ಶಬರಿಮಲೆಯಲ್ಲಿ ಇಂದು ಮಕರ ಜ್ಯೋತಿ ದರ್ಶನ, ಪಂದಳದಿಂದ ಹೊರಟ ತಿರುವಾಭರಣ ಮೆರವಣಿಗೆ ಸಂಜೆ ಅಯ್ಯಪ್ಪ ಸನ್ನಿದಾನಕ್ಕೆ
Sabarimala Makara Jyothi: ಕೇರಳದ ಶಬರಿಮಲೆ ಅಯ್ಯಪ್ಪ ಸನ್ನಿದಾನದಲ್ಲಿ ಇಂದು ಮಕರ ಜ್ಯೋತಿ ಉತ್ಸವ ನಡೆಯುತ್ತಿದೆ. ಅಯ್ಯಪ್ಪ ಸ್ವಾಮಿಯ ತಿರುವಾಭರಣ ಮೆರವಣಿಗೆ ಇಂದು ಸಂಜೆ ಸನ್ನಿದಾನ ತಲುಪಲಿದ್ದು, ಅದಾಗಿ ಪೊನ್ನಂಬಲ ಮೇಡು ಬೆಟ್ಟದ ಮೇಲೆ ಮಕರ ಜ್ಯೋತಿ ದರ್ಶನವಾಗಲಿದೆ. ಭಕ್ತರು ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

Sabarimala Makara Jyothi: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ಸನ್ನಿದಾನ ಪ್ರಸಕ್ತ ವರ್ಷದ ಮಕರ ಜ್ಯೋತಿ ಉತ್ಸವಕ್ಕೆ ಸಜ್ಜಾಗಿದೆ. ಈಗಾಗಲೇ ಸಾವಿರಾರು ಅಯ್ಯಪ್ಪ ಭಕ್ತರು ಸನ್ನಿದಾನ ತಲುಪಿದ್ದು, ಸಂಜೆ ಮಕರ ಜ್ಯೋತಿ ದರ್ಶನಕ್ಕೆ ಕಾತರರಾಗಿದ್ದಾರೆ. ಸನ್ನಿದಾನದಲ್ಲಿ ಸ್ವಾಮಿಯೇ ಶರಣಂ ಅಯ್ಯಪ್ಪ ಘೋಷಣೆ ಮುಗಿಲು ಮುಟ್ಟಿದೆ. ತಿರುವಾಂಕೂರು ದೇವಸ್ವಂ ಬೋರ್ಡ್ ಭಕ್ತದಟ್ಟಣೆ ನಿರ್ವಹಿಸುವುದಕ್ಕಾಗಿ ಇಂದು (ಜನವರಿ 14) ಸಂಜೆ 40,000 ಭಕ್ತರಿಗೆ ಮಾತ್ರವೇ ಸನ್ನಿದಾನದಲ್ಲಿ ಇರಲು ಅವಕಾಶ ನೀಡಿದೆ.
ಶಬರಿಮಲೆಯಲ್ಲಿ ಇಂದು ಮುಸ್ಸಂಜೆ ಮಕರ ಜ್ಯೋತಿ ದರ್ಶನ
ಶಬರಿಮಲೆಯ ಅಯ್ಯಪ್ಪ ದೇವಸ್ಥಾನದಲ್ಲಿ ಮಕರವಿಳಕ್ಕು ಉತ್ಸವ ಇಂದು (ಜನವರಿ 14) ನಡೆಯುತ್ತಿದ್ದು, ಮುಸ್ಸಂಜೆ ಮಕರ ಜ್ಯೋತಿ ದರ್ಶನ ನಡೆಯಲಿದೆ. ಪವಿತ್ರ "ತಿರುವಾಭರಣಂ" (ಅಯ್ಯಪ್ಪನ ಆಭರಣಗಳು) ಹೊತ್ತ ಮೆರವಣಿಗೆಯು ಪಂದಳಂ ದೇಗುಲದಿಂದ ಜನವರಿ 12ಕ್ಕೆ ಹೊರಟಿದ್ದು, ಇಂದು ಸಂಜೆ 6 ಗಂಟೆಗೆ ಶಬರಿಮಲೆಗೆ ತಲುಪಲಿದೆ. ತಿರುವಾಭರಣ ಸನ್ನಿದಾನಕ್ಕೆ ತಲುಪಿದ ಕೂಡಲೇ ಅದನ್ನು ಅಯ್ಯಪ್ಪ ಸ್ವಾಮಿಗೆ ತೊಡಿಸಲಾಗುತ್ತದೆ. ನಂತರ ಸಂಜೆಯ ದೀಪಾರಾಧನೆ ನಡೆಯುತ್ತದೆ. ಆಗ, ಪೊನ್ನಂಬಲ ಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಗಲಿದೆ. ಧ್ವಜಸ್ತಂಭಕ್ಕೆ ನೇರ ಮೇಲೆ ಆಗಸದಲ್ಲಿ ಗರುಡ ಮೂರು ಸುತ್ತು ಪ್ರದಕ್ಷಿಣೆ ಬರುವುದು ಗೋಚರಿಸುತ್ತದೆ.
ಮಕರ ಜ್ಯೋತಿ ದರ್ಶನದ ಬಳಿಕ ವಿಶೇಷ ಪೂಜೆ ನಡೆಯುತ್ತದೆ. ಆ ಹೊತ್ತಿನಲ್ಲಿ ಅಯ್ಯಪ್ಪ ಭಕ್ತರ ಶರಣು ಘೋಷ ಮುಗಿಲು ಮುಟ್ಟುತ್ತದೆ. ಪೂಜೆ ಬಳಿಕ ಹರಿವರಾಸನಂ ಹಾಡು ಹೇಳಿ ಅಯ್ಯಪ್ಪ ದೇವರ ಸನ್ನಿಧಿ ಬಾಗಿಲು ಮುಚ್ಚುತ್ತದೆ. ಇದರೊಂದಿಗೆ ಮಕರ ಜ್ಯೋತಿ ಉತ್ಸವ ಸಂಪನ್ನವಾಗುತ್ತದೆ. ಇಂದು ಬೆಳಗ್ಗೆ 9 ಗಂಟೆ ತನಕ ಅಯ್ಯಪ್ಪ ಸನ್ನಿದಾನಕ್ಕೆ ತಲುಪಿದ ಭಕ್ತರ ಸಂಖ್ಯೆ 27,949 ಎಂದು ಕೇರಳ ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ.
ಪಂದಳದಿಂದ ಹೊರಟ ತಿರುವಾಭರಣ ಮೆರವಣಿಗೆ ಸಂಜೆ ಅಯ್ಯಪ್ಪ ಸನ್ನಿದಾನಕ್ಕೆ
ಪಂದಳದ ವಲಿಯ ಕೋಯಿಕ್ಕಲ್ ದೇವಾಲಯದಿಂದ ಅಯ್ಯಪ್ಪ ಸ್ವಾಮಿಯ ತಿರುವಾಭರಣ ಪೆಟ್ಟಿಗೆಯ ಮೆರವಣಿಗೆಯು ಜನವರಿ 12 ರಂದು ಹೊರಟಿದೆ. ವಿವಿಧ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸುತ್ತ ಸಾಗಿದ ಈ ಮೆರವಣಿಗೆಯು ಮೊದಲ ದಿನ ಅಯಿರೂರು ಪುಥಿಯಕಾವು ದೇವಾಲಯದಲ್ಲಿ ತಂಗಿದೆ. ಅಲ್ಲಿಂದ ಹೊರಟು ಲಾಹಾ ದಾಟಿ ಪಾಂಡಿತಾವಳಂ, ಚೆರಿಯಾನವಟ್ಟಂ, ನೀಲಿಮಲ, ಅಪ್ಪಾಚಿಮೇಡು ಮೂಲಕ ಶಬರಿಪೀಠಕ್ಕೆ ತಲುಪುತ್ತದೆ. ಅಲ್ಲಿಂದ ಮುಂದೆ ಸಾಗಿ ಹೋಗುವ ಮೆರವಣಿಗೆಯನ್ನು ದೇವಸ್ವಂ ಬೋರ್ಡ್ ಅಧಿಕಾರಿಗಳು ಶರಂಕುತ್ತಿಯಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳುತ್ತಾರೆ. ಈ ಮೆರವಣಿಗೆ ಮಕರ ಸಂಕ್ರಾಂತಿಯ ದಿನ ಮುಸ್ಸಂಜೆ 6 ಗಂಟೆ ಸುಮಾರಿಗೆ ಶಬರಿಮಲೆ ಅಯ್ಯಪ್ಪ ಸನ್ನಿದಾನಕ್ಕೆ ತಲುಪುತ್ತದೆ. ಅದಾದ ನಂತರದಲ್ಲಿ ಆ ಆಭರಣಗಳನ್ನು ಅಯ್ಯಪ್ಪಸ್ವಾಮಿಗೆ ತೊಡಿಸಿ, ದೀಪಾರಾಧನೆ ನಡೆಯುತ್ತದೆ. ಆ ಸಂದರ್ಭದಲ್ಲೇ ಪೊನ್ನಂಬಲ ಮೇಡುವಿನಲ್ಲಿ ಮಕರ ಜ್ಯೋತಿ ದರ್ಶನವಾಗುತ್ತದೆ.
ಜನವರಿ 5ರ ತನಕ 39 ಲಕ್ಷ ಭಕ್ತರಿಂದ ಅಯ್ಯಪ್ಪ ದರ್ಶನ
ಶಬರಿಮಲೆಯಲ್ಲಿ ಈ ಸೀಸನ್‌ನಲ್ಲಿ ಅಂದರೆ ನವೆಂಬರ್ 15 ರಂದು ಮಂಡಲ ಪೂಜಾ ಉತ್ಸವ ಶುರವಾದ ನಂತರ ಜನವರಿ 5ರ ತನಕ ದಾಖಲೆಯ 39,02,610 ಅಯ್ಯಪ್ಪ ಭಕ್ತರು ಸನ್ನಿದಾನಕ್ಕೆ ಭೇಟಿ ನೀಡಿ ಅಯ್ಯಪ್ಪ ದರ್ಶನ ಪಡೆದಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 35,12,691 ಭಕ್ತರು ಅಯ್ಯಪ್ಪ ದರ್ಶನ ಪಡೆದಿದ್ದರು. ಮಕರ ವಿಳಕ್ಕು ಪೂಜಾ ಉತ್ಸವ ಡಿಸೆಂಬರ್ 30ರಂದು ಶುರುವಾಗಿದ್ದು ಅಲ್ಲಿಂದೀಚೆಗೆ 6,22,849 ಭಕ್ತರು ಸನ್ನಿದಾನಕ್ಕೆ ಭೇಟಿ ನೀಡಿ ಅಯ್ಯಪ್ಪ ದರ್ಶನಮಾಡಿದ್ದಾರೆ ಎಂದು ಕೇರಳ ಪೊಲೀಸ್ ಇಲಾಖೆ ತಿಳಿಸಿದೆ.

ವಿಭಾಗ