ಕನ್ನಡ ಸುದ್ದಿ  /  Nation And-world  /  Russia Ukraine War News Major Dam Breached In Southern Ukraine Leads Flood Kakhovka Hydroelectric Plant Mgb

Ukraine Dam: ಉಕ್ರೇನ್​​ನ ಬೃಹತ್​ ಡ್ಯಾಂ ಒಡೆದು ಪ್ರವಾಹ; ರಷ್ಯಾ ಮೇಲೆ ಆರೋಪ, ತುರ್ತು ಸಭೆ ಕರೆದ ಝೆಲೆನ್ಸ್ಕಿ

Russia Ukraine war: ಅಣೆಕಟ್ಟು ಸ್ಫೋಟದ ಹಿಂದೆ ತಮ್ಮ ಮೇಲೆ ಯುದ್ಧ ಸಾರುತ್ತಿರುವ ರಷ್ಯಾ ಕೈವಾಡ ಇದೆ, ಇದು ಉದ್ದೇಶಪೂರ್ವಕ ದಾಳಿ ಎಂದು ಉಕ್ರೇನ್​ ಆರೋಪಿಸಿದೆ. ಆದರೆ ರಷ್ಯಾ ಈ ಆರೋಪ ತಳ್ಳಿ ಹಾಕಿದ್ದು, ಉಕ್ರೇನ್ ಸೈನಿಕರೇ ಡ್ಯಾಂ ಧ್ವಂಸ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.

ಉಕ್ರೇನ್​​ನ ಬೃಹತ್​ ಡ್ಯಾಂ ಒಡೆದು ಪ್ರವಾಹ
ಉಕ್ರೇನ್​​ನ ಬೃಹತ್​ ಡ್ಯಾಂ ಒಡೆದು ಪ್ರವಾಹ

ಕೀವ್​ (ಉಕ್ರೇನ್​): ರಷ್ಯಾ-ಉಕ್ರೇನ್ ಯುದ್ಧದ ನಡುವೆ, ದಕ್ಷಿಣ ಉಕ್ರೇನ್​​ನ ಪ್ರಮುಖ ಬೃಹತ್​ ಅಣೆಕಟ್ಟು ಒಡೆದು, ಪ್ರವಾಹದ ಪರಿಸ್ಥಿತಿ ಉಂಟಾಗಿದೆ. ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಸೋವಿಯತ್​ ಕಾಲದ ಡ್ಯಾಂ ಇದಾಗಿದೆ.

ಅಣೆಕಟ್ಟು ಸ್ಫೋಟದ ಹಿಂದೆ ತಮ್ಮ ಮೇಲೆ ಯುದ್ಧ ಸಾರುತ್ತಿರುವ ರಷ್ಯಾ ಕೈವಾಡ ಇದೆ, ಇದು ಉದ್ದೇಶಪೂರ್ವಕ ದಾಳಿ ಎಂದು ಉಕ್ರೇನ್​ ಆರೋಪಿಸಿದೆ. ಆದರೆ ರಷ್ಯಾ ಈ ಆರೋಪ ತಳ್ಳಿ ಹಾಕಿದ್ದು, ಉಕ್ರೇನ್ ಸೈನಿಕರೇ ಡ್ಯಾಂ ಧ್ವಂಸ ಮಾಡಿದ್ದಾರೆ ಎಂದು ಪ್ರತ್ಯಾರೋಪ ಮಾಡಿದೆ.

ಘಟನೆ ಬೆನ್ನಲ್ಲೇ ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳು ವೈರಲ್​ ಆಗಿದ್ದು, ಡ್ಯಾಂ ಒಡೆದು ನೀರು ಉಕ್ಕಿ ಹರಿಯುತ್ತಿರುವುದನ್ನು ನೋಡಬಹುದಾಗಿದೆ.

ಡ್ಯಾಂ ಸ್ಫೋಟದಿಂದ ಮುಂದಿನ ಐದು ಗಂಟೆಗಳಲ್ಲಿ ನೀರು ನಿರ್ಣಾಯಕ ಮಟ್ಟವನ್ನು ತಲುಪಬಹುದು ಎಂದು ಉಕ್ರೇನ್ ಪ್ರಾದೇಶಿಕ ಗವರ್ನರ್ ಒಲೆಕ್ಸಾಂಡರ್ ಪ್ರೊಕುಡಿನ್ ಆತಂಕ ವ್ಯಕ್ತಪಡಿಸಿದ್ದಾರೆ. ಡ್ಯಾಂ ಒಡೆದು ನೀರು ನುಗ್ಗುತ್ತಿರುವುದರಿಂದ ನಿಪ್ರೊದ ಪಶ್ಚಿಮ ದಂಡೆಯಲ್ಲಿರುವ ಅನೇಕ ಗ್ರಾಮಗಳು ಮತ್ತು ಖರ್ಸನ್ ನಗರದ ಒಂದು ಭಾಗವು ಪ್ರವಾಹದ ಅಪಾಯಕ್ಕೆ ಸಿಲುಕಿವೆ. ಜನರನ್ನು ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಡ್ಯಾಂ ಮೇಲೆ ಒಂದಕ್ಕಿಂತ ಹೆಚ್ಚುಬಾರಿ ಕ್ಷಿಪಣಿ ದಾಳಿಯಾಗಿದ್ದು, ಇದರಿಂದ ಅಣೆಕಟ್ಟು ಒಡೆದಿದೆ ಎಂದು ಉಕ್ರೇನ್ ಆರೋಪಿಸಿದೆ. ಉಕ್ರೇನ್‌ನ ಅಧ್ಯಕ್ಷೀಯ ಆಡಳಿತದ ಮುಖ್ಯಸ್ಥರು ಇದನ್ನು ಪರಿಸರ ಹತ್ಯೆ ಎಂದು ಕರೆದಿದ್ದಾರೆ.

ಕಖೋವ್ಕಾ ಜಲವಿದ್ಯುತ್ ಸ್ಥಾವರದಲ್ಲಿನ ಈ ಜಲಾಶಯವು ಜಪೋರಿಝಿಯಾ ಪರಮಾಣು ಸ್ಥಾವರಕ್ಕೂ ನೀರನ್ನು ಪೂರೈಸುತ್ತದೆ. ಆದರೆ ಸದ್ಯದ ಮಟ್ಟಿಗೆ ಪರಮಾಣು ಸ್ಥಾವರಕ್ಕೆ ಅಪಾಯವಿಲ್ಲ. ಆದರೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

2022ರ ಫೆಬ್ರವರಿ 23 ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸರ್ಕಾರ ಉಕ್ರೇನ್ ಮೇಲೆ ಆಕ್ರಮಣ ಮಾಡಲು ಆದೇಶ ನೀಡಿತ್ತು. ಅಂದಿನಿಂದ ಯುದ್ಧ ಮುಂದುವರೆದಿದ್ದು, ಉಕ್ರೇನ್ ಸೇನೆ ಕೂಡ ರಷ್ಯಾ ಪಡೆಗಳಿಗೆ ಪ್ರತಿದಾಳಿ ನಡೆಸುತ್ತಿದೆ. ಯುದ್ಧದಲ್ಲಿ ಉಭಯ ರಾಷ್ಟ್ರಗಳ ಸಾವಿರಾರು ಜನರು, ಸಾವಿರಾರು ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ. ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನಾಶವಾಗಿದೆ.

IPL_Entry_Point