G-20 summit: ಮುಂದಿನ ವಾರ ನಡೆಯಲಿರುವ ಜಿ-20 ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗೈರು
ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗಿನ ಸಂಭವನೀಯ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ಜಿ20 ಶೃಂಗಸಭೆಗೆ ವ್ಲಾಡಿಮಿರ್ ಪುಟಿನ್ ಗೈರಾಗಲಿದ್ದಾರೆ.
ಜಕಾರ್ತಾ: ಮುಂದಿನ ವಾರ ಇಂಡೋನೇಷ್ಯಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ರಷ್ಯಾದ ಅಧ್ಯಕ್ಷರಾದ ವ್ಲಾಡಿಮಿರ್ ಪುಟಿನ್ ಅವರು ಭಾಗವಹಿಸದಿರಲು ನಿರ್ಧರಿಸಿದ್ದಾರೆ. ಉಕ್ರೇನ್‌ನಲ್ಲಿನ ಯುದ್ಧದ ಕುರಿತು ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳೊಂದಿಗಿನ ಸಂಭವನೀಯ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ಜಿ20 ಶೃಂಗಸಭೆಗೆ ಅವರು ಗೈರಾಗಲಿದ್ದಾರೆ.
ನವೆಂಬರ್ 15ರಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ ಎರಡು ದಿನದ ಶೃಂಗಸಭೆಯಲ್ಲಿ ಅಮೆರಿಕದ ಅಧ್ಯಕ್ಷರಾದ ಜೋ ಬಿಡೆನ್, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಇತರೆ ವಿಶ್ವ ನಾಯಕರು ಭಾಗವಹಿಸಲಿದ್ದಾರೆ. ರಷ್ಯಾವು ಉಕ್ರೇನ್ ಮೇಲೆ ದಾಳಿ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಪುಟಿನ್ ಮತ್ತು ಬಿಡೆನ್ ಅವರು ಶೃಂಗಸಭೆಯಲ್ಲಿ ಮುಖಾಮುಖಿಯಾಗುವ ಅವಕಾಶ ಇದಾಗಿತ್ತು.
ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರು ರಷ್ಯಾದ ನಿಯೋಗವನ್ನು ಮುನ್ನಡೆಸಲಿದ್ದಾರೆ ಎಂದು ಜಿ -20 ಕಾರ್ಯಕ್ರಮಗಳ ಬೆಂಬಲದ ಮುಖ್ಯಸ್ಥ ಲುಹುತ್ ಬಿನ್ಸರ್ ಪಂಡ್‌ಜೈತಾನ್ ಇಂಡೋನೇಷ್ಯಾದ ಡೆನ್‌ಪಾಸರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
"ಇಂಡೋನೇಷ್ಯಾ ಸರ್ಕಾರವು ರಷ್ಯಾದ ಸರ್ಕಾರದ ನಿರ್ಧಾರವನ್ನು ಗೌರವಿಸುತ್ತದೆ, ಅಧ್ಯಕ್ಷ ಪುಟಿನ್ ಸ್ವತಃ ಅಧ್ಯಕ್ಷ ಜೋಕೊ ವಿಡೋಡೋಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆʼʼ ಎಂದು ಹೂಡಿಕೆ ಸಮನ್ವಯ ಸಚಿವರಾದ ಪಂಡ್ಜೈತಾನ್ ಮಾಹಿತಿ ನೀಡಿದ್ದಾರೆ.
ಬಾಬರಿ ಮಸೀದಿ ಧ್ವಂಸದ ಆರೋಪಿಗಳ ಖುಲಾಸೆ
992ರಂದು ಬಾಬರೀ ಮಸೀದಿಯನ್ನು ಧ್ವಂಸಗೊಳಿಸಲು ಸಂಚು ರೂಪಿಸಿದ ಆರೋಪಿಗಳನ್ನು ಖುಲಾಸೆಗೊಳಿಸಿದ ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮೇಲ್ಮನವಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ರಮೇಶ್ ಸಿನ್ಹಾ ಮತ್ತು ಸರೋಜ್ ಯಾದವ್ ಅವರನ್ನೊಳಗೊಂಡ ಪೀಠವು ಅಕ್ಟೋಬರ್ 31ರಂದು ಈ ಅರ್ಜಿಯ ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಮೇಲ್ಮನವಿಯನ್ನು ವಜಾಗೊಳಿಸಿ ಆದೇಶ ನೀಡಿದ್ದಾರೆ.
ಬಿಜೆಪಿ ಮುಖಂಡರಾದ ಎಲ್.ಕೆ. ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ್ ಜೋಷಿ, ಕಲ್ಯಾಣ್ ಸಿಂಗ್ ಸೇರಿದಂತೆ 32 ಆರೋಪಿಗಳನ್ನು ಸೆಪ್ಟೆಂಬರ್ 2020ರಂದು ಲಕ್ನೋದ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಮಸೀದಿ ಧ್ವಂಸವು ಪೂರ್ವಯೋಜಿತವಾಗಿಲ್ಲ ಮತ್ತು ಅದರ ಹಿಂದೆ ಯಾವುದೇ ಕ್ರಿಮಿನಲ್ ಪಿತೂರಿ ನಡೆದಿಲ್ಲ ಎಂದು ಆರೋಪಿಗಳನ್ನು ಸಮರ್ಥಿಸಿಕೊಂಡು ಲಕ್ನೋದ ಸಿಬಿಐ ನ್ಯಾಯಾಧೀಶ ಎಸ್.ಕೆ ಯಾದವ್ ಅವರು ಸೆಪ್ಟೆಂಬರ್ 30,2020 ರಂದು ತೀರ್ಪು ನೀಡಿದ್ದರು.
ಭಾರತದಲ್ಲಿ ಶತಾಯುಷಿ ಮತದಾರರ ಸಂಖ್ಯೆ 2.49 ಲಕ್ಷ
ಭಾರತದಲ್ಲಿ 100 ವರ್ಷ ದಾಟಿದ 2.49 ಲಕ್ಷ ಮತದಾರರು ಇದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.ಅವರು ಪೂನಾದ ಬೆಳವಾಡಿ ಪ್ರದೇಶದ ಶಿವ ಛತ್ರಪತಿ ಕ್ರೀಡಾ ಸಮುಚ್ಚಯದಲ್ಲಿ ಬೈಸಿಕಲ್ ರಾಲಿಗೆ ಚಾಲನೆ ನೀಡಿ ಅವರು ಈ ಮಾಹಿತಿ ನೀಡಿದರು.
80 ವರ್ಷ ಪ್ರಾಯ ದಾಟಿದ ಮತದಾರರ ಸಂಖ್ಯೆ 1.80 ಕೋಟಿ ಇದೆ ಎಂದೂ ಮತದಾರರ ದಾಖಲಾತಿಗೆ ಪೂರಕವಾಗಿ ನಡೆದ ಬೈಸಿಕಲ್ ಜಾಥಾಕ್ಕೆ ಹಸಿರು ಪತಾಕೆ ತೋರಿಸಿ ಅವರು ಹೇಳಿದರು.
ನಗರ ಪ್ರದೇಶಗಳಲ್ಲಿ ಮತದಾರರ ಸಂಖ್ಯೆಯನ್ನು ಹೆಚ್ಚಿಸಲು ಮತ್ತು ಯಾರದೇ ಹೆಸರು ಬಿಟ್ಟು ಹೋಗದಂತೆ ದಾಖಲಿಸಲು ಭಾರತೀಯ ಚುನಾವಣಾ ಆಯೋಗ ಯೋಜನೆ ಹಾಕಿಕೊಂಡಿದೆ. ಹಿಮಾಲಯದ ಎತ್ತರದ ತಪ್ಪಲುಗಳಲ್ಲಿ, ಅಲ್ಲಿಂದ 6,000 ಕಿಲೋಮೀಟರ್ ದೂರದ ದಕ್ಷಿಣ ಕರಾವಳಿಗಳಲ್ಲಿ, ಪಶ್ಚಿಮದ ಮರುಭೂಮಿಯಲ್ಲಿ, ಪೂರ್ವದ ಕೊನೆಯವರೆಗೆ ನಮ್ಮ ಮತದಾರರಿದ್ದಾರೆ ಎಂದು ಅವರು ಹೇಳಿದರು.