Russia Coup: ರಷ್ಯಾದಲ್ಲಿ ವ್ಯಾಗ್ನರ್ ಪಡೆ ವಿರುದ್ಧ ಸೇನಾ ಸಮರ; ವೊರೊನೆಜ್ ಹೆದ್ದಾರಿಯಲ್ಲಿ ಸೇನಾ ಹೆಲಿಕಾಪ್ಟರ್ ಗುಂಡಿನ ದಾಳಿ; ವಿಡಿಯೊ
ವ್ಯಾಗ್ನರ್ ಪಡೆಯನ್ನು ಗುರಿಯಾಗಿಸಿ ರಷ್ಯಾ ಸೇನಾ ಹೆಲಿಕಾಪ್ಟರ್ ಮೂಲಕ ನಡೆಸಿದ ಗುಂಡಿನ ದಾಳಿಯಲ್ಲಿ ವೊರೊನೆಜ್ ನಗರದ ಹೊರವಲಯದ ಹೆದ್ದಾರಿ ಪಕ್ಕದಲ್ಲಿ ಇದ್ದ ತೈಲ ಘಟಕ ಹೊತ್ತಿ ಉರಿದಿದೆ. ದಾಳಿಯಲ್ಲಿ ವ್ಯಾಗ್ನರ್ ಪಡೆಯ ಬೆಂಗಾವಲು ವಾಹನವನ್ನು ಸ್ಫೋಟಿಸಿದೆ.
ಮಾಸ್ಕೋ: ನೀನೇ ಸಾಕಿದ ಗಿಣಿ ನಿನ್ನ ಮುದ್ದಿನ ಗಿಣಿ ಹದ್ದಾಗಿ ಕುಕ್ಕಿತ್ತಲ್ಲೋ ಎಂಬಂತೆ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪರೋಕ್ಷವಾಗಿ ಸಾಕಿ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದ ವ್ಯಾಗ್ನರ್ ಪಡೆ ಇವತ್ತು ರಷ್ಯಾ ಸೇನೆ ವಿರುದ್ಧವೇ ತಿರುಗಿಬಿದ್ದಿದೆ.
ಇದೀಗ ಈ ವ್ಯಾಗ್ನರ್ ಗುಂಪನ್ನು ಮಟ್ಟಹಾಕಲು ಪುಟಿನ್ ಕೂಡ ಸನ್ನದ್ಧರಾಗಿದ್ದು, ದಾಳಿಯ ಮೂಲಕ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.
ಸದ್ಯ ತನ್ನ ದೇಶದೊಳಿನ ಅರೆ ಸೇನೆ ವಿರುದ್ಧ ಸಮರ ಸಾರಿದ್ದು, ಶನಿವಾರ ವೊರೊನೆಜ್ ನಗರದ ಹೊರಗಿನ ಎಂ4 ಹೆದ್ದಾರಿಯಲ್ಲಿ ವ್ಯಾಗ್ನರ್ ಕೂಲಿ ಮಿಲಿಟರಿಯ ಬೆಂಗಾವಲು ಪಡೆಯ ವಾಹನದ ಮೇಲೆ ರಷ್ಯಾದ ಸೇನೆ ಹೆಲಿಕಾಪ್ಟರ್ ಮೂಲಕ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ರಷ್ಯಾ ಸೇನಾ ಹೆಲಿಕಾಪ್ಟರ್ ವ್ಯಾಗ್ನರ್ ಬೆಂಗಾವಲು ಪಡೆಯನ್ನು ಗುರಿಯಾಗಿ ಗುಂಡಿನ ದಾಳಿ ನಡೆಸಿದೆ. ದಾಳಿಯಲ್ಲಿ ವಾಹನ ಸ್ಫೋಟಗೊಂಡಿದೆ. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರೋಸ್ಟೊವ್‌ನಿಂದ ಮಾಸ್ಕೋ ಹೆದ್ದಾರಿಯ ಮಾರ್ಗ ಮಧ್ಯದಲ್ಲಿ ಈ ವೊರೊನೆಜ್ ನಗರವಿದೆ.
ವೊರೊನೆಜ್ ಹೆದ್ದಾರಿ ಪಕ್ಕದ ತೈಲ ಡಿಪೋ ಕೂಡ ಹೊತ್ತಿ ಉರಿದಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ವಿಡಿಯೊ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತೈಲ ಡಿಪೋದಲ್ಲಿ ಹೊತ್ತಿ ಉರಿಯುತ್ತಿರುವ ಇಂಧನ ಟ್ಯಾಂಕ್ ನಂದಿಸಲು ಸ್ಥಳದಲ್ಲಿ 100ಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳು ಪ್ರಯತ್ನಿಸುತ್ತಿವೆ ಎಂದು ರಾಷ್ಯಾ ವೊರೊನೆಜ್ ಗವರ್ನರ್ ಅಲೆಕ್ಸಾಂಡರ್ ಗುಸೆವ್ ಟೆಲಿಗ್ರಾಮ್‌ನಲ್ಲಿ ತಿಳಿಸಿದ್ದಾರೆ.
ಮಾಸ್ಕೋದಿಂದ 500 ಕಿಲೋ ಮೀಟರ್ ದೂರದ ದಕ್ಷಿಣದಲ್ಲಿರುವ ವೊರೊನೆಜ್ ನಗರದಲ್ಲಿನ ಸೇನಾ ಸೌಲಭ್ಯಗಳನ್ನು ವ್ಯಾಗ್ನರ್ ಹೋರಾಟಗಾರರು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ ಎಂದು ರಷ್ಯಾ ಭದ್ರತಾ ಪಡೆಗಳು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಆದರೆ ಇದರ ಸತ್ಯಾಸತ್ಯತೆಯನ್ನು ದೃಢೀಕರಿಸಲಾಗಲಿಲ್ಲ.
ರಷ್ಯಾದ ಸೇನೆ ವಿರುದ್ಧವೇ ಸೆಟೆದು ನಿಂತಿರುವ ವ್ಯಾಗ್ನರ್ ಮರ್ಸಿನರಿ ಗುಂಪು ರೋಸ್ಟೊವ್‌ನಲ್ಲಿ ಶಸ್ತ್ರಸಜ್ಜಿತ ವಾಹನಗಳು ಹಾಗೂ ಯುದ್ಧ ಟ್ಯಾಂಕ್‌ಗಳನ್ನು ವಶಕ್ಕೆ ಪಡೆದುಕೊಂಡಿರುವುದರಿಂದ ಸ್ಥಳೀಯ ನಿವಾಸಿಗಳು ತಮ್ಮ ಮೊಬೈಲ್‌ಗಳಲ್ಲಿ ಚಿತ್ರೀಕರಿಸಿದ್ದಾರೆ,
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮಾಜಿ ಆಪ್ತ, ಬಂಡಾಯ ಎದ್ದಿರುವ ಯೆವ್ನಿನಿ ಪ್ರಿಗೊಝಿನ್ ಅವರ ಖಾಸಗಿ ಸೇನೆ ವ್ಯಾಗ್ನರ್ ದಾಳಿಯ ಎಚ್ಚರಿಕೆ ನೀಡಿತ್ತು. ಇದರಿಂದ ಎಚ್ಚೆತ್ತ ಪುಟಿನ್ ಸರ್ಕಾರ ಮಾಸ್ಕೋದ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಹೆಚ್ಚಿಸಿದೆ.
ವಿಭಾಗ