ಭ ಸಂಸ್ಕಾರ ನೀಡಲಾಗುತ್ತದೆ. ಗರ್ಭ ಸಂಸ್ಕಾರವು ತಾಯಿಯ ಗರ್ಭದಲ್ಲಿರುವ ಮಗುವಿಗೆ ಒಳ್ಳೆಯ ವಿಷಯಗಳನ್ನು ಕಲಿಸುವ ಮಾರ್ಗವೆಂದು ಹೇಳಲಾಗುತ್ತಿದೆ.
ಆಯುರ್ವೇದದಲ್ಲಿ ಗರ್ಭ ಸಂಸ್ಕಾರವನ್ನು ‘ಸುಪ್ರಜಾ ಜನಂʼ ಎಂದು ಕರೆಯಲಾಗಿದೆ. ಗರ್ಭಿಣಿಯರು ಮನಸ್ಸನ್ನು ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಮತ್ತು ದೈಹಿಕವಾಗಿ ಉತ್ತಮವಾಗಿಟ್ಟುಕೊಳ್ಳಲು ಗರ್ಭ ಸಂಸ್ಕಾರ ನೆರವಾಗುತ್ತದೆ. ಗರ್ಭದಲ್ಲಿರುವ ಮಗುವಿನ ಮಿದುಳು ಸಾಕಷ್ಟು ಬೆಳವಣಿಗೆ ಕಂಡಿರುತ್ತದೆ. ಈ ಸಮಯದಲ್ಲಿ ತಾಯಿಯ ಚಟುವಟಿಕೆಗಳು ಮಗುವಿನ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿದೆ.